Advertisement
ಗಣೇಶನಂತೂ ಗಾನಪ್ರಿಯ. ಸಂಗೀತಾರಾಧಕರ ಇಷ್ಟ ದೇವತೆಯೂ ಸಹ. ಸಂಗೀತಕ್ಕೂ ಗಜಾನನನಿಗೂ ಅದ್ಭುತ ಸಂಬಂಧ. ಅದು ಶಾಸ್ತ್ರೀಯ ಸಂಗೀತವಾಗಲೀ, ಸುಗಮ ಸಂಗೀತವಾಗಲೀ ಗಣಪತಿಯನ್ನು ನೆನೆಸಿಕೊಳ್ಳುವುದು ಇದ್ದೇ ಇರುತ್ತದೆ. ನಿಮಗೆ ನೆನಪಿರಬಹುದು. ಸುಮಾರು ಮೂವತ್ತು ವರ್ಷಗಳ ಹಿಂದೆ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪ್ರತಿ ಆರ್ಕೆಸ್ಟ್ರಾ ಆರಂಭವಾಗುತ್ತಿದ್ದುದೇ ಸರ್ವಕಾಲಕ್ಕೂ ಜನಪ್ರಿಯವೆನಿಸುವ ‘ಗಜಮುಖನೇ ಗಣಪತಿಯೇ ನಿನಗೆ ವಂದನೆ…’ ಎಂಬ ಗೀತೆಯಿಂದಲೇ.
ಲಲಿತಕಲೆಗಳ ಆರಾಧನೆಯಲ್ಲಿ ಗಣೇಶನಿಗೆ ಆದ್ಯತಾ ಸ್ಥಾನ ಇರುವುದು ಎಲ್ಲರಿಗೂ ತಿಳಿದದ್ದೇ. ಅದು ಚಿತ್ರಕಲೆ ಇರಬಹುದು, ನೃತ್ಯವಿರುವುದು, ಸಂಗೀತವಿರಬಹುದು-ಮಿಕ್ಕಾವುದೇ ಕಲೆ ಇರಬಹುದು. ಅಲ್ಲೆಲ್ಲವೂ ಗಣೇಶನನ್ನು ಮರೆಯುವುದು ಕಡಿಮೆ. ವಿಶಿಷ್ಟವೆನ್ನಬಹುದಾದರೆ ಗಣೇಶನೂ ಎಲ್ಲದಕ್ಕೂ ಒಪ್ಪಬಲ್ಲವನು. ಸಂಗೀತದ ನೆಲೆಯಲ್ಲೇ ಹೇಳುವುದಾದರೆ ಸಾಕಷ್ಟು ಗೀತೆಗಳು ಪುಂಖಾನುಪುಂಖವಾಗಿ ಹರಿದು ಬಂದಿವೆ. ಶಾಸ್ತ್ರೀಯ ಸಂಗೀತದಲ್ಲಂತೂ ಲೆಕ್ಕಕ್ಕೇ ಸಿಗದು. ವಾಗ್ಗೇಯಕಾರರಾದ ಮುತ್ತುಸ್ವಾಮಿ ದೀಕ್ಷಿತರು ಹಂಸಧ್ವನಿ ರಾಗವನ್ನೇ ಗಣೇಶನಿಗೆ ಅರ್ಪಿಸಿದರು. ಅತ್ಯಂತ ಪ್ರಸಿದ್ಧಿಯಾದ ಕೃತಿ ವಾತಾಪಿ ಗಣಪತಿಂ ಭಜೇಯಲ್ಲಿ ಹಂಸಧ್ವನಿ ರಾಗದಿಂದ ಭೂಷಿತನಾದ ಹೇರಂಬನೇ ಎಂದು ವ್ಯಾಖ್ಯಾನಿಸುತ್ತಾರೆ. ಆ ಗೀತೆಯಂತೂ ನಿತ್ಯ ಹರಿದ್ವರ್ಣ ಕಾಡುಗಳಂತೆ ಜನಪ್ರಿಯವಾದುದು. ಅದನ್ನು ಹಾಡದವರು ಇಲ್ಲ. ಅಷ್ಟೇ ಏಕೆ? ವಿವಿಧ ಸಂಗೀತ ಪ್ರಕಾರಗಳಲ್ಲೂ ಪ್ರಯೋಗಕ್ಕೆ ಒಳಗಾದ ಕೃತಿ. ಗಣೇಶನನ್ನು ಕುರಿತಾದ ಮುದ್ಗಲ ಪುರಾಣದಲ್ಲಿ 32 ಬಗೆಯ ಗಣೇಶನನ್ನು ಉಲ್ಲೇಖಿಸಲಾಗುತ್ತದೆ. ಹದಿನಾರು ಗಣಪತಿಗಳ ಕುರಿತು ದೀಕ್ಷಿತರು ಕೃತಿಗಳನ್ನು ರಚಿಸಿದ್ದಾರೆ.
ಸಂಗೀತ ಕಲಿಯುವವರಾಗಲೀ, ಸಾಮಾನ್ಯ ಜನರಿಗಾಗಲೀ ಪುರಂದರ ದಾಸರ ಲಂಬೋದರ..ಲಕುಮಿಕರ ಗೊತ್ತಿರದಿರಲು ಸಾಧ್ಯವೇ? ಖಂಡಿತಾ ಇಲ್ಲ. ಮತ್ತೊಬ್ಬ ವಾಗ್ಗೇಯಕಾರ ತ್ಯಾಗರಾಜರು ಅಭೀಷ್ಟ ವರದ ಶ್ರೀ ಮಹಾಗಣಪತಿ ಎಂದು ಕರೆದರು. ಈ ಕೃತಿಯೂ ಸಾಕಷ್ಟು ಪ್ರಸಿದ್ಧವಾದುದೇ. ಮೈಸೂರು ವಾಸುದೇವಾಚಾರ್ಯರೂ ಸಹ ‘ವಂದೆ ಅನಿಶಂ ಅಹಂ ವಾರಣ ವದನಂ’ ಎಂದು ಕೃತಿ ರಚಿಸಿದ್ದಾರೆ. ಒಂದು ಲೆಕ್ಕದ ಪ್ರಕಾರ ಮುತ್ತುಸ್ವಾಮಿ ದೀಕ್ಷಿತರೇ ಸುಮಾರು 27 ಕ್ಕೂ ಹೆಚ್ಚು ಕೃತಿಗಳನ್ನು ವಿನಾಯಕನ ಕುರಿತು ಬರೆದಿದ್ದಾರೆ. ವಿವಿಧ ವಾಗ್ಗೇಯಕಾರರೂ ಸಾಕಷ್ಟು ಕೃತಿಗಳನ್ನು ರಚಿಸಿದ್ದಾರೆ. ಪುರಂದರದಾಸರೂ ಸೇರಿದಂತೆ ವಿವಿಧ ದಾಸವರೇಣ್ಯರೂ ಗಜವದನನ್ನು ಆರಾಧಿಸಿದ್ದಾರೆ.
Related Articles
Advertisement
ಇದೇ ಕಾರಣಕ್ಕಾಗಿ ನೃತ್ಯದೊಂದಿಗೆ ಗಣಪತಿಯ ಸಂಬಂಧ ಹೇಗಿದೆಯೋ ಅಷ್ಟೇ ಅಥವಾ ಅದಕ್ಕಿಂತ ತುಸು ಹೆಚ್ಚಿನ ಸಂಬಂಧ ಸಂಗೀತದೊಂದಿಗೆ ಇದೆ ಎಂದರೆ ತಪ್ಪೇನೂ ಇಲ್ಲ.
– ವೇಣು, ಬೆಂಗಳೂರು