Advertisement

ನೀರಿಗೆ ಮಂತ್ರಾಲಯವೂ ಬಂತು ಅಭಿಯಾನವೂ ಆರಂಭವಾಯಿತು

10:47 AM Sep 13, 2019 | Hari Prasad |

ಮೋದಿ ವಿಶೇಷವೆನಿಸಿದ್ದು ಮತ್ತು ಜನಪ್ರಿಯರಾಗಿದ್ದು ಮತ್ತೊಂದು ಕಾರಣಕ್ಕೆ. ಅದೆಂದರೆ, ಸಣ್ಣ ಸಣ್ಣದೆನಿಸುವ ಅಥವಾ ದೊಡ್ಡದಲ್ಲ ಎಂದು ನಿರ್ಲಕ್ಷ್ಯಿಸಿ ಬಿಡುವ ಉದ್ದೇಶಗಳಿಗೆ ಜನರನ್ನು ಸಂಘಟಿಸುತ್ತಿರುವುದು. ಮೊದಲ ಅವಧಿಯಲ್ಲೂ ಸ್ವಚ್ಛತಾ ಅಭಿಯಾನ ಎಂದು ಕರೆ ಕೊಟ್ಟರು, ಮತ್ತಷ್ಟು ಇಂಥ ಅಭಿಯಾನಗಳಿಗೆ ದನಿ ತುಂಬಿದರು. ಈಗ ಜಲಶಕ್ತಿ ಅಭಿಯಾನ. ಇವೆಲ್ಲವೂ ಸದಾ ಪ್ರಚಾರದಲ್ಲಿ ಇರುವಂಥ ಪ್ರಯತ್ನಗಳು ಎಂಬ ವಿಪಕ್ಷಗಳ ಟೀಕೆಯಲ್ಲೂ ಸ್ವಲ್ಪ ಮೌಲ್ಯವಿರಬಹುದು. ಆದರೆ, ಈ ದಿಸೆಯಲ್ಲಿ ಕೆಲವು ಕಡೆಯಾದರೂ ಅನುಷ್ಠಾನದ ಕಿಡಿ ಹೊತ್ತಿಕೊಳ್ಳಬಹುದು. ಒಂದಿಷ್ಟು ಸಂಘಟನೆಗಳು, ಜನರು ಕ್ರಿಯಾಶೀಲವಾಗಬಹುದೆಂಬ ಆಶಾವಾದ ಇಟ್ಟುಕೊಳ್ಳುವುದೂ ತಪ್ಪೇನಲ್ಲ.

Advertisement

— ಉಮೇಶ್ ಬಿ. ಕೋಟ್ಯಾನ್

ಜಲಶಕ್ತಿ ಅಭಿಯಾನ ಈ ಬಾರಿಯ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದು. ನೂರು ದಿನಗಳ ಅವಧಿಯಲ್ಲಿ ಹಲವು ಸಂಗತಿಗಳಿದ್ದರೂ ಈ ಅಭಿಯಾನ ಎಲ್ಲವುಗಳಿಗಿಂತ ಒಂದು ತೂಕ ಹೆಚ್ಚಿನದ್ದು. ಸಕಲ ಜೀವರಾಶಿಗಳಿಗೆ ಪ್ರಾಣದಾಯಿಯಾದ ನೀರು ಭೂಮಿ ಮೇಲಿಂದ ಕ್ಷಿಪ್ರವಾಗಿ ಕಡಿಮೆಯಾಗುತ್ತಿರುವುದು ಕಣ್ಣೆದುರಿಗಿದೆ.

ಈ ನಡೆ ಭವಿಷ್ಯದಲ್ಲಿ ಭಾರೀ ಗಂಡಾಂತರ ತಂದೊಡ್ಡಬಹುದು ಎಂಬ ಎಚ್ಚರಿಕೆಯ ಗಂಟೆ ಮೊಳಗಲು ತೊಡಗಿ ಬಹಳ ಕಾಲವಾಗಿದ್ದರೂ, ಆ ದಿಸೆಯಲ್ಲಿ ವಿಶೇಷ ಪ್ರಯತ್ನಗಳು ಆಗಿರಲಿಲ್ಲ. ಇದೀಗ ಕೇಂದ್ರ ಸರಕಾರವೇ ಜಲವೇ ಜೀವನ ಎಂದದ್ದು ಮತ್ತು ಅದರ ಸಂರಕ್ಷಣೆಗೆ ಮುಂದಾದದ್ದು ಅತ್ಯಂತ ಅಪೇಕ್ಷಣೀಯವೂ ಅಗತ್ಯವೂ ಆಗಿತ್ತು. ಒಟ್ಟೂ ನೀರಿನ ಬಳಕೆಯ ಕುರಿತೇ ಜಲ ಶಕ್ತಿ ಸಚಿವಾಲಯವನ್ನೂ ಸ್ಥಾಪಿಸಿ, ಸಚಿವರನ್ನೂ ನೇಮಿಸಿದ್ದೂ ಮತ್ತೊಂದು ಒಳ್ಳೆಯ ಕೆಲಸ.

ಕ್ಷಿಪ್ರ ಕೈಗಾರಿಕೀಕರಣ, ನಗರೀಕರಣ, ಜಲಮಾಲಿನ್ಯವೂ ಸೇರಿದಂತೆ ಹತ್ತಾರು ಕಾರಣಗಳಿಂದ ಪ್ರತಿ ವ್ಯಕ್ತಿಗೆ ತಲಾ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ಇದರಿಂದ ದೇಶದ ಜಲ ಸಂಪನ್ಮೂಲದ ಮೇಲೆ ಭಾರೀ ಒತ್ತಡ ಬಿದ್ದಿದೆ. ಹೀಗೆಯೇ ನೀರನ್ನು ಬಳಸಿದರೆ ಸ್ಥಿತಿ ಶೋಚನೀಯವಾಗುವುದು ಖಚಿತ.

Advertisement

2025ರಲ್ಲಿ 1093 ಲಕ್ಷಕೋಟಿ ಕ್ಯೂಬಿಕ್ ಮೀಟರ್ (ಬಿಎಂಸಿ) ಮತ್ತು 2050ರಲ್ಲಿ 1447 ಲಕ್ಷಕೋಟಿ ಕ್ಯೂಬಿಕ್ ಮೀಟರ್ ನೀರು ನಮಗೆ ಬೇಕಾಗಬಹುದು. ಆದರೆ ಅಂತರ್ಜಲದ ಮಟ್ಟ ಕುಸಿಯುತ್ತಿರುವ ವೇಗ ಆತಂಕ ಹುಟ್ಟಿಸುತ್ತಿದೆ. ನೀರಿನ ಲಭ್ಯತೆ ಮತ್ತು ಬೇಡಿಕೆ ನಡುವಿನ ಅಂತರ ಹೆಚ್ಚುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ 10 ವರ್ಷಗಳಲ್ಲಿ ದೇಶದ ಅರ್ಧ ಭಾಗ ಕುಡಿಯುವ ನೀರಿನ ತೀವ್ರ ಸಂಕಷ್ಟ ಎದುರಿಸಲಿದೆ ಎಂದು ಅಂದಾಜಿಸಲಾಗಿದೆ. ಈ ಅಂಕಿ ಅಂಶವನ್ನು ಹಿನ್ನೆಲೆಯಾಗಿಟ್ಟುಕೊಂಡು ನೋಡಿದರೆ ಜಲಶಕ್ತಿ ಅಭಿಯಾನದ ಅಗತ್ಯ ಮನವರಿಕೆಯಾಗುತ್ತದೆ.

256 ಜಿಲ್ಲೆಗಳಲ್ಲಿ ಅನುಷ್ಠಾನ
ನೀರಿನ ಕೊರತೆ ನೀಗಿಸಲು ಮಳೆ ನೀರು ಸಂರಕ್ಷಿಸುವುದೊಂದೇ ನಮಗಿರುವ ಮಾರ್ಗ. ಇದಕ್ಕಾಗಿ ರೂಪುಗೊಂಡದ್ದೇ ಜಲಶಕ್ತಿ ಅಭಿಯಾನ. ಕಾಲಮಿತಿಯ ಯೋಜನೆಯಾಗಿದ್ದರೂ ಇದು ನಿರಂತರವಾಗಿ ಮುಂದುವರಿಯಲಿದೆ. ಮೊದಲ ಹಂತದಲ್ಲಿ 256 ಜಿಲ್ಲೆಗಳನ್ನು ಆಯ್ದು ಜು.1ರಂದು ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಈ ಅಭಿಯಾನ ಐದು ಆಯಾಮಗಳನ್ನು ಹೊಂದಿದೆ.

ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರ ಜಲಮೂಲಗಳ ಪುನರುತ್ಥಾನ, ನೀರಿನ ಮರುಬಳಕೆ ಮತ್ತು ಬರಡಾದ ಜಲಮೂಲಗಳ ಮರುಪೂರಣ, ಜಲಕೋಶಗಳ ಅಭಿವೃದ್ಧಿ ಮತ್ತು ತೀವ್ರ ವೇಗದಲ್ಲಿ ಅರಣ್ಯ ಬೆಳೆಸುವುದೇ ಈ ಆಯಾಮಗಳು.

ಈ ಉದ್ದೇಶಕ್ಕಾಗಿ 256 ಜಿಲ್ಲೆಗಳನ್ನು 1592 ಬ್ಲಾಕ್‌ ಗಳಾಗಿ ವಿಭಜಿಸಲಾಗಿದೆ. ಜೂನ್‌ ನಿಂದ ಮಳೆಗಾಲ ಪ್ರಾರಂಭವಾಗುವ ದಕ್ಷಿಣದ ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಜುಲೈ 1ರಿಂದ ಸೆಪ್ಟೆಂಬರ್ 15ರ ತನಕ ಮಳೆಕೊಯ್ಲು ಮತ್ತಿತರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಿಂಗಾರು ಮಳೆ ಹೆಚ್ಚು ಬೀಳುವ ರಾಜ್ಯಗಳಲ್ಲಿ ಅಕ್ಟೋಬರ್ 1ರಿಂದ ನವಂಬರ್ 30ರ ತನಕ ಅಭಿಯಾನ ಮುಂದುವರಿಯಲಿದೆ.

ಜಿಲ್ಲಾಧಿಕಾರಿಗಳಿಗೇ ಜಲಶಕ್ತಿ ಅಭಿಯಾನದ ನೇತೃತ್ವವನ್ನು ವಹಿಸಲಾಗಿದೆ. ಜತೆಗೆ ಕೇಂದ್ರ ಸರಕಾರದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಜತೆ ಕಾರ್ಯದರ್ಶಿ ದರ್ಜೆಯ 256 ಅಧಿಕಾರಿಗಳಿಗೆ ಉಸ್ತುವಾರಿಯ ಹೊಣೆ ನೀಡಲಾಗಿದೆ. ಜಿಲ್ಲಾಡಳಿತ ಈ ತಂಡಕ್ಕೆ ತಲಾ ಇಬ್ಬರನ್ನು ನಾಮ ನಿರ್ದೇಶನ ಮಾಡಬಹುದು.

ಬ್ಲಾಕ್ ಮತ್ತು ಜಿಲ್ಲಾ ಜಲ ಸಂರಕ್ಷಣಾ ಯೋಜನೆಗಳು ಮತ್ತು ಕೃಷಿ ವಿಜ್ಞಾನ ಮೇಳದಂತಹ ಕಾರ್ಯಕ್ರಮಗಳ ಮೂಲಕ ತಳಮಟ್ಟದಲ್ಲಿ ನೀರನ್ನು ರಕ್ಷಿಸಬೇಕಾದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಲಾಗುತ್ತದೆ. ಅಂತೆಯೇ ಕೃಷಿಗೆ ಸಮರ್ಪಕವಾಗಿ ನೀರಾವರಿ ಬಳಕೆ ಮಾಡುವುದು ಮತ್ತು ಸರಿಯಾದ ಬೆಳೆಯನ್ನು ಆಯ್ಕೆ ಮಾಡುವ ಉಪಕ್ರಮಗಳು ಅಭಿಯಾನದಲ್ಲಿ ಸೇರಿವೆ.

ನಗರಗಳಲ್ಲಿ ತ್ಯಾಜ್ಯ ನೀರನ್ನು ಕೈಗಾರಿಕೆ ಮತ್ತು ಕೃಷಿಗೆ ಮರು ಬಳಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಬ್ಲಾಕ್ ಅಥವಾ ನಗರದಲ್ಲಿ ಕನಿಷ್ಠ ಒಂದು ಅಂತರ್ಜಲ ಮರುಪೂರಣ ಅಭಿವೃದ್ಧಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಜಲಶಕ್ತಿ ಅಭಿಯಾನದ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಐಐಟಿಗಳ ಪ್ರೊಸರ್‌ಗಳ ಮತ್ತು ತಜ್ಞರ ತಂಡವಿದೆ. ಹಲವು ಎನ್‌.ಜಿ.ಒ.ಗಳನ್ನೂ ಸೇರಿಸಿಕೊಳ್ಳಲಾಗಿದೆ.

– ಮೊದಲ ಹಂತದ ಅಭಿಯಾನದಲ್ಲಿ 1.54 ಲಕ್ಷ ಜಲ ಸಂರಕ್ಷಣೆ ಮತ್ತು ಮಳೆಕೊಯ್ಲು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. 1.23 ಜಲಕೋಶ ಅಭಿವೃದ್ಧಿ ಯೋಜನೆಗಳು ಮತ್ತು 20 ಸಾವಿರಕ್ಕೂ ಅಧಿಕ ಜಲಮೂಲಗಳಲ್ಲಿ 65 ಸಾವಿರ ಮರು ಬಳಕೆ ಮತ್ತು ಮರುಪೂರಣ ಉಪಕ್ರಮಗಳನ್ನು ಅನುಷ್ಠಾನಿಸಲಾಗಿದೆ.

– ಮೊದಲ ಹಂತದಲ್ಲಿ 256 ಜಿಲ್ಲೆಗಳಲ್ಲಿ 1592 ನೀರಿನ ಸಂಕಷ್ಟವಿರುವ ಬ್ಲಾಕ್‌ ಗಳಲ್ಲಿ ಜಾರಿಗೊಳ್ಳಲಿದೆ.

– ಕೇಂದ್ರ ಅಂತರ್ಜಲ ಮಂಡಳಿಯ 2017ರ ದತ್ತಾಂಶವನ್ನು ಆಧರಿಸಿ 1592 ಬ್ಲಾಕ್‌ ಗಳ ಪೈಕಿ 313 ಬ್ಲಾಕ್‌ ಗಳನ್ನು ತೀವ್ರ ಸಂಕಷ್ಟದ, 1000 ಬ್ಲಾಕ್‌ ಗಳನ್ನು ಶೋಷಿತ ಮತ್ತು 94 ಬ್ಲಾಕ್‌ ಗಳನ್ನು ಕನಿಷ್ಠ ನೀರಿನ ಲಭ್ಯತೆಯಿರುವ ಬ್ಲಾಕ್‌ ಗಳೆಂದು ವಿಭಾಗಿಸಲಾಗಿದೆ.

– ನಾಗರಿಕರ ಸಹಭಾಗಿತ್ವದಲ್ಲಿ ಮಳೆಗಾಲದಲ್ಲಿ ಜಲ ಸಂರಕ್ಷಣೆಯ ವಿವಿಧ ಯೋಜನೆಗಳ ಅನುಷ್ಠಾನ.

– ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಇಲಾಖೆಗಳ ಸಂಯೋಜನೆಯಲ್ಲಿ ನಡೆಯುವ ಕಾರ್ಯಕ್ರಮ. ಈ ಉದ್ದೇಶಕ್ಕಾಗಿ ಕೇಂದ್ರ ಜಲಸಂಪನ್ಮೂಲ , ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯಗಳನ್ನು ಸಂಯೋಜಿಸಿ ಜಲಶಕ್ತಿ ಸಚಿವಾಲಯ ಎಂಬ ಹೊಸ ಇಲಾಖೆಯನ್ನು ಪ್ರಾರಂಭಿಸಲಾಗಿದೆ.

– ಕೇಂದ್ರ ಸರಕಾರದ ಅಧಿಕಾರಿಗಳ ತಂಡ ಜಿಲ್ಲಾಾಡಳಿತದ ಜತೆಗೆ ಸ್ಥಳಕ್ಕೆ ಭೇಟಿ ನೀಡಿ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದೆ.

– ಸ್ವಚ್ಛ ಭಾರತ ಅಭಿಯಾನ ಮಾದರಿಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ವಸಹಾಯ ಗುಂಪುಗಳು, ಪಂಚಾಯತ್ ರಾಜ್ ಸಂಸ್ಥಾಪನೆಗಳು , ಯುವಕ ಸಂಘಗಳು, ರಕ್ಷಣಾ ಸಿಬಂದಿಗಳು, ವಿಶ್ರಾಂತ ಯೋಧರು, ನಿವೃತ್ತಿಯಾದವರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜನರನ್ನು ಸೇರಿಸಿಕೊಂಡು ಈ ಅಭಿಯಾನವನ್ನು ನಡೆಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next