Advertisement

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

11:43 AM Dec 08, 2024 | Team Udayavani |

ಅಗ್ಗದ ಬೆಲೆಗೆ ಸಿಗುತ್ತವೆ ಎನ್ನುವುದು ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳ ಹೆಗ್ಗಳಿಕೆ. ಈಗ ಹೊಸ ತಂತ್ರಜ್ಞಾನ, ಆಕರ್ಷಕ ವಿನ್ಯಾಸ, ಹೊಸಬಗೆಯ ಮುಖಪುಟ –ಇವೆಲ್ಲ ಇದ್ದೂ ಹೊಸ ಪುಸ್ತಕಗಳು ಆಕರ್ಷಣೆ ಕಳೆದುಕೊಂಡಿವೆ. ಆದರೆ ದಶಕಗಳ ಹಿಂದೆ ಮುದ್ರಣವಾಗಿರುವ, ಮುಖಪುಟ ಮಾಸಿಹೋಗಿರುವ ಹಳೆಯ ಪುಸ್ತಕಗಳು ಈಗಲೂ ಡಿಮ್ಯಾಂಡ್‌ ಉಳಿಸಿಕೊಂಡಿವೆ! ಅಂಥ ಪುಸ್ತಕಗಳನ್ನು ಮಾರುತ್ತ “ಓದುವ ಸಂಸ್ಕೃತಿಯನ್ನು ಬೆಳೆಸುತ್ತಿರುವ’ ಕೆಲ ಸೆಕೆಂಡ್‌ ಹ್ಯಾಂಡ್‌ ಪುಸ್ತಕ ಮಳಿಗೆಗಳನ್ನು ಕುರಿತ ಮಾಹಿತಿ, ಸಂಚಿಕೆಯ ವಿಶೇಷ.

Advertisement

ಒಂದು ಕಾಲದಲ್ಲಿ ಬೆಂಗಳೂರಿನ ಕೆ.ಜಿ. ರಸ್ತೆ, ಅವೆನ್ಯೂ ರಸ್ತೆ, ಮಲ್ಲೇಶ್ವರಂ, ರಾಜಾಜಿನಗರದಲ್ಲಿ; ಮೈಸೂರು, ಕಲಬುರಗಿ, ಧಾರವಾಡ ಮುಂತಾದ ನಗರಗಳಲ್ಲಿ ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳು ದಂಡಿಯಾಗಿ ಸಿಗುತ್ತಿದ್ದವು. ಲೇಖಕರ ಸ್ವ ಹಸ್ತಾಕ್ಷರವಿರುವ ಪುಸ್ತಕಗಳೂ ಅಲ್ಲಿ ಸಿಗುತ್ತಿದ್ದವು ಎಂಬುದು ವಿಶೇಷ. ಪುಸ್ತಕದ ಮೂಲ ಬೆಲೆಗಿಂತ ತುಂಬಾ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದ ಆ ಪುಸ್ತಕಗಳನ್ನು ಖರೀದಿಸಿ ಸಂಭ್ರಮಿಸುವ ಪ್ರತ್ಯೇಕ ವರ್ಗವೇ ಇತ್ತು. ಕಾಲ ಸರಿದಂತೆ ಹೆಚ್ಚು ಸಂಪಾದನೆ ತರುವ ಹೊಸ ನೌಕರಿಗಳ ಹಿಂದೆ ಹೋದ ಹಲವರು ಸೆಕೆಂಡ್‌ ಹ್ಯಾಂಡ್‌ ಪುಸ್ತಕ ಮಾರಾಟದಿಂದ ಹಿಂದೆ ಸರಿದರು.

ಕಾಲ ಮತ್ತೂಂದು ಸುತ್ತು ಉರುಳಿತು. ಹಳೆಯ ಪುಸ್ತಕಗಳ ಮರು ಮುದ್ರಣವೂ ವಿರಳವಾಯಿತು. ಹೊಸ ಮುದ್ರಣ ಕಂಡ ಪುಸ್ತಕಗಳ ಬೆಲೆ ದುಬಾರಿಯಾಯಿತು. 200-300 ರೂ. ನೀಡಿ ಒಂದು ಪುಸ್ತಕ ಖರೀದಿಸುವುದು ಕಷ್ಟವಾಗತೊಡಗಿತು. ಪರಿಣಾಮ, ಹಳೆಯ ಪುಸ್ತಕಗಳಿಗೆ ಮತ್ತೆ ಡಿಮ್ಯಾಂಡ್‌ ಶುರುವಾಯಿತು. ಈಗ ರಾಜ್ಯದ ವಿವಿಧೆಡೆ ಸೆಕೆಂಡ್‌ ಹ್ಯಾಂಡ್‌ ಪುಸ್ತಕದಂಗಡಿಗಳಿವೆ. ಎಲ್ಲಾ ವಯೋಮಾನದವರೂ ಈ ಪುಸ್ತಕಗಳ ಗ್ರಾಹಕರಾಗಿದ್ದಾರೆ ಎಂಬುದು ವಿಶೇಷ. ಕಡಿಮೆ ಬೆಲೆಗೆ ಸಿಗುವ ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳು ಪುಸ್ತಕಪ್ರೇಮಿಗಳನ್ನು ಆಕರ್ಷಿಸುತ್ತಿವೆ. ಪುಸ್ತಕಗಳನ್ನು ಕೊಂಡು, ಮತ್ತೆ ಮರಳಿಸುವ ಪ್ರಕ್ರಿಯೆಯಲ್ಲಿ ಪುಸ್ತಕ ಸಂಸ್ಕೃತಿ ಪೀಳಿಗೆಯಿಂದ ಪೀಳಿಗೆಗೆ ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಾಡಿನ ಕೆಲವು ಸೆಕೆಂಡ್‌ ಹ್ಯಾಂಡ್‌ ಪುಸ್ತಕದಂಗಡಿಗಳನ್ನು ಕುರಿತ ಮಾಹಿತಿ ಇಲ್ಲಿದೆ.

ಬುಕ್‌ವರ್ಮ್ ಬೆಂಗಳೂರು:

ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಕಳೆದ 24 ವರ್ಷಗಳಿಂದ ಓದುಗರ ಓದಿನ ದಾಹ ತಣಿಸುತ್ತಿದೆ ಬುಕ್‌ವರ್ಮ್. 2000ರಲ್ಲಿ ಕೃಷ್ಣೇಗೌಡರು ಇದನ್ನು ಆರಂಭಿಸಿದರು. ಮೊದಲಿನಿಂದಲೂ ಇಲ್ಲಿ ಸಾಹಿತ್ಯಿಕ ಕೃತಿಗಳು, ಜೀವನ ಚರಿತ್ರೆ, ಆತ್ಮಚರಿತ್ರೆ, ವಿಜ್ಞಾನ, ಇತಿಹಾಸ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತಿವೆ. ಯುವಪೀಳಿಗೆಯ ಅಭಿರುಚಿಗೆ ತಕ್ಕಂತೆ ಪ್ರಚಲಿತ ವಿದ್ಯಮಾನ, ಜಿಯೊ ಪೊಲಿಟಿಕ್ಸ್‌ ಪುಸ್ತಕಗಳೂ ಲಭ್ಯ. ಇಲ್ಲಿ ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳನ್ನು ಕೊಂಡು, ಓದಿ ಮತ್ತೆ ಅದನ್ನು ಮರಳಿಸಿದರೆ, ಗ್ರಾಹಕರಿಗೆ ರಿಯಾಯಿತಿಯೂ ಉಂಟು. 1825ರಲ್ಲಿ ಪ್ರಕಟವಾದ “ವರ್ಲ್ಡ್ ಇನ್‌ ಮಿನಿಯೆಚರ್‌’ ಪುಸ್ತಕಗಳು ಸೇರಿದಂತೆ 18-19ನೇ ಶತಮಾನದ ಸುಮಾರು 2 ಸಾವಿರ ಪುಸ್ತಕಗಳು ಇಲ್ಲಿವೆ. ಜೊತೆಗೆ ಸ್ವಾಮಿ ವಿವೇಕಾನಂದ, ಡಾ. ಅಂಬೇಡ್ಕರ್‌, ಗಾಂಧಿ, ರವೀಂದ್ರನಾಥ್‌ ಟ್ಯಾಗೋರ್‌ ಮುಂತಾದ ಮಹನೀಯರ ಹಸ್ತಾಕ್ಷರವುಳ್ಳ ಕೆಲ ಪುಸ್ತಕಗಳನ್ನು ಇಲ್ಲಿ ಕಾಣಬಹುದು. 20 ರೂ.ನಿಂದ 90 ಸಾವಿರ ರೂ. ವರೆಗಿನ ಪುಸ್ತಕಗಳು ಹಾಗೂ ಕನ್ನಡ, ಇಂಗ್ಲಿಷ್‌, ಬಂಗಾಲಿ, ತಮಿಳು ಭಾಷೆಗಳ ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳು ಇಲ್ಲಿ ಲಭ್ಯ.

Advertisement

ಫೋನ್‌: 9845076757

ಸೂರ್ಯ ಬುಕ್‌ ಸ್ಟಾಲ್‌,  ಬೆಂಗಳೂರು:

ಕಳೆದ 20 ವರ್ಷಗಳಿಂದ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿದೆ ಸೂರ್ಯ ಬುಕ್‌ ಸ್ಟಾಲ್‌. 2005ರಲ್ಲಿ, ಮುತ್ತು ಅವರು ಇದನ್ನು ಆರಂಭಿಸಿದರು. ಹಳೆಯ ಕಥೆ, ಕಾದಂಬರಿ, ಸಾಹಿತ್ಯಿಕ ಕೃತಿಗಳು ಇಲ್ಲಿ ಲಭ್ಯ. ಅಂದಾಜು ದರಕ್ಕೆ ಗ್ರಾಹಕರಿಂದಲೇ ಹಳೇ ಪುಸ್ತಕಗಳನ್ನು ಖರೀದಿಸಿ ಮಾರಲಾಗುತ್ತದೆ. ಕನ್ನಡ, ಇಂಗ್ಲಿಷ್‌, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯ ಪುಸ್ತಕಗಳು ಇಲ್ಲಿವೆ. ಸುಮಾರು 6 ಲಕ್ಷ ಪುಸ್ತಕ ಸಂಗ್ರಹ ಈ ಅಂಗಡಿಯಲ್ಲಿದೆ. 5 ರೂ.ನಿಂದ 500 ರೂ.ವರೆಗಿನ ಎಲ್ಲ ಬಗೆಯ ಪುಸ್ತಕಗಳು ಇಲ್ಲಿ ಸಿಗುತ್ತವೆ.

ಫೋನ್‌: 9686979430

ಬ್ಲಾಸಮ್‌, ಬೆಂಗಳೂರು :

2002ರಲ್ಲಿ ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಆರಂಭವಾದ ಬ್ಲಾಸಮ್‌ ಪುಸ್ತಕದಂಗಡಿ, ಒಂದು ಲಕ್ಷ ಪುಸ್ತಕಗಳ ತವರುಮನೆ. ಮಾಯಿಗೌಡ ಇದರ ಸ್ಥಾಪಕರು. ಆರಂಭದಿಂದಲೂ ಸೆಕೆಂಡ್‌ ಹ್ಯಾಂಡ್‌ ಪುಸ್ತಕ ಮಾರಾಟ ಮಾಡುತ್ತಿದ್ದಾರೆ. ಮಕ್ಕಳ ಪುಸ್ತಕ, ಕಾಮಿಕ್ಸ್‌ಗಳು ಇಲ್ಲಿ ಹೆಚ್ಚು ಮಾರಾಟವಾಗುತ್ತವೆ. 18ನೇ ಶತಮಾನದ ಕೆಲ ಪುಸ್ತಕಗಳೂ ಇಲ್ಲುಂಟು. ಹಳೇ ಪುಸ್ತಕಗಳನ್ನು ಕೊಂಡು, ಮರಳಿಸು ವವರಿಗೆ ಇಲ್ಲಿ ರಿಯಾಯಿತಿ ಸಿಗುತ್ತದೆ. ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಗಳ ಫಿಕ್ಷನ್‌ ಹಾಗೂ ನಾನ್‌ ಫಿಕ್ಷನ್‌ ಪುಸ್ತಕಗಳು ಹೆಚ್ಚು ಸಿಗುತ್ತವೆ. 10 ರೂ.ನಿಂದ 10 ಸಾವಿರ ರೂ.ಗಳವರೆಗೂ ಇಲ್ಲಿ ಪುಸ್ತಕಗಳು ಲಭ್ಯ. ಅಮೆರಿಕ, ಇಂಗ್ಲೆಂಡ್‌ ದೇಶದ ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳು ಸಹ ಇಲ್ಲಿ ಸಿಗುತ್ತವೆ. ಚರ್ಚ್‌ ಸ್ಟ್ರೀಟ್‌ನಲ್ಲಿ ಇವರದ್ದೇ ಇನ್ನೆರಡು ಶಾಖೆಗಳಿವೆ.

ಫೋನ್‌: 9448220202

ವಿದ್ಯಾನಿಧಿ ಬುಕ್‌ ಹೌಸ್‌, ಕಲಬುರಗಿ:

ಕಲಬುರಗಿಯ ವಿದ್ಯಾನಿಧಿ ಪುಸ್ತಕದಂಗಡಿ, ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳಿಗೆ ಹೆಸರುವಾಸಿ­ಯಾಗಿದೆ. 1996ರಲ್ಲಿ ಭೀಮ ನಾಯಕ್‌ ಇದನ್ನು ಆರಂಭಿಸಿದ್ದಾರೆ. ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಗಳ ಸಾಹಿತ್ಯಿಕ ಕೃತಿಗಳು ಇಲ್ಲಿ ಲಭ್ಯ. ಅರ್ಧ ಬೆಲೆಗೆ ಪುಸ್ತಕ ಸಿಗುತ್ತವೆ. ಪಿಯುಸಿ, ಎಂಜಿನಿಯ ರಿಂಗ್‌, ಡಿಪ್ಲೊಮಾ ಸೆಕೆಂಡ್‌ ಹ್ಯಾಂಡ್‌ ಪಠ್ಯ ಪುಸ್ತಕಗಳು ಹೆಚ್ಚು ಮಾರಾಟ ವಾಗುತ್ತಿವೆ.  20 ರೂ.ನಿಂದ 300 ರೂ.ವರೆಗಿನ ಪುಸ್ತಕಗಳು ಇಲ್ಲಿ ಲಭ್ಯ.

ಫೋನ್‌: 9448649783

ಭಾವನಾ ಬುಕ್ಸ್‌ ಸ್ಟಾಲ್‌, ಶಿವಮೊಗ್ಗ :

ಶಿವಮೊಗ್ಗದ ಬಿ.ಎಚ್‌. ರಸ್ತೆಯಲ್ಲಿ 27 ವರ್ಷಗಳ ಹಿಂದೆ ಲಿಂಗರಾಜ್‌ ಅವರು ಆರಂಭಿಸಿದ ಭಾವನಾ ಬುಕ್ಸ್‌ ಸ್ಟಾಲ್‌ನಲ್ಲಿ ಕೇವಲ ಶೈಕ್ಷಣಿಕ ಪಠ್ಯಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಮಾತ್ರ ಲಭ್ಯ. ಸುಮಾರು 7 ಲಕ್ಷದಷ್ಟು ಪುಸ್ತಕಗಳ ಸಂಗ್ರಹ ಇಲ್ಲಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಬಿಎ, ಬಿಕಾಂ, ಬಿಎಸ್‌ಸಿ, ವೈದ್ಯಕೀಯ ಪುಸ್ತಕಗಳು ಹೆಚ್ಚು ಮಾರಾಟವಾಗು­ತ್ತವೆ. ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳನ್ನು ಶೇ. 75, ಶೇ. 50ರಷ್ಟು ದರದಲ್ಲಿ ಮಾರಾಟ ಮಾಡಲಾಗುತ್ತದೆ. ಜೊತೆಗೆ ಹೊಸ ಪುಸ್ತಕಗಳೂ ದೊರೆಯುತ್ತವೆ. 30 ರೂ.ನಿಂದ 2 ಸಾವಿರ ರೂ.ವರೆಗಿನ ಪುಸ್ತಕಗಳು ಈ ಅಂಗಡಿಯಲ್ಲಿವೆ.

ಫೋನ್‌: 9449361256

ಜೆಡ್‌.ಎಂ. ಕರ್ನಾಟಕ ಬುಕ್‌ ಸೆಂಟರ್‌,ಮೈಸೂರು:

ದೌಲತ್‌ ಪಾಷಾ ಹಾಗೂ ಫಿರ್ದೋಸ್‌ ಅವರ ಮಾಲೀಕತ್ವದ, ಜಗನ್ಮೋಹನ ಅರಮನೆ ರಸ್ತೆಯಲ್ಲಿರುವ ಜೆಡ್‌.ಎಂ. ಕರ್ನಾಟಕ ಬುಕ್‌ ಸೆಂಟರ್‌, ಮೈಸೂರಿನ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಒಂದು. ಇಲ್ಲಿ 5ರೂ. ನಿಂದ 3 ಸಾವಿರ ರೂ. ವರೆಗಿನ ಪುಸ್ತಕಗಳಿವೆ. ಕನ್ನಡ, ಇಂಗ್ಲಿಷ್‌ ಭಾಷೆಗಳ 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿದ ಮಳಿಗೆಯಿದು. ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳ ವ್ಯಾಪಾರ ಮಾಡುತ್ತಿರುವ ಇವರಲ್ಲಿ, ಇಂಥ ಪುಸ್ತಕಗಳು ಇಲ್ಲ ಎಂಬುದೇ ಇಲ್ಲ. ಮೂಲಬೆಲೆಯ ಅರ್ಧಕ್ಕೆ ಹಾಗೂ ಅದಕ್ಕಿಂತ ಕಡಿಮೆ ಬೆಲೆಗೆ ಇಲ್ಲಿ ಪುಸ್ತಕಗಳು ಸಿಗುತ್ತವೆ. ರಾಮಾಯಣ, ಮಹಾಭಾರತ, ಭಗವದ್ಗೀತೆ ಮುಂತಾದ ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳು ಇಲ್ಲಿ ಹೆಚ್ಚಾಗಿ ಮಾರಾಟವಾಗುತ್ತವೆ. ಸಾಹಿತ್ಯಿಕ ಕೃತಿಗಳ ಜೊತೆಗೆ ಎಲ್ಲ ಶೈಕ್ಷಣಿಕ ಪಠ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಲಭ್ಯ. ಸೆಕೆಂಡ್‌ ಹ್ಯಾಂಡ್‌ಗಳಲ್ಲಿ ಕುವೆಂಪು, ಕಾರಂತ, ತೇಜಸ್ವಿ, ಡಿವಿಜಿ, ತ್ರಿವೇಣಿ, ತರಾಸು, ಯಂಡಮೂರಿ ವೀರೇಂದ್ರನಾಥ್‌, ರವಿ ಬೆಳಗೆರೆ ಅವರ ಪುಸ್ತಕಗಳಿಗೆ ಡಿಮ್ಯಾಂಡ್‌ ಜಾಸ್ತಿ ಇದೆ. ಗ್ರಾಹಕರು ಕೇಳಿದ ನಿರ್ದಿಷ್ಟ ಪುಸ್ತಕಗಳು ಲಭ್ಯವಿರದಿದ್ದರೆ, ಅದನ್ನು ಬೇರೆ ಕಡೆಯಿಂದ ತರಿಸಿಕೊಡುವ ವ್ಯವಸ್ಥೆಯೂ ಇಲ್ಲಿದೆ.

ಫೋನ್‌: 9902397758

ಪ್ರಕಾಶ ಪುಸ್ತಕಾಲಯ ಧಾರವಾಡ:

ಧಾರವಾಡದ ಪ್ರಕಾಶ ಪುಸ್ತಕಾಲಯ ಕಳೆದ 49 ವರ್ಷಗಳಿಂದ ಓದುಗರ ಸೇವೆಯಲ್ಲಿದೆ. 1975ರಲ್ಲಿ ಪ್ರಕಾಶ್‌ ಮಲ್ಲನಗೌಡ ಇದನ್ನು ಆರಂಭಿಸಿದರು. ಆರಂಭದ ದಶಕಗಳಲ್ಲಿ ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳು ಇಲ್ಲಿ ಬಹು ಬೇಡಿಕೆಯಿಂದ ಮಾರಾಟವಾಗುತ್ತಿ¤ದ್ದವು. ಸಾಹಿತ್ಯಿಕ, ಸ್ಪರ್ಧಾತ್ಮಕ ಸೇರಿ 30 ಸಾವಿರ ಪುಸ್ತಕಗಳು ಇಲ್ಲಿ ಲಭ್ಯ. ಇಲ್ಲಿ ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳನ್ನು ಕೊಂಡು, ಓದಿ ಅನೇಕರು ಸರ್ಕಾರಿ ಅಧಿಕಾರಿ ಗಳಾಗಿರುವುದು ಪ್ರಕಾಶ ಪುಸ್ತಕಾಲಯದ ಹೆಮ್ಮೆ.

ಫೋನ್‌: 9448981391

 

-ನಿತೀಶ ಡಂಬಳ

Advertisement

Udayavani is now on Telegram. Click here to join our channel and stay updated with the latest news.

Next