Advertisement

Special Day Celebration: ಇನ್ನು ಸರಕಾರಿ ಶಾಲೆಗಳಲ್ಲಿ ವಿಶೇಷ ದಿನ ಹಬ್ಬದೂಟ!

02:08 AM Aug 04, 2024 | Team Udayavani |

ಬೆಂಗಳೂರು: ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವರೆಗೆ ಓದುತ್ತಿರುವ ಮಕ್ಕಳಿಗೆ ಹಬ್ಬ ಹರಿದಿನ, ಮದುವೆ/ಮದುವೆ ವಾರ್ಷಿಕೋತ್ಸವ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜನ್ಮದಿನಗಳು, ರಾಷ್ಟ್ರೀಯ ಪ್ರಮುಖ ದಿನಗಳು, ರಾಜ್ಯ ಸ್ಥಾಪನೆಯ ದಿನಗಳು ಸೇರಿ ವಿಶೇಷ ದಿನಾಚರಣೆಗಳ ಸಂದರ್ಭ ವಿಶೇಷ ಭೋಜನ ಏರ್ಪಡಿಸಲು ಸರಕಾರ ಅವಕಾಶ ಕಲ್ಪಿಸಿದೆ.

Advertisement

ಇದಕ್ಕೆ ಸಂಬಂಧಪಟ್ಟಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಪೌಷ್ಟಿಕ ಮತ್ತು ಆರೋಗ್ಯಕರ ಊಟ ಅಥವಾ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಹೇಳಿದೆ. ಈ ವಿಶೇಷ ಭೋಜನವು ಪಿಎಂ ಪೋಷಣ್‌ನ ಭಾಗವಾಗಿದೆ. ಎನ್‌ಜಿಒಗಳು, ಕೈಗಾರಿಕೆ, ವಾಣಿಜ್ಯ ಮತ್ತು ವ್ಯಾಪಾರ ಇತ್ಯಾದಿ ಸಮುದಾಯದ ಸದಸ್ಯರು ಸೇರಿ ಪೋಷಕರು, ಸಮುದಾಯದ ದಾನಿಗಳ ನೆರವು, ಪ್ರಾಯೋಜಕತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಮಾನದಂಡಗಳಿಗೆ ಅನುಗುಣವಾಗಿ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ 450 ಕ್ಯಾಲೋರಿಗಳು ಮತ್ತು 12 ಗ್ರಾಂ ಪ್ರೊಟೀನ್‌, ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ 750 ಕ್ಯಾಲೋರಿ ಮತ್ತು 20 ಗ್ರಾಂ ಪ್ರೊಟೀನ್‌ ಲಭ್ಯವಾಗುವಂತೆ ವಿಶೇಷ ಭೋಜನದ ಮೆನು ಇರಬೇಕು ಎಂದು ಸೂಚನೆ ನೀಡಲಾಗಿದೆ.

ಸ್ಥಳೀಯ ಆಹಾರಕ್ಕೆ ಆದ್ಯತೆ:
ಸ್ಥಳೀಯವಾಗಿ ಲಭ್ಯವಿರುವ ಸೊಪ್ಪಿನ ತರಕಾರಿಗಳು, ಕಾಳು, ದ್ವಿದಳ ಧಾನ್ಯ ಮತ್ತು ಸಿರಿಧಾನ್ಯಗಳಿಗೆ ಒತ್ತು ನೀಡಬೇಕು. ಋತುಮಾನದ ಹಣ್ಣುಗಳನ್ನು, ತಾಜಾ ತರಕಾರಿಗಳನ್ನು ಬಳಸಿಕೊಳ್ಳಬಹುದು. ಆಹಾರ ಧಾನ್ಯ ಸಂಗ್ರಹ, ಅಡುಗೆ ಮಾಡುವಾಗ ಹಾಗೂ ಬಡಿಸುವಾಗ ಸ್ವತ್ಛತೆ ಮತ್ತು ನೈರ್ಮಲ್ಯದ ಮಾನದಂಡಗಳ ಕಡ್ಡಾಯ ಪಾಲನೆ ಆಗಬೇಕು. ಆಹಾರ ಕಲಬೆರಕೆ ಮತ್ತು ಆಹಾರ ಹಾಳಾಗುವುದನ್ನು ತಡೆಯಲು ಪ್ರಮಾಣಿತ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶುದ್ಧ ಕುಡಿಯುವ ನೀರನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ.

ಜಂಕ್‌ ಫ‌ುಡ್‌ ಬೇಡ
ಮಕ್ಕಳಲ್ಲಿ ಜಂಕ್‌ ಫ‌ುಡ್‌ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಆಗುತ್ತಿರುವ ಬಗ್ಗೆ ವಿವಿಧ ವರದಿಗಳಲ್ಲಿ ಉಲ್ಲೇಖ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯು ವಿಶೇಷ ಭೋಜನದಲ್ಲಿ ನೂಡಲ್ಸ್‌, ಚಿಪ್ಸ್‌, ಚಾಕೋಲೆಟ್‌ ಮುಂತಾದ ಜಂಕ್‌ ಫ‌ುಡ್‌ಗೆ ಅವಕಾಶವಿಲ್ಲ, ಹಳಸಿದ ಆಹಾರವನ್ನು ಕೊಡಬೇಡಿ ಎಂದು ಸೂಚಿಸಲಾಗಿದೆ. ಮಕ್ಕಳಿಗೆ ಉಣಬಡಿಸುವ ಮೊದಲು ಶಿಕ್ಷಕರು ಮತ್ತು ಅಡುಗೆಯವರು ರುಚಿ ನೋಡಬೇಕೆಂದು ಹೇಳಲಾಗಿದೆ. ವರ್ಷಕ್ಕೆ ನೂರರಷ್ಟು ವಿಶೇಷ ಭೋಜನ ಕಾರ್ಯಕ್ರಮ ಹಮ್ಮಿಕೊಳ್ಳಬಹುದೆಂದು ಹೇಳಲಾಗಿದೆ.

Advertisement

“ಮಾರ್ಗಸೂಚಿಯಂತೆ ಶಾಲಾ ಹಂತದಲ್ಲಿ ವಿಶೇಷ ಭೋಜನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಮತ್ತು ಗುಣಮಟ್ಟದ ಪೋಷಕಾಂಶಗಳಿರುವ ಪೂರಕ ಆಹಾರ ಪದಾರ್ಥಗಳನ್ನು ಪೋಷಕರು ಮತ್ತು ಸಮುದಾಯದ ದಾನಿಗಳಿಂದ ಕೊಡುಗೆಯಾಗಿ ಕೊಡುವುದನ್ನು ಉತ್ತೇಜಿಸಬೇಕು.” – ಬಿ.ಬಿ. ಕಾವೇರಿ, ಆಯುಕ್ತ, ಶಾಲಾ ಶಿಕ್ಷಣ ಇಲಾಖೆ

– ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next