Advertisement

ಅಂಬಾರಿ ಹೊರುವ ಗಜಪಡೆಗೆ ವಿಶೇಷ ಆರೈಕೆ

11:20 AM Aug 31, 2018 | Team Udayavani |

ಹುಣಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು, ಬಳ್ಳೆ, ಕೊಡಗಿನ ದುಬಾರೆ, ಕೆ.ಗುಡಿ ಶಿಬಿರಗಳಲ್ಲಿ ವಿಶೇಷ ಆರೈಕೆ ಆರಂಭಿಸಲಾಗಿದೆ.

Advertisement

ಸತತ ಐದನೇ ಬಾರಿಗೆ ಅಂಬಾರಿ ಹೊರಲು ಸಿದ್ಧನಾಗಿರುವ ಜಂಬೂ ಸವಾರಿಯ ಕ್ಯಾಪ್ಟನ್‌ ಅರ್ಜುನನಿಗೆ ಎಚ್‌.ಡಿ.ಕೋಟೆ ತಾಲೂಕಿನ ಬಳ್ಳೆ ಶಿಬಿರದಲ್ಲೂ, ವೀರ ಪರಾಕ್ರಮಿ ಅಭಿಮನ್ಯು 13 ಬಾರಿ ಅಂಬಾರಿ ಹೊತ್ತಿದ್ದ ಸೌಮ್ಯ ಸ್ವಭಾವದ ಬಲರಾಮ, ದ್ರೋಣ, ಕುಮ್ಕಿ,

ವರಲಕ್ಷ್ಮೀ, ಗೋಪಾಲಸ್ವಾಮಿ ಆನೆಗಳಿಗೆ ಮತ್ತಿಗೋಡು ಶಿಬಿರದಲ್ಲೂ, ಕಾವೇರಿ, ವಿಕ್ರಮ, ಗೋಪಿ, ಧನಂಜಯ, ಪ್ರಶಾಂತ ಕೊಡಗಿನ ದುಬಾರೆ ಕ್ಯಾಂಪಿನಲ್ಲಿ  ಹಾಗೂ ಕೆ.ಗುಡಿ ಶಿಬಿರದಲ್ಲಿ ಗಜೇಂದ್ರನಿಗೆ ನಿತ್ಯವೂ ವಿಶೇಷ ಆರೈಕೆ ಮಾಡಿ ಮೈಸೂರು ದಸರಾ ಉತ್ಸವಕ್ಕೆ ಸಿದ್ಧತೆ ಮಾಡಲಾಗುತ್ತಿದೆ.

ಕಂಠಾಪುರ ಕೆರೆಯಲ್ಲಿ ಮಜ್ಜನ: ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಮತ್ತಿಗೋಡು ಕ್ಯಾಂಪ್‌ ಸಮೀಪದ ಕಂಠಾಪುರ ಕೆರೆಯಲ್ಲಿ ಮಳೆಯ ನಡುವೆಯೂ ನಿತ್ಯ ಸ್ನಾನ ನಡೆದಿದೆ. ನೀರೆಂದರೆ ಆನಂದದಿಂದ ಜಳಕವಾಡುವ ಆನೆಗಳು, ಮಾವುತರು, ಕವಾಡಿಗಳು ಹಾಗೂ ಅವರ ಮಕ್ಕಳಿಂದ ನೀರಿನಲ್ಲೇ ಮಲಗಿ ಮೈ ಉಜ್ಜಿಸಿಕೊಳ್ಳುವ, ಈಜುತ್ತಾ, ಪರಸ್ಪರ ನೀರೆರೆಚುತ್ತಾ ಆಟವಾಡುವುದನ್ನು ಕಣ್ತುಂಬಿಕೊಳ್ಳುವುದೇ ಪರಮಾನಂದ.

ಮಜ್ಜನದ ಬಳಿಕ ಶಿಬಿರಕ್ಕೆ ಕರೆತಂದು ಎಣ್ಣೆ ಮಜ್ಜನ ನಡೆಸಿ, ಶಿಬಿರದಲ್ಲಿ ತಯಾರು ಮಾಡುವ ಬಗೆಬಗೆಯ ತಿಂಡಿ, ಭತ್ತ, ಹುಲ್ಲು ಮಿಶ್ರಣದ ಕುಸುರೆ ನೀಡುವರು. ಇವು ಪೈಪೋಟಿ ಮೇಲೆ ತಿನ್ನುವ ಸೊಬಗೂ ನೋಡಲು ಬಲುಚೆಂದ.

Advertisement

ಭೂರೀ ಭೋಜನ: ಶಿಬಿರದಲ್ಲಿ ಎಂದಿನಂತೆ ನೀಡಲಾಗುವ ರಾಗಿ ಮುದ್ದೆ ಜೊತೆಗೆ  ಪೌಷ್ಠಿಕಾಂಶ ಯುಕ್ತ ಮೊಕ್ಕೆಜೋಳ, ಗೋದಿಹುಡಿ, ಸೋಯಾ ಅವರೆ, ಹೆಸರುಕಾಳು, ಕುಸಲಕ್ಕಿಯನ್ನು ಬೇಯಿಸಿ, ಉಂಡೆ ಮಾಡಿ ನೀಡಲಾಗುತ್ತಿದೆ. ಅಲ್ಲದೆ ಭತ್ತದ ಕುಸುರೆಯನ್ನೂ ಕೊಡಲಾಗುವುದು.

ಪಶುವೈದ್ಯ ಡಾ.ಮುಜೀಬ್‌ ರೆಹಮಾನ್‌ ನಿತ್ಯ ಆರೋಗ್ಯ ಪರೀಕ್ಷೆ ನಡೆಸುತ್ತಿದ್ದು, ಬಳ್ಳೆ ಶಿಬಿರದಲ್ಲಿ ಆರ್‌ಎಫ್‌ಒ ಸುಬ್ರಮಣ್ಯ ಹಾಗೂ ಮತ್ತಿಗೋಡು ಶಿಬಿರದಲ್ಲಿ ಆರ್‌ಎಫ್‌ಒ ಕಿರಣ್‌ಕುಮಾರ್‌ ಮಾರ್ಗದರ್ಶನದಲ್ಲಿ ಶಿಬಿರದ ಉಸ್ತುವಾರಿ ಡಿಆರ್‌ಎಫ್‌ಒ ಸತೀಶ್‌ಕುಮಾರ್‌, ಅರಣ್ಯ ರಕ್ಷಕಿ ಶಾರದಮ್ಮ ಕಣ್ಗಾವಲಿನಲ್ಲಿ ಆರೈಕೆ ನಡೆಯುತ್ತಿದೆ.

ಪ್ರಥಮ ಬಾರಿಗೆ ಧನಂಜಯ: ಇದೇ ಮೊದಲ ಬಾರಿಗೆ ಕೊಡಗಿನ ದುಬರೆ ಶಿಬಿರದಲ್ಲಿರುವ 36 ವರ್ಷದ ಧನಂಜಯ ಸ್ವರುದ್ರೂಪಿ ಹಾಗೂ ಕಟ್ಟು ಮಸ್ತಾದ ಆನೆ ಇದಾಗಿದೆ. ಪ್ರಥಮ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆಯಲಿದ್ದಾನೆ. ಈತನನ್ನು ಹಾಸನ ಜಿಲ್ಲೆಯಲ್ಲಿ 2014ರಲ್ಲಿ ಸೆರೆ ಹಿಡಿಯಲಾಗಿತ್ತು.

ಅರ್ಜುನನಿಗೆ ವಿಶೇಷ ಆರೈಕೆ: ನಾಗರಹೊಳೆಯ ಬಳ್ಳೆ ಶಿಬಿರದಲ್ಲಿ ಅಂಬಾರಿ ಹೊರುವ ಅರ್ಜುನನಿಗೆ ಮಾವುತ ವಿನು, ಕವಾಡಿ ಸಣ್ಣಪ್ಪ ಹಲವಾರು ದಿನಗಳಿಂದ ನಿತ್ಯ ಕಬಿನಿ ಹಿನ್ನೀರಿನಲ್ಲಿ ದಿನಕ್ಕೆರಡು ಬಾರಿ ಮಜ್ಜನ ಮಾಡಿಸುತ್ತಿದ್ದಾರೆ. ಶಿಬಿರಕ್ಕೆ ಕರೆತಂದು ಎಣ್ಣೆ ಮಜ್ಜನ ನಡೆಸಿ, ಸೊಳ್ಳೆ-ನೊಣ ಮೈಮೇಲೆ ಕೂರದಂತೆ ಬೇವಿನ ಎಣ್ಣೆ ಹಚ್ಚುವುದು,

ಹರಳೆಣ್ಣೆಯಿಂದ ಮಸಾಜ್‌ ಮಾಡುವರು. ವಿಶೇಷ ತಿಂಡಿ ನೀಡುವರು. ಆನೆಗೆ ಪ್ರಿಯವಾದ ಹುಲ್ಲಿನೊಂದಿಗೆ  ಭತ್ತ, ಬೆಲ್ಲ ಮಿಶ್ರಣ ಮಾಡಿ ಕುಸುರೆ(ಭತ್ತದ ಹುಲ್ಲಿನುಂಡೆ)ಯಲ್ಲಿ ಎರಡು ಬಾರಿ ನೀಡುತ್ತಾ, ವಿಶೇಷ ನಿಗಾವಹಿಸಿದ್ದಾರೆ. ಡಾ.ಮುಜೀಬ್‌ ರೆಹಮಾನ್‌ ಆರೋಗ್ಯ ಪರಿಶೀಲಿಸುತ್ತಿದ್ದಾರೆ.

* ಸಂಪತ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next