Advertisement
ಕೋವಿಡ್ 19 ಪರಿಣಾಮವು ನಮ್ಮ ನಿತ್ಯ ಜೀವನದ ಚಟುವಟಿಕೆಗಳ ಮೇಲೂ ಸಾಕಷ್ಟು ಪರಿಣಾಮ ಬೀರಿ, ನಮ್ಮ ಜೀವನ ಶೈಲಿಯನ್ನೇ ಬದಲಾವಣೆ ಮಾಡುತ್ತಿದೆ.
Related Articles
Advertisement
ಈ ಹಬ್ಬವು ಅಣ್ಣ ತಂಗಿಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಅಣ್ಣ ತಂಗಿಯ ರಕ್ಷಣೆ ಮಾಡಿದರೆ, ತಂಗಿಯಾದವಳು ಅಣ್ಣನ ರಕ್ಷಣೆ ಮಾಡುವ, ಕಷ್ಟಕಾಲದಲ್ಲಿ ಆತನ ಜತೆ ನಿಲ್ಲುವ ಸಂಕಲ್ಪಕ್ಕೆ ನಾಂದಿಯಾಗುತ್ತದೆ. ರಕ್ಷಾ ಬಂಧನ ಎಂಬ ಅಕ್ಷರಗಳೇ ಅಪಾರ ಅರ್ಥವನ್ನು ಒಳಗೊಂಡಿವೆ. ರಕ್ಷಾ ಎಂದರೆ ರಕ್ಷಣೆ ಮತ್ತು ಬಂಧನ ಎಂದರೆ ಬಂಧ ಎಂದರ್ಥ. ಅಂದರೆ ತನ್ನ ಸಹೋದರನಿಗೆ ರಾಖೀ ಕಟ್ಟುವ ಮೂಲಕ ರಕ್ಷಣೆ ಮಾಡು ಎಂದು ಬಾಂಧವ್ಯದ ಬಂಧನಕ್ಕೊಳಪಡಿಸುವಳು ಸಹೋದರಿ. ತಂಗಿಯ ಯಾವುದೇ ಕಷ್ಟ, ನೋವು ನಲಿವುಗಳಿಗೆ ಅಣ್ಣನಾದವನು ಸದಾಕಾಲ ಸಹಾಯ ಹಸ್ತ ನೀಡುವ ಮೂಲಕ ಹೃದಯವಂತನಾಗಿರಬೇಕು ಎನ್ನುವುದನ್ನು ಈ ಹಬ್ಬ ಸಾರುತ್ತದೆ. ತನ್ನ ಅಣ್ಣನಿಗೆ ಒಳ್ಳೆಯ ಆರೋಗ್ಯದ ಜೊತೆಗೆ ದೀರ್ಘಾಯುಷ್ಯ ದೊರಕಲಿ ಎಂದು ಸಹೋದರಿಯು ಹಾರೈಸುವಳು. ಅಣ್ಣ ತಂಗಿಯ ಈ ಪವಿತ್ರವಾದ ಸಂಬಂಧಕ್ಕೆ ಯಾವುದೇ ಹಣ, ಶ್ರೀಮಂತಿಕೆಯ ಅಹಂ ಎಂಬುದೇ ಇಲ್ಲ. ಇಂತಹ ಅಮೂಲ್ಯ ಸಂಬಂಧಕ್ಕೆ ಬೇಕಾಗಿರುವುದು ಹೃದಯ ಶ್ರೀಮಂತಿಕೆ ಮಾತ್ರ. ತನ್ನ ಅಣ್ಣ ಅಥವಾ ತಮ್ಮ ಗಟ್ಟಿಯಾಗಿರಬೇಕೆಂದು ಸದಾ ಬಯಸುವ ಸಹೋದರಿ ಯರು, ತಾವು ಊಟ ಮಾಡಿದ್ದೇವೆಂದು ಸುಳ್ಳು ಹೇಳಿ ಅಣ್ಣನ ಹೊಟ್ಟೆ ತುಂಬಿಸುವ ತ್ಯಾಗವನ್ನು ನಾವೆಷ್ಟು ನೋಡಿಲ್ಲ. ಈ ಅಪರಿಮಿತ ಪ್ರೇಮಕ್ಕೆ, ಮಮತೆಗೆ ಬೆಲೆ ಕಟ್ಟುವುದು ಅಸಾಧ್ಯ. ಸಹೋದರ ಎಂದರೆ, ಒಡಹುಟ್ಟಿದವನೇ ಆಗಿರಬೇಕಿಲ್ಲ. ಯಾವ ವ್ಯಕ್ತಿಗೆ ಹೆಣ್ಣುಮಗಳ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ಅದಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವ ಮನಸ್ಸಿದೆಯೋ ಅವನು ಸಹೋದರನ ಸ್ಥಾನವನ್ನು ಪಡೆದುಕೊಳ್ಳುತ್ತಾನೆ. ಆಗಲೇ ಹೇಳಿದಂತೆ, ಅದಕ್ಕೆ ರಕ್ತ ಸಂಬಂಧವೇ ಆಗಿರಬೇಕೆಂದೇನಿಲ್ಲ. ಅಂದರೆ ಈ ಅಣ್ಣ-ತಂಗಿಯರ ಬಾಂಧವ್ಯ ರಕ್ತ ಸಂಬಂಧವನ್ನು ಮೀರಿರುವಂತಹದ್ದು. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಆಕಸ್ಮಿಕವಾಗಿ ಭೇಟಿಯಾಗಿ ಅಣ್ಣ ತಂಗಿ ಎಂಬ ಸಂಬಂಧ ಭಾವನಾತ್ಮಕವಾಗಿಯೂ ಹಲವಾರು ಸಂದರ್ಭಗಳಲ್ಲಿ ಉಂಟಾಗಬಹುದು. ಇಂತಹ ಭಾವನಾತ್ಮಕ ಸಂಬಂಧಗಳನ್ನು ಕೂಡ ಎಂದಿಗೂ ಅಳಿಸಲಾರದಂತೆ ಗಟ್ಟಿಗೊಳಿಸುವ ಶಕ್ತಿಯೂ ರಕ್ಷಾ ಬಂಧನಕ್ಕಿದೆ.
ಸಂಬಂಧಗಳು ಹತ್ತಾರು ವರ್ಷ ಗಟ್ಟಿಯಾಗಿ ಉಳಿಯಬೇಕೆಂದರೆ ಅಪನಂಬಿಕೆಗಳಿಗೆ ಅವಕಾಶವಿಲ್ಲದಂತೆ ಬದುಕನ್ನು ಸಾಗಿಸಬೇಕು. ಏಕೆಂದರೆ ಸಂಬಂಧಗಳನ್ನು ಗಟ್ಟಿಗೊಳಿಸುವ ಭದ್ರ ಬುನಾದಿ ಎಂದರೆ ಪರಸ್ಪರ ಬಲವಾದ ನಂಬಿಕೆ. ಶ್ರೀಮಂತಿಕೆಯೇ ಇರಲಿ ಅಥವಾ ಬಡತನವೇ ಇರಲಿ ಎರಡನ್ನೂ ಸಮನಾಗಿ ಸ್ವೀಕರಿಸಿ ಹಂಚಿಕೊಂಡು ಬದುಕುವ ಕಲೆಯೇ ಸಂಬಂಧಗಳ ಸಂಜೀವಿನಿಯಿದ್ದಂತೆ. ಆಧುನಿಕತೆಯ ಭರಾಟೆಯಲ್ಲಿ ಇಂದು ಹಬ್ಬಗಳು ಕೇವಲ ವಾಟ್ಸ್ ಆ್ಯಪ್, ಫೇಸ್‌ಬುಕ್ ಸಂದೇಶಗಳಿಗೆ ಮಾತ್ರ ಸೀಮಿತವಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಒತ್ತಡದ ಈ ಜೀವನದಲ್ಲಿ ಯಾರಿಗೂ ಯಾರ ಸಮಸ್ಯೆಗಳನ್ನೂ ಆಲಿಸಲು ಸಮಯವಿಲ್ಲದಂತಾಗಿದೆ. ಈ ಎಲ್ಲದರ ಮಧ್ಯೆಯೇ ರಕ್ಷಾ ಬಂಧನದ ಒಂದು ದಿನವಾದರೂ ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಇಡೀ ದಿನ ಅಕ್ಕ-ತಂಗಿಯರೊಡನೆ ಬೆರೆತು ಅವರ ಕೌಟುಂಬಿಕ, ವೃತ್ತಿ ಸಮಸ್ಯೆಗಳಿರಬಹುದು ಅವುಗಳನ್ನೆಲ್ಲಾ ಆಲಿಸಿ, ಆ ಸಮಸ್ಯೆಗಳಿಗೆ ಪರಿಹಾರದ ಭಾಗವಾಗೋಣ. ರಕ್ಷಾ ಬಂಧನವೆಂಬುದು ಕೇವಲ ಒಂದು ದಿನದ ಆಚರಣೆಗಷ್ಟೇ ಸೀಮಿತಗೊಳಿಸದೇ ಜೀವನ ಪರ್ಯಂತ ಅಣ್ಣನೆನಿಸಿಕೊಂಡವರು ಅಕ್ಕ-ತಂಗಿಯರ ಬದುಕಿಗೆ ಬೆಳಕಾಗುವ ಬಂಧವಾಗುವಂತಾಗಲಿ. – ರಾಜು ಭೂಶೆಟ್ಟಿ, ಹುಬ್ಬಳ್ಳಿ