ಅವನು ಯಾಕೆ ಹೊಡಿತಾನೆ ಅನ್ನೋದೇ ಸಸ್ಪೆನ್ಸು! ಒಬ್ಬ ಪೊಲೀಸ್ ಅಧಿಕಾರಿಯ ವರ್ತನೆ ಯಾವ್ಯಾವ ಕ್ಷಣದಲ್ಲಿ ಹೇಗೆಲ್ಲಾ ಇರುತ್ತೋ ಗೊತ್ತಿಲ್ಲ. ಆದರೆ, ನಿರ್ದೇಶಕ ರಾಮ್‌ನಾರಾಯಣ್ ಕಲ್ಪನೆಯ ಪೊಲೀಸ್ ಅಧಿಕಾರಿ ವಿಷಯದಲ್ಲಂತೂ, ಸಿಕ್ಕಾಪಟ್ಟೆ ಕನ್‌ಫ್ಯೂಷನ್ನು! ಯಾವಾಗ, ಹೇಗೆ ಇರುತ್ತಾನೆ, ಏನು ಮಾಡ್ತಾನೆ ಅನ್ನೋದೇ ಸ್ಪೆಷಲ್ಲು. ಆದರೆ, ಅವನೇನೇ ಮಾಡಿದ್ರೂ ಕರೆಕ್ಟ್ ಆಗಿರುತ್ತೆ ಅನ್ನೋದು ವಿಶೇಷ. ಕಥೆ ತುಂಬಾ ಸಿಂಪಲ್ಲು. ಆದರೆ, ಅದನ್ನು ನಿರೂಪಿಸಿರುವ ಶೈಲಿ ಕೊಂಚ ಸ್ಪೆಷಲ್ಲಷ್ಟೇ.
ಹಾಗಂತ, ಕಥೆಯಲ್ಲಿ “ಗಟ್ಟಿ’ತನ ಇದೆ ಅಂತಂದುಕೊಳ್ಳುವಂತಿಲ್ಲ. ಒಂದು ಸರಳ ಕಥೆಯ ಚಿತ್ರಣವನ್ನು ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು ಚಿತ್ರದೊಳಗಿನ ಮಾತು ಮತ್ತು ಮೇಕಿಂಗ್ ಶೈಲಿಗಿದೆ ಎಂಬುದನ್ನು ಯಾವ ಮುಲಾಜಿಲ್ಲದೆ ಹೇಳಬಹುದು. ಅಷ್ಟೇ ಅಲ್ಲ, ಇಲ್ಲಿ ಎಲ್ಲವೂ ಕಲರ್‌ಫುಲ್ ಎನಿಸಿದೆಯಾದರೂ, ಮೊದಲರ್ಧಕ್ಕಿಂತ ದ್ವಿತಿಯಾರ್ಧ ಸ್ವಲ್ಪ ಮಟ್ಟಿಗೆ ನಿಧಾನ ಎನಿಸುತ್ತದೆ. ಕೆಲವೊಮ್ಮೆ ಬೇಡದ ದೃಶ್ಯಗಳು ನೋಡುಗನ ಮಗ್ಗಲು ಬದಲಿಸುವಂತೆ ಮಾಡುತ್ತವೆಯಾದರೂ, ಆ ಕ್ಷಣಕ್ಕೆ ಬರುವ ಹಾಡು ಮತ್ತೆ ಜಬರ್‌ದಸ್ತ್ ಆ್ಯಕ್ಷನ್‌ಗಳು ಸಣ್ಣ ತಪ್ಪುಗಳನ್ನು ಪಕ್ಕಕ್ಕೆ ಸರಿಸುತ್ತವೆ.
ಒಂದು ಕಮರ್ಷಿಯಲ್ ಸಿನಿಮಾಗೆ ಏನೆಲ್ಲಾ ಇರಬೇಕೋ ಅದೆಲ್ಲವನ್ನೂ ಇಲ್ಲಿಡುವ ಮೂಲಕ ಪಕ್ಕಾ ಆ್ಯಕ್ಷನ್ ಪ್ರಿಯರಿಗೊಂದು “ಭರ್ಜರಿ’ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಹಾಗಂತ, ಇಲ್ಲಿ ಇಡೀ ಸಿನಿಮಾದಲ್ಲಿ ತೂಕವಿದೆ ಅಂದುಕೊಳ್ಳುವಂತಿಲ್ಲ. ಕ್ರ್ಯಾಕ್‌ನಂತೆ ಆಡುವ ಪೊಲೀಸ್ ಅಧಿಕಾರಿಯ ಅಬ್ಬರವನ್ನು ಇನ್ನಷ್ಟು ಸಾಫ್ಟ್ ಮಾಡಿದ್ದರೆ, “ಕ್ರ್ಯಾಕ್’ ಮತ್ತಷ್ಟು ಮಂದಿಗೆ ಮೆಚ್ಚುಗೆಗೆ ಪಾತ್ರವಾಗುತ್ತಿದ್ದನೇನೋ? ಆದರೆ, ಮಾಸ್ ಪ್ರಿಯರಿಗೆಂದೇ ಮಾಡಿರುವ “ಕ್ರ್ಯಾಕ್’ ನಗಿಸುವಲ್ಲೂ ಹಿಂದೆ ಬಿದ್ದಿಲ್ಲ. ಇಲ್ಲಿ ಗನ್ ಸದ್ದು ಮಾಡಿದರೂ, ಅಟ್ಟಾಡಿಸಿಕೊಂಡು ಹೊಡೆಯುವ ದೃಶ್ಯಗಳಿಗೇನೂ ಕಮ್ಮಿ ಇಲ್ಲ.
ಸಣ್ಣ ಪ್ರೀತಿಯ ಜತೆಗೆ ಹೂರಣದಷ್ಟು ಸೆಂಟಿಮೆಂಟ್ ಕೂಡ ಬೆರೆತಿರುವುದರಿಂದ ನೋಡುಗ ಅಷ್ಟೇನೂ “ಕ್ರ್ಯಾಕ್’ ಆಗಲಾರ! ಒಟ್ಟಾರೆ, ಒಬ್ಬ ತಿಕ್ಕಲುತನದ ಪೊಲೀಸ್ ಅಧಿಕಾರಿ, ಹೀಗೂ ದುಷ್ಟರನ್ನು ಬಗ್ಗು ಬಡಿಯಬಲ್ಲ ಎಂಬುದನ್ನು ನೋಡುಗರಿಗೆ ಸಾಬೀತುಪಡಿಸುವಲ್ಲಿ ಕೊಂಚಮಟ್ಟಿಗೆ ನಿರ್ದೇಶಕರು ಹರಸಾಹಸ ಪಟ್ಟಿದ್ದಾರೆನ್ನಬಹುದು. ಇಲ್ಲಿ ಆ ಪೊಲೀಸ್ ಅಧಿಕಾರಿಗೆ ಜನ ಯಹಾಕೆ “ಕ್ರ್ಯಾಕ್’ ಅಂತಾರೆ, ಅವನಿಲ್ಲಿ ಏನೆಲ್ಲಾ ಮಾಡ್ತಾನೆ ಎಂಬ ಕುತೂಹಲವಿದ್ದರೆ, “ಕ್ರ್ಯಾಕ್’ ನೋಡಬಹುದು.
ಬೆಂಗಳೂರಲ್ಲಿ ಸರಣಿ ಕೊಲೆಗಳು ನಡೆಯುತ್ತವೆ. ಅವುಗಳ ರಹಸ್ಯ ಹೊರಹಾಕಲು, ಕೊಲೆಗೆಡುಕರನ್ನು ಹಿಡಿಯಲು ಒಬ್ಬ ಪೊಲೀಸ್ ಅಧಿಕಾರಿಯನ್ನು ಸರ್ಕಾರ ನೇಮಿಸುತ್ತೆ. ಎಲ್ಲರೂ ಆ ಪೊಲೀಸ್ ಅಧಿಕಾರಿಯನ್ನು ಕ್ರ್ಯಾಕ್ ಅಂತಾನೇ ಕರೆಯುತ್ತಾರೆ. ಕಾರಣ, ಆತ ಸಿಕ್ಕ ರೌಡಿಗಳನ್ನು ಮುಲಾಜಿಲ್ಲದೆ, ಎನ್‌ಕೌಂಟರ್ ಮಾಡ್ತಾನೆ, ತನ್ನ ಮುಂದೆ ಗೃಹಮಂತ್ರಿಯೇ ಇರಲಿ, ಎಸಿಪಿಯೇ ಇರಲಿ, ಹಿಂದೆ ಮುಂದೆ ನೋಡದೆ, ನೇರ ಮಾತಾಡುವ ವ್ಯಕ್ತಿತ್ವದವನು. ತನಗೆ ತಾನೇ ಒಂದು ಸ್ಪೆಷಲ್ ಟ್ರ್ಯಾಕ್ ಮಾಡಿಕೊಂಡು, ಆ ರೂಲ್ಸ್‌ನಲ್ಲೇ ಸಾಗುವ ವ್ಯಕ್ತಿ.
ಕೊಲೆ ಕೇಸು ಕೈಗೆತ್ತಕೊಂಡು, ಒಂದೊಂದೇ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗುತ್ತಾನೆ. ಕೊನೆಗೆ ಹನ್ನೊಂದು ಕೊಲೆ ಮಾಡಿದ ವ್ಯಕ್ತಿ ಯಾರು ಅಂತ ಕಂಡು ಹಿಡಿಯೋಕೆ ಚೆನ್ನೈಗೂ ಹಾರುತ್ತಾನೆ. ಅಲ್ಲಿ ಏನಾಗುತ್ತೆ ಅನ್ನೋದೇ ರೋಚಕ. ವಿನೋದ್ ಪ್ರಭಾಕರ್ ಹಿಂದಿಗಿಂತಲೂ ಇಲ್ಲಿ ಇಷ್ಟವಾಗುತ್ತಾರೆ. ನಟನೆ, ಡೈಲಾಗ್ ಡಿಲವರಿ, ಡ್ಯಾನ್ಸು, ಫೈಟು ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ಕೆಲವು ಡೈಲಾಗ್ ಡಿಲವರಿ, ಬಾಡಿಲಾಂಗ್ವೇಜ್‌ನಲ್ಲಿ ಅವರ ತಂದೆ ಟೈಗರ್ ಪ್ರಭಾಕರ್ ಕಾಣುತ್ತಾರೆ. ಕ್ರ್ಯಾಕ್ ಪಾತ್ರಕ್ಕೆ ಸಾಧ್ಯವಾದಷ್ಟು ಜೀವ ತುಂಬಿದ್ದಾರೆ.
ಕಾಮಿಡಿ- ಆ್ಯಕ್ಷನ್ ಈ ಎರಡನ್ನೂ ಸರಿಯಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಕಾಂಕ್ಷ ಗ್ಲಾಮರ್ ಆಗಿದ್ದಾರೆನ್ನುವುದು ಬಿಟ್ಟರೆ, ನಟನೆ ಬಗ್ಗೆ ಹೇಳುವುದೇನಿಲ್ಲ. ಉಳಿದಂತೆ ಪ್ರಶಾಂತ್ ಸಿದ್ದಿ, ಪದ್ಮಜಾ ರಾವ್, ಶ್ರೀಧರ್, ಅರ್ಜುನ್ ಹಾಗು ಬರುವ ಕೆಲ ಪಾತ್ರಗಳು ಗಮನಸೆಳೆಯುತ್ತವೆ. ಶಮಿತಾ ಮಲ್ನಾಡ್ ಹಾಗೂ ಚಿನ್ನಾ ಕಾಂಬಿನೇಷನ್‌ನ ಸಂಗೀತದಲ್ಲಿ “ಕಾವೇರಿ…’ ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಆನಂದ ಪ್ರಿಯ ಮಾತುಗಳಲ್ಲಿ ಆಗಾಗ ಪಂಚಿಂಗ್ ಇದೆ. ಗಣೇಶ್ ಕ್ಯಾಮೆರಾದಲ್ಲಿ “ಕ್ರ್ಯಾಕ್’ ಅಬ್ಬರವಿದೆ.
ಚಿತ್ರ: ಕ್ರ್ಯಾಕ್
ನಿರ್ಮಾಣ: ವಿಜಯ್‌ಕುಮಾರ್, ಶಂಕರ್ ಇಳಕಲ್
ನಿರ್ದೇಶನ: ಕೆ. ರಾಮ್‌ನಾರಾಯಣ್
ತಾರಾಗಣ: ವಿನೋದ್ ಪ್ರಭಾಕರ್, ಆಕಾಂಕ್ಷಾ, ಅರವಿಂದ್, ಪದ್ಮಜಾರಾವ್, ಪ್ರಶಾಂತ್ ಸಿದ್ದಿ, “ಸಿದ್ಲಿಂಗು’ ಶ್ರೀಧರ್ ಇತರರು.
* ವಿಜಯ್ ಭರಮಸಾಗರ