Advertisement

ವಾದ –ವೈಖರಿ : ಸಂವಿಧಾನದ ಆಶಯಕ್ಕೆ ಪೂರಕವಾಗಿಲ್ಲ

03:20 AM Oct 14, 2017 | Karthik A |

ಆಚರಿಸುವವರು ತಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಉರುಳುಸೇವೆ ಮಾಡುತ್ತಾರೆ. ಬಲವಂತ ಮಾಡಿದ ದಾಖಲೆ ಇಲ್ಲ. ಸಾರ್ವಜನಿಕ ನೆಮ್ಮದಿ ಕೆಟ್ಟಿರುವುದು ಸಾಬೀತಾಗಿಲ್ಲ. ಅಲ್ಲದೆ ಆರೋಗ್ಯಕ್ಕೆ ಹಾನಿ ಎಂದು ವೈದ್ಯಕೀಯವಾಗಿ ದೃಢಪಟ್ಟಿರುವುದು ಕಂಡು ಬರುವುದಿಲ್ಲ. ಈ ಅಂಶಗಳನ್ನು ಖಾತರಿಪಡಿಸಿಕೊಳ್ಳಬೇಕಾದ ಜವಾಬ್ದಾರಿ ಸರಕಾರಕ್ಕಿದೆ. ಇಂಥ ಉಪಕ್ರಮಗಳನ್ನು ಕೈಗೊಳ್ಳದೆ ಏಕಾಏಕಿ ಆಚರಣೆಯನ್ನುನಿಷೇಧಿಸುವ ಕಾನೂನು ಸಂವಿಧಾನದ ಮೂಲಾಶಯಕ್ಕೆ ವಿರೋಧವಾದುದು.

Advertisement

ನಂಬಿಕೆ, ನಿಷ್ಠೆ, ಪೂಜೆ, ವಿವೇಚನೆ ಹಾಗೂ ಅಭಿವ್ಯಕ್ತಿ- ಇವುಗಳ ಸ್ವಾತಂತ್ರ್ಯಕ್ಕಾಗಿ ನಾವು ಸಂವಿಧಾನ ರಚಿಸಿ, ಅರ್ಪಿಸಿಕೊಂಡಿದ್ದೇವೆ ಎಂಬ ಘೋಷ ವಾಕ್ಯ ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಉಲ್ಲೇಖೀಸಲಾಗಿದೆ. ಹಾಗಾಗಿ ಈಗ ಚರ್ಚೆಯಲ್ಲಿರುವ ನಂಬಿಕೆ ನಮ್ಮ ಸಂವಿಧಾನದತ್ತ ಹಕ್ಕು. ಈ ನಂಬಿಕೆಯಲ್ಲಿ ಯಾವುದು ಮೂಢನಂಬಿಕೆ ಎಂದು ವಿಭಾಗಿಸುವ ಅಥವಾ ವರ್ಗಿಕರಿಸುವ ಜವಾಬ್ದಾರಿ ಸರಕಾರಕ್ಕೆ ಸಂವಿಧಾನದತ್ತವಾಗಿರುವುದಿಲ್ಲ. ನಂಬಿಕೆ ಅವಿಭಾಜ್ಯ, ಅಖಂಡ ಹಾಗೂ ಭಾವನಾತ್ಮಕ. ಅದು ಪೌರನ ಮೂಲಭೂತ ಹಕ್ಕು. ಆದರೆ ಈ ಮೂಲಭೂತ ಹಕ್ಕು ಸಮಗ್ರ ಅಥವಾ ಪರಿಪೂರ್ಣ (Absolute) ಅಲ್ಲ. ಆರ್ಟಿಕಲ್‌ 25(1)ರಲ್ಲಿ ಒಂದು ನಿಯಂತ್ರಣ ವಿಧಿಸಲಾಗಿದೆ. ಸಾರ್ವಜನಿಕ ನೆಮ್ಮದಿ, ನೈತಿಕತೆ ಹಾಗೂ ಅರೋಗ್ಯಕ್ಕೆ ಧಕ್ಕೆಯಾಗದ ಹಾಗೆ ಪೌರ ತನ್ನ ಆತ್ಮಸಾಕ್ಷಿಗೆ ತಕ್ಕಂತೆ ಧಾರ್ಮಿಕ ಭಾವನೆಗಳನ್ನು ಪ್ರಕಟಪಡಿಸುವ, ಆಚರಿಸುವ ಹಾಗೂ ಉಪದೇಶಿಸುವ ಹಕ್ಕು ಹೊಂದಿರುತ್ತಾನೆ ಎಂಬ ಉಲ್ಲೇಖವಿದೆ. ಇವುಗಳೆರಡನ್ನು ಒಟ್ಟಾಗಿ ಓದುವಾಗ ಪರಿಚ್ಛೇದ 25(1)ರ ಉಲ್ಲಂಘನೆಯನ್ನು ಖಾತರಿಪಡಿಸಿಕೊಳ್ಳದೆ ನಂಬಿಕೆಯಾಧಾರಿತ ಯಾವ ಆಚರಣೆಯನ್ನೂ ನಿಷೇಧಿಸುವ ಹಕ್ಕು ಸರಕಾರಕ್ಕಿಲ್ಲ ಎಂಬುದಾಗಿ ಅರ್ಥೈಸಿಕೊಳ್ಳಬಹುದು. ಈಗ ಪ್ರಸ್ತಾಪದಲ್ಲಿರುವ ಕಾನೂನಿನಲ್ಲಿ ಈ ನಿಷೇಧಿತ ಆಚರಣೆಗಳ ಆರ್ಟಿಕಲ್‌ 25(1)ರ ಉಲ್ಲಂಘನೆಯಾಗುತ್ತಿದೆ ಎಂಬುದನ್ನು ಖಾತರಿಪಡಿಸಿಕೊಂಡಿರುವುದು ಕಂಡುಬರುವುದಿಲ್ಲ.

ಉದಾಹರಣೆಗೆ, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಕೆಲವು ದೇವಸ್ಥಾನಗಳಲ್ಲಿ ಆಚರಿಸಲ್ಪಡುವ ಮಡೆಸ್ನಾನ. ಪ್ರಸ್ತಾಪಿತ ಕಾನೂನಿನಲ್ಲಿ ಇದೊಂದು ನಿಷೇಧಿತ ಆಚರಣೆ. ಇದರಲ್ಲಿ ಆರ್ಟಿಕಲ್‌ 25(1)ರ ಉಲ್ಲಂಘನೆಯ ಅಂಶ ಯಾವುದೆಂದು ಸರಕಾರ ಸ್ಪಷ್ಟಪಡಿಸಲಿಲ್ಲ. ನಮಗೆ ಅದು ಸ್ವಯಂ ವಿವರಣಾತ್ಮಕವಾಗಿಲ್ಲ. ಯಾಕೆಂದರೆ ಆಚರಿಸುವವರು ತಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಉರುಳುಸೇವೆ ಮಾಡುತ್ತಾರೆ. ಬಲವಂತ ಮಾಡಿದ ದಾಖಲೆ ಇಲ್ಲ. ಸಾರ್ವಜನಿಕ ನೆಮ್ಮದಿ ಕೆಟ್ಟಿರುವುದು ಸಾಬೀತಾಗಿಲ್ಲ. ಅಲ್ಲದೆ ಆರೋಗ್ಯಕ್ಕೆ ಹಾನಿ ಎಂದು ವೈದ್ಯಕೀಯವಾಗಿ ದೃಢಪಟ್ಟಿರುವುದು ಕಂಡು ಬರುವುದಿಲ್ಲ. ಈ ಅಂಶಗಳನ್ನು ಖಾತರಿಪಡಿಸಿಕೊಳ್ಳಬೇಕಾದ ಜವಾಬ್ದಾರಿ ಸರಕಾರಕ್ಕಿದೆ. ಇಂಥ ಉಪಕ್ರಮಗಳನ್ನು ಕೈಗೊಳ್ಳದೆ ಏಕಾಏಕಿ ಆಚರಣೆಯನ್ನು ನಿಷೇಧಿಸುವ ಕಾನೂನು ಸಂವಿಧಾನದ ಮೂಲಾಶಯಕ್ಕೆ ವಿರೋಧವಾದುದು ಎಂದು ಹೇಳದೆ ವಿಧಿ ಇಲ್ಲ. ಶಾಸನ ಸಭೆಗೆ ಕಾನೂನು ರೂಪಿಸುವ ಅಧಿಕಾರವಿದೆ. ಆದರೆ ಕಾನೂನು ಸಂವಿಧಾನಕ್ಕೆ ಸಂಗತವಾಗಿರತಕ್ಕದೆಂಬ ವಿಧಿ ಇದೆ. ಹಾಗೆ ಸಂವಿಧಾನಕ್ಕೆ ಸಂಗತವಲ್ಲದ ಕಾನೂನನ್ನು ಸಾರ್ವಜನಿಕರ ಮೇಲೆ ಹೇರುವುದು ಅಧಿಕಾರ ದುರುಪಯೋಗವಲ್ಲದೆ ಮತ್ತೇನು? ಪ್ರಸ್ತಾಪಿತ ಕಾನೂನಿನ ಕುರಿತಾದ ಟಿಪ್ಪಣಿ ಹಾಗೂ ಸರಕಾರಿ ನಿಯೋಜಿತ ಅಧ್ಯಯನಶೀಲರ ವರದಿಯಲ್ಲಿ ಮೂಢನಂಬಿಕೆ, ದೌರ್ಜನ್ಯ, ಶೋಷಣೆ ಇಂಬಿತ್ಯಾದಿ ಪದಗಳ ಲಾಲಿತ್ಯವೇ ಹೊರತು ಯಾವ ಆಚರಣೆಯಲ್ಲಿ ಆರ್ಟಿಕಲ್‌ 25(1)ರ ಉಲ್ಲಂಘನೆ ಹೇಗೆ ಆಗುತ್ತಿದೆ ಎಂಬ ಕಾನೂನು ರಚನೆಗೆ ಪೂರಕವಾದ ಅಂಶಗಳಿಲ್ಲ.

ಇದರರ್ಥ ನಂಬಿಕೆಯ ಸೋಗಿನಲ್ಲಿ ಆಗುವ ಶೋಷಣೆ ಹಾಗೂ ದೌರ್ಜನ್ಯದ ಪರವಾಗಿ ನಾವಿದ್ದೇವೆ ಎಂದು ಭಾವಿಸುವುದು ಬೇಡ. ಆದರೆ ಅದನ್ನು ನಿಗ್ರಹಿಸುವ ವಿಧಾನ ಸರಿಯಲ್ಲ ಎನ್ನುವುದೇ ಪ್ರತಿಪಾದನೆ. ಕಂದಾಚಾರ, ವಾಮಾಚಾರ ಇತ್ಯಾದಿಗಳಿಂದ ಅಮಾಯಕರ ಶೋಷಣೆಗಳನ್ನು ತಡೆಯಲು ಹಾಲಿ ನೆಲದ ಕಾನೂನು ಸಾಕು. ಹೊಸ ಕಾನೂನು ರಚನೆಯ ಅಗತ್ಯವಿಲ್ಲ. ಅದಕ್ಕೊಂದು ಕಾನೂನು, ಅನುಷ್ಠಾನಕ್ಕೊಂದು ಪ್ರಾಧಿಕಾರ, ಸಿಬ್ಬಂದಿ ನೇಮಕ ಹಾಗೂ ಕಾನೂನು ಪ್ರಕ್ರಿಯೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಸಾರ್ವಜನಿಕರ ತೆರಿಗೆ ಹಣದಲ್ಲಿ ಕಲ್ಪಿಸಿ ಖಜಾನೆ ಬರಿದು ಮಾಡುವುದಕ್ಕಿಂತ ಪೊಲೀಸ್‌ ವ್ಯವಸ್ಥೆಯನ್ನೇ ಬಲಪಡಿಸಿದರೆ ಸಾಕು. ಯಾರು ಕಾನೂನು ರಚಿಸಬೇಕೆಂದು ಸಲಹೆ ನೀಡಿದರೋ ಗೊತ್ತಿಲ್ಲ. ಸರಕಾರ ಪರಿಗಣಿಸಿದ ವರದಿಯಲ್ಲಿ ಮುಖ್ಯವಾಗಿ ಇರುವುದು ನಂಬಿಕೆಯಾಧರಿತ ಆಚರಣೆಗಳಲ್ಲಿ ನಡೆಯುವ ಸಾರ್ವಜನಿಕ ದೌರ್ಜನ್ಯವಲ್ಲವೇ! ಅದನ್ನೇ ಮೂಢನಂಬಿಕೆ ಎಂದು ಕರೆಯುವುದಲ್ಲವೇ! ಹಾಗಲ್ಲದೆ, ನಂಬಿಕೆಗೆ ಸರಕಾರದ ಆಕ್ಷೇಪವಿಲ್ಲವಷ್ಟೇ! ಅಮಾಯಕರ ನಂಬಿಕೆಯನ್ನು ಬಳಸಿಕೊಂಡು ದುಷ್ಕೃತ್ಯಗಳನ್ನು ಎಸಗುವುದಾದರೆ ಅಂಥ ಶೋಷಣೆಯನ್ನು ನಿಗ್ರಹಿಸಲು ಹಾಲಿ ಕಾನೂನೇ ಸಾಕು. ಸರಕಾರದ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುವುದು ಸರಿಯಲ್ಲ.

ಈ ಕಾನೂನು ರಚನೆಯಿಂದ ಸರಕಾರ ಜೇನುಗೂಡಿಗೆ ಕಲ್ಲು ಹೊಡೆದಂತಾಗಿದೆ. ಅನೇಕ ಮಂದಿ ಇದು ಹಿಂದುಗಳನ್ನೇ ಟಾರ್ಗೆಟ್‌ ಮಾಡಿಕೊಂಡು ರೂಪಿಸಿದ ಕಾನೂನು ಎಂದು ಆರೋಪಿಸಲು ಆರಂಭಿಸಿದ್ದಾರೆ. ನಿಜ. ಮೇಲ್ನೋಟಕ್ಕೆ ಇದು ಸರಿ ಎಂಬ ಹಾಗೆ ಕಾಣುತ್ತದೆ. ಯಾಕೆಂದರೆ ನಂಬಿಕೆಗಳು ತತ್ಸಂಬಂಧಿತ ಆಚರಣೆಗಳು ಮತ ಮತಗಳಲ್ಲಿ ಭಿನ್ನವಾಗಿರುತ್ತವೆ. ಅವುಗಳ ಸಮಗ್ರ ಪಟ್ಟಿ ಸರಕಾರ ಸಿದ್ಧಪಡಿಸಲಿಲ್ಲ. ಇದರಿಂದ ಮುಸ್ಲಿಮರು ಕಾಯಿದೆಯ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹಿಂದುಗಳು ಆರೋಪಿಸಲು ಅವಕಾಶ. ಆಗ ಮೊದಲೇ ಬೂದಿಮುಚ್ಚಿದ ಕೆಂಡದಂತಿರುವ ಹಿಂದು-ಮುಸ್ಲಿಂ ವೈಷಮ್ಯ ಇನ್ನೂ ಹೆಚ್ಚಾಗಲು ಪ್ರೇರಣೆ ಸಿಗಬಹುದು. ಇದು ಸರಕಾರ ಮಾಡಬಹುದಾದ ಕೆಲಸವೇ? ಸರಕಾರಕ್ಕೆ ಈ ಉಸಾಬರಿ ಯಾಕೆ? ಇನ್ನು ಸಂವಿಧಾನದಲ್ಲಿ ಪೌರನು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂಬ ಕರೆ ಇದೆ. ಆದುದರಿಂದ ಈ ಕಾನೂನು ಮಾಡಿರುವುದು ಸರಿ ಎಂದು ಪ್ರತಿಪಾದಿಸುವವರಿದ್ದಾರೆ. ಆದರೆ ಪ್ರಸ್ತಾಪದಲ್ಲಿರುವ ಈ ಕಾನೂನಿನಲ್ಲಿ ಪೂಜಾಸ್ಥಳಗಳಿಗೆ ಹೋಗಿ ಪೂಜೆ ಸಲ್ಲಿಸಲು ತಡೆ ಇರುವುದಿಲ್ಲ. ಇದರಲ್ಲಿ ಯಾವ ವೈಜ್ಞಾನಿಕ ಹಿನ್ನೆಲೆ ಇದೆ? ಅಲ್ಲದೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಕಾನೂನು ರೂಪಿಸುವುದೇ? ಬದಲಾಗಿ ಸಮೂಹ ಶಿಕ್ಷಣದ ಯೋಜನೆಯನ್ನು ರೂಪಿಸಬಹುದಲ್ಲವೇ? ಅದು ಸರಕಾರ ಮಾಡಬೇಕಾದ ಮೊದಲ ಕೆಲಸ. ಹಿಂದೆ ಮಡೆಸ್ನಾನದ ವಿರುದ್ಧ ಪ್ರತಿಭಟನೆ ನಡೆಯುವ ಕಾಲದಲ್ಲಿ ಮಹಿಳಾ ಸಂಘಟನೆಗಳ ಮುಖಂಡರಾಗಲಿ, ಬುದ್ಧಿಜೀವಿಗಳಾಗಲಿ, ಹೆಚ್ಚೇಕೆ, ಹೆಚ್ಚು ಶೋಷಿತ ವರ್ಗವೆಂದು ಹೇಳಲಾದ ಮಲೆಕುಡಿಯರನ್ನು ಪ್ರತಿನಿಧಿಸುವ ಮಠಾಧೀಶರುಗಳಾಗಲಿ ಅವರ ಬೌದ್ಧಿಕ ಪರಿವರ್ತನೆಗೆ ನಿರಂತರ ಪ್ರಯತ್ನ ಮಾಡಲೇ ಇಲ್ಲ. ಸರಕಾರಿ ಶಕ್ತಿಯನ್ನು ಬಳಸಿ ಮಡೆಸ್ನಾನ ನಿಯಂತ್ರಿಸಲು ಪ್ರಯತ್ನ ಮಾಡುವುದೇ ದೊಡ್ಡ ಸಾಧನೆ.

Advertisement

ಕರ್ನಾಟಕ ಪ್ರಸಕ್ತ ಸ್ಥಿತಿಗತಿ ಹಾಗೂ ಈ ವಿಧೇಯಕ ಮಂಡನೆಯ ಆತುರವನ್ನು ಗಮನಿಸುವಾಗ ಆದ್ಯತೆಗನುಸಾರ ಯೋಜನೆಗಳನ್ನು ರೂಪಿಸಿ ಉತ್ತಮ ಆಡಳಿತ ನೀಡುವ ಇರಾದೆ ಸರಕಾರಕ್ಕಿಲ್ಲ ಎಂದು ಹೇಳಿದರೆ ತಪ್ಪಲ್ಲ. ರಾಜ್ಯದಲ್ಲಿ ನದಿ ನೀರಿನ ಸಮಸ್ಯೆ ಇದೆ, ಮಳೆ ನೀರಿನ ಸಮಸ್ಯೆ ಇದೆ. ಅಲ್ಲದೆ ವಸತಿ ಸಮಸ್ಯೆ, ಉದ್ಯೋಗ ಸಮಸ್ಯೆ, ಕೃಷಿ ಅಭಿವೃದ್ಧಿ ಕುಂಠಿತವಾದ ಸಮಸ್ಯೆ, ರಾಜ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಅವ್ಯವಸ್ಥೆಯ ಸಮಸ್ಯೆ, ಪಡಿತರ ಚೀಟಿ ವಿತರಣಾ ಸಮಸ್ಯೆ, ಕನ್ನಡ ಭಾಷೆ ಕ್ಷೀಣಿಸುತ್ತಿರುವ ಸಮಸ್ಯೆ, ಎಲ್ಲಕ್ಕಿಂತ ಮಿಗಿಲಾಗಿ ಸಿಬ್ಬಂದಿ ಕೊರತೆಯ ಸಮಸ್ಯೆ – ಹೀಗೆ ದೈನಂದಿನ ಬದುಕಿನ ಮೇಲೆ ಪ್ರಭಾವ ಬೀರುವ ಅನೇಕ ಜ್ವಲಂತ ಸಮಸ್ಯೆ ಗಳನ್ನು ಬಗೆಹರಿಸಲು ಸಮಾರೋಪಾಯದಲ್ಲಿ ಕಾರ್ಯೋನ್ಮುಖ ರಾಗು ವುದನ್ನು ಬಿಟ್ಟು ಸರಕಾರ ಮೌಡ್ಯ ನಿಷೇಧ ಕಾಯಿದೆಯನ್ನು ಜಾರಿಗೆ ತರಲು ತೋರಿಸುವ ಆಸಕ್ತಿಯನ್ನು ಕಂಡಾಗ ಅತಿ ದುಃಖವಾಗುತ್ತದೆ.

ನಮ್ಮ ಸರಕಾರಗಳಿಗೆ ಕಾನೂನು ರೂಪಿಸುವ ಖಯಾಲಿ ಜಾಸ್ತಿ ಹಾಗೂ ಆ ಕಾನೂನನ್ನು ಕನ್ನಡಿ ಕಪಾಟಿನಲ್ಲಿಡುವುದು ಇನ್ನೂ ಸಂತೋಷದ ಕೆಲಸ. ಯಾಕೆಂದರೆ ಯಾವುದೇ ಒಂದು ಕಾನೂನು ನ್ಯಾಯಯುತವಾಗಿ ಹಾಗೂ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಸುಮಾರು 22ರಿಂದ 25ರಷ್ಟು ಶೇಕಡಾ ನಿಯೋಜಿತ ಸರಕಾರಿ ಹುದ್ದೆಗಳು ಖಾಲಿ ಇವೆ. ಪ್ರಕಟನೆ ಇರುತ್ತದೆ ಪೇಪರಿನಲ್ಲಿ; ನೇಮಕಾತಿ ಇಲ್ಲ. ಹಾಗೆಂದಾಗ ಸಮರ್ಪಕ ಅನುಷ್ಠಾನ ಸಾಧ್ಯವೇ? ಅದು ಸರಕಾರಕ್ಕೆ ಬೇಕಾಗಿಲ್ಲ. ಸರಕಾರಕ್ಕೆ ಅರ್ಥಾತ್‌ ಚುನಾಯಿತ ಪ್ರತಿನಿಧಿಗಳಿಗೆ ಸಮಾಜದಲ್ಲಿ ಗೊಂದಲ ಸದಾ ಇರಬೇಕು. ಗೊಂದಲ ನಿವಾರಣೆಯ ಹೆಸರಲ್ಲಿ ತಾವು ಸದಾ ಸುದ್ದಿಯಲ್ಲಿರಬೇಕು, ಅಷ್ಟೇ. ಸರಕಾರಕ್ಕೆ ದಕ್ಷ ಆಡಳಿತದ ನೈಜ ಕಾಳಜಿ ಇರುವುದಾರೆ ಇರುವ ವ್ಯವಸ್ಥೆಯಲ್ಲಿಯೇ ಅಗಾಧ ಸಾಧನೆ ಮಾಡಿ ತೋರಿಸಬಹುದಾಗಿದೆ. ನಂಬಕೆಯಂಥ ಸೂಕ್ಷ್ಮ ವಿಚಾರಗಳನ್ನು ಕೈ ಬಿಟ್ಟು ಸಾರ್ವಜನಿಕ ಶೋಷಣೆ, ದೌರ್ಜನ್ಯ ಯಾರಿಂದ, ಯಾವ ರೂಪದಲ್ಲೇ ಆಗಲಿ ಅದರ ತಡೆಗೆ ಒತ್ತು ನೀಡುತ್ತಾ ಹಾಲಿ ಕಾನೂನಿನ ಮೂಲಕ ನಿಗ್ರಹಿಸುವ ಸಂಕಲ್ಪ ಮಾಡಲಿ. 
(ಚರ್ಚೆಗೆ ಆಹ್ವಾನ- UdayavaniVedike@manipalmedia.com )

– ಬೇಳೂರು ರಾಘವ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next