ಹುಣಸೂರು: ಈ ಬಾರಿ ಕೊರೊನಾ ನಡುವೆ ತಾಲೂಕಿನ ಸರ್ಕಾರಿ ಶಾಲೆಗಳಿಗೆ 344 ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಪ್ರವೇಶ ಪಡೆದಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 4054 ವಿದ್ಯಾರ್ಥಿಗಳಿದ್ದು, ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ವಿಶೇಷ ತರಗತಿ ನಡೆಸುವ ಮೂಲಕ ಫಲಿತಾಂಶ ವೃದ್ಧಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಪದ್ಮಮ್ಮ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ವೇಳೆ ಮಾತನಾಡಿದ ಅವರು, ಕಳೆದ ಬಾರಿ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಬಂದಿದ್ದ ಶಾಲೆಗೆ ವಿಶೇಷ ಗಮನ ಹರಿಸಲಾಗಿದೆ ಎಂದರು.
ತಾಪಂ ಇಒ ಮಾತನಾಡಿ, ಶಾಲೆಗಳ ಗುರುತಿಸಿ, ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿಗೊಳಿಸುವ ಸಲುವಾಗಿ ಕ್ರಿಯಾಯೋಜನೆ ರೂಪಿಸುವಂತೆ ಸೂಚಿಸಿದರು. ತಾಲೂಕಿನ ವಿವಿಧ ಹಾಡಿಗಳಿಂದ 80 ಲಕ್ಷರೂ ವಿದ್ಯುತ್ ಬಿಲ್ ಬಾಕಿ ಇದೆ. ಆರೋಗ್ಯ ಇಲಾಖೆಯಲ್ಲಿ ಸೌಲಭ್ಯ ನೀಡಲು ಸಿಬ್ಬಂದಿಗಳಿಲ್ಲ, ಪ್ರಸೂತಿ ತಜ್ಞರ ಕೊರತೆಯಿಂದ ಶಸ್ತ್ರಚಿಕಿತ್ಸೆ ನಡೆಯುತ್ತಿಲ್ಲ, ಹೀಗೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪರಿಶಿಷ್ಟವರ್ಗಗಳ ಕಲ್ಯಾಣಾಧಿಕಾರಿ ಬಸವರಾಜು, ಆಶ್ರಮಶಾಲೆಗಳಲ್ಲಿ,6 ಮತ್ತು 7 ತರಗತಿಗಳು ಮಾತ್ರ ವಿದ್ಯಾಗಮ ಯೋಜನೆಯಡಿ ವ್ಯಾಸಂಗ ನಡೆಯುತ್ತಿದ್ದು, ಆಶ್ರಮಶಾಲೆ ಮಕ್ಕಳಿಗೆ ಊಟೋಪಚಾರ ವ್ಯವಸ್ಥೆ ಸರ್ಕಾರದ ಮಟ್ಟದಲ್ಲೇ ನಿರ್ಣಯ ಆಗಬೇಕಿದೆ ಎಂದರು. ಎಇಇ ಸಿದ್ದಪ್ಪ ಮಾತನಾಡಿ, ವಿವಿಧ ಹಾಡಿಗಳಿಂದ ಒಬ್ಬೊಬ್ಬರು 4-5 ಸಾವಿರ ರೂ. ನಂತೆ ಒಟ್ಟು 80 ಲಕ್ಷ ರೂ.ವಿದ್ಯುತ್ ಶುಲ್ಕ ಬಾಕಿ ಇದೆ. ಮನೆಯವರು ಕನಿಷ್ಠ 500 ರೂ.ನೀಡಿದರೂ ಮರು ಸಂಪರ್ಕ ನೀಡುತ್ತೇವೆ ಎಂದು ತಿಳಿಸಿದರು.
ತಾಪಂ ಇಒ ಗಿರೀಶ್, ಬಾಕಿ ಪಟ್ಟಿ ನೀಡಿದಲ್ಲಿ ತಾಪಂನ ಎಸ್ಸಿ ಎಸ್ಟಿ ಅನುದಾನದಡಿ ಪ್ರತಿ ಮನೆಗೆ ಕನಿಷ್ಠ 500 ರೂ. ಒದಗಿಸಲಾಗುವುದು. 40 ಲಕ್ಷ ರೂ. ಅನುದಾನದಲ್ಲಿ ಹಾಸ್ಟೆಲ್‌ಗಳ ಅಭಿವೃದ್ಧಿಗೆ ಅಗತ್ಯವಿರುವ ಸೌಲಭ್ಯ, ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಟಿಎಚ್‌ಒ ಡಾ.ಕೀರ್ತಿಕುಮಾರ್ ಮಾತನಾಡಿ, ತಜ್ಞ ವೈದ್ಯರ ಕೊರತೆಯಿಂದ ಶಸ್ತ್ರಚಿಕಿತ್ಸೆ ನಡೆಯುತ್ತಿಲ್ಲ, ಅಲ್ಲದೆ ತಾಲೂಕಿನ 19 ಆರೋಗ್ಯ ಸಹಾಯಕರು ವರ್ಗಾವಣೆಗೊಂಡಿದ್ದು, ಕೆಲಸ ಮಾಡುವುದೇ ದುಸ್ತರವಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಸನ್ನ, ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು