Advertisement
ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉನ್ನತೀಕರಿಸಲು ವಿಭಿನ್ನ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಫಲಿತಾಂಶದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕೊಡಿ ಮೊದಲಾದವುಗಳು ಅದೇ ಸ್ಥಾನ ಕಾಯ್ದುಕೊಳ್ಳಲು ಅಥವಾ ಅದಕ್ಕಿಂತ ಹೆಚ್ಚಿನ ಸಾಧನೆಗಾಗಿ ವಿಶೇಷ ಪ್ರಯತ್ನವನ್ನು ಈಗಾಗಲೇ ಆರಂಭಿಸಿವೆ.
2017ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳು ಶೇ.68.87ರಷ್ಟು ಹಾಗೂ ಖಾಸಗಿ ಶಾಲೆಗಳು ಶೇ.80.70ರಷ್ಟು ಫಲಿತಾಂಶ ಪಡೆದಿವೆ. 2018ರಲ್ಲಿ ಸರ್ಕಾರಿ ಶಾಲೆಯ ಫಲಿತಾಂಶ ಶೇ.75.12ಕ್ಕೆ ಏರಿಕೆಯಾಗಿದ್ದರೂ, ಖಾಸಗಿ ಶಾಲೆಗಳ ಫಲಿತಾಂಶ ಶೇ.83.05ರಷ್ಟು ತಲುಪಿದೆ. ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳ ಫಲಿತಾಂಶ ಏರಿಕೆಯಾಗುತ್ತಿದ್ದರೂ, ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ 2019ರ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಆಯಾ ಜಿಲ್ಲಾ ವ್ಯಾಪ್ತಿಯ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
Related Articles
Advertisement
ಶೈಕ್ಷಣಿಕವಾಗಿ ಹಿಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ವೈಯಕ್ತಿಕ ನೆಲೆಯಲ್ಲಿ ಯಾವ ರೀತಿಯ ಬೋಧನೆ ಮಾಡಬಹುದು ಎಂಬುದನ್ನು ಅಧಿಕಾರಿಗಳು ಚರ್ಚಿಸುತ್ತಿದ್ದಾರೆ. ಪ್ರತಿ ವಿದ್ಯಾರ್ಥಿಗಳಿಗೂ ಪ್ರತ್ಯೇಕವಾಗಿ ಪಾಠ ಪ್ರವಚನ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕನ್ನಡ, ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ಹೀಗೆ, ವಿಷಯವಾರು ಪ್ರತ್ಯೇಕ ಗುಂಪು ರಚಿಸಲಾಗುತ್ತಿದೆ. ಆಯಾ ಗುಂಪಿಗೆ ಪ್ರತ್ಯೇಕ ತರಗತಿಗಳನ್ನು ತೆಗೆದುಕೊಂಡು ವಿಶೇಷ ಬೋಧನೆ ಮಾಡುವ ವ್ಯವಸ್ಥೆಯೂ ಆಗುತ್ತಿದೆ. ಇಷ್ಟಾಗಿಯೂ ಶೈಕ್ಷಣಿಕವಾಗಿ ಹಿಂದಿರುವ ವಿದ್ಯಾರ್ಥಿಗಳಿಗೆ ವೈಯಕ್ತಿಕ ನೆಲೆಯಲ್ಲಿ ಬೋಧನೆಗೂ ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವಿಶೇಷ ತರಗತಿ:ಶಾಲಾ ತರಗತಿ ಆರಂಭವಾಗುವ ಪೂರ್ವದಲ್ಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿ ದಿನ ಅಥವಾ ವಾರದಲ್ಲಿ ಒಂದೆರಡು ದಿನ ಬೆಳಗ್ಗೆ ಒಂದು ಗಂಟೆ ಹೆಚ್ಚುವರಿ ತರಗತಿಗಳನ್ನು ನಡೆಸಲಾಗುತ್ತದೆ. ಕೆಲವೊಂದು ಜಿಲ್ಲೆಗಳಲ್ಲಿ ಸಂಜೆ ಒಂದು ಗಂಟೆ ಹೆಚ್ಚುವರಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಇದರ ಜತೆಗೆ ಭಾನುವಾರ ಬೆಳಗ್ಗೆ ಮತ್ತು ಶನಿವಾರ ಮಧ್ಯಾಹ್ನ ಕೂಡ ವಿಶೇಷ ತರಗತಿ ತೆಗೆದುಕೊಳ್ಳಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ, ದಸರಾ ರಜೆಯಲ್ಲೂ ವಿಶೇಷ ತರಗತಿ ನಡೆಸಲು ಅವಕಾಶ ಕೋರಿ ಕೆಲವೊಂದು ಜಿಲ್ಲೆಗಳಿಂದ ಆಯುಕ್ತರ ಕಚೇರಿಗೆ ಪತ್ರ ಕೂಡ ಬಂದಿದೆ. ಸರ್ಕಾರಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳ ಫಲಿತಾಂಶ ಉನ್ನತೀಕರಿಸಲು ಜಿಲ್ಲಾವಾರು ವಿವಿಧ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ವಿದ್ಯಾರ್ಥಿಯ ಪ್ರಗತಿ ಪರಿಶೀಲನೆ ಹಾಗೂ ಪರ್ಯಾಯ ಬೋಧನೆಯೂ ನಡೆಯುತ್ತಿದೆ. ನಮ್ಮ ಮುಂದಿರುವ ಗುರಿ, ಅದಕ್ಕಿರುವ ಸವಾಲು ಮತ್ತು ಪರಿಹಾರ ಅರಿತರೆ ಪ್ರಗತಿ ಸಾಧಿಸಲು ಸಾಧ್ಯ.
– ಡಾ.ಪಿ.ಸಿ.ಜಾಫರ್, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ – ರಾಜು ಖಾರ್ವಿ ಕೊಡೇರಿ