ಬದಲಾದ ಈ ವರ್ತಮಾನದಲ್ಲಿ ಆಧುನಿಕತೆಯ ವಿಸ್ತಾರತೆ ಜಗದಗಲ ಪಸರಿಸಿದೆ. ಡಿಜಿಟಲ್ ಯುಗ ಎಂದೇ ಹೇಳಬಹುದಾದ ಜಾಯಮಾನ ನಮ್ಮದಾಗಿದೆ. ಪ್ರಸ್ತುತ ಸಮಾಜದಲ್ಲಿ ಸಾಮಾಜಿಕ ಜಾಲತಾಣವನ್ನು ಬಿಟ್ಟು ಇರುವವರು ಯಾರೂ ಇಲ್ಲ ಎಂದೇ ಹೇಳಬಹುದು.
ಯಾವಾಗ ಡಿಜಿಟಲ್ ಯುಗ ಪ್ರಾರಂಭವಾಯಿತೊ ಆಗಿನಿಂದ ಸಂಬಂಧಗಳಿಗೆ ನೀಡುವ ಬೆಲೆ ಕಡಿಮೆಯಾಗುತ್ತಿದೆ. ಸದ್ಯ ನಮ್ಮ ಜೀವನ ಯಾಂತ್ರಿಕವಾಗಿ ನಡೆಯುತ್ತಿದೆ. ತಂತ್ರಜ್ಞಾನವನ್ನು ನಾವು ಬಳಸುವ ಬದಲು ತಂತ್ರಜ್ಞಾನವೇ ನಮ್ಮನ್ನು ಬಳಸಿಕೊಳ್ಳುತ್ತಿದೆ ಎಂದರೂ ತಪ್ಪಾಗಲಾರದು. ಅತಿಯಾದರೆ ಅಮೃತವೂ ವಿಷ ಆಗುತ್ತದೆ ಎಂಬಂತೆ ತಂತ್ರಜ್ಞಾನದಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲ ಕೂಡ ಇದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳ ಕೆಟ್ಟ ಪ್ರಭಾವದಿಂದ ವಿದ್ಯಾರ್ಥಿಗಳು ಓದಿನ ಕಡೆ ಗಮನ ವಹಿಸದೆ ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಂತಹ ಜಾಲತನಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಮೊದಲು ಗ್ರಂಥಾಲಯಗಳನ್ನು ತಮ್ಮ ಜ್ಞಾನಾರ್ಜನೆಗಾಗಿ ಬಳಸಿಕೊಳ್ಳುತ್ತಿದ್ದ ಕಾಲದಿಂದ ಸ್ಮಾರ್ಟ್‌ಫೋನ್ ಒಂದಿದ್ದರೆ ಸಾಕು ಎಲ್ಲ ಮಾಹಿತಿ ಸಿಗುತ್ತದೆ ಎಂದು ಯೋಚಿಸುವುದನ್ನು ಹೆಚ್ಚಿನವರು ಕಲಿತುಕೊಂಡಿದ್ದಾರೆ. ಸುಲಭವಾಗಿ ಮಾಹಿತಿ ಸಿಗುತ್ತದೆ ಹೌದು, ಆದರೆ ಆ ವಿಷಯಗಳ ಆಳವನ್ನು ಹುಡುಕುವ ಶೈಲಿಗಳನ್ನು ಕಲಿತಿಲ್ಲ. ಚಿಕ್ಕ ಮಾಹಿತಿಗಳನ್ನು ಪಡೆದುಕೊಂಡು ಅಷ್ಟೇ ಮಾಹಿತಿ ಸಾಕು ಎಂದು ಸುಮ್ಮನಾಗುತ್ತಿದ್ದಾರೆ.
ಕಳೆದು ಹೋದ ಸಮಯ ಮತ್ತೆ ಬಾರದು ಎಂದು ಹೇಳುವ ಹಾಗೆ ನೇರ ಸಂಪರ್ಕಕ್ಕೆ ಹೆಚ್ಚು ಸಮಯ ಕೊಡದೆ ಫೋನ್‌ಗಳಲ್ಲಿ ಸಂದೇಶವನ್ನು ಕಳಿಸುವುದು ಹಾಗೂ ಮಾತನಾಡುವುದು ಹೆಚ್ಚಾಗುತ್ತಿದೆ. ಎದುರಲ್ಲಿಯೇ ಇರುವ ವ್ಯಕ್ತಿಗೆ ಸಮಯವನ್ನು ನೀಡದೆ ಗೊತ್ತಿರದ ವ್ಯಕ್ತಿಗಳ ಜತೆಗೂ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರಾಗಿ ಮಾತಾನಾಡುವವರನ್ನು ಇಂದು ನಾವು ಕಾಣಬಹುದು. ನಮ್ಮ ದಿನಿತ್ಯದ ಜೀವನದಲ್ಲಿ ನಡೆಯುವ ಪ್ರತಿಯೊಂದು ವಿಷಯವನ್ನು ಹಂಚಿಕೊಂಡು ಅಪಾಯವನ್ನು ತಂದುಕೊಳ್ಳುವ ಪ್ರಕರಣಗಳು ಕೂಡ ಇತ್ತೀಚೆಗೆ ಹೆಚ್ಚಾಗುತ್ತಿದೆ.
ಜ್ಞಾನ, ಅಭಿವೃದ್ಧಿ ಹಾಗೂ ತಿಳಿಯದ ವಿಷಯದ ಕುರಿತು ತಿಳಿದುಕೊಳ್ಳಲು ಇಂಟರ್‌ನೆಟ್ ಬಳಸಬೇಕು. ಅದನ್ನು ಬಿಟ್ಟು ಇವನ್ನು ನಮಗೆ ಬೇಕಾದ ರೀತಿಯಲ್ಲಿ ತಿರುಚಿ ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ಮಿತಿಯಾಗಿ ಒಳ್ಳಯ ಕೆಲಸಕ್ಕಾಗಿ ಇವೆಲ್ಲ ತಂತ್ರಜ್ಞಾನ ಬಳಸಿಕೊಂಡರೆ ನಾವು ಉತ್ತಮ ಜ್ಞಾನ ಕೌಶಲ ಹೊಂದಿ ಸಂತೋಷದ ಬಾಳ್ವೆ ಮಾಡಲು ಸಾಧ್ಯ.
- ಲಿಖೀತಾ ಹೆಗಡೆ. ಎಸ್.ಡಿ.ಎಂ. ಕಾಲೇಜು, ಉಜಿರೆ