Advertisement

ಕೇಕ್‌ನಲ್ಲಿ ಅರಳಿದ ಪ್ರಪಂಚದ ಅದ್ಭುತಗಳು!

09:57 AM Dec 15, 2021 | Team Udayavani |

ಬೆಂಗಳೂರು: ನ್ಯೂಯಾರ್ಕ್‌ನ ಸ್ಟಾಚ್ಯು ಆಫ್ ಲಿಬರ್ಟಿ ನೀವು ನೋಡಿದ್ದೀರಾ? ಅಂಟಾರ್ಟಿಕದಲ್ಲಿ ಲಗುಬಗೆಯಿಂದ ಓಡುವ ಪೆಂಗ್ವಿನ್‌ ಪಕ್ಷಿಗಳ ಹಿಂಡು ಕಂಡಿದ್ದೀರಾ? ಕ್ಲಾಸಿಕ್‌ ಜಂಗಲ್‌ ಬುಕ್‌ನಲ್ಲಿಯ ಕಥೆ ನಿಮಗೆ ಗೊತ್ತಾ? ಸ್ನೋ ವೈಟ್‌ ರಾಜಕುಮಾರಿ ಹೇಗಿದ್ದಾಳೆ ಗೊತ್ತಾ? – ಗೊತ್ತಿಲ್ಲ ಎಂದಾದರೆ, ಇದಕ್ಕಾಗಿ ಪ್ರಪಂಚ ಪರ್ಯಟನೆ ಮಾಡಬೇಕಿಲ್ಲ.

Advertisement

ಯುಬಿ ಸಿಟಿಯ ಸೆಂಟ್‌ ಜೋಸೆಫ್ ಶಾಲಾ ಆವರಣಕ್ಕೆ ಭೇಟಿ ನೀಡಿದರೆ ಸಾಕು, ವಿಶ್ವದ ಈ ಕೌತುಕಗಳು ಅಲ್ಲಿ ಅನಾವರಣಗೊಳ್ಳಲಿವೆ. ಅದೂ ಕೇಕ್‌ನಲ್ಲಿ! ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆಯ ಅಂಗವಾಗಿ ಶುಗರ್‌ ಸ್ಕಲ್ಪ್ಟ್ ಅಕಾಡೆಮಿಯು ವಿಶ್ವದ ಅತಿದೊಡ್ಡ ಕೇಕ್‌ ಪ್ರದರ್ಶನ ಏರ್ಪಡಿಸಿದೆ.

ಅಲ್ಲಿ ಸ್ಟಾಚ್ಯು ಆಫ್ ಲಿಬರ್ಟಿ, ಪೆಂಗ್ವಿನ್‌ ಪಕ್ಷಿಗಳು ಮಾತ್ರವಲ್ಲ; ಆಲಿಸ್‌ ಇನ್‌ ವಂಡರ್‌ ಲ್ಯಾಂಡ್‌ ಹಾಸ್ಯಪ್ರಧಾನ ಚಿತ್ರ, ವಿಶ್ವದ ಅದ್ಭುತಗಳಲ್ಲಿ ಒಂದಾದ ಗ್ರೇಟ್‌ ಸ್ಫಿಂಗ್ಸ್‌ ಆಫ್ ಗಿಝಾ ಇಂತಹ ಹತ್ತಾರು ಪ್ರತಿಮೆಗಳನ್ನು ಕೇಕ್‌ನಲ್ಲಿ ಕಟ್ಟಿಕೊಡಲು ಸಿದ್ಧತೆ ನಡೆಸಿದೆ. ‌

ಇದರಿಂದ ಮುಂದಿನ ಸುಮಾರು ಹದಿ ನೈದು ದಿನಗಳು ಸೆಂಟ್‌ ಜೋಸೆಫ್ ಶಾಲೆ ಆಕರ್ಷಣೆಯ ಕೇಂದ್ರಬಿಂದು ಆಗಲಿದೆ. ಇದಕ್ಕಾಗಿ 23 ಪ್ರಕಾರದ ಸುಮಾರು 6,585 ಕೆ.ಜಿ. ಕೇಕ್‌ ಬಳಸಲಾಗುತ್ತಿದ್ದು, 10 ಸಾವಿರ ಚದರಡಿ ಆವರಣ ದಲ್ಲಿ ತಯಾರಿಸಲಾಗುತ್ತಿದೆ.

ಭಾರತದ ಖ್ಯಾತ ಕೇಕ್‌ ರಚನೆಕಾರ ಶುಗರ್‌ ವಿನ್ಯಾಸಕ ಮಾಸ್ಟರ್‌ ಸ್ಯಾಮಿ ಜೆ. ರಾಮಚಂದ್ರನ್‌ ಮತ್ತು ಅವರ 40 ವಿದ್ಯಾರ್ಥಿಗಳ ತಂಡ ಸತತ ನಾಲ್ಕು ತಿಂಗಳಿಂದ ಇದಕ್ಕಾಗಿ ಶ್ರಮಿಸುತ್ತಿದ್ದು, ಈಗಾ ಗಲೇ ಬಹುತೇಕ ಎಲ್ಲ ಪ್ರತಿಮೆಗಳು ಕೇಕ್‌ನಲ್ಲಿ ಮೂಡಿವೆ. ಸ್ಮಾರಕ, ಪ್ರಾಣಿ-ಪಕ್ಷಿಗಳು, ಮನುಷ್ಯನ ಆಕೃತಿ ಗಳು, ಪಿರಮಿಡ್‌ಗಳು, ಆಂಟಿಕ್‌ ಫ್ಲವರ್‌ ವೇಸ್‌, ಹಡಗು ಒಳಗೊಂಡಂತೆ ಒಟ್ಟು 23 ಆಕೃತಿಗಳು ತಲೆಯೆತ್ತಲಿವೆ.

Advertisement

 “2019ರಲ್ಲಿ 30 ಆಕೃತಿಗಳ ಆಕರ್ಷಣೆ: ಪ್ರತಿ ವರ್ಷ ಅಕಾಡೆಮಿಯು ವಿನೂತನ ಪರಿಕಲ್ಪನೆಗಳೊಂದಿಗೆ ಕ್ರಿಸ್‌ ಮಸ್‌ ಮತ್ತು ಹೊಸ ವರ್ಷ ಆಚರಿಸುತ್ತದೆ. ಕಳೆದ ಬಾರಿ ಕೊರೊನಾ ಹಾವಳಿ ಕಾರಣದಿಂದ ಪ್ರದರ್ಶನ ತಡೆಹಿಡಿ ಯ ಲಾಗಿತ್ತು. 2019ರಲ್ಲಿ 30 ಪ್ರಕಾರದ ಆಕೃತಿಗಳನ್ನು ಕೇಕ್‌ನಲ್ಲಿ ತಯಾರಿಸಿ ಗಮನಸೆಳೆಯಲಾಗಿತ್ತು.

ಈ ಸಲ ಸಾಂಕ್ರಾಮಿಕದ ಹಾವಳಿ ಕಡಿಮೆ ಇರುವುದರಿಂದ ಹೆಚ್ಚಿನ ಜನರನ್ನು ನಿರೀಕ್ಷಿಸಲಾಗಿದೆ. ಇದು 47ನೇ ವರ್ಷದ ಆಚರಣೆಯಾಗಿದೆ ಎಂದು ಶುಗರ್ ಸ್ಕಲ್ಪ್ಟ್ ಅಕಾಡೆಮಿಯ ಬಿ.ವಿ. ಹರೀಶ್‌ ತಿಳಿಸಿದರು.

ಸ್ಟಾಚ್ಯು ಆಫ್ ಲಿಬರ್ಟಿ ಸ್ಮಾರಕ ಸಂಪೂರ್ಣವಾಗಿ ಚಾಕೋಲೇಟ್‌ನಿಂದ ತಯಾರಿಸಲಾಗಿದೆ. 18 ಅಡಿ ಎತ್ತರ, 5 ಅಡಿ ಅಗಲ ಮತ್ತು 5 ಅಡಿ ಉದ್ದದ ಕೇಕ್‌ ಇದಾಗಿದ್ದು, ಒಂದು ಟನ್‌ ಚಾಕೋಲೇಟ್‌ ಮತ್ತು ಸಕ್ಕರೆಯನ್ನು ಇದಕ್ಕಾಗಿ ಬಳಸಲಾಗಿದೆ. ಇದರ ತಯಾರಿಕೆಗೆ ಆರು ಮಂದಿ ಎರಡು ತಿಂಗಳ ಕಾಲ ಶ್ರಮಿಸಿದ್ದಾರೆ.

ಪೆಂಗ್ವಿನ್ಸ್‌ ಆಫ್ ಮೆಡಗಾಸ್ಕರ್‌ ಮೆಡಗಾಸ್ಕರ್‌ ಚಿತ್ರದ ಸರಣಿ ಭಾಗವಾಗಿದ್ದು, ನಾಲ್ಕು ಪೆಂಗ್ವಿನ್‌ ಗಳು, ಸ್ಕಿಪ್ಪರ್‌, ಕೊವಾಲ್‌ಸ್ಕಿ, ರಿಕೊ ಮತ್ತು ಪ್ರೈವೇಟ್‌ಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಇದೊಂದು ಮಕ್ಕಳ ಆಕರ್ಷಣೆಯ ಕೇಕ್‌ ಆಗಿದ್ದು, ಎರಡು ಅಡಿ ಎತ್ತರ, ಮೂರು ಅಡಿ ಅಗಲ ಮತ್ತು ಮೂರು ಅಡಿ ಉದ್ದದ ಒಟ್ಟು 150 ಕೆ.ಜಿ. ತೂಕ ಹೊಂದಿದೆ. ತಯಾರಿಕೆಗೆ 20 ದಿನಗಳು ಹಿಡಿದಿದೆ.

ದಿ ಬ್ಲಾಕ್‌ ಪರ್ಲ್ ಪೈರೇಟ್ಸ್‌ ಆಫ್ ದಿ ಕೆರಿಬಿಯನ್‌ ಸರಣಿ ಚಿತ್ರದಲ್ಲಿ ಬಳಸಿದ ಹಡಗಿನ ರೂಪ ಇದರದ್ದಾಗಿದೆ. ಈ ಕೇಕ್‌ನ ಎತ್ತರ ಮತ್ತು ಅಗಲ ಮೂರು ಅಡಿ, ನಾಲ್ಕು ಅಡಿ ಉದ್ದದ 180 ಕೆ.ಜಿ. ತೂಕದ ಹಗಡನ್ನು ನಾಲ್ವರು 30 ದಿನಗಳಲ್ಲಿ ತಯಾರಿಸಲಾಗಿದೆ.

ಡಿ. 17ರಿಂದ ಪ್ರದರ್ಶನ ಡಿ. 17ರಿಂದ ಜ. 2ರವರೆಗೆ ಬೆಳಗ್ಗೆ 11ರಿಂದ ರಾತ್ರಿ 9ರವರೆಗೆ ಪ್ರದರ್ಶನಕ್ಕೆ ಅವಕಾಶವಿದೆ. ಸರ್ಕಾರ ಮತ್ತು ಬಿಬಿಎಂಪಿ ಕೊರೊನಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಲಾಗಿದೆ. ಪ್ರದರ್ಶನಕ್ಕೆ ಬರುವ ಪ್ರತಿಯೊಬ್ಬರಿಗೆ ಎರಡೂ ಡೋಸ್‌ ಲಸಿಕೆ ಕಡ್ಡಾಯ. ಮಾಸ್ಕ್ ಧರಿಸುವುದರ ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ತಯಾರಿಕೆಗೆ ಏನೇನು ಬಳಕೆ? 5 ಟನ್‌ ಸಕ್ಕರೆ, ಚಾಕೋಲೇಟ್‌, ಖ್ಯಾದ್ಯ ಬಣ್ಣಗಳು, ರಾಯಲ್‌ ಐಸಿಂಗ್‌, ಪಾಸ್ಟಿಲೇಜ್‌ ಮತ್ತಿತರ ಪದಾರ್ಥಗಳ ಬಳಕೆ.

–  ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next