Advertisement

Leopard: ದೇಶದಲ್ಲಿ ಚಿರತೆಗಳ ಸಂತತಿ ವಾರ್ಷಿಕ ಶೇ.1.08ರಷ್ಟು ಏರಿಕೆ

10:33 AM Mar 04, 2024 | Team Udayavani |

ದೇಶದಲ್ಲಿ ಚಿರತೆಗಳ ಸಂತತಿ ತೀರಾ ಅಲ್ಪ ಮಟ್ಟಿನ ಏರಿಕೆ ಕಂಡಿದೆ. 2018ರಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಒಟ್ಟು 12,852 ಚಿರತೆಗಳಿದ್ದರೆ, 2022ರ ಸಮೀಕ್ಷೆಯಲ್ಲಿ ಈ ಸಂಖ್ಯೆ 13,874ಕ್ಕೆ ಏರಿಕೆಯಾಗಿದೆ. ಅಂದರೆ ವಾರ್ಷಿಕ ಸರಾಸರಿ ಶೇ.1.08ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಆದರೆ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ, ವನ್ಯಜೀವಿಗಳ ಬೇಟೆ ಚಿರತೆಗಳ ಸುರಕ್ಷೆಗೆ ಇನ್ನೂ ದೊಡ್ಡ ಸವಾಲಾಗಿದ್ದು ಇವುಗಳನ್ನು ನಿಯಂತ್ರಿಸಲು ಸರಕಾರ ಮತ್ತು ಸ್ಥಳೀಯ ಸಮುದಾಯಗಳು ಜಂಟಿಯಾಗಿ ಶ್ರಮಿಸಬೇಕಿದೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.

Advertisement

ಏನಿದು ಸಮೀಕ್ಷೆ?
ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಜಂಟಿಯಾಗಿ ರಾಜ್ಯಗಳಲ್ಲಿನ ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ನಡೆಸುತ್ತ ಬಂದಿರುವ ಚಿರತೆ ಗಣತಿಯ ಐದನೇ ಆವೃತ್ತಿಯ ವರದಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ದೇಶದ 18 ರಾಜ್ಯಗಳ ವ್ಯಾಪ್ತಿಯಲ್ಲಿರುವ ಚಿರತೆಗಳ ಆವಾಸಸ್ಥಾನಗಳಲ್ಲಿ ತಂತ್ರಜ್ಞಾನವನ್ನು ಬಳಸಿ ಈ ಸಮೀಕ್ಷೆಯನ್ನು ಕೈಗೊಂಡು ಚಿರತೆಗಳ ಗಣತಿ ನಡೆಸಲಾಗಿದೆ. ಇದರಲ್ಲಿ ನಾಲ್ಕು ಪ್ರಮುಖ ಹುಲಿ ಅಭಯಾರಣ್ಯಗಳೂ ಸೇರಿದ್ದು ಚಿರತೆಗಳ ಆವಾಸಸ್ಥಾನಗಳ ಪೈಕಿ ಶೇ. 70ರಷ್ಟು ವ್ಯಾಪ್ತಿಯಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಸಮೀಕ್ಷಾ ಮಾದರಿ
ಈ ಸಮೀಕ್ಷೆಯಲ್ಲಿ ಚಿರತೆಯ ಆವಾಸಸ್ಥಾನಗಳಲ್ಲಿ ಚಿರತೆ ನಡೆದಾಡಿದ ಮತ್ತು ಬೇಟೆಯಾಡಿದ 6,41,449 ಕಿ.ಮೀ. ಪ್ರದೇಶದಲ್ಲಿ ಚಿರತೆಯ ಹೆಜ್ಜೆಗಳನ್ನು ಪತ್ತೆ ಹಚ್ಚಲಾಗಿತ್ತಲ್ಲದೆ ಒಟ್ಟು 32,803 ಸ್ಥಳಗಳಲ್ಲಿ ಕೆಮರಾಗಳನ್ನು ಅಳವಡಿಸಲಾಗಿತ್ತು. ಈ ಕೆಮರಾಗಳು 4,70, 81, 881 ಫೋಟೋಗಳನ್ನು ಸೆರೆ ಹಿಡಿದಿದ್ದು, ಇವುಗಳಲ್ಲಿ 85,448 ಫೋಟೋಗಳಲ್ಲಿ ಚಿರತೆಗಳು ಕಂಡುಬಂದಿವೆ. ಈ ಎಲ್ಲ ಅಂಕಿಅಂಶಗಳನ್ನು ಪರಿಗಣಿಸಿ ಅಂತಿಮ ವರದಿಯನ್ನು ಸಿದ್ಧಪಡಿಸಲಾಗಿದೆ.

ವರದಿಯ ಪ್ರಮುಖ ಅಂಶಗಳು
ಸಮೀಕ್ಷಾ ವರದಿಯ ಪ್ರಕಾರ, ಮಧ್ಯ ಭಾರತದಲ್ಲಿ 8,820 ಚಿರತೆಗಳಿದ್ದು, 2018ರಲ್ಲಿ ಇದು 8,071 ಆಗಿತ್ತು. ಈ ಮೂಲಕ ಶೇ. 1.5 ವಾರ್ಷಿಕ ಏರಿಕೆಯನ್ನು ದಾಖಲಿಸಿದೆ. ಇನ್ನು ಶಿವಾಲಿಕ್‌ ಬೆಟ್ಟಗಳು ಮತ್ತು ಗಂಗಾ ಬಯಲು ಪ್ರದೇಶದಲ್ಲಿ 1,109 ಚಿರತೆಗಳು ಕಂಡುಬಂದಿದ್ದು, 2018ರಲ್ಲಿ ಇದು 1,253 ಆಗಿತ್ತು. ಅಂದರೆ ನಾಲ್ಕು ವರ್ಷಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ಚಿರತೆಗಳ ಸಂಖ್ಯೆ ವಾರ್ಷಿಕ ಶೇ. 3.4ರಷ್ಟು ಕುಸಿತ ದಾಖಲಿಸಿದೆ. ಒಟ್ಟಾರೆಯಾಗಿ ದೇಶದಲ್ಲಿರುವ ಚಿರತೆಗಳ ಸಂಖ್ಯೆಯನ್ನು ಪರಿಗಣಿಸಿದಲ್ಲಿ 2018-2022ರ ಅವಧಿಯಲ್ಲಿ ಶೇ. 1.08ರಷ್ಟು ಏರಿಕೆಯಾಗಿದೆ. ಇದೇ ವೇಳೆ ಮಧ್ಯ ಭಾರತ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಚಿರತೆಗಳ ಪ್ರಮಾಣ ಶೇ. 1.5ರಷ್ಟು ಹೆಚ್ಚಳ ದಾಖಲಿಸಿದೆ.

ಮಧ್ಯಪ್ರದೇಶ ಪ್ರಥಮ, ಕರ್ನಾಟಕ ದ್ವಿತೀಯ
ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು ಅಂದರೆ 3,907 (2018ರಲ್ಲಿ 3,421 ಇತ್ತು) ಚಿರತೆಗಳಿವೆ. 2ನೇ ಸ್ಥಾನದಲ್ಲಿ ಮಹಾರಾಷ್ಟ್ರದಲ್ಲಿ 1,985 ಚಿರತೆಗಳಿವೆ. 1,879 ಚಿರತೆಗಳನ್ನು ಹೊಂದಿರುವ ಕರ್ನಾಟಕ 3ನೇ ಸ್ಥಾನದಲ್ಲಿದೆ. 2018 ರಲ್ಲಿ ರಾಜ್ಯದಲ್ಲಿ 1,783 ಚಿರತೆಗಳಿದ್ದವು. ಇನ್ನು 1,070 ಚಿರ ತೆ ಗಳನ್ನು ಹೊಂದಿ ರುವ ತಮಿಳುನಾಡು 4ನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶದ ನಾಗಾ ರ್ಜುನ ಸಾಗರ ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿರತೆಗಳ ಸಾಂದ್ರತೆ ಅತೀ ಹೆಚ್ಚಿದ್ದರೆ ಆ ಬಳಿಕ ಮಧ್ಯಪ್ರದೇಶದ ಪನ್ನಾ ಮತ್ತು ಸಾತು³ರ ಮೀಸಲು ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆಗಳು ಕಂಡುಬಂದಿವೆ.

Advertisement

ಶೇ.30ರಷ್ಟು ಪ್ರದೇಶ ಸಮೀಕ್ಷೆಯಿಂದ ಹೊರಕ್ಕೆ
ಚಿರತೆಗಳ ಆವಾಸಸ್ಥಾನಗಳಾಗಿರದ ಶೇ. 30ರಷ್ಟು ಅರಣ್ಯೇತರ ಪ್ರದೇಶಗಳು, ಶುಷ್ಕ ಪ್ರದೇಶಗಳು ಮತ್ತು ಹಿಮಾಲಯದಲ್ಲಿನ ಎತ್ತರದ ಪರ್ವತ ಪ್ರದೇಶಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿಲ್ಲ. ಆದರೆ ಈ ಪ್ರದೇಶಗಳಲ್ಲಿ ರುವ ಚಿರತೆಗಳ ಸಂರಕ್ಷಣೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಅಷ್ಟು ಮಾತ್ರವಲ್ಲದೆ ಚಿರತೆಗಳ ಸಂರಕ್ಷಣೆಗಾಗಿ ದೇಶದೆಲ್ಲೆಡೆ ದೀರ್ಘಾವಧಿಯ ಕಾರ್ಯ ಯೋಜನೆ ಜಾರಿಗೆ ತರುವ ಆವಶ್ಯಕತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೆಚ್ಚುತ್ತಿದೆ ಮಾನವ-ವನ್ಯಜೀವಿ ಸಂಘರ್ಷ
ಅಭಯಾರಣ್ಯಗಳು ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳ ಹೊರಗೆ ಇರುವ ಚಿರತೆಗಳ ಆವಾಸಸ್ಥಾನಗಳಲ್ಲಿ ಮಾನವ ಮತ್ತು ಚಿರತೆಗಳ ನಡುವೆ ಸಂಘರ್ಷ, ಚಿರತೆಗಳ ಬೇಟೆಯಾಡುವಿಕೆ ಹೆಚ್ಚಿರುವ ಬಗೆಗೆ ವರದಿಯಲ್ಲಿ ಬೆಟ್ಟು ಮಾಡಲಾಗಿದೆ. ಚಿರತೆಗಳ ಸಂರಕ್ಷಣೆಯಲ್ಲಿ ಸರಕಾರಿ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆ ಗಳು ಮತ್ತು ಸ್ಥಳೀಯ ಸಮುದಾಯ ಗಳು ಪರಸ್ಪರ ಸಹಭಾಗಿತ್ವದೊಂದಿಗೆ ಕಾರ್ಯಾಚರಿಸುವ ಅಗತ್ಯವಿದೆ ಎಂದು ಹೇಳಿದೆ.

ಶಿವಾಲಿಕ್‌ ಬೆಟ್ಟದಲ್ಲಿ 2018ರಲ್ಲಿ 8,071 ಚಿರತೆಗಳಿದ್ದವು. 2022ರಲ್ಲಿ ಈ ಸಂಖ್ಯೆ ಏರಿಕೆಯಾಗಿ 8,820ಕ್ಕೆ ತಲುಪಿದೆ. ಆದರೆ ಸಿಂಧೂ ಗಂಗಾ ಬಯಲು ಪ್ರದೇಶದಲ್ಲಿ ಚಿರತೆಗಳ ಸಂಖ್ಯೆ ತುಸು ತಗ್ಗಿದೆ. ಇಲ್ಲಿ 2018ರಲ್ಲಿ 1,253 ಚಿರತೆಗಳಿದ್ದವು. ಆದರೆ 2022ರ ವೇಳೆಗೆ ಅವುಗಳ ಸಂಖ್ಯೆ 1,109ಕ್ಕೆ ಇಳಿಕೆ ಯಾಗಿದೆ. ಒಟ್ಟಾರೆ 2018-22 ಅವಧಿಯಲ್ಲಿ ದೇಶದಲ್ಲಿ ಚಿರತೆಗಳ ಸಂಖ್ಯೆ ವಾರ್ಷಿಕ ಶೇ.1.08ರಷ್ಟು ಏರಿಕೆ ಯಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next