Advertisement

ಕುಂದಾಪ್ರ ಕನ್ನಡ: ಬದುಕಿನೊಂದಿಗೆ ಬೆಸೆದ ಭಾಷೆ –ಯೋಗರಾಜ್‌ ಭಟ್‌

03:59 AM Jul 19, 2020 | Hari Prasad |

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿಯ ತಂತ್ರಾಡಿಯವರಾದ ಯೋಗರಾಜ್‌ ಭಟ್‌ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದವರು. ವಿಭಿನ್ನವಾಗಿ ಹಾಡುಗಳನ್ನು ರಚಿಸುವ ಮೂಲಕವೂ ಹೆಸರುವಾಸಿ. ನಿರ್ದೇಶಕರಾಗಿ ಮಾತ್ರವಲ್ಲದೆ ನಟ, ನಿರ್ಮಾಪಕ, ಬರಹಗಾರ, ಗಾಯಕ, ಚಿತ್ರ ಸಾಹಿತಿ ಯೋಗರಾಜ್‌ ಭಟ್‌ ಅವರು ತಮ್ಮ ಮಾತೃ ಭಾಷೆ ‘ಕುಂದಾಪ್ರ ಕನ್ನಡ’ದ ಬಗ್ಗೆ “ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ (ಜುಲೈ 20) ಸಂದರ್ಭದಲ್ಲಿ ಬರೆದಿದ್ದಾರೆ.

Advertisement

ಹ್ವಾಯ್‌ ನಮಸ್ಕಾರ.. ಕುಂದಾಪ್ರ ಕನ್ನಡದಲ್‌ ಮಾತಾಡುದೆ ಚೆಂದ ಮರ್ರೆ.. ನಮ್ದ್ ಊರ್‌ ಕುಂದಾಪ್ರ ಹತ್ರದ ಮಂದರ್ತಿ ಮರ್ರೆ.. ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಹೊತ್ತಿಗೆ ಎಂತಾರ್‌ ಒಂಚೂರ್‌ ಕುಂದಾಪ್ರ ಕನ್ನಡದಲ್‌ ಗೀಚುವ ಅಂದೇಳಿ..

ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಹತ್ತಾರು ಆಡು ಭಾಷೆಗಳಿವೆ. ಉಡುಪಿ ಜಿಲ್ಲೆಯ ಕುಂದಾಪ್ರ ಕನ್ನಡವು ಇದರಲ್ಲಿ ಒಂದು. ಜಗದಗಲ ದೃಷ್ಟಿ ಹಾಯಿಸಿದರೆ ಈ ಭಾಷೆ ಮಾತನಾಡುವವರು ಕಡಿಮೆಯೇನಿಲ್ಲ. ಪರ ರಾಜ್ಯ, ಹೊರದೇಶ ಎಲ್ಲ ಲೆಕ್ಕ ಹಾಕಿದರೆ ಅಂದಾಜು 10 ಲಕ್ಷಕ್ಕೂ ಮಿಕ್ಕಿ ಜನ ಈ ಭಾಷೆಯನ್ನು ಮಾತಾಡ್ತಾರೆ.

ಈ ಭಾಷಾ ಸೌಂದರ್ಯ ಬಹಳ ದೊಡ್ಡದು. ಕುಂದಾಪ್ರ ಕನ್ನಡ ಭಾಷೆಗೊಂದು ವಿಶಿಷ್ಟವಾದ ಸೊಗಡಿದೆ. ಜನ ಪದೀಯ ನೆಲೆಗಟ್ಟಿನ ಆಡುಭಾಷೆಯಿದು. ಈ ಭಾಷೆ ಗೊಂದು ಸಂಗೀತವಿದೆ. ಒಂದು ರಾಗವಿದೆ. ಇದಕ್ಕೊಂದು ಗ್ರಾಂಥಿಕ ಸ್ವರೂಪವಿದೆ. ಕನ್ನಡದ ಬೇರೆ ಎಲ್ಲ ಆಡು ಭಾಷೆ ಗಳಿಗಿಂತ ತುಂಬಾ ಸರಳ ಹಾಗೂ ಶುದ್ಧವಾದ ಭಾಷೆ ಕುಂದಾಪ್ರ ಕನ್ನಡ.

“ನಾ ಹುಟ್ಟದ್‌ ಮಂದರ್ತಿಯ ತಂತ್ರಾಡಿಯಲ್‌. ಬೆಳ್ದೆದೆಲ್ಲಾ ಧಾರವಾಡದಲ್‌. ಈಗ ಇಪ್ಪುದು ಬೆಂಗ್ಳೂರ್‌. ಆರೂ ಅಪ್ಪಯ್ಯ – ಅಮ್ಮ, ದೊಡ್ಡಪ್ಪಯ್ಗೆಲ್ಲಾ ಮನೆಲ್‌ ಕುಂದಾಪ್ರ ಭಾಷಿ ಮಾತಾಡ್ದಕ್ಕೆ ನಂಗೂ ತುಂಬಾ ಲಾಯ್ಕ ಆಯ್‌ ಮಾತಾಡುಕ್‌ ಬತ್ತ್’. “ನಮ್‌ ಮನೆಲೂ ಮಕ್ಳ್ ಕುಂದಾಪ್ರ ಭಾಷಿ ಕಲಿಕಂತೇಳಿ ಎಲ್ರೂ ಮಾತಾಡ್ತರ್ರ.’

Advertisement

ಕುಂದಾಪ್ರ ಭಾಷೆಯೆಂದರೆ ಕೇವಲ ಭಾಷೆ ಮಾತ್ರ ವಲ್ಲ. ಇದು ಸ್ಥಳೀಯವಾದ ಬದುಕು. ಇಲ್ಲಿನ ಜನರ ಬದುಕಿನೊಂದಿಗೆ ಬೆಸೆದಿರುವ ಭಾಷೆಯಿದು. ಮನಸ್ಸಿಗೆ ನೇರವಾಗಿ ತಟ್ಟುವ ಭಾಷೆ. ಬೇರೆಲ್ಲ ಭಾಷೆಗಳನ್ನು ಮಾತನಾಡುವಾಗ ಸುಲಭವಾಗಿ ನಾಲಗೆ ಹೊರಳುವುದಿಲ್ಲ.

ಆದರೆ ಕುಂದಾಪ್ರ ಭಾಷೆ ಮಾತನಾಡುವಾಗ ಸಹಜವಾಗಿಯೇ ಬಾಯಲ್ಲಿ ಬಂದು ಬಿಡುತ್ತದೆ. ಅದು ಈ ಭಾಷೆಯ ಸೊಗಡು. ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗರಂತಹ ಶ್ರೇಷ್ಠ ಕವಿಗಳನ್ನು ಕೊಡುಗೆ ಯಾಗಿ ನೀಡಿದ ನಾಡು ನಮ್ಮದು. ಅವರ ಸಾಹಿತ್ಯ, ಬರಹಗಳಲ್ಲೂ ಈ ಭಾಷೆ ಹಾಸು ಹೊಕ್ಕಾಗಿರುವುದು ಈ ಮಣ್ಣಿನ ಗುಣವಾಗಿದೆ.

ನಂಗೆ ಈ ಭಾಷೆ ಯಾಕೆ ತುಂಬಾ ಇಷ್ಟವೆಂದರೆ ಕುಂದಾಪ್ರ ಕನ್ನಡದಲ್ಲಿ ಬಯ್ಯುವುದು ಕೂಡ ಕೆಟ್ಟದಂತ ಅನ್ನಿಸುವುದೇ ಇಲ್ಲ. ಬೈಗುಳ ಸಹ ಸಿಹಿಯಾಗಿಯೇ ಕೇಳಿಸುತ್ತದೆ. ಉದಾಹರಣೆಗೆ “ನಿನ್‌ ಅಟ್ಟುಳಿ ಜಾಸ್ತಿ ಆಯ್ತ್ ಮರೆ’. “ನಿನ್‌ ವಾಲಿ ಕಳಿತ್‌’, ನಿಂಗ್‌ ಯಾಕ್‌ ನಾಚ್ಕಿ ಆತಿಲ್ಲಾ ಮರೆ.. ಈ ತರಹದ ಹತ್ತಾರು ಬೈಗುಳದ ಪದಗಳು ಮಜಾ ಕೊಡುತ್ತವೆ. ಕುಂದಾಪ್ರ ಕನ್ನಡದ “ಕೂಕಂಡ್ಲಕ್ಕಾ’ (ಕುಳಿತುಕೊಳ್ಳಬಹುದಾ) ಅನ್ನುವ ಪದ ನಂಗೆ ತುಂಬಾ ಇಷ್ಟ.

ನನ್ನ “ಮುಗುಳು ನಗೆ’ ಸಿನೆಮಾದಲ್ಲೂ ಒಂದು ಕುಂದಾಪುರ ಹುಡುಗಿಯ ಪಾತ್ರವನ್ನು ಸೃಷ್ಟಿಸಿದ್ದೆ. ಅದರಲ್ಲಿ ನಟಿಸಿದ ನಟಿ ಮುಂಬಯಿಯವರಾದರೂ ಸ್ವತಃ ಅವರೇ ಡಬ್ಬಿಂಗ್‌ ಮಾಡಿರುವುದು ವಿಶೇಷ. ಶೇ.80ರಷ್ಟು ಇದರಲ್ಲಿ ನಾನು ಯಶಸ್ವಿಯಾಗಿದ್ದೇನೆ. ನನ್ನ ಸಿನೆಮಾ, ಸಾಹಿತ್ಯ, ಬರಹಕ್ಕೆ ಈ ಭಾಷೆಯ ಪ್ರಭಾವ ಬಹಳಷ್ಟಿದೆ.

ಭಾಷೆಯನ್ನು ಉಳಿಸಬೇಕಾದರೆ ನಾವು ಏನೂ ಮಾಡುವುದು ಬೇಡ. ನಮ್ಮೊಂದಿಗೆ ಇರುವವರ ಜತೆಗೆ ಮಾತನಾಡಿದರೆ ಸಾಕು. ಸಾಕಷ್ಟು ವರ್ಷಗಳ ಕಾಲ ಭಾಷೆ ಉಳಿಯುತ್ತದೆ. ನಮ್ಮ ಮನೆಗಳಲ್ಲಿ ನಾವು ನಮ್ಮ ಮಾತೃ ಭಾಷೆಯನ್ನು ಹೆಚ್ಚು-ಹೆಚ್ಚು ಮಾತನಾಡಿದರೆ ನಮ್ಮ ಮಕ್ಕಳು ಕೂಡ ಇದನ್ನು ತನ್ನಷ್ಟಕ್ಕೆ ತಾನೇ ಮಾತನಾಡುತ್ತಾರೆ.

ಇದೇ ಭಾಷೆಯನ್ನು ಉಳಿಸುವ ಮೊದಲ ಹೆಜ್ಜೆ. ಇದಕ್ಕಿಂತ ಹೆಚ್ಚಿನದನ್ನು ನಾವು ಏನೂ ಮಾಡುವುದು ಬೇಡ. ನಮ್ಮ- ನಮ್ಮ ಜನಪದೀಯ ಭಾಷೆಗಳ ಉಳಿವಿಗೆ ಈ ತರಹದ ಆಚರಣೆಗಳು ಮತ್ತಷ್ಟು ಇಂಬು ಕೊಡುತ್ತವೆ.

“ಊರ್‌ ಬದಿಯೊರ್ಗೆಲ್ಲ ವಿಶ್ವ ಕುಂದಾಪ್ರ ದಿನಾಚರಣೆಯ ಶುಭಾಶಯಗಳು. ಎಲ್ಲ ದೂರ-ದೂರ ಕೂಕಂಡೇ ಫೋನ್‌ನಲ್ಲೇ ಕಷ್ಟ-ಸುಖ ಮಾತಾಡುವ. ಫೋನ್‌ ಸತೆ ದೂರ ಇಟ್ಕಣಿ ಮರ್ರೆ. ಎಂತಕಂದ್ರೆ ಫೋನ್‌ ಸತೆ ನಂಬುಕ್‌ ಯೆಡ್ಯಾ.

ಫೋನಿಲೂ ಕೋವಿಡ್ 19 ವೈರಸ್‌ ಬತ್ತೋ ಏನೋ. ಮತ್ತೂಮ್ಮೆ ಸಮಸ್ತ ನನ್ನ ಕುಂದಾಪ್ರ ಬಾಂಧವರಿಗೆ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಶುಭಾಶಯಗಳು. ಜೈ ಕುಂದಾಪ್ರ…’

Advertisement

Udayavani is now on Telegram. Click here to join our channel and stay updated with the latest news.

Next