ಬಂಗಾರಪೇಟೆ: ತಾಲೂಕಿನ ಪ್ರಸಿದ್ಧ ಕಮ್ಮಸಂದ್ರದ ಶ್ರೀಕೋಟಿಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ದಕ್ಷಿಣ ಭಾರತದ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಶ್ರೀಕೋಟಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಕರ್ನಾಟಕವಲ್ಲದೆ ತಮಿಳುನಾಡು, ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಭಾಗವಹಿಸಿದ್ದರು.
ದೇವಾಲಯದಲ್ಲಿ 109 ಅಡಿಗಳ ದೊಡ್ಡದಾದ ಶಿವಲಿಂಗಕ್ಕೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ದೊಡ್ಡ ಶಿವಲಿಂಗದ ಮುಂದೆ ಇರುವ ದೊಡ್ಡ ನಂದಿ ವಿಗ್ರಹಕ್ಕೂ ಅಲಂಕಾರ ಮಾಡಲಾಗಿತ್ತು. ಇದರಿಂದಾಗಿ ಎಲ್ಲಿ ನೋಡಿದರೂ ಹೂವಿನ ಅಲಂಕಾರಗಳಿಂದ ಕೂಡಿದ ಶಿವಲಿಂಗಗಳೇ ಕಾಣಿಸುತ್ತಿದ್ದವು.
ಬಂಗಾರಪೇಟೆ, ಕೆಜಿಎಫ್, ಕೋಲಾರ-ಬೇತಮಂಗಲ ಮಾರ್ಗದಲ್ಲಿ ಭಕ್ತಾದಿಗಳು ಹೆಚ್ಚಾಗಿ ಬರುವುದರಿಂದ ಸಂಚಾರ ಸಮಸ್ಯೆ ಆಗಿತ್ತು. ಎಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಸುಮಾರು ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ. ಸ್ವಾಮೀಜಿಗಳು ಇತ್ತೀಚೆಗೆ ಲಿಂಗೈಕ್ಯರಾಗಿದ್ದರಿಂದ ಇವರ ಜ್ಞಾಪಕಾರ್ಥ ದೇವಾಲಯದಲ್ಲಿ 6 ದಿನ ವಿವಿಧ ಧಾರ್ಮಿಕ ಸೇವೆಗಳನ್ನು ಟ್ರಸ್ಟ್ ವತಿಯಿಂದ ಉಚಿತವಾಗಿ ನಡೆಯಲು ಕ್ರಮಕೈಗೊಳ್ಳಲಾಗಿದೆ.
ದೇವಾಲಯದಲ್ಲಿ ಸುಮಾರು 15 ಕ್ಕೂ ಹೆಚ್ಚು ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ದೇವರ ದರ್ಶನ ಪಡೆಯಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾದಿಗಳಿಗೆ ಉಚಿತ ಅನ್ನದಾನ ಮಾಡಲಾಗಿತ್ತು. ಲಕ್ಷಾಂತರ ಭಕ್ತಾದಿಗಳು ಬಂದರೂ ಭಕ್ತಾದಿಗಳಿಗೆ ತೊಂದರೆಯಾಗದಂತೆ ದೇವಾಲಯದ ಟ್ರಸ್ಟ್ ವತಿಯಿಂದ ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಎಸ್.ಎನ್.ನಾರಾಯಣಸ್ವಾಮಿ, ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ, ಕೆಜಿಎಫ್ ಶಾಸಕಿ ರೂಪಾಕಲಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೋಲಾರ ಉಪವಿಭಾಗಾಧಿಕಾರಿ ಸೋಮಶೇಖರ್, ಕೆಜಿಎಫ್ ತಹಶೀಲ್ದಾರ್ ಕೆ.ರಮೇಶ್,
ಡಿವೈಎಸ್‌ಪಿ ಪರಮೇಶ್ವರ್ ಹೆಗಡೆ, ಶ್ರೀಕೋಟಿಲಿಂಗೇಶ್ವರ ಟ್ರಸ್ಟ್ ಅಧ್ಯಕ್ಷ ಕೆ.ಎನ್.ನಾರಾಯಣಮೂರ್ತಿ, ಕಾರ್ಯದರ್ಶಿ ಕೆ.ವಿ.ಕುಮಾರಿ, ಶ್ರೀಗಳ ಪುತ್ರ ಡಾ.ಕೆ.ಶಿವಪ್ರಸಾದ್, ಕೆಯುಡಿಎ ಮಾಜಿ ಅಧ್ಯಕ್ಷ ಅಪ್ಪಿವೆಂಕಟರಾಮರೆಡ್ಡಿ, ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮಿನಾರಾಯಣ ಮತ್ತಿತರರಿದ್ದರು.