Advertisement

ಮಲೇರಿಯಾ ಮುಕ್ತಿಗೆ ವಿಶೇಷ ಅಭಿಯಾನ

12:40 AM Apr 30, 2019 | Lakshmi GovindaRaju |

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯನ್ನು 2025ರ ವೇಳೆಗೆ ಮಲೇರಿಯಾ ಮುಕ್ತಗೊಳಿಸುವ ಉದ್ದೇಶದಿಂದ “ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಅಭಿಯಾನ ಆರಂಭಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಸ್‌.ಪ್ರಕಾಶ್‌ ತಿಳಿಸಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂ ಕಲ್ಯಾಣಾಧಿಕಾರಿಗಳ ಇಲಾಖೆಯಿಂದ ಸೋಮವಾರ ನಗರದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಮಲೇರಿಯಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲೇರಿಯಾ ಬರದಂತೆ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಈಗಾಗಲೇ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಇಲಾಖೆಯ ವತಿಯಿಂದ ಚಳಿ, ಜ್ವರ ಕಾಣಿಸಿಕೊಂಡವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಂತೆ ಒಟ್ಟು 23 ಮಂದಿಯಲ್ಲಿ ಮಲೇರಿಯಾ ಲಕ್ಷಣಗಳು ಕಂಡುಬಂದಿದ್ದು, ಮಲೇರಿಯಾದಿಂದ ಯಾರು ಮೃತಪಟ್ಟಿಲ್ಲ. ಆ ಹಿನ್ನೆಲೆಯಲ್ಲಿ ನಗರ ಜಿಲ್ಲೆಯನ್ನು ಮಲೇರಿಯಾ ಮುಕ್ತಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇತ್ತೀಚೆಗೆ ಅಂಡಮಾನ್‌ ಮತ್ತು ನಿಕೋಬರ್‌ನಲ್ಲಿ 5ನೇ ಮಾದರಿಯ ಮಲೇರಿಯಾ ಪತ್ತೆಯಾಗಿದ್ದು, ಈವರೆಗೆ ಅದಕ್ಕೆ ಯಾವುದೇ ಹೆಸರಿಟ್ಟಿಲ್ಲ. ಕಾಲ ಬದಲಾದಂತೆ ಮಲೇರಿಯಾದ ಲಕ್ಷಣಗಳಲ್ಲಿಯೂ ಬದಲಾವಣೆಗಳು ಕಂಡುಬರುತ್ತಿವೆ. ಥೈಲ್ಯಾಂಡ್‌ನ‌ಲ್ಲಿ ಕೆಲ ರೋಗಿಗಳಿಗೆ ಚಳಿ, ಜ್ವರ ಬಂದಿಲ್ಲ.

ಆದರೆ, ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿತ್ತು. ಅವರ ರಕ್ತ ಪರೀಕ್ಷೆ ನಡೆಸಿದಾಗ ಅವರಲ್ಲಿ ಮಲೇರಿಯಾ ಇರುವುದು ಕಂಡುಬಂದಿತ್ತು. ಆದರೆ, ರಾಜ್ಯದ ಯಾವುದೇ ಭಾಗದಲ್ಲಿ ಇಂತಹ ಉದಾಹರಣೆಗಳಿಲ್ಲ. ಹೀಗಾಗಿ ಜನರು ಚಳಿ, ಜ್ವರ ಬಂದ ಕೂಡಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಲೇಪನ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

ಜಿಲ್ಲಾ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಟಿ.ಕೆ.ಸುನಂದ ಮಾತನಾಡಿ, ಮಲೇರಿಯಾ ರೋಗ ಹರಡದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ಚಳಿ ಜ್ವರ ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಮಲೇರಿಯಾ ನಿರ್ಲಕ್ಷಿಸಿದರೆ ಸಾವುಗಳು ಸಂಭವಿಸುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಹೀಗಾಗಿ ಮನೆಗಳಲ್ಲಿ ನೀರು ತುಂಬಿ ಕೊಡ ಹಾಗೂ ಡ್ರಮ್‌ಗಳು ಸದಾ ಮುಚ್ಚಿರುವಂತೆ ನೋಡಿಕೊಳ್ಳಬೇಕು. ಜತೆಗೆ ಸೊಳ್ಳೆಬತ್ತಿ, ಗುಡ್‌ನೈಟ್‌ಗಳನ್ನು ಬಳಸುವ ಬದಲಿಗೆ ಸೊಳ್ಳೆ ಪರದೆ ಬಳಸುವುದು ಹೆಚ್ಚು ಸೂಕ್ತ ಎಂದು ಸಲಹೆ ನೀಡಿದರು.

ಅನಾಪಿಲಿಸ್‌ ಸೊಳ್ಳೆ ಇಲ್ಲ: ಮಲೇರಿಯಾಗೆ ಕಾರಣವಾದ ಅನಾಪಿಲಿಸ್‌ ಸೊಳ್ಳೆಗಳು ಈವರೆಗೆ ಬೆಂಗಳೂರಿನಲ್ಲಿ ಕಂಡುಬಂದಿಲ್ಲ. ನಗರದ ಕೆಲವು ಆಸ್ಪತ್ರೆಗಳಲ್ಲಿ ಮಲೇರಿಯಾದಿಂದ ದಾಖಲಾದವರಿದ್ದರೂ, ಅವರು ಆಂಧ್ರ, ತಮಿಳುನಾಡು ಅಥವಾ ಉತ್ತರ ಕರ್ನಾಟಕ ಭಾಗದಿಂದ ಬಂದಿರುತ್ತಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರಿರುವ ಭಾಗಗಳಲ್ಲಿ ಇಲಾಖೆಯ ಆಶಾ ಕಾರ್ಯಕರ್ತೆಯರು ಕಾರ್ಮಿಕರನ್ನು ರಕ್ತ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಮೊಟ್ಟೆ, ಲಾರ್ವ ನಾಶಕ್ಕೆ ಮೀನುಗಳ ಬಳಕೆ: ಮಲೇರಿಯಾ ಹಾಗೂ ಡೆಂಘೀಗೆ ಕಾರಣವಾಗುವ ಸೊಳ್ಳೆಗಳು ಶುದ್ಧ ನೀರಿನಲ್ಲಿ ಮೊಟ್ಟೆಯಿಟ್ಟು ಮರಿಗಳನ್ನು ಮಾಡುತ್ತವೆ. ಆ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಪ್ರಮುಖ ಕೆರೆಗಳು ಹಾಗೂ ಕುಂಟೆಗಳಲ್ಲಿ ಸೊಳ್ಳೆಗಳು ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆಯಿಟ್ಟು ಮರಿ ಮಾಡುವ ಸಾಧ್ಯತೆಯಿರುತ್ತದೆ. ಹೀಗಾಗಿ ಮೀನುಗಾರಿಕೆಯಿಂದ 50 ಸಾವಿರ ಗಪ್ಪಿ ಹಾಗೂ ಗ್ಯಾಂಬೋಷಿಯಾ ಮೀನುಗಳನ್ನು ಖರೀದಿಸಿ ಬಿಡಲಾಗುವುದು ಎಂದು ಡಾ.ಪ್ರಕಾಶ್‌ ಹೇಳಿದರು.

ಮೂರು ವರ್ಷಗಳಲ್ಲಿ ವರದಿಯಾದ ಮಲೇರಿಯಾ ಪ್ರಕರಣಗಳ ವಿವರ
ವರ್ಷ ರಕ್ತ ಪರೀಕ್ಷೆಗೆ ಒಳಪಟ್ಟವರು ಪ್ರಕರಣ ಸಾವುಗಳು
-2016 3,14,484 13 0
-2017 3,91,168 10 0
-2018 5,14,562 00 0

Advertisement

Udayavani is now on Telegram. Click here to join our channel and stay updated with the latest news.

Next