Advertisement

ಅಂದು, ಎಲ್ಲಾ ಇಲ್ಲಗಳ ನಡುವೆ ಇದ್ದ ಭದ್ರತೆಯ ಭಾವ ನಮ್ಮನ್ನು ಬೆಚ್ಚಗಿರಿಸಿತ್ತು ; ಆದರೆ ಇಂದು?

10:51 PM May 04, 2020 | Hari Prasad |

ನಮ್ಮ ದೇಶ ವೈವಿಧ್ಯಮಯ ಸಂಸ್ಕೃತಿ, ಸಮಾಜ ರಚನೆಯನ್ನು ಹೊಂದಿರುವ ದೇಶ. ಆದರೆ ಅಭಿವೃದ್ಧಿಯತ್ತ ನಾಗಾಲೋಟಕ್ಕಿತ್ತ ಸಂದರ್ಭದಲ್ಲಿ ನಾವು ನಮ್ಮತನವನ್ನೆಲ್ಲಾ ಕಳೆದುಕೊಳ್ಳುತ್ತಿದ್ದೇವೆಯೋ ಎಂಬ ಅವ್ಯಕ್ತ ಭಯ ಕೆಲವರನ್ನಾದರೂ ಕಾಡುತ್ತಿತ್ತು. ಇದೀಗ ಕೋವಿಡ್ ಮಹಾಮಾರಿ ಜಗವನ್ನೇ ಲಾಕ್ ಮಾಡಿ ಕುಳಿತಿರುವ ಈ ಸಂದರ್ಭದಲ್ಲಿ ನಾವು ನಡೆದು ಬಂದ ಹಾದಿಯನ್ನೊಮ್ಮೆ ಪುನರಾವಲೋಕನ ಮಾಡುವ ಕಿರು ಪ್ರಯತ್ನ ಇಲ್ಲಿದೆ. ನಿಮ್ಮ ಖುಷಿಯ ಓದಿಗಾಗಿ ವಿದ್ಯಾ ಎಸ್. ಪುತ್ತೂರು ಬರೆದಿದ್ದಾರೆ…

Advertisement

ಇರುವುದೆಲ್ಲವ ಬಿಟ್ಟು…
ಮನುಷ್ಯ ಸಹಜವಾದ ಗುಣ ಅದು. ತನ್ನಲ್ಲಿ ಇರುವುದೆಲ್ಲವ ಬಿಟ್ಟು ಅದರ ಆಚೆಗೆ ಏನೋ ಇದೆ ಎಂದು ನಿರಂತರವಾಗಿ ಹುಡುಕಾಟ. ಏನೇನೋ ಆಸೆಗಳು, ಕುತೂಹಲಗಳು.. ಪಡೆದುಕೊಳ್ಳಬೇಕು ಎಂಬ ಹುಚ್ಚು ತವಕ.. ತಾನೇ ಮುಂದೆ ಎನ್ನುವ ಧಾವಂತ.. ಓಡುವ ವೇಗದ ಮಧ್ಯೆ ಅಪಘಾತವಾಗದೀತು ಎಂಬ ಪರಿವೆಯೂ ಇಲ್ಲ. ಬದುಕಿನ ಎಲ್ಲ ಇಲ್ಲಗಳನ್ನು ಪಡೆಯುವ ತರಾತುರಿಯಲ್ಲಿ ಇರುವ ಸುಖಗಳನ್ನು ಸವಿಯಲಾರದ ಸ್ಥಿತಿಯಲ್ಲಿ ನಾವಿದ್ದೇವೆ.

ಹಳ್ಳಿಯ ಸುಂದರವಾದ ಶುದ್ಧ ಗಾಳಿ, ಕಾಡಿನಲ್ಲಿ ದೊರೆಯುವ ತರಹೇವಾರಿ ಹಣ್ಣುಗಳು, ಸುಗಂಧಭರಿತ ವಿವಿಧ ಹೂವುಗಳ ಸೊಬಗು, ತೋಟದ ಆ ಬದಿಯಲ್ಲಿ ಜುಳುಜುಳು ಎಂದು ಸದ್ದು ಮಾಡುತ್ತಾ ಹರಿಯುವ ನದಿ, ಆಟ ಆಡಿ ಹಸಿದು ಬರುವಾಗ ಅಮ್ಮ ಮಾಡಿ ಕೊಡುತ್ತಿದ್ದ ಬಗೆ ಬಗೆಯ ತಿಂಡಿಗಳು, ರುಚಿ ರುಚಿಯಾದ ಊಟ, ತಂಗಿ ತಮ್ಮನ ಜೊತೆ ಸೇರಿ ಆಡುತ್ತಿದ್ದ ಆಟ, ಮಾಡುತ್ತಿದ್ದ ಜಗಳ, ದೂರುಗಳನ್ನು ಪರಿಹರಿಸಲು ಕೆಂಪೇರುತ್ತಿದ್ದ ಅಪ್ಪನ ಕಣ್ಣುಗಳು, ಆ ಹೊತ್ತು ರಕ್ಷಣೆಯ ಕವಚವಾಗುತ್ತಿದ್ದ ಅಮ್ಮನ ಬೆಚ್ಚಗಿನ ಸೆರಗು.. ಎಲ್ಲಾ ಇತ್ತು..ಜೊತೆಗೆ ಒಂದು ರೀತಿಯ ಬಡತನವೂ..

ದನ ಕರುಗಳಿಗೆ ಹುಲ್ಲು, ಸೊಪ್ಪು ತರುವುದು, ಕಲಗಚ್ಚು ಕೊಡುವುದು,ತೋಟದಲ್ಲಿರುವ ಅಡಿಕೆ ಹೆಕ್ಕಿ ಮನೆಗೆ ಸಾಗಿಸುವುದು, ಗೇರುಬೀಜ ಕೊಯ್ದು ಆಯ್ದ ತರುವುದು, ಮನೆಯ ಕಸ ಗುಡಿಸಿ, ನೆಲ ಒರಸಿ, ಬಟ್ಟೆ ಒಗೆದು ಓರಣವಾಗಿಸುವುದು, ಶಾಲಾ ಕೆಲಸಗಳ ಜೊತೆಗೆ ಇರುತ್ತಿದ್ದ ದಿನಚರಿಯ ಭಾಗಗಳು.

ಇವಿಷ್ಟೇ ಅಲ್ಲ. ತಂಗಿ ತಮ್ಮನ ಜೊತೆಗೆ ಕೆಲಸ ಹಂಚಿಕೊಳ್ಳಲು ಜಗಳ, ಮಾಡಿದ ಕೆಲಸಗಳನ್ನು ಅವಲೋಕಿಸಿ, ಅಣಕಿಸಿ ಮಾಡುತ್ತಾ ಇದ್ದ ಕೀಟಲೆಗಳೂ, ಅಪ್ಪ ಅಮ್ಮನ ಕೈಯಿಂದ ಸಿಗುತ್ತಿದ್ದ ಬೈಗಳೂ ದಿನಚರಿಯ ಭಾಗಗಳೇ. ವರ್ಷಕ್ಕೆ ಯುಗಾದಿಯ ಸಮಯದಲ್ಲಿ ಅಪ್ಪ ತರುತ್ತಿದ್ದ ಎರಡು ಜೊತೆ ಬಟ್ಟೆ, ನಡೆದು ನೆಲ ತಲುಪುವವರೆಗೂ ಹಾಕಿ ಸವೆವ ಚಪ್ಪಲಿ, ವರ್ಷದ ಆರಂಭದಲ್ಲಿ ಅಮ್ಮನ ಕೈಚಳಕದಿಂದ ಸಿಧ್ಧವಾಗುತ್ತಿದ್ದ ಖಾಕಿ ಬಟ್ಟೆ ಚೀಲ,

Advertisement

ಎಲ್ಲವೂ ಅಂದಿನ ದಿನಗಳಲ್ಲಿ ಒಂದು ರೀತಿಯ ಖುಷಿ ಕೊಡುವ ಸಂಗತಿಗಳಾಗಿದ್ದವು. ಹೊರಗೆ ಎಲ್ಲೋ ಹೋಗಿ ಬಂದ ಮೇಲೆ ಅವರ ಯಾರದೋ ಕೈಯಲ್ಲಿ ಕಂಡ ಬಳೆಗಾಗಿಯೋ, ಬಟ್ಟೆಗಾಗಿಯೋ ಇನ್ನೂ ಯಾವ್ಯಾವುದೋ ವಸ್ತುಗಳಿಗಾಗಿಯೋ ಅಪ್ಪನಲ್ಲಿ ಬೇಡಿಕೆ ಇಡುವ ಧೈರ್ಯ ಸಾಲದೇ ಅಮ್ಮನನ್ನು ಪೀಡಿಸುತ್ತಿದ್ದದ್ದು, ಕೊನೆಗೂ ವಿಷಯ ಅಪ್ಪನ ಕಿವಿ ತಲುಪಿ ಅವರ ಏರಿದ ದನಿಗೆ ಹೆದರಿ ಉಸಿರಾಡುವ ಶಬ್ದ ಕೂಡಾ ಹೊರಗೆ ಕೇಳಿಸದ ಹಾಗೆ ಅವಡುಕಚ್ಚಿ ಗುಡಿ ಹಾಕಿ ಮಲಗಿ ಸಮಾಧಾನ ಆಗುವವರೆಗೂ ಅತ್ತು ಮರುದಿನ ಯಥಾವತ್ತಾಗಿ ಶಾಲೆಯ ಕಡೆಗೆ ಧಾವಿಸುತ್ತಿದ್ದ ದಿನಗಳವು.

ಏನೇ ಆದರೂ ಹೊಟ್ಟೆ ತುಂಬ ಊಟ ಮನೆಯ ಮಂದಿಗೆ ಮಾತ್ರ ಅಲ್ಲ. ಮನೆಗೆ ಬಂದವರಿಗೂ. ಕೆಲಸಕ್ಕೆ ಬರುತ್ತಿದ್ದ ಬಾಬಿ, ರಾಜು, ಹುಸೇನ್ ಯಾರೇ ಆಗಲಿ ಕೆಲಸ ಮುಗಿಸಿ ಹೋಗುವಾಗ ಮಕ್ಕಳಿಗೆ ಎಂದು ಹೇಳಿ ಏನಾದರೂ ಇದ್ದರೆ ಒಂದಷ್ಟು ಕೊಟ್ಟೇ ಕಳುಹಿಸುವವರು ಅಮ್ಮ. ಆ ದಿನಗಳಲ್ಲಿ ಅನಿರೀಕ್ಷಿತವಾಗಿ ಬಂದ ಅತಿಥಿಗೂ ಊಟಕ್ಕೆ ಏನೂ ಕೊರತೆ ಇರಲಿಲ್ಲ. ಅಂದರೆ ಬಡತನದ ಬೇಗೆಯಲ್ಲಿಯೂ ಹೃದಯ ಶ್ರೀಮಂತಿಕೆ ಇತ್ತು. ಪರರ ಕಷ್ಟಗಳಿಗೆ ಸ್ಪಂದಿಸುವ ವಿಶಾಲ ಮನೋಭಾವವಿತ್ತು. ಎಲ್ಲಾ ಇಲ್ಲಗಳ  ಮಧ್ಯೆಯೂ ಭದ್ರತೆಯ ಭಾವ  ನಮ್ಮನ್ನು ಬೆಚ್ಚಗಿರಿಸಿತ್ತು..

ಆದರೆ ಇಂದು ಅಂದಿನ ಹಾಗಿಲ್ಲ……
ಯಾರದೋ ಕೈಯಲ್ಲಿ ಕಂಡು ಆಸೆಪಟ್ಟ ಅಂದಿನ ದುಬಾರಿ ಮೊಬೈಲ್ ಫೋನ್ ಕೈಗೆಟುಕುವ ದರದಲ್ಲಿ ಇದ್ದುದರಿಂದ ಇಂದು ನಮ್ಮ ಕೈಯಲ್ಲಿ ಇದೆ. ಎಲ್ಲಾ ರೀತಿಯ ಆಸೆಗಳನ್ನು ಸ್ವಲ್ಪ ಮಟ್ಟಿಗೆ ಆದರೂ ಪೂರೈಸುವ ಸಾಧ್ಯತೆಯಿದೆ. ಪಟ್ಟಣದಲ್ಲಿ ಬದುಕು ಸುಂದರವಾಗಿ ಕಟ್ಟಿಕೊಳ್ಳಲು ಸುಲಭ ಎಂದುಕೊಂಡ ಪಟ್ಟಣದ ಬದುಕು ನಮ್ಮದಾಗಿದೆ. ಮಾಲ್, ಪಾರ್ಕ್, ಕ್ಲಬ್, ಹೋಟೆಲ್ ಎಲ್ಲಾ ಪಕ್ಕದಲ್ಲಿಯೇ ಇದೆ. ಓಡಾಟಕ್ಕೆ ತೊಂದರೆ ಆಗದಂತೆ ಇರಬೇಕಾದ ಬೈಕ್, ಕಾರುಗಳು ನಮ್ಮೊಂದಿಗೆ ಇವೆ.

ಕೈಗೆಟಕುವ ಹಾಗೆ ಎಲ್ಲಾ ಇದ್ದರೂ ಉಪಯೋಗಿಸಲು ಸಮಯವೇ ಇಲ್ಲ. ಇತರರ ಕಷ್ಟಗಳಿಗೆ ಸ್ಪಂದಿಸುವ ಸಾಮರ್ಥ್ಯ ಇದ್ದರೂ ಮನಸ್ಸೇ ಇಲ್ಲ. ನಾನು ನನ್ನದರಾಚೆಯ ಪರಿವೆ ಇಲ್ಲ. ಸುತ್ತಲ ಪ್ರಪಂಚದ ಗೊಡವೆ ಇಲ್ಲ. ಪರಸ್ಪರ ಸಂಬಂಧ ಬೇಕಾಗಿಲ್ಲ. ಮಕ್ಕಳ ಮುಗ್ಧತೆಯ ಮನಸ್ಸು ಅರ್ಥ ಮಾಡಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಅಪ್ಪ ಅಮ್ಮ ತಮ್ಮ ತಂಗಿ ಅನ್ನುವ ಸೆಳೆತ ಇಲ್ಲ. ಎಲ್ಲಾ ಕಡೆಗಳಲ್ಲಿಯೂ ಸ್ವಾರ್ಥ ತುಂಬಿಕೊಂಡು ತನ್ನದೊಂದು ಬಿಟ್ಟು ಬೇರೆ ಇಲ್ಲವೆ ಇಲ್ಲ.

ಹಗಲೆಲ್ಲ ದುಡಿದು ರಾತ್ರಿ ಒಂಬತ್ತೋ ಹತ್ತೋ ಗಂಟೆಗೆ ಮನೆಗೆ ಬಂದು ಮನೆ ಕೆಲಸದ ಒತ್ತಡ ಮುಗಿಸಿ ನಾಳೆಯ ತಯಾರಿಯ ಬಳಿಕ ಎಷ್ಟೋ ಹೊತ್ತಿಗಾದರೂ ಹಾಸಿಗೆಯಲ್ಲಿ ಬಿದ್ದುಕೊಂಡರಾಯಿತು. ಮತ್ತೆ ಬೆಳಿಗ್ಗೆ ತಯಾರಾಗಲೇಬೇಕಲ್ಲಾ ನಾಳೆಯ ದಿನದ ಹೋರಾಟಕ್ಕೆ..

ಇವೆಲ್ಲದರ ನಡುವೆ ಸುತ್ತ ಮುತ್ತಲಿನ ಗಿಡ ಮರ ಬಳ್ಳಿಗಳು, ದಾರಿ ಉದ್ದಕ್ಕೂ ಹಾಸಿದಂತಿದ್ದ ಹೂವಿನ ರಾಶಿ, ಹಕ್ಕಿಗಳ ಕಲರವ, ದನಕರುಗಳ ಕೂಗು, ದೂರದ ದೇವಸ್ಥಾನದ ಆವರಣದಿಂದ ಕೇಳುತ್ತಿದ್ದ ಸುಪ್ರಭಾತ ಎಲ್ಲಾ ಇಲ್ಲವಾಗಿದೆ.. ಜೊತೆಗೆ ಬಾಲ್ಯದ ದಿನಚರಿಯೂ ಇಲ್ಲವಾಗಿದೆ..

– ವಿದ್ಯಾ ಎಸ್., ಸಮಾಜಶಾಸ್ತ್ರ ಪ್ರಾದ್ಯಾಪಕಿ, ವಿವೇಕಾನಂದ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next