Advertisement
ಹೀಗೆ ಸರೋವರಗಳ ನಗರ, ಸುಂದರ ಪರಿಸರವನ್ನು ಹೊಂದಿರುವ ಪಟ್ಟಣ, ನವಾಬರ ರಾಜಧಾನಿ, ಪ್ರಮುಖ ಶಿಕ್ಷಣ ಕೇಂದ್ರ ಹೀಗೆ ಹಲವಾರು ಹೆಗ್ಗಳಿಕೆಗಳನ್ನು ಪಡೆದಿರುವ ಈ ನಗರಕ್ಕೊಂದು ಆ ದುರಂತ ಕಪ್ಪು ಚುಕ್ಕೆಯಾಗಿಬಿಟ್ಟಿತ್ತು! ಮತ್ತು 36 ವರ್ಷಗಳ ಬಳಿಕವೂ ಈ ದುರಂತದ ಕಹಿ ನೆನಪು ಮಾನವ ಜನಾಂಗವನ್ನು ಕಾಡುತ್ತಲೇ ಇದೆ.. ಅದುವೇ ದೇಶದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಕೈಗಾರಿಕಾ ದುರಂತವೆಂಬ ಕುಖ್ಯಾತಿಗೆ ಪಾತ್ರವಾಗಿರುವ, 1984ರಲ್ಲಿ ಸಂಭವಿಸಿದ ‘ಭೋಪಾಲ್ ವಿಷಾನಿಲ ದುರಂತ’!
Related Articles
Advertisement
ವಿಷಾನಿಲ ಸೇವಿಸಿ 3,787 ಸಾವುಗಳು ಸಂಭವಿಸಿದೆ ಎಂದು ಅಂದಿನ ಮಧ್ಯಪ್ರದೇಶ ಸರಕಾರ ಘೋಷಿಸಿತ್ತು. ಹೀಗೆ ಭೋಪಾಲ್ ಅನಿಲ ದುರಂತದಲ್ಲಿ ಅಸುನೀಗಿದವರ ಕುರಿತಾಗಿ ಇಂದಿಗೂ ಗೊಂದಲದ ಮಾಹಿತಿಗಳೇ ಇರುವುದು ನಮ್ಮ ವ್ಯವಸ್ಥೆಯಲ್ಲಿ ಲೋಪಕ್ಕೆ ಹಿಡಿದ ಕನ್ನಡಿಯಾಗಿದೆ.
ಈ ವಿಷಾನಿಲ ದುರಂತದಲ್ಲಿ 558,125 ಜನರು ಗಾಯಗೊಂಡರೆ (ನ್ಯೂನತೆಗೆ ಒಳಗಾಗುವುದು) ಇವರಲ್ಲಿ 38,478 ಜನರು ಅಲ್ಪಕಾಲೀನ ಅಸೌಖ್ಯ ಹಾಗೂ ನ್ಯೂನತೆಗಳಿಗೆ ಒಳಗಾದವರು ಮತ್ತು ಸರಿಸುಮಾರು 3,900 ಜನ ಶಾಶ್ವತ ದೈಹಿಕ ನ್ಯೂನತೆಗಳಿಗೆ ಒಳಗಾಗಿದ್ದಾರೆ ಎಂದು 2006ರಲ್ಲಿ ಮಧ್ಯಪ್ರದೇಶ ಸರಕಾರ ಈ ಘಟನೆಯನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿದವಿತ್ ನಲ್ಲಿ ತಿಳಿಸಿದೆ.
ಭೋಪಾಲ್ ನಗರದ ಜನತೆಗೆ ಈ ಕಂಪೆನಿ ಏನೂ ಹೊಸದಾಗಿರಲಿಲ್ಲ, 1969ರಿಂದಲೂ UCIL ಇಲ್ಲಿ ತನ್ನ ಕಾರ್ಯಾಚರಣೆಯನ್ನು ಮಾಡುತ್ತಿತ್ತು. ಈ ಕಂಪೆನಿಯ ಸರಿಸುಮಾರು ಅರ್ಧದಷ್ಟು ಪಾಲನ್ನು ಅಮೆರಿಕಾ ಮೂಲದ ಉದ್ಯಮಿ ವಾರೆನ್ ಅಂಡೆರ್ಸನ್ ಒಡೆತನದ ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ (UCC) ಒಡೆತನದಲ್ಲಿತ್ತು.ಏನಾಗಿತ್ತು ಅಂದು?
ಈ UICIL ಘಟಕದಲ್ಲಿದ್ದ ಟ್ಯಾಂಕ್ ನಂಬರ್ 610 ಸ್ವಚ್ಛಗೊಳೊಸುತ್ತಿದ್ದ ಸಂದರ್ಭದಲ್ಲಿ ಸೈಡ್ ಪೈಪ್ ಒಂದರ ಮುಖಾಂತರ ಈ ಟ್ಯಾಂಕ್ ಗೊಳಗೆ ನೀರು ಸೇರಿಕೊಂಡಿರುವುದು ದುರಂತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಈ ಘಟನೆ ನಡೆದಿದ್ದು 1984ರ ಡಿಸೆಂಬರ್ 2ರ ಸಾಯಂಕಾಲದ ಸಮಯದಲ್ಲಿ. ಈ ಟ್ಯಾಂಕಿನ ಹೊಟ್ಟೆಯೊಳಗಡೆ ಬರೋಬ್ಬರಿ 42 ಟನ್ ಗಳಷ್ಟು ಮಿಥೇಲ್ ಐಸೋ ಸೈನೇಟ್ ರಾಸಾಯನಿಕ ತುಂಬಿಕೊಂಡಿತ್ತು. ಹೀಗೆ ತನ್ನ ಒಡಲಲ್ಲಿ ತುಂಬಿಕೊಂಡಿದ್ದ ಬರೋಬ್ಬರಿ 42 ಟನ್ ಕೆಮಿಕಲ್ ಹೊರಗಿನಿಂದ ಬಂದ ನೀರಿನ ಸಂಪರ್ಕಕ್ಕೆ ಬಂದ ಸಂದರ್ಭದಲ್ಲಿ ಗ್ಯಾಸ್ ಕೊಳವೆಯಲ್ಲಿ ಎಕ್ಸೋಥರ್ಮಿಕ್ ರಿಯಾಕ್ಷನ್ (ಬೆಳಕು ಅಥವಾ ಬಿಸಿಯ ಮೂಲಕ ರಾಸಾಯನಿಕ ಶಕ್ತಿಯೊಂದು ಹೊರಹೊಮ್ಮುವ ಪ್ರಕ್ರಿಯೆ) ಸಂಭವಿಸಿ ರಾತ್ರಿ 10.30ರ ಸುಮಾರಿಗೆ 2ಪಿ.ಎಸ್.ಐ. ಇದ್ದ ಟ್ಯಾಂಕ್ ನಂಬರ್ ಇ610ನ ಒತ್ತಡವು ಕೇವಲ ಅರ್ಧಗಂಟೆಯಲ್ಲಿ 10 ಪಿ.ಎಸ್.ಐ. ಗೆ ಏರಿಕೆಯಾಗಿಬಿಟ್ಟಿತ್ತು. ತಕ್ಷಣವೇ ರಾತ್ರಿಪಾಳಿಯ ಕರ್ತವ್ಯದಲ್ಲಿದ್ದ ಇಬ್ಬರು ಹಿರಿಯ ಉದ್ಯೋಗಿಗಳಿಗೆ ಅಪಾಯದ ವಾಸನೆ ಅದಾಗಲೇ ಬಡಿದುಬಿಟ್ಟಿತ್ತು. ಮಾತ್ರವಲ್ಲದೇ ರಾತ್ರಿ 11.45ರ ಸುಮಾರಿಗೆ ಪ್ಲಾಂಟ್ ನಲ್ಲಿ ಕರ್ತವ್ಯದಲ್ಲಿದ್ದ ಕೆಲಸಗಾರರಿಗೆ ಮಿಥೇಲ್ ಐಸೋ ಸೈನೇಟ್ ಗ್ಯಾಸ್ ಸೋರಿಕೆಯ ಸಣ್ಣ ಸೂಚನೆಗಳೂ ಅನುಭವಕ್ಕೆ ಬರಲಾರಂಭಿಸಿದ್ದವು. ಆದರೆ ಈ ವಿಚಾರವನ್ನು ಪ್ಲ್ಯಾಂಟ್ ಮೇಲ್ವಿಚಾರಕರ ಗಮನಕ್ಕೆ ತಂದಾಗ 12.15ರ ಚಹಾ ವಿರಾಮದ ನಂತರ ಈ ಸಮಸ್ಯೆಯನ್ನು ಪತ್ತೆ ಮಾಡಿ ಸರಿಪಡಿಸುವ ನಿರ್ಧಾರಕ್ಕೆ ಬರಲಾಯಿತು ಮತ್ತು ಅಲ್ಲಿಯವರಗೆ ಸೋರಿಕೆಯ ಮೇಲೆ ನಿಗಾ ಇಡುವಂತೆಯೂ ಉದ್ಯೋಗಿಗಳಿಗೆ ಸೂಚಿಸಲಾಯಿತು. ಆದರೆ ಇದೊಂದು ವಿಶ್ವದ ಕೆಟ್ಟ ಕೈಗಾರಿಕಾ ದುರಂತಕ್ಕೆ ಮುನ್ನುಡಿಯಾಗಲಿದೆ ಎಂಬ ಕಲ್ಪನೆ ಅಲ್ಲಿದ್ದ ಯಾರೊಬ್ಬರಿಗೂ ಇರಲಿಲ್ಲ! ಆದರೆ ಅದಾಗಲೇ ಇ610 ಟ್ಯಾಂಕಿನೊಳಗಿನ ಪರಿಸ್ಥಿತಿ ಬೆಂಕಿಯುಂಡೆಯಂತಾಗಿತ್ತು. ಮಧ್ಯರಾತ್ರಿ 12.40ರ ಸುಮಾರಿಗೆ ಅಪಾಯದ ಎಚ್ಚರಿಕೆ ಗಂಟೆ ಮೊಳಗುವಷ್ಟರಮಟ್ಟಿಗೆ ಟ್ಯಾಂಕಿನ ಸ್ಥಿತಿ ಗಂಭೀರ ಸ್ವರೂಪಕ್ಕೆ ಮುಟ್ಟಿಯಾಗಿತ್ತು. ಟ್ಯಾಂಕಿನ ಉಷ್ಣತೆಯ ಮಟ್ಟ 25 ಡಿಗ್ರಿ ಸೆಲ್ಷಿಯಸ್ ಮೀರಿ ಹೋಗಿತ್ತು ಹಾಗೂ ಟ್ಯಾಂಕಿನೊಳಗಿನ ಒತ್ತಡ 40 ಪಿಎಸ್.ಐ. ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿ ಹೋಗಿತ್ತು. ಇದ ಸಂದರ್ಭದಲ್ಲಿ ಈ ಟ್ಯಾಂಕಿನ ಮೇಲಿದ್ದ ಕಾಂಕ್ರೀಟ್ ಸ್ಲ್ಯಾಬ್ ನಲ್ಲಿ ಬಿರುಕು ಮೂಡುತ್ತಿರುವುದನ್ನು ಉದ್ಯೋಗಿಯೊಬ್ಬ ಆತಂಕದ ಕಣ್ಣುಗಳಿಂದಲೇ ಗಮನಿಸಿದ್ದ ಇದು ತುರ್ತು ಕೊಳವೆ ಮುಚ್ಚಳ ಕಳಚಿಕೊಳ್ಳುವುದರ ಆರಂಭದ ಮುನ್ಸೂಚನೆಯೂ ಆಗಿತ್ತು! ಇನ್ನೊಂದು ಕಡೆಯಲ್ಲಿ ಯಮಸ್ವರೂಪಿ ಟ್ಯಾಂಕಿನೊಳಗಿನ ಒತ್ತಡ 55 ಪಿ.ಎಸ್.ಐ. ಮಟ್ಟಕ್ಕೆ ಏರಿಕೆಯಾಗುತ್ತಲೇ ಇತ್ತು. ಕೇವಲ 2 ಗಂಟೆಗಳ ಹಿಂದೆ 2 ಪಿ.ಎಸ್.ಐ. ಮಟ್ಟದಲ್ಲಿದ್ದ ಟ್ಯಾಂಕಿನ ಗರ್ಭದ ಒತ್ತಡ ಇದೀಗ ಬರೋಬ್ಬರಿ 53 ಅಂಕಗಳನ್ನು ಹೆಚ್ಚಿಸಿಕೊಂಡಿದ್ದು ಮಹಾ ದುರಂತ ಫಿಕ್ಸ್ ಆಗಲು ಕ್ಷಣಗಣನೆ ಪ್ರಾರಂಭವಾಗಿತ್ತು. ಆದರೆ ಇದಕ್ಕಿಂತಲೂ ದುರಂತವೆಂದರೆ UCIL ಘಟಕದಲ್ಲಿದ್ದ ಆ ಮೂರು ಸುರಕ್ಷಾ ಸಾಧನಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದ್ದಿದ್ದರೆ ಈ ಮಹಾ ದುರಂತದ ಪರಿಣಾಮವನ್ನು ಸ್ವಲ್ಪಮಟ್ಟಿಗಾದರೂ ತಪ್ಪಿಸಬಹುದಿತ್ತು ಎಂಬ ಅಂಶ ಈ ದುರಂತದ ಬಳಿಕ ನಡೆದ ತನಿಖೆಯಲ್ಲಿ ಬಯಲಾಗಿತ್ತು. ದ್ರವರೂಪದ ಮಿಥೇಲ್ ಐಸೋಸೈನೇಟ್ ನ್ನು ತಂಪುಗೊಳಿಸುವ ವ್ಯವಸ್ಥೆಯು 1982ರಲ್ಲೇ ತನ್ನ ಕಾರ್ಯವನ್ನು ನಿಲ್ಲಿಸಿಬಿಟ್ಟಿತ್ತು. ಒಂದುವೇಳೆ ಈ ವ್ಯವಸ್ಥೆ ಕಾರ್ಯಾಚರಿಸುವಂತಿದ್ದರೆ ಟ್ಯಾಂಕ್ ನ ಒತ್ತಡ 11 ಡಿಗ್ರಿ ಸೆಲ್ಷಿಯಸ್ ಮುಟ್ಟಿದಾಗಲೇ ಅದನ್ನು ತಂಪುಗೊಳಿಸುವ ಕಾರ್ಯವನ್ನು ಇದು ಪ್ರಾರಂಬಿಸಿರುತ್ತಿತ್ತು. ಇನ್ನು, ಒಂದುವೇಳೆ ಆಕಸ್ಮಿಕವಾಗಿ ಈ ಮಿಥೇಲ್ ಐಸೋಸೈನೇಟ್ ಅನಿಲ ಹೊರಸೂಸಲ್ಪಟ್ಟಲ್ಲಿ ಅದನ್ನು ಉರಿಸಿಬಿಡುವ ಸಾಮರ್ಥ್ಯವನ್ನು ಹೊಂದಿದ್ದ ‘ಪ್ಲೇರ್ ಟವರ್’ನ ಸಂಪರ್ಕ ಕೊಳವೆಯನ್ನು ನಿರ್ವಣೆಗಾಗಿ (ಮೆಯ್ಟೆನೆನ್ಸ್) ಕಳಚಿಡಲಾಗಿತ್ತು! ಅನಿಲ ಹೊರಸೂಸುವಿಕೆಯ ಅಪಾಯದ ಸಂದರ್ಭದಲ್ಲಿ ಸುರಕ್ಷತಾ ಸಾಧನವಾಗಿ ಕಾರ್ಯನಿರ್ವಹಿಸಬೇಕಾಗಿದ್ದ ವೆಂಟ್ ಗ್ಯಾಸ್ ಸ್ಕ್ರಬ್ಬರ್ ಸಾಧನ ಆ ದಿನ ಕಾರ್ಯನಿರ್ವಹಿಸದ ಸ್ಥಿತಿಯಲ್ಲಿತ್ತು. ಇಷ್ಟೆಲ್ಲಾ ಆಗುವಷ್ಟರಲ್ಲಿ ಎಲ್ಲವೂ ಕೈಜಾರಿತ್ತು ಮತ್ತು ಸರಿಸುಮಾರು 30 ಟನ್ ಗಳಷ್ಟು ಮಿಥೇಲ್ ಐಸೋಸೈನೇಟ್ ಅನಿಲ ಇ610 ಟ್ಯಾಂಕಿನ ಭದ್ರ ಗರ್ಭವನ್ನು ಬೇಧಿಸಿ ಕೇವಲ 45 ರಿಂದ 60 ನಿಮಿಷಗಳ ಒಳಗೆ ಭೋಪಾಲ್ ಪಟ್ಟಣದ ಸ್ವಚ್ಛ ಪರಿಸರಕ್ಕೆ ಹರಡಿಕೊಂಡು ಬಿಟ್ಟಿತ್ತು. ಘೋರ ಅಪಾಯದ ಮುನ್ಸೂಚನೆಯನ್ನು ಅರಿತ ಪ್ಲ್ಯಾಂಟ್ ಉದ್ಯೋಗಿಯೊಬ್ಬ ಅದಾಗಲೇ ಎರಡು ಅಲರಾಂಗಳನ್ನು ಮೊಳಗಿಸಿಬಿಟ್ಟಿದ್ದ. ಒಂದು ಕಂಪೆನಿಯೊಳಗ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಎಚ್ಚರಿಕೆ ಸೂಚನೆಯಾಗಿ ಹಾಗೂ ಇನ್ನೊಂದು ಭೋಪಾಲ್ ನಗರದ ನಿವಾಸಿಗಳಿಗೆ ಅಪಾಯದ ಮುನ್ಸೂಚನೆಯನ್ನು ಮೊಳಗಿಸುವ ಸಲುವಾಗಿ! ಇಷ್ಟುಹೊತ್ತಿಗಾಗಲೇ ಈ ಪ್ಲ್ಯಾಂಟ್ ನ ಸಮೀಪದಲ್ಲೇ ಇದ್ದ ಖೋಲಾ ಎಂಬ ಪ್ರದೇಶದ ಜನರಿಗೆ ಮಧ್ಯರಾತ್ರಿ 1 ಗಂಟೆಯಷ್ಟೊತ್ತಿಗಾಗಲೇ ಗ್ಯಾಸ್ ಸೋರಿಕೆಯ ಸಣ್ಣ ವಾಸನೆ ಬರಲಾರಂಭಿಸಿತ್ತು. UCIL, ಭೋಪಾಲ್ ಪೊಲೀಸ್ ಮತ್ತು ಭೋಪಾಲ್ ಸ್ಥಳೀಯಾಡಳಿತ ಈ ಸಂದರ್ಭದಲ್ಲಿ ಎಷ್ಟು ಬೇಜವಾಬ್ದಾರಿಯುತವಾಗಿ ವರ್ತಿಸಿದವೆಂದರೆ, ಇಷ್ಟೆಲ್ಲಾ ಆದುದರ ಸ್ಪಷ್ಟ ಚಿತ್ರಣ ತನ್ನ ಗಮನಕ್ಕೆ ಬಂದಿದ್ದರೂ ಕಂಪೆನಿ 1.25 ರಿಂದ 2.10 ಗಂಟೆಗಳ ನಡುವೆ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ‘ಎವರಿಥಿಂಗ್ ಇಸ್ ಓಕೆ’ ಎಂದು ಹೇಳಿಕೊಂಡಿತ್ತು ಬಳಿಕ ತನ್ನ ಪ್ಲೇಟ್ ಬದಲಾಯಿಸಿ ‘ಏನಾಯಿತು ಎಂದು ನಮಗೆ ಗೊತ್ತಿಲ್ಲ ಸರ್’ ಎಂದು UCIL ಕೈ ಎತ್ತಿಬಿಟ್ಟಿತ್ತು! ಇನ್ನು UCIL ಹಾಗೂ ಸ್ಥಳೀಯಾಡಳಿತಗಳ ನಡುವೆ ಸಮಂಜಸ ಹೊಂದಾಣಿಕೆಯ ಕೊರತೆಯಿಂದ ಸೋರಿಕೆಯಾಗಿರುವ ರಾಸಾಯನಿಕ ಅನಿಲವಾದರೂ ಯಾವುದು ಎಂಬ ಮಾಹಿತಿ ಸರಿಯಾಗಿ ಲಭಿಸಿರಲೇ ಇಲ್ಲ. ಇದರಿಂದಾಗಿ ಇನ್ನು ಕೆಲವೇ ಹೊತ್ತಿನಲ್ಲಿ ನಗರದಲ್ಲಿರುವ ಹಮೀದಿಯಾ ಆಸ್ಪತ್ರೆಯಲ್ಲಿ ಬಂದು ಸೇರಬಹುದಾಗಿದ್ದ ಸಂತ್ರಸ್ತರಿಗೆ ಸೂಕ್ತ ಚಿಕಿತ್ಸೆಗೂ ವ್ಯವಸ್ಥೆ ಮಾಡಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಪ್ರಾರಂಭದಲ್ಲಿ ಅಮೋನಿಯಾ ಸೋರಿಕೆಯಾಗಿದೆ ಎಂದು ಶಂಕಿಸಲಾಗಿದ್ದರೆ ಬಳಿಕ ಫಾಸ್ಜೇನ್ ಎಂದು ಶಂಕಿಸಲಾಯಿತು. ಆದರೆ ಅಲ್ಲಿ ನಿಜವಾಗಿಯೂ ಗಾಳಿಯ ಒಡಲು ಸೇರಿದ್ದಿದ್ದು ಇವೆರಡಕ್ಕಿಂತ ಹತ್ತುಪಟ್ಟು ಅಪಾಯಕಾರಿಯಾಗಿದ್ದ ಮಿಥೇಲ್ ಐಸೋಸೈನೇಟ್!