Advertisement

ಅಪಘಾತದಿಂದ ಅಪಾಯದಲ್ಲಿದ್ದ ಹುಡುಗನ ‘ಅಮೋಘ’ಸಾಧನೆ

02:40 AM Jun 08, 2018 | Karthik A |

ಮಹಾನಗರ : ಮೂರು ವರ್ಷದ ಹಿಂದೆ ಆದ ಅಪಘಾತದಿಂದ ಹುಡುಗ ಇನ್ನಿಲ್ಲ ಎಂದು ವೈದ್ಯರೇ ಹೇಳಿದ್ದರು. ಆ ಹುಡುಗ ಈಗ ಎಸೆಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ!

Advertisement


ಶಾರದಾ ವಿದ್ಯಾಲಯದ ವಿದ್ಯಾರ್ಥಿ ಅಮೋಘ ಎಸೆಸೆಲ್ಸಿ ಪರೀಕ್ಷೆಯಲ್ಲಿ 461 ಅಂಕ ಪಡೆದು ಪಾಸಾಗಿದ್ದಾನೆ. ನಗರದ ಲಾಲ್‌ಬಾಗ್‌ ಬಳಿಯ ಹ್ಯಾಟ್‌ ಹಿಲ್‌ ನಿವಾಸಿ, ಅಬ್ಬೊàಟ್‌ ಇಂಡಿಯಾ ಸಂಸ್ಥೆಯಲ್ಲಿ ಸೀನಿಯರ್‌ ಮ್ಯಾನೇಜರ್‌ ಆಗಿರುವ ಬಾಲಕೃಷ್ಣ ಶೆಟ್ಟಿ (9448409089) ಮತ್ತು ಗೃಹಿಣಿ ಅರುಣಾ ಬಿ. ಶೆಟ್ಟಿ ದಂಪತಿಯ ಪುತ್ರ ಅಮೋಘ ಎಲ್ಲ ಮಕ್ಕಳಂತೆ ಶಾಲೆಗೆ ಹೋಗುತ್ತಿದ್ದ. ಆದರೆ ಎಂಟನೇ ತರಗತಿಯಲ್ಲಿದ್ದಾಗ ಅವನ ಬದುಕಿನಲ್ಲಿ ಇನ್ನೆಂದೂ ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಘಟನೆ ನಡೆದು ಹೋಯಿತು. ಅಮೋಘ ಕೋಚಿಂಗ್‌ ಕ್ಲಾಸಿಗೆಂದು ಸೈಕಲ್‌ ನಲ್ಲಿ ತೆರಳುತ್ತಿರಬೇಕಾದರೆ ಅತಿವೇಗದಲ್ಲಿದ್ದ ಬಸ್‌ ಒಂದು ಅವನ ಎಡಭಾಗಕ್ಕೆ ಉಜ್ಜಿಗೊಂಡು ಸಾಗಿತು. ಆ ಆಘಾತದಿಂದ ಅಮೋಘ ಸೈಕಲ್‌ ಸಹಿತ ಕೆಳಕ್ಕೆ ಬಿದ್ದ. ತತ್‌ಕ್ಷಣವೇ ಹುಡುಗನನ್ನು ಆಸ್ಪತ್ರೆಗೆ ಸಾಗಿಸಿದರೆ ವೈದ್ಯರೂ ಆತ ಬದುಕಿಲ್ಲ ಎಂದು ಹೇಳಿ ಬಿಟ್ಟಿದ್ದರು. ಆದರೆ ಅದೃಷ್ಟ ಆತನನ್ನು ಬದುಕಿಸಿತು. ಆದರೆ ಅಮೋಘ ತನ್ನ ಎಡಗಾಲನ್ನು ಕಳೆದುಕೊಂಡಿದ್ದ. ಬಳಿಕ ಸುಮಾರು ಮೂರು ಶಸ್ತ್ರಚಿಕಿತ್ಸೆ ನಡೆಸಿ ಕೃತಕ ಕಾಲು ಜೋಡಣೆ ಮಾಡಲಾಯಿತು. ಒಂದು ವರ್ಷ ಕಾಲ ಶಾಲೆಗೆ ಹೋಗಲಾಗದೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಹಕಾರದೊಂದಿಗೆ ಮನೆಯಲ್ಲೇ ಓದಿ ಎಂಟನೇ ತರಗತಿ ಪರೀಕ್ಷಯನ್ನೂ ಮನೆಯಿಂದಲೇ ಬರೆದ. ಅನಂತರ ಶಾಲೆಗೆ ತೆರಳಲಾರಂಭಿಸಿ, ಈಗ ಎಸೆಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾರೆ. 

ಧೈರ್ಯವಂತ ಹುಡುಗ
ಅಚಲ ನಿರ್ಧಾರ, ಸ್ಪಷ್ಟ ಗುರಿಯೊಂದಿಗೆ ಮುನ್ನುಗ್ಗುವ ಛಲ, ಸುಪ್ತವಾಗಿರುವ ಧೈರ್ಯವೇ ಅಮೋಘ ಅಧಿಕ ಅಂಕ ಗಳಿಸಲು ಕಾರಣವಾಗಿದೆ. ಶಾರದಾ ವಿದ್ಯಾಲಯದಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಅಕ್ಕ ಅನನ್ಯಾ ಬೆಂಗಳೂರಿನಲ್ಲಿ ಎಂಜಿನಿಯರ್‌.

ಪಠ್ಯೇತರದಲ್ಲೂ ಸೈ
ಅಮೋಘ ಸ್ಕೌಟ್‌ ವಿದ್ಯಾರ್ಥಿಯಾಗಿದ್ದು, ರಾಷ್ಟ್ರ ಪುರಸ್ಕಾರಕ್ಕೆ ಪ್ರಯತ್ನಿಸುತ್ತಿದ್ದಾನೆ. ಚೆಸ್‌ ನಲ್ಲಿಯೂ ಹಲವು ಪ್ರಶಸ್ತಿ, ಪದಕಗಳನ್ನು ಪಡೆದುಕೊಂಡಿದ್ದಾನೆ. ನ್ಯಾಶನಲ್‌ ಟ್ಯಾಲೆಂಟ್‌ ಸರ್ಚ್‌ ಎಕ್ಸಾಮಿನೇಶನ್‌ ನಲ್ಲಿ ರಾಜ್ಯದಿಂದ ಆಯ್ಕೆಯಾಗಿ, ಇದೀಗ ರಾಷ್ಟ್ರ ಮಟ್ಟದ ಪರೀಕ್ಷೆ ಬರೆದಿದ್ದಾನೆ.

ಐ.ಎ.ಎಸ್‌. ಕನಸು
ಇನ್ನೂ ಹೆಚ್ಚಿನ ಅಂಕ ಬರಬಹುದೆಂಬ ನಿರೀಕ್ಷೆ ಇತ್ತು. ಮುಂದೆ ವಿಜ್ಞಾನ ವಿಭಾಗದಲ್ಲಿ ಕಲಿಯಲಿದ್ದೇನೆ. ಐ.ಎ.ಎಸ್‌. ಅಧಿಕಾರಿಯಾಗಬೇಕೆಂಬ ಕನಸಿದೆ.
– ಅಮೋಘ್ ಬಿ. ಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next