Advertisement

ವಿಸರ್ಜನೆಗೆ ಅಯ್ಯ ಪಂತರ ಕಲ್ಯಾಣಿಯಲ್ಲಿ ವಿಶೇಷ ವ್ಯವಸ್ಥೆ

01:13 PM Aug 24, 2017 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗಾಗಿ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ನಗರದಲ್ಲಿ, ನಾಗರಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡಲು ಅನುಮತಿ ನೀಡಿಲ್ಲ. ದೊಡ್ಡಬಳ್ಳಾಪುರ ನಗರಸಭೆ ಸಾಮೂಹಿಕ ವಿಸರ್ಜನೆಗಾಗಿ ಗಗನಾರ್ಯ ಮಠದ ಸಮೀಪವಿರುವ ಕಲ್ಯಾಣಿಯಲ್ಲಿ ವಿಶೇಷ ವ್ಯವಸ್ಥೆ ಮಾಡಿದೆ. ಗಣೇಶ ವಿಸರ್ಜನೆ ಅವಘಡಗಳು: ಪೊಲೀಸ್‌ ಇಲಾಖೆ ನಿಗದಿ ಪಡಿಸಿದ ಸ್ಥಳದಲ್ಲೇ ಗಣೇಶ ವಿಸರ್ಜನೆ ಮಾಡಬೇಕು ಎನ್ನುವ ಕಟ್ಟುನಿಟ್ಟಿನ ನಿಯಮವಿದ್ದರೂ 2015ರ ಗಣೇಶ ವಿರ್ಜನೆ ವೇಳೆ ನೀರಿನಲ್ಲಿ ಮುಳುಗಿ 6 ಜನ, 2014ರಲ್ಲಿ 5 ಜನ ವಿದ್ಯುತ್‌ ತಂತಿಗೆ ಸಿಕ್ಕಿ ಮೃತಪಟ್ಟಿದ್ದರು. ಅಲ್ಲದೇ ತಾಲೂಕಿನಲ್ಲಿ 2016ರ ಜುಲೈ ಅಂತ್ಯದವರೆಗೆ ಕೆರೆಗಳಲ್ಲಿನ ಗುಂಡಿಗಳಲ್ಲಿ ನಿಂತಿರುವ ನೀರಿಗೆ ಇಳಿದು 3 ಜನ ಮೃತಪಟ್ಟಿರುವ ಘಟನೆಗಳು ನಡೆದಿವೆ. ಎಚ್ಚರ ವಹಿಸಿ: ಇತ್ತೀಚೆಗೆ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಖಾಸಗಿ ಲೇಔಟ್‌ಗಳ ಕಾಮಗಾರಿ ಹೆಚ್ಚಾಗಿ ನಡೆಯುತ್ತಿರುವುದರಿಂದ ಯಾವುದೇ ಕೆರೆಗಳಲ್ಲಿ ನೋಡಿದರೂ ಬೃಹತ್‌ ಗುಂಡಿಗಳು ಬಿದ್ದಿವೆ. ಈ ಗುಂಡಿಗಳಲ್ಲಿ ಸಹಜವಾಗಿಯೇ ಹೂಳು ತುಂಬಿದ್ದು ಗುಂಡಿಗಳು ಕಡಿದಾಗಿವೆ. ಹೀಗಾಗಿ ಗುಂಡಿಗಳಿಗೆ ಗಣೇಶನ ಮೂರ್ತಿ ವಿಸರ್ಜಿಸಲು, ದನಕರುಗಳಿಗೆ ಮೈ ತೊಳೆಯಲು ಹಾಗೂ ಬಟ್ಟೆ ತೊಳೆಯಲು ಇಳಿದವರು ಮತ್ತೆ ಮೇಲೆದ್ದು ಬದುಕಿ ಉಳಿದು ಬಂದವರ ಸಂಖ್ಯೆ ತೀರ ಕಡಿಮೆಯಾಗಿದೆ. ಹೀಗಾಗಿ ನೀರಿಗೆ ಗಣೇಶ ವಿಸರ್ಜನ ವೇಳೆ ಯುವಕರು ಕೆರೆ, ಕುಂಟೆಗಳ ಕಡೆಗೆ ಹೋಗದಂತೆ ಪೋಷಕರು ಎಚ್ಚರ ವಹಿಸಬೇಕು. ಪೊಲೀಸ್‌ ಇಲಾಖೆ ಅಥವಾ ಸ್ಥಳೀಯ ಸಂಸ್ಥೆಗಳು ನಿಗದಿ ಪಡಿಸಿದ ಸ್ಥಳದಲ್ಲೇ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಯಾಣಿ ಜೀರ್ಣೋದ್ಧಾರ: ಕಳೆದ 9 ವರ್ಷಗಳಿಂದ ದೊಡ್ಡಬಳ್ಳಾಪುರ ನಗರಸಭೆ ಮತ್ತು ಪರಿಸರಾಸಕ್ತರ ವಿಶೇಷ ಆಸಕ್ತಿಯಿಂದಾಗಿ ಗಣೇಶ
ವಿಸರ್ಜನೆಗಾಗಿಯೇ ಪಾಳು ಬಿದ್ದು ಹೋಗಿದ್ದ ಕಲ್ಯಾಣಿಯೊಂದು ಜೀರ್ಣೋ ದ್ಧಾರಗೊಂಡಿದೆ. ನಗರದ ಡಿ.ಕ್ರಾಸ್‌ ರಸ್ತೆ ಸಮೀಪವಿರುವ ಗಗನಾರ್ಯ ಮಠದ ಅಯ್ಯ ಪಂತರ ಬಾವಿ ಕಲ್ಯಾಣಿ ಜೀರ್ಣೋದ್ಧಾರಗೊಂಡು ಗಣೇಶ ವಿಸರ್ಜನೆ ಮಾಡುವರಿಗಷ್ಟೇ ಅಲ್ಲದೇ ನಗರದ ಸಾರ್ವಜನಿಕರ ಗಮನ ಸೆಳೆದಿದೆ. ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974 ಕಲಂ33(ಎ) ಪ್ರಕಾರ ಕೆರೆ, ಕಾಲುವೆ/ಬಾವಿಗಳು ಮತ್ತು ಇತರೆ ಜಲ ಮೂಲಗಳಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರೀಸ್‌ ಮತ್ತು ಬಣ್ಣ ಲೇಪಿತ ವಿಗ್ರಹಗಳ ವಿಸರ್ಜನೆ ನಿಷೇಧಿಸಲಾಗಿದೆ. ಸಾರ್ವಜನಿಕರು ತಮ್ಮ ಗಣೇಶ ಮೂರ್ತಿಯನ್ನು ಕಡ್ಡಾ ಯವಾಗಿ ಈ ಕಲ್ಯಾಣಿಯಲ್ಲಿಯೇ ವಿಸರ್ಜನೆ ಮಾಡಬೇಕು. ಈ ಕಲ್ಯಾಣಿ ಬಳಿ ನಗರಸಭೆ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ಹಾಜರಿದ್ದು, ಗಣೇಶ ಮೂರ್ತಿ ವಿಸರ್ಜನೆ ಮಾಡಲು ಸಹಕರಿಸಲಿದ್ದಾರೆ. ವಿಸರ್ಜನೆಯನ್ನು ರಾತ್ರಿ 8.30 ರವರೆಗೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪರಿಸರ ಸ್ನೇಹಿ ಹಬ್ಬ ಆಚರಿಸಿ: ನಗರಸಭೆ ವ್ಯವಸ್ಥೆ ಮಾಡಿರುವ ನಿಗದಿತ ಸ್ಥಳದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು. ವಿಸರ್ಜನೆ ವೇಳೆ ಹೂವು, ಬಾಳೆಕಂದು ಮೊದಲಾದ ಅನುಪಯುಕ್ತ ವಸ್ತುಗಳನ್ನು ಬೇರ್ಪ ಡಿಸಬೇಕು. ಯಾವುದೇ ರೀತಿಯಲ್ಲಿ ಪ್ಲಾಸ್ಟಿಕ್‌ ಬಳಕೆ ಬೇಡ. ಕೆರೆ ಕುಂಟೆ ಕಲ್ಯಾಣಿಗಳನ್ನು ಪರಿಸರ ಸ್ನೇಹಿಯಾಗಿ ಬಳಸಿ ಗಣೇಶ ಹಬ್ಬ ಆಚರಿಸಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಬಿ.ಮುದ್ದಪ್ಪ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next