Advertisement

ದೀಪಾವಳಿ ಹಬ್ಬದ ವಿಶೇಷ ಖಾದ್ಯಗಳು

07:22 PM Oct 24, 2019 | mahesh |

ದೀಪಾವಳಿ ಹಬ್ಬ ಮತ್ತೆ ಬಂದಿದೆ. ಹೊಸ ಬಟ್ಟೆ ಧರಿಸಿ, ಪಟಾಕಿ ಸುಡುಮದ್ದು ಸಿಡಿಸಿ, ಸಿಹಿ ತಿನ್ನುವ ಸಂಭ್ರಮ. ಹಬ್ಬಕ್ಕೆ ತಯಾರಿಸಬಹುದಾದ ಕೆಲವು ವಿಶೇಷ ಖಾದ್ಯಗಳು ಇಲ್ಲಿವೆ.

Advertisement

ಗೋಧಿ ಹಲ್ವ
ಬೇಕಾಗುವ ಸಾಮಗ್ರಿ: 1 ಕೆಜಿ ಇಡಿ ಗೋಧಿ, 2 ಕೆಜಿ ಸಕ್ಕರೆ, 10-15 ಗೋಡಂಬಿ, 7-8 ಏಲಕ್ಕಿ, 4 ಕಪ್‌ ತುಪ್ಪ, ಸ್ವಲ್ಪ ಕೇಸರಿ ಬಣ್ಣ.

ತಯಾರಿಸುವ ವಿಧಾನ: ಇಡಿ ಗೋಧಿಯನ್ನು ಬೆಳಗ್ಗೆ ನೆನೆಸಿ. ಸಾಯಂಕಾಲ ನುಣ್ಣಗೆ ರುಬ್ಬಿ. ಬಟ್ಟೆಯಲ್ಲಿ ಆರಿಸಿ ಹಾಲು ತೆಗೆದು 4-5 ಸಲ ನೀರು ಹಾಕಿ ಕಿವುಚಿ ಹಾಲು ತೆಗೆಯಿರಿ. ಆ ಮೇಲೆ ಮುಚ್ಚಿಟ್ಟು ಮಾರನೇ ದಿನ ಅಥವಾ 3 ದಿನ ಕಳೆದರೂ ಆಗಬಹುದು. ನೀರು ಮಾತ್ರ ದಿನವೂ ಬದಲಾಯಿಸಬೇಕು. ಹುಳಿ ನೀರು ತೆಗೆದು, 4 ಲೀಟರು ಹಾಕಿ ಚೆನ್ನಾಗಿ ಕದಡಿ. ಸಕ್ಕರೆ ಹಾಕಿ ಚೆನ್ನಾಗಿ ಮಗುಚಿ ಒಲೆಯ ಮೇಲೆ ಇಟ್ಟು ಕೈಯಾಡಿಸುತ್ತಾ ಇದ್ದು ಗಟ್ಟಿಯಾಗಿ ಕಣ್ಣು ಕಣ್ಣು ಆಗುವಾಗ ತಳಬಿಟ್ಟು ತುಪ್ಪ ಬಿಡುತ್ತದೆ. ಈ ಮೊದಲೇ ಬಣ್ಣ, ಗೋಡಂಬಿ, ಏಲಕ್ಕಿ ಪುಡಿ ಹಾಕಿಕೊಳ್ಳಿ. ಆಮೇಲೆ ಒಳ್ಳೆಯ ನಾರು ಆದ ಮೇಲೆ ತಟ್ಟೆಗೆ ಹರಡಿ. ಆರಿದ ಮೇಲೆ ತುಂಡು ಮಾಡಿ. ಈ ಹಲ್ವ ಕಾಯಿಸಲು 3 ಗಂಟೆ ಕಾಲ ಬೇಕಾಗುತ್ತದೆ. .

ಅಂಜೂರದ ಒಬ್ಬಟ್ಟು
ಬೇಕಾಗುವ ಸಾಮಗ್ರಿ: 100 ಗ್ರಾಂ ಮೈದಾಹಿಟ್ಟು , 50 ಗ್ರಾಂ ಚಿರೋಟಿ ರವೆ, 200 ಗ್ರಾಂ ಅಂಜೂರ, 200 ಗ್ರಾಂ ಬೆಲ್ಲ, 100 ಗ್ರಾಂ ಏಲಕ್ಕಿ ಪುಡಿ, ಸ್ವಲ್ಪ ಎಣ್ಣೆ.

ತಯಾರಿಸುವ ವಿಧಾನ: ಮೈದಾಹಿಟ್ಟು, ರವೆ, ಸ್ವಲ್ಪ ಎಣ್ಣೆ, ಅರಸಿನ ಹಾಕಿ ಕಣಕ ಕಲಸಿ ಮುಚ್ಚಿಡಿ. ಒಂದು ಗಂಟೆ ನೆನೆಸಿ. ಬಾಣಲೆಗೆ ನೀರು ಹಾಕಿ ಅಂಜೂರವನ್ನು ಸಣ್ಣ ಉರಿಯಲ್ಲಿ ಬೇಯಿಸಿ. ಬೆಲ್ಲವನ್ನು ಸೇರಿಸಿ. ಬೆಲ್ಲದ ಜೊತೆ ಬೆಂದ ಅಂಜೂರ ಹಾಕಿ ಮಿಕ್ಸಿಗೆ ಹಾಕಿ ರುಬ್ಬಿ. ನೀರು ಹಾಕಬಾರದು. ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ತೊಳಸಿ. ಹೂರಣ ಆದ ಮೇಲೆ ಏಲಕ್ಕಿ ಪುಡಿ ಹಾಕಿ ಕೆಳಗಿಡಿ. ನಂತರ ಉಂಡೆ ಮಾಡಿ ಕಣಕದೊಳಗೆ ಹೂರಣ ಇಟ್ಟು ಮಡಚಿ ತೆಳ್ಳಗೆ ಲಟ್ಟಿಸಿ. ಕಾದ ತವಾದ ಮೇಲೆ ಸಣ್ಣ ಉರಿಯಲ್ಲಿ 2 ಕಡೆ ಬೇಯಿಸಿ. ಈಗ ಬಿಸಿ ಬಿಸಿ ಒಬ್ಬಟ್ಟನ್ನು ಸವಿಯಲು ಬಲು ರುಚಿ.

Advertisement

ಚಾಕಲೇಟ್‌ ಲಾಡು
ಬೇಕಾಗುವ ಸಾಮಗ್ರಿ: 1 ಕಪ್‌ ಸ್ವಲ್ಪ ತರಿಯಾಗಿ ಪುಡಿ ಮಾಡಿದ ಬಿಸ್ಕೆಟ್‌ ಪುಡಿ, 1/2 ಕಪ್‌ ಚಾಕಲೇಟ್‌ ಪುಡಿ, 1/2 ಕಪ್‌ ಸಕ್ಕರೆಪುಡಿ, 2 ಚಮಚ ಪುಡಿಮಾಡಿದ ಕೊಬ್ಬರಿ ತುರಿ, 2 ಚಮಚ ತುಪ್ಪ , 1 ಚಮಚ, ಹಾಲು, ತುಪ್ಪದಲ್ಲಿ ಹುರಿದ ಗೋಡಂಬಿ 6-7.

ತಯಾರಿಸುವ ವಿಧಾನ: ಕೊಬ್ಬರಿಯನ್ನು ಮಿಕ್ಸಿಗೆ ಹಾಕಿ ಸ್ವಲ್ಪ ತರಿಯಾಗಿ ಪುಡಿ ಮಾಡಿ. ಒಂದು ಪಾತ್ರೆಗೆ ಬಿಸ್ಕೆಟ್‌ ಪುಡಿ, ಕೊಬ್ಬರಿ ಪುಡಿ, ಚಾಕಲೇಟ್‌ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಚೂರು, ತುಪ್ಪ , ಸಕ್ಕರೆ ಪುಡಿ, ಹಾಲು ಹಾಕಿ ಸರಿಯಾಗಿ ಬೆರೆಸಿ ಉಂಡೆ ಕಟ್ಟಿ. ಈಗ ರುಚಿಯಾದ ಚಾಕಲೇಟ್‌ ಲಾಡು ಸವಿಯಲು ಬಲು ರುಚಿ.

ಸೇಬು ಹಣ್ಣಿನ ಕೊಬ್ಬರಿ ಮಿಠಾಯಿ
ಬೇಕಾಗುವ ಸಾಮಗ್ರಿ: 4 ಕಪ್‌ ತೆಂಗಿನತುರಿ, ಸಿಪ್ಪೆ ತೆಗೆದು ರುಬ್ಬಿದ 2 ಸೇಬುಹಣ್ಣು , 2 ಕಪ್‌ ಸಕ್ಕರೆ, 1 ಚಮಚ ಏಲಕ್ಕಿ ಪುಡಿ, 4 ಚಮಚ ತುಪ್ಪ.

ತಯಾರಿಸುವ ವಿಧಾನ: ಒಂದು ದಪ್ಪ ತಳದ ಬಾಣಲೆಗೆ ಸೇಬುಹಣ್ಣಿನ ರಸ, ಸಕ್ಕರೆ, ತುಪ್ಪ ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಮಧ್ಯಮ ಗಾತ್ರದ ಉರಿಯಲ್ಲಿ ಕೈಯಾಡಿಸುತ್ತಾ ಇರಬೇಕು. ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ಸ್ವಲ್ಪ ಪುಡಿ ಮಾಡಬಹುದು. ಮಿಶ್ರಣ ಗಟ್ಟಿಯಾಗುತ್ತಾ ಬರುವಾಗ ಏಲಕ್ಕಿ ಪುಡಿಯನ್ನು ಹಾಕಿ. ಬಾಣಲೆಯಿಂದ ತಳ ಬಿಡುತ್ತಾ ಬರುವಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮತಟ್ಟಾಗಿ ಮಾಡಿ. 5 ನಿಮಿಷಗಳ ನಂತರ ಚೌಕಾಕಾರವಾಗಿ ತುಂಡು ಮಾಡಿ. ರುಚಿಯಾದ ಸೇಬುಹಣ್ಣಿನ ಕೊಬ್ಬರಿ ಮಿಠಾಯಿ ಸವಿಯಲು ಸಿದ್ಧ.

ಖರ್ಜೂರ ಬರ್ಫಿ
ಬೇಕಾಗುವ ಸಾಮಗ್ರಿ: ಬೀಜ ತೆಗೆದ ಖರ್ಜೂರ ಹಣ್ಣು- 1/2 ಕೆಜಿ, ಸಕ್ಕರೆ- 2 ಚಮಚ, 1 ಹಿಡಿ ಗೋಡಂಬಿ, 7-8 ಮಾರಿ ಬಿಸ್ಕತ್‌.

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು 1 ಚಮಚ ತುಪ್ಪ ಹಾಕಿ ಖರ್ಜೂರವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ 1 ಚಮಚ ಸಕ್ಕರೆ ಸೇರಿಸಿ. ಮೆತ್ತಗಾದ ಖರ್ಜೂರವನ್ನು ಕಡುಗೋಲಿನಿಂದ ಜಜ್ಜಿ ಮುದ್ದೆ ಮಾಡಿ. ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಸಣ್ಣಗೆ ತುಂಡು ಮಾಡಿದ ಮಾರಿ ಬಿಸ್ಕತ್‌ನ್ನು ಖರ್ಜೂರದ ಮುದ್ದೆಗೆ ಸೇರಿಸಿ ಕಲಸಿ. ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಕಲಸಿದ ಮಿಶ್ರಣವನ್ನು ರೋಲ್‌ ಮಾಡಿ ಬಟರ್‌ ಪೇಪರಿನಲ್ಲಿ ಸುತ್ತಿ 15 ನಿಮಿಷ ಫ್ರಿಜ್‌ನಲ್ಲಿಡಿ. ನಂತರ ಈ ರೋಲ್‌ಗ‌ಳನ್ನು ವೃತ್ತಾಕಾರಕ್ಕೆ ತುಂಡು ಮಾಡಿ. ಪೌಷ್ಟಿಕವಾದ ರುಚಿಯಾದ ಖರ್ಜೂರ ಬರ್ಫಿ ಸವಿಯಲು ಸಿದ್ಧ.

ಸರಸ್ವತಿ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next