Advertisement

School Education; ಶಾಲಾ ಶಿಕ್ಷಣ: ಕಲಿಕೆಯೊ… ಫ‌ಲಿತಾಂಶವೊ…

10:26 AM Mar 04, 2024 | Team Udayavani |

ಶಿಕ್ಷಣ ಎಂದರೇನು ಎಂಬುದೇ ದೊಡ್ಡ ವಿಷಯ. ವಿಶಾಲ ವ್ಯಾಪ್ತಿಯ ವಿಷಯದಲ್ಲಿ ಶಾಲೆಯೊಳಗಿನ ಅಥವಾ ತರಗತಿ ಕೋಣೆಯೊಳಗಿನ ಕಲಿಕಾ ಪ್ರಕ್ರಿಯೆಯ ಬಗ್ಗೆ ಮಿತಿಗೊಳಿಸಿದ ಬರಹವಿದು.

Advertisement

ಮಗು ಸುಮ್ಮನೆ… ಖಾಲಿ ಕೊಡದಂತೆ ಶಾಲೆಗೆ ಸೇರ್ಪಡೆ ಯಾಗುವುದಿಲ್ಲವೆಂದು, ಯಾವುದೇ ತರಗತಿಯ ಮೊತ್ತಮೊದಲು ಶಾಲೆಯ ಮೆಟ್ಟಿಲು ಹತ್ತುವಾಗ ಕಲಿಕೆಯ ಹಾದಿಯಲ್ಲಿರುವ ಮಗು ಶಾಲೆಗೆ ಆಗಮನವಾಗಿದೆಯೆಂದು ತಿಳಿದುಕೊಳ್ಳಬೇಕು. ಅಂದರೆ ಮಗು ತನ್ನ ಮನೆಯ, ಮನೆ ಪರಿಸರದ, ತನ್ನ ಸಂಪರ್ಕಕ್ಕೆ ಬಂದಿರುವವರ ಒಡನಾಟದ ಭಾಷೆ, ಭಾಷಾ ಸಂಬಂಧಿಯಾದ ರಚನಾ ವಿನ್ಯಾಸ, ನಿತ್ಯದ ಬದುಕಿನ ವ್ಯವಹಾರಗಳ ಹಾಗೂ ಮನುಷ್ಯ ಸಂಬಂಧಗಳ ಹಲವು ಆಯಾಮಗಳ ಸಂಗತಿಗಳನ್ನು ಚಿತ್ರ ಮತ್ತು ಸಂಭಾಷಣ ರೂಪದಲ್ಲಿ ಮೆದುಳಿನಲ್ಲಿ ನೆನಪುಗಳಾಗಿ, ವರ್ತನಾ ವಿನ್ಯಾಸಗಳನ್ನು ರೂಢಿಸಿಕೊಂಡಿರುತ್ತದೆ. ಅದರಲ್ಲಿ ಸಂಗತ ಅಸಂಗತವೆಂದು ವಿಂಗಡಿಸಲಾಗದು. ಏಕೆಂದರೆ ಮಗು ಸಾಮಾಜಿಕ ಪರಿಸ್ಥಿತಿಗನುಗುಣವಾಗಿ ರೂಢಿಸಿಕೊಂಡಿರುವ ಸಂಗತಿಗಳೇ(ವ್ಯಕ್ತಿತ್ವ) ಹೊರತು ಯಾವುದು ಸರಿ ತಪ್ಪುಗಳ ವಿಶ್ಲೇಷಣೆಯಿಂದಲ್ಲ. ಅದಕ್ಕೇನು ಗೊತ್ತು ಸರಿತಪ್ಪುಗಳು…

ಅಲ್ಲವೇ ?
ಇದೀಗ ಮಗು ಶಾಲೆಗೆ ಬರಲು ಆರಂಭಿಸಿತು. ಬರುವ ಅಷ್ಟೂ ಮಕ್ಕಳು ವೈವಿಧ್ಯಮಯ ಹಿನ್ನೆಲೆಯಲ್ಲಿ ರೂಪುಗೊಂಡಿರುವ ವ್ಯಕ್ತಿತ್ವಗಳು ಶಾಲೆಗೆ ಆಗಮಿಸಿದ್ದಾರೆ. ಇಲ್ಲಿ ಶಾಲಾ ಶಿಕ್ಷಣದ ಚೌಕಟ್ಟಿನೊಳಗಿನ ಚಟುವಟಿಕೆ ಗಳು, ಪಾಠಗಳು, ಸಂವಹನ ವಿಶೇಷತೆಗಳು ಪ್ರತೀ ಮಗುವಿನ ಮತ್ತು ಶಿಕ್ಷಕರ ಮಾತು ವರ್ತನೆಗಳು ಮತ್ತು ಪರಿಸರದ ಪ್ರಭಾವಕ್ಕೆ ಮಗು ಒಳಗಾಗುತ್ತದೆ. ಈ ಹಂತದಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ವಿಶ್ಲೇಷಣೆ, ಹೋಲಿಕೆಯ ಮೂಲಕ, ನಿರಂತರ ಪುನರಾವರ್ತನೆಯಾಗುವ ಶಿಕ್ಷಕರ ಮಾತು ನಿರ್ದೇಶನಗಳು(ಶಾಲಾ ಪಾಠ) ಮಗುವನ್ನು ಹೊಸ ಚೌಕಟ್ಟಿಗೆ ತಯಾರು ಮಾಡಲಾಗುತ್ತದೆ. ಮಗು ಕೂಡ ತನ್ನನ್ನು ತಾನು ಮರು ನಿರೂಪಿಸಿಕೊಳ್ಳುತ್ತದೆ. ಇದುವೇ ಸರಿ… ಹೀಗಿರುವುದು ಸರಿ ಎಂಬ ವಿಶ್ಲೇಷಣೆ – ವಿಮರ್ಶೆಯ, ಹೋಲಿಕೆಯ ಮೂಲಕ ಸಾಮಾಜಿಕ ಪರಿಸರಕ್ಕೆ ಹೊಂದಿಕೊಳ್ಳಲು ಕಲಿಯಲಾರಂಭಿಸುತ್ತದೆ. ಹಾಗೇ ಒಂದೊಂದೇ ಮೇಲ್‌ ಹಂತದ ತರಗತಿಗೆ ಮಗು ಹೋದಂತೆ ಅದನ್ನು (ಗುಣನಡತೆಯನ್ನು) ದೃಢೀಕರಿಸಿಕೊಂಡು ಅಥವಾ ನವೀಕರಿಸಿಕೊಂಡು ವರ್ತಿ¤ಸಲಾರಂಭಿಸುತ್ತದೆ. ಇಲ್ಲಿ ಶಾಲಾ ಶಿಕ್ಷಣಕ್ಕೆ ಅನುಗುಣವಾಗಿ ಮಗುವಿನ ಕಲಿಕೆ ಸಾಗುತ್ತದೆ. ಕಲಿಯುವ ಮಗು ತಾನು ಕಲಿತ ಕಲಿಕೆಯ ಅನುಭವಗಳನ್ನು (ಕಲಿಕಾಂಶಗಳು) ಆ ತತ್‌ಕ್ಷಣದ ಸಾಮಾಜಿಕ ಪರಿಸರದ ಪರಿಸ್ಥಿತಿಯ ಜತೆಗೆ ಸಮೀಕರಿಸಿಕೊಳ್ಳುತ್ತದೆ. ಹೀಗೆ ಸಮೀಕರಿಸಿ ಕೊಳ್ಳುವಾಗ ಶಾಲಾ ಪರಿಸರದಲ್ಲಿ ಕಲಿತ ಸಂಗತಿಗಳು ತನ್ನ ಸುತ್ತಮುತ್ತಲಿನ ಜನರಲ್ಲಿ ಕಾಣದಿದ್ದಾಗ(ಮಾತು, ನಡತೆ, ಕೆಲಸದಲ್ಲಿ) ಮಗುವಿಗೆ ಯಾವುದು ಸರಿ? ಯಾವುದು ತಪ್ಪು? ಎಂಬ ಗೊಂದಲ ಶುರುವಾಗುತ್ತದೆ. ಏಕೆಂದರೆ ಶಾಲೆಯಲ್ಲಿ ಹೇಳುವುದೊಂದು ಪರಿಸರದಲ್ಲಿ ಕಾಣುವುದೊಂದು.

ಒಂದಕ್ಕೊಂದು ಸರಿ ಇಲ್ಲವಲ್ಲ ಎಂಬ ಗೊಂದಲ. ಅಂತಿಮವಾಗಿ ಪರಿಸರದಿಂದ(ಸಾಮಾಜಿಕ ಪರಿಸ್ಥಿತಿಯ)ಆಗುವ ಅನುಭವಗಳೇ ಸರಿಯೆಂದು ಅದಕ್ಕನುಗುಣವಾಗಿ ತನ್ನನ್ನು ತಾನು ರೂಪಿಸಿ ಕೊಳ್ಳುತ್ತದೆ. ಇಲ್ಲಿ ಕಲಿಕೆ ಮತ್ತು ಫ‌ಲಿತಾಂಶಗಳ ವೈರುಧ್ಯಗಳನ್ನು ಮಗು ಕಾಣಬೇಕಾಯಿತು. ಮಗು ಬೆಳೆ ಬೆಳೆಯುತ್ತಾ ಪ್ರೌಢನಾಗುವಾಗ, ತಾನೇ ಸ್ವತಃ ಅನುಭವದ ಕಲಿಕೆಯಿಂದ ಮತ್ತು ಕಲಿಕೆಯ ಅನುಭವದಿಂದ, ನಿಜವಾಗಿಯೂ ಸಮಾಜ ಹೇಗಿರಬೇಕೆಂಬ ನಿರ್ಧಾರಕ್ಕೆ ಬರುತ್ತದೆ. ಸಮಾಜ ಹೇಗಿರಬೇಕೆಂಬ ಯೋಚನೆಯ ಪರಿಣಾಮವಾಗಿ, ಸಮಾಜವೆಂದರೆ ನಾನೇ…ನನ್ನ ವರ್ತನೆಗಳ, ವ್ಯವಹಾರಗಳ ರೂಪವೆಂಬ ನಿಷ್ಕರ್ಷೆಯಿಂದ, ಹಾಗಾದರೆ ನಾನು ಹೇಗಿರಬೇಕೆಂದು ತೀರ್ಮಾನಿಸಿ, ಹಾಗೆಯೇ ತನ್ನನ್ನು ತಾನು ರೂಪಿಸಿಕೊಂಡು ಬದುಕಲಾರಂಭಿಸುತ್ತದೆ. ಇದುವೇ ಜೀವನ… ಪ್ರಪಂಚವಾಗುತ್ತದೆ.

ಸಮಸ್ಯೆಯೆಲ್ಲಿದೆಯೆಂದರೆ ಕಲಿಕೆಯಲ್ಲಿದೆಯೇ ಹೊರತು ಮಗುವಿನಲ್ಲಿಲ್ಲ. ನಮಗೆ ಕಲಿಕೆ ಬೇಕೇ… ಫ‌ಲಿತಾಂಶ ಬೇಕೇ…? ಎಂಬ ಬಗ್ಗೆ ಶೈಕ್ಷಣಿಕವಾಗಿ ನಮ್ಮಲ್ಲಿ ಚಿಂತನೆಗಳು ಬೇಕು. ಶಾಲಾ ಹಂತದ ಕಲಿಕೆಯಲ್ಲಿ ಯಾವುದಕ್ಕೆ ಆದ್ಯತೆ ಕೊಡಬೇಕೆಂಬ ಸ್ಪಷ್ಟತೆ ಬೇಕು. ಆ ಸ್ಪಷ್ಟತೆಯೊಂದಿಗೆ ನಮ್ಮ ಶೈಕ್ಷಣಿಕ ನೀತಿ ನಿರೂ ಪಿತವಾಗಬೇಕು, ಜಾರಿಗೊಳಿಸು ವಂತಾಗಬೇಕು. ಅದಕ್ಕಾಗಿ ನಮಗೆ ಮಗು ಹೇಗೆ ಕಲಿಯು ತ್ತದೆ, ಯಾಕೆ ಕಲಿಯುತ್ತದೆ, ಕಲಿತು ಏನಾಗಬೇಕು ಎಂಬ ಸಾಮಾಜಿಕ ಕಲ್ಪನೆ ಮತ್ತು ಮಗುವಿನ ವೈಯಕ್ತಿಕ ಅಂಶ… ಆಶಯಗಳ ಅರಿವಿರಬೇಕು.

Advertisement

ಇಲ್ಲಿ ಕಲಿಕೆ ಎಂದರೆ ಕಲಿಕೆಯ ಫ‌ಲಿತಾಂಶವೇ ಹೊರತು ಫ‌ಲಿತಾಂಶವೇ(ಯಾವ ಹಂತದಲ್ಲೂ ಪಾಸು ಫೈಲು ಇರಬಾರದು)ಕಲಿಕೆಯಲ್ಲ. ಕಲಿಕೆಯ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣವು; ಮಗುವಿನ ವೈಯಕ್ತಿಕ ಸಂತಸ, ನೆಮ್ಮದಿ, ಆ ಮೂಲಕ ಸಾಮಾಜಿಕ ಮೂಲ ಆಶಯ ಅಂಶಗಳಾದ ಶಾಂತಿ, ಸಾಮರಸ್ಯವನ್ನು ಈಡೇರಿಸಿ ಕೊಳ್ಳುವ ಮೂಲ ಶೈಕ್ಷಣಿಕ ನೆಲೆಯನ್ನು ಕಂಡುಕೊಳ್ಳಬೇಕು. ಇದುವೇ ಕಲಿಕೆ, ಶಿಕ್ಷಣ. ಈ ತಳಹದಿಯಲ್ಲಿ ಕಲಿಕೆ ಮತ್ತು ಕಲಿಕೆಯ ವ್ಯವಸ್ಥೆಗಳಿಗೆ ಆದ್ಯತೆ ಸಿಗಬೇಕು. ಆಗ ಶೈಕ್ಷಣಿಕ ಬದಲಾವಣೆ ಮತ್ತು ಬಲವರ್ಧನೆಯಾಗುತ್ತದೆ. ಈ ಬದಲಾವಣೆಯ ಹಿನ್ನೆಲೆಯಲ್ಲಿ ಮಗುವಿನ ಕಲಿಕೆ ಸಾಮಾಜಿಕ ಪರಿಸ್ಥಿತಿಯಾಗಬೇಕು. ಕಲಿಕೆಯ ಮೂಲಕ ಮಗುವಿನಲ್ಲಿ ಕೌಶಲಾಭಿವೃದ್ಧಿಯಾಗಬೇಕು. ಮಗುವಿಗೆ ತಾನು ಕಲಿತ ಅಂಶಗಳು ತನ್ನ ಪರಿಸರದ ಜನರ ನಡೆ ನುಡಿಯಲ್ಲಿ ಕಾಣುವಂತೆ ಅನುಭವಕ್ಕೆ ಬರಬೇಕು. ಆಗ ಮಗು ತನ್ನ ಕಲಿಕೆಯಲ್ಲಿ ಸಾರ್ಥಕತೆಯನ್ನು ಕಾಣುತ್ತದೆ. ಇಲ್ಲವಾದರೆ ಕಲಿಸುವುದೊಂದು… ಕಾಣುವುದೊಂದು ಎಂಬ ನಿಲುವಿಗೆ ಮಗು ಬಂದು ಕಲಿಕೆ ನಿಜವಾದ ಕಲಿಕೆಯಾಗದೆ ಸೋಗಿನ ಕಲಿಕೆಯಾಗುತ್ತದೆ.

ಅದಕ್ಕಾಗಿ ರಾಜ್ಯ ಭಾಷಾ ಮಾಧ್ಯಮದ ಕಲಿಕೆಯೇ ಕಲಿಕಾ ಮಾಧ್ಯಮವಾಗಬೇಕು. ಕಲಿಕೆಯೇ ಫ‌ಲಿತಾಂಶವಾಗಬೇಕು. ಆಡಳಿಕ್ಕೆ ಕಲಿಕೆ ಮತ್ತು ಕಲಿಕೆಯ ವ್ಯವಸ್ಥೆ ಆದ್ಯತೆಯಾಗಬೇಕು. ಯಾಕಾಗಿ ಕಲಿಸಬೇಕು ಎಂಬ ಸ್ಪಷ್ಟತೆ ಇರಬೇಕು. ದುರಂತವೇನೆಂದರೆ ನಾವು ಶೈಕ್ಷಣಿಕ ಸಂವೇದನೆಗಳಿಲ್ಲದ, ಆವರಣದÇÉೇ ಸುತ್ತು ಬರುವ, ಅದನ್ನೇ ಗುಣಮಟ್ಟದ ಬದಲಾವಣೆಯೆನ್ನುವ ವರದಿಗಾರರಾಗಿರುವುದು.

– ರಾಮಕೃಷ್ಣ ಭಟ್‌ ಚೊಕ್ಕಾಡಿ, ಬೆಳಾಲು

Advertisement

Udayavani is now on Telegram. Click here to join our channel and stay updated with the latest news.

Next