ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣೆಯ ಬಗ್ಗೆ ಕರಾವಳಿ ಮಾತ್ರವಲ್ಲ, ಕರ್ನಾಟಕ ರಾಜ್ಯವೇ ಕುತೂಹಲ ವನ್ನು ಹೊಂದಿರುತ್ತದೆ. ಇಲ್ಲಿ ಬರುವ ಫಲಿತಾಂಶಗಳೆಲ್ಲ ಜಿಲ್ಲೆಯ ಮಟ್ಟಿಗೆ ಹೊಸ ದಾಖಲೆಗಳೇ ಆಗಿರುತ್ತವೆ!ಕರ್ನಾಟಕದ ಕರಾವಳಿ ಮತ್ತು ಮಲೆನಾಡನ್ನು ಬೆಸೆಯುವ ಹಾಗೂ ವಿವಿಧ ಕಾರಣಗಳಿಂದ ಮಹತ್ವವನ್ನು ಹೊಂದಿದೆ ಈ ಕ್ಷೇತ್ರ. ನೇತ್ರಾವತಿ ನದಿಯ ಮಡಿಲಲ್ಲಿ ಇರುವ ಊರು. ರಾಜ್ಯ ಹೆದ್ದಾರಿಯ ಮಹತ್ವದ ಕೇಂದ್ರ. ವಸ್ತುಶಃ ಶತಮಾನದ ಇತಿಹಾಸವಿರುವ ಪಾಣೆಮಂಗಳೂರು ಸೇತುವೆ ಈಗ ಸಮಾನಾಂತರವಾಗಿ ಹೊಸ ಸೇತುವೆಯನ್ನು ಹೊಂದಿದೆ. ತೆಂಗು, ಅಡಿಕೆ, ಭತ್ತ, ರಬ್ಬರ್ ಕೃಷಿಯ ಸಮೃದ್ಧಿಯ ಊರು. ಸಾಹಿತ್ಯ, ಸಂಸ್ಕೃತಿ, ಕಲೆ, ಕ್ರೀಡೆ ಸಹಿತ ಎಲ್ಲ ಸೃಷ್ಟಿಶೀಲ ರಂಗಗಳಿಗೆ ಸಂಬಂಧಿಸಿ ಅನೇಕಾನೇಕ ಸಾಧಕರ ಊರು ಬಂಟ್ವಾಳ. ಅಖೀಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ನೀಡಿರುವ ಅಧ್ಯಕ್ಷರ ಪೈಕಿ ಬೆನಗಲ್, ಪಂಜೆ, ಮುಳಿಯ, ಕಡೆಂಗೋಡ್ಲು ಅವರು ಇಲ್ಲಿಯವರು. ಸರ್ವ ಧರ್ಮಗಳ ಮಹತ್ವದ ಕೇಂದ್ರಗಳು ಇಲ್ಲಿವೆ.
ಹಾಗೆ ನೋಡಿದರೆ, ಮೊದಲ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಈ ಹೆಸರಲ್ಲಿ ಕ್ಷೇತ್ರವಿರಲಿಲ್ಲ. ಪಕ್ಕದಲ್ಲಿ ಪಾಣೆಮಂಗಳೂರು ಇತ್ತು. 1967ರಿಂದ ಬಂಟ್ವಾಳ ಕ್ಷೇತ್ರ ರೂಪುಗೊಂಡಿತು. 2009ರಲ್ಲಿ ಮತ್ತಷ್ಟು ವಿಸ್ತಾರವಾದ ಭೌಗೋಳಿಕ ಸ್ವರೂಪವನ್ನು ಪಡೆಯಿತು. ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಅವರು (1934) ಬಂಟ್ವಾಳಕ್ಕೆ ಅಗಮಿಸಿ ಜನರನ್ನು ಉದ್ದೇಶಿಸಿ ಮಾತನಾಡಿದ್ದರು.
ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ. ರಮಾನಾಥ ರೈ (ಹಾಲಿ ಸಚಿವರು- ಶಾಸಕರು) ಅವರು 1985ರಿಂದ ಈವರೆಗೆ ಆರು ಬಾರಿ ಜಯಿಸಿದ್ದಾರೆ. 2004ರಲ್ಲಿ ಮಾತ್ರ ಬಿಜೆಪಿಯ ಬಿ. ನಾಗರಾಜ ಶೆಟ್ಟಿ ಅವರು ಇಲ್ಲಿ ಜಯಿಸಿದ್ದರು. 1989ರಿಂದ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಪ್ರಧಾನ ಸ್ಪರ್ಧೆ. ಎರಡೂ ಪಕ್ಷಗಳಿಂದ ಸ್ಪರ್ಧಿಸಿದವರು ಬಂಟ ಸಮಾಜದ ಅಭ್ಯರ್ಥಿಗಳು. ಈ ಬಾರಿ ಕೂಡ! ಬಂಟ್ವಾಳ ಕ್ಷೇತ್ರದಲ್ಲಿ ಪ್ರಬಲವಾದ ರಾಜಕೀಯ ಜಾಗೃತಿ ಇದೆ. ಚುನಾವಣಾಪೂರ್ವ ಸಂದರ್ಭದಲ್ಲಿದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಗ್ರಾಮ ಪಂಚಾಯತ್ ಹಂತದಿಂದ ಲೋಕಸಭಾ ಚುನಾವಣೆಯವರೆಗೆ ಇಲ್ಲಿನ ಮತದಾರರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಕೆಲವೊಮ್ಮೆ ಅನಪೇಕ್ಷಿತ ಘಟನೆಗಳು ನಡೆದಿಲ್ಲ ಎಂದಲ್ಲ. ಆದರೆ ಅದು ತತ್‌ಕ್ಷಣವೇ ಬಗೆಹರಿದಿದೆ ಅನ್ನುವುದು ಸಮಾಧಾನಕರವಾದ ಸಂಗತಿ. ಅನೇಕ ರಾಷ್ಟ್ರ-ರಾಜ್ಯ- ಸ್ಥಳೀಯ ಪಕ್ಷಗಳಿಂದ ನೆಲೆ ಒದಗಿಸಿದ ಕ್ಷೇತ್ರ ಬಂಟ್ವಾಳ. ಈ ಬಾರಿಯೂ ಇಲ್ಲಿ ರಾಜಕೀಯ ಕಾವು ಈಗಾಗಲೇ ನಿಚ್ಚಳವಾಗಿದೆ. ಚುನಾವಣಾ ದಿನಾಂಕ ಘೋಷಣೆಯ ಮೊದಲೇ ಇಲ್ಲಿಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಬಂದಿದ್ದಾರೆ. ರ್ಯಾಲಿಗಳು ನಡೆದಿವೆ. ಆರೋಪ-ಪ್ರತ್ಯಾರೋಪಗಳು ‘ಮೊಳಗುತ್ತಲೇ’ ಇವೆ. ರಾಜಕೀಯ ಸಮೀಕರಣ, ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿ ಕುತೂಹಲ ಮತ್ತಷ್ಟು ವೃದ್ಧಿಸಿದೆ!
ಅಂದ ಹಾಗೆ …
ಅನೇಕ ಪ್ರಥಮಗಳ ಹಿನ್ನೆಲೆ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕಿದೆ. ಇಲ್ಲಿನ 1967ರ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್‌ನ ಲೀಲಾವತಿ ಎಸ್. ರೈ ಗೆದ್ದರು. ಅವಿಭಜಿತ ಜಿಲ್ಲೆಯಿಂದ ಆ ವರ್ಷ ರೈ ಮತ್ತು ಕುಂದಾಪುರದಿಂದ ವಿನ್ನಿಫ್ರೆಡ್ ಫೆರ್ನಾಂಡಿಸ್ ವಿಧಾನಸಭೆಗೆ ಪ್ರವೇಶಿಸಿದ ಪ್ರಥಮ ಮಹಿಳಾ ಸದಸ್ಯರು. 1978ರಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಇಲ್ಲಿ ಬಿ. ವಿ. ಕಕ್ಕಿಲ್ಲಾಯರ ಮೂಲಕ ಪ್ರಾತಿನಿಧ್ಯ ದೊರೆಯಿತು. 1992-94-99-2013ರಿಂದ ಕಾಂಗ್ರೆಸ್‌ನ ಬಿ. ರಮಾನಾಥ ರೈ ಸಚಿವರು. 2004ರಲ್ಲಿ ಗೆದ್ದ ಬಿಜೆಪಿಯ ಬಿ. ನಾಗರಾಜ ಶೆಟ್ಟಿ ಸಚಿವರಾದರು. 1978ರಲ್ಲಿ ಗೆದ್ದ ಬಿ.ಎ. ಮೊದಿನ್ ಮುಂದೆ ವಿಧಾನ ಪರಿಷತ್ (1995-99) ಸದಸ್ಯರಾಗಿ ಸಚಿವರಾಗಿದ್ದರು.
— ಮನೋಹರ ಪ್ರಸಾದ್