ಬೆಂಗಳೂರು: ರಾಜ್ಯ ಸರ್ಕಾರದ ನಾನಾ ಇಲಾಖೆಗಳ ವಿವಿಧ ವೃಂದ, ಹುದ್ದೆಗಳಿಗೆ ಲಭ್ಯವಿದ್ದ ವಿಶೇಷ ಭತ್ಯೆಯನ್ನು ಪರಿಷ್ಕರಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದ್ದು, ಪರಿಷ್ಕೃತ ವಿಶೇಷ ಭತ್ಯೆಗಳು 2019ರ ಜನವರಿ 1ರಿಂದಲೇ ಅನ್ವಯವಾಗಲಿವೆ.
ಆರನೇ ವೇತನ ಆಯೋಗವು ರಾಜಭವನ, ಮುಖ್ಯಮಂತ್ರಿಗಳ ಕಚೇರಿಯಲ್ಲಿನ ಭದ್ರತಾ ಅಧಿಕಾರಿ (ಐಪಿಎಸ್ ಶ್ರೇಣಿಯಲ್ಲದ ಪೊಲೀಸ್ ಅಧೀಕ್ಷಕ), ಪೊಲೀಸ್ ಇಲಾಖೆ ವಿಶೇಷ ವಿಭಾಗಗಳು, ಅರಣ್ಯ ಇಲಾಖೆ, ಮುಖ್ಯಮಂತ್ರಿ ಹಾಗೂ ಸಚಿವರ ಆಪ್ತ ಶಾಖೆಯಲ್ಲಿನ ಕೆಲ ಹುದ್ದೆ ಸೇರಿ ಇತರೆ ಹುದ್ದೆಗಳಿಗೆ ವಿಶೇಷ ಕರ್ತವ್ಯದ ಸ್ವರೂಪ, ಹೆಚ್ಚಿನ ಜವಾಬ್ದಾರಿ, ಹೆಚ್ಚಿನ ಕಾರ್ಯ ನಿರ್ವಹಣಾವಧಿ, ವಿಶೇಷ ಅತಿಥಿಗಳ ಶಿಷ್ಟಾಚಾರ ಕಾರ್ಯ ನಿರ್ವಹಣೆ ಇತರೆ ಅಂಶ ಪರಿಗಣಿಸಿ ಈ ಹುದ್ದೆಗಳಿಗೆ ಹೆಚ್ಚಿನ ದರದಲ್ಲಿ ವಿಶೇಷ ಭತ್ಯೆ ನೀಡುವಂತೆ ಶಿಫಾರಸು ಮಾಡಿತ್ತು. ಅದರಂತೆ ಸರ್ಕಾರ ವಿಶೇಷ ಭತ್ಯೆ ಪರಿಷ್ಕರಿಸಿ ಆದೇಶ ಹೊರಡಿಸಿದೆ.
ಶೀಘ್ರ ಲಿಪಿಗಾರರು, ಹಿರಿಯ ಶೀಘ್ರ ಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರು,ಬೆರಳಚ್ಚುಗಾರರು, ಹಿರಿಯ ಬೆರಳಚ್ಚುಗಾರರನ್ನು ಹೊರತುಪಡಿಸಿ ಬೇರೆ ಯಾವುದೇ ಸರ್ಕಾರಿ ನೌಕರರು ಒಂದಕ್ಕಿಂತ ಹೆಚ್ಚಿನ ವಿಶೇಷ ಭತ್ಯೆಗೆ ಅರ್ಹರಾಗಿರುವುದಿಲ್ಲ.
ಸಚಿವರ ಹಾಗೂ ಸರ್ಕಾರದ ಕಾರ್ಯದರ್ಶಿಗಳ ವೈಯಕ್ತಿಕ ಶಾಖೆಗೆ ನಿಯೋಜಿಸಲಾಗಿರುವ ಶೀಘ್ರ ಲಿಪಿಗಾರರು, ಹಿರಿಯ ಶೀಘ್ರ ಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರು, ಬೆರಳಚ್ಚುಗಾರರು, ಹಿರಿಯ ಬೆರಳಚ್ಚುಗಾರರಿಗೆ ವೈಯಕ್ತಿಕ ಶಾಖೆಗೆ ಲಭ್ಯವಿರುವ ವಿಶೇಷ ಭತ್ಯೆಯ ಜತೆಗೆ ಅವರು ಹೊಂದಿರುವ ಹುದ್ದೆಗಳಿಗೆ ಲಭ್ಯವಿರುವ ವಿಶೇಷ ಭತ್ಯೆಯನ್ನೂ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮುಂಗಡ ಪ್ರಮಾಣ ಹೆಚ್ಚಳ: ರಾಜ್ಯ ಸಿವಿಲ್ ಸೇವಾ ವೃಂದದಲ್ಲಿ ಕಾಯಂ ಆಗಿ ಸೇರ್ಪಡೆಯಾಗಿರುವ ಐಎಎಸ್ ಅಧಿಕಾರಿಗಳು ಸೇರಿದಂತೆ ಒಬ್ಬ ಕಾಯಂ ಸರ್ಕಾರಿ ನೌಕರನಿಗೆ ಒಂದು ಆರ್ಥಿಕ ವರ್ಷದಲ್ಲಿ ಒಂದು ಬಾರಿಯಷ್ಟೇ ನೀಡಲಾಗುವ ಬಡ್ಡಿರಹಿತ ಹಬ್ಬದ ಮುಂಗಡದ ಪ್ರಮಾಣವನ್ನು 5000 ರೂ.ನಿಂದ 10,000 ರೂ.ಗೆ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.