Advertisement
ಬದುಕು ಜಟಕಾಬಂಡಿ… ವಿಧಿ ಅದರ ಸಾಹೇಬ…. ಇಂದಿನ ಈ ಪರಿಸ್ಥಿತಿಯಲ್ಲಿ ಪದೆ ಪದೇ ನೆನಪಾಗುವ ಡಿವಿಜಿ ಅವರ ಕಗ್ಗದ ಸಾಲುಗಳು. ಇಂದು ಹೀಗಿದ್ದೇವೆ ಅನ್ನಬಹುದೇ ವಿನಹ ನಾಳೆ ಹೇಗಿರುತ್ತೇವೆ ಅನ್ನುವುದು ಊಹೆಗೆ ನಿಲುಕದ ವಿಷಯ.
Related Articles
Advertisement
ಎಲ್ಲರೂ ಮನೆಯೊಳಗೆ ಇರಬೇಕೆಂಬ ಸರಕಾರದ ಆಜ್ಞೆ ಪಾಲಿಸುವ ಈ ವಿಷಮ ಪರಿಸ್ಥಿತಿಯಲ್ಲಿ ಪರಸ್ಪರ ಸಂಬಂಧ ಸಂಪರ್ಕ ವೃದ್ಧಿಸಲು ನೆರವಾಗಿದೆ. ಪಕ್ಕದ ಅಂಗಡಿಗಳಲ್ಲಿ ಸಿಗದ ವಸ್ತುಗಳ ಜೋಡಿಸುವಿಕೆಯಲ್ಲಿ, ವಾಹನ ಓಡಾಟ ನಿಲುಗಡೆಯಾಗಿರುವ ದುರ್ಗಮ ಪರಿಸ್ಥಿತಿಯಲ್ಲಿ ನಮ್ಮಿಂದೇನಾದರೂ ಸಹಾಯ ಬೇಕಾ ಎನ್ನುವ ನೆರೆಹೊರೆಯವರು, ಹೇಗಿದ್ದೀರಿ? ನೀವು ಸುರಕ್ಷಿತ ರಾಗಿದ್ದೀರಿ ತಾನೆ ಎಂದು ಪರಸ್ಪರ ವಿಚಾರಿಸುವ ದೂರದಲ್ಲಿರುವ ಸ್ನೇಹಿತರು, ಏನೇ ಆದರೂ ಮನೆಯಲ್ಲೇ ಇರೋಣ, ಮಹಾಮಾರಿಯನ್ನು ಹೊಡೆದೋಡಿಸುವಲ್ಲಿ ನೆರವಾಗೋಣ ಅನ್ನುವ ದೇಶಪ್ರೇಮಿ ಬಂಧುಗಳು, ಇಂದು ಕುಳಿತು ಅವಲೋಕಿಸಿದರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಕಷ್ಟದ ದಿನಗಳಲ್ಲೂ ಒಂದಾಗಿ ಭಾರತ ಗೆಲ್ಲಬೇಕೆನ್ನುವ ಹಂಬಲ ಬಲವಾಗಿದೆಯಲ್ಲಾ ಅದಕ್ಕೆ ಸಂತೋಷವಾಗುತ್ತದೆ..
ದಿನ ದಿನ ದುಡಿದು ಸಂಪಾದಿಸಿ ಜೀವನ ನಡೆಸಬೇಕಾದವರ ಪರಿಸ್ಥಿತಿ ಚಿಂತಾಜನಕವೇ ಹೌದು. ಆದರೆ ಅದರ ಜೊತೆಗೆ ಲಕ್ಷ ರೂಪಾಯಿ ಬಂಡವಾಳ ಹೂಡಿ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿರುವವರ ಪಾಡೂ ಸುಲಭದ್ದೇನಲ್ಲ. ಎಲ್ಲಾ ರೀತಿಯ ಕೆಲಸಗಾರರಿಗೂ ಅವರವರದ್ದೇ ಆದ ಕಷ್ಟ ಕಾರ್ಪಣ್ಯಗಳು ಇದ್ದೇ ಇವೆ.
ಇವೆಲ್ಲದರ ನಡುವೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು, ಪೊಲೀಸ್ ಅಧಿಕಾರಿ ವರ್ಗದವರು,ಮಾಧ್ಯಮ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರು, ಪೌರಕಾರ್ಮಿಕರು, ಹೀಗೆ ಉದ್ದ ಪಟ್ಟಿಯೊಳಗೆ ಬರುವ ಒಂದಷ್ಟು ಜನ ಸಲ್ಲಿಸುವ ಸೇವೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರ ಬಗೆಗೂ ಮನಸ್ಸು ತುಂಬಿ ಬರದಿರದು..
ಇಷ್ಟೆಲ್ಲ ಇದ್ದರೂ ಇವೆಲ್ಲದರ ಜೊತೆಗೆ ಒಂದಿಷ್ಟು ಅಮಾನವೀಯ ನಡವಳಿಕೆಗಳು ನಾವು ಎಷ್ಟು ಸುಸಂಸ್ಕೃತರು ಎಂಬುದಾಗಿ ಪ್ರಶ್ನಿಸುವಂತೆಯೂ ಮಾಡುತ್ತಿರುವುದು ಬೇಸರದ ಸಂಗತಿ. ಆಹಾರ ಪದಾರ್ಥಗಳನ್ನು ಸಹ ಮನೆ ಮನೆಗೇ ತಲುಪಿಸುವ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರೂ ಮನೆಯಿಂದ ಹೊರಗೆ ಬಂದು ಬೇಕಾಬಿಟ್ಟಿ ಸುತ್ತಾಡುತ್ತಿರುವ ಹಲವರನ್ನು ನೋಡಿದ್ದೇವೆ.
ಬೇಕಂತಲೇ ಆಡಳಿತ ವ್ಯವಸ್ಥೆಯ ತಾಳ್ಮೆ ಪರೀಕ್ಷಿಸುವ ಸ್ಥಿತಿಯನ್ನು ತಂದೊಡ್ಡಿದ್ದನ್ನು ನೋಡಿದರೆ ಮನುಷ್ಯ ಬುದ್ಧಿವಂತ ಹೌದೇ ಎಂಬ ಪ್ರಶ್ನೆ ಏಳುತ್ತದೆ. ಎಲ್ಲರ ತಾಳ್ಮೆಗೂ ಒಂದು ಮಿತಿ ಖಂಡಿತವಾಗಿ ಇದ್ದೇ ಇದೆ. ಅಲ್ಲಿ ಇಲ್ಲಿ ನೂಕು ನುಗ್ಗಲು, ಎಡೆಬಿಡದೆ ಓಡಾಡುವ ವಾಹನಗಳು, ಅಗತ್ಯ ಇದ್ದೋ ಇಲ್ಲದೆಯೋ ಎಂದು ಪರಿಶೀಲಿಸಲೇ ಬೇಕಾದರೂ ತಮ್ಮ ಮಿತಿಯ ತಾಳ್ಮೆ ಮೀರಿದ ಒಂದೆರಡು ಘಟನೆಗಳು ಹೀಗೆ ಎಲ್ಲವೂ ಮತ್ತೆ ಮತ್ತೆ ನಮ್ಮನ್ನೇ ಪ್ರಶ್ನೆ ಮಾಡುವಂತಿದೆ ನಾವು ಮನುಷ್ಯರಾಗಿ ಮನುಷ್ಯತ್ವ ಉಳಿಸಿಕೊಂಡಿದ್ದೇವೆಯೇ?
ಏನೇ ಇರಲಿ ಹೇಗೆಯೇ ಇರಲಿ ಇರುವುದರಲ್ಲಿ ಸುಖಿಸುವ ಮನೋಭಾವ ಬೆಳೆಸಿಕೊಳ್ಳಲೇ ಬೇಕಾಗಿದೆ. ಐಷಾರಾಮಿ ಬದುಕನ್ನೇ ಓಲೈಸುತ್ತಿದ್ದವರೆಲ್ಲಾ ಸಾತ್ವಿಕರಾಗಿ ಬದುಕುವ ಪ್ರಯತ್ನ ಮಾಡಬೇಕಾಗಿದೆ. ತಮ್ಮ ತಮ್ಮ ಜೀವ ಜೀವನದ ಭದ್ರತೆಗಾಗಿ ಇರುವುದರಲ್ಲಿ ತೃಪ್ತಿ ಪಡಬೇಕಾಗಿದೆ.
ಮನೆಮಂದಿಯ, ನಮ್ಮೂರ ಜನರ, ನಮ್ಮ ರಾಜ್ಯದ, ದೇಶದ ಹಿತಕ್ಕಾಗಿ ನಮ್ಮೆಲ್ಲ ಆಸೆ ಆಕಾಂಕ್ಷೆಗಳನ್ನು ಹಿಡಿದಿಟ್ಟುಕೊಳ್ಳಲೇಬೇಕಾಗಿದೆ. ಈಗಲೂ ನನ್ನ ಕಿವಿಯಲ್ಲಿ ಅನುರಣಿಸುತ್ತಿರುವ ಹಾಡು.. ‘ಒಳಿತು ಮಾಡು ಮನುಜ, ನಾವಿರೋದು ಮೂರು ದಿವಸ…
– ವಿದ್ಯಾ ಎಸ್., ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥರು,ವಿವೇಕಾನಂದ ಕಾಲೇಜು ಪುತ್ತೂರು