Advertisement

ಶೌಚಾಲಯ ನಿರ್ಮಿಸುವಂತೆ ಅಧಿಕಾರಿಗಳಿಗೆ ತಾಕೀತು

12:44 PM May 19, 2017 | Team Udayavani |

ಹರಪನಹಳ್ಳಿ: ಪ್ರತಿಯೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಗ್ರಾಮದಲ್ಲಿ ಮೇ 30ರೊಳಗೆ ಸಂಪೂರ್ಣ ಶೌಚಾಲಯ ನಿರ್ಮಾಣ ಮಾಡಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್‌.ಅಶ್ವತಿ ಪಿಡಿಒಗಳಿಗೆ ತಾಕೀತು ಮಾಡಿದರು. ಪಟ್ಟಣದ ತಾಪಂನ ರಾಜೀವ್‌ ಗಾಂಧಿ ಸಭಾಂಗಣದಲ್ಲಿ ಗುರುವಾರ ಗ್ರಾಪಂ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

Advertisement

ಶೌಚಾಲಯ ನಿರ್ಮಾಣ ಮಾಡುವಲ್ಲಿ ವಿಫಲತೆ ಕಂಡು ಬರುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಗ್ರಾಮಗಳಲ್ಲಿ ಮನೆ ಮನೆಗೆ ಸಂಚರಿಸಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಅಕ್ಟೋಬರ್‌ ಅಂತ್ಯಕ್ಕೆ ಎಲ್ಲಾ ಶೌಚಾಲಯ ನಿರ್ಮಾಣವಾಗಬೇಕು. ಇಲ್ಲವಾದಲ್ಲಿ ತಮ್ಮ ಇಂಕ್ರಿಮೆಂಟ್‌ ಕಡಿತಗೊಳ್ಳಲಿದೆ.

ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದು ಖಡಕ್‌ ಎಚ್ಚರಿಕೆ ನೀಡಿದರು. ಮನೆಗಳನ್ನು ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಕೂಡಲೇ ಹಣ ಪಾವತಿಸಬೇಕು. ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಕೇಳಿ ಬಂದ ಕೂಲಿಕಾರರಿಗೆ ತಕ್ಷಣವೇ ಕೆಲಸ ನೀಡಬೇಕು. 

ಖಾತರಿ ಯೋಜನೆಯು ಹರಪನಹಳ್ಳಿ ತಾಲೂಕಿನ ಮೈದೂರು, ಚಿಗಟೇರಿ, ಬೆಣ್ಣಿಹಳ್ಳಿ, ಮತ್ತಿಹಳ್ಳಿ, ಪುಣಭಗಟ್ಟ, ಹಾರಕನಾಳು ಗ್ರಾಮಗಳಲ್ಲಿ ಜನವರಿ, ಫೆಬ್ರುವರಿ, ಮಾರ್ಚ್‌ ತಿಂಗಳಲ್ಲಿ ಗುಂಪು ಕೆಲಸ ಉತ್ತಮವಾಗಿ ನಡೆಯುತ್ತಿತ್ತು ಆದರೆ ಈಗ ಯಾಕೆ ನಿಲ್ಲಿಸಲಾಗಿದೆ ಎಂದು ಪ್ರಶ್ನಿಸಿದ ಅವರು, ಬೆಣ್ಣಿಹಳ್ಳಿ ಗ್ರಾಮದಲ್ಲಿ 260ಜನ ಕೂಲಿಕಾರರು ಅರ್ಜಿ ಸಲ್ಲಿಸಿದರು, ಅವರಿಗೆ ಏಕೆ ಕೆಲಸ ನೀಡಿಲ್ಲ ಪಿಡಿಒ ವಿರುದ್ಧ ಹಾರಿಹಾಯ್ದರು.

ನಿಮಗೆ ಸಿರಿಯಸ್‌ ಇಲ್ಲ, ನಿಮಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ತರಾಟೆಗೆ ತೆಗೆದುಕೊಂಡರು. ಉಪ ಕಾರ್ಯದರ್ಶಿ ಷಡಕ್ಷರಪ್ಪ ಅವರು, ಗ್ರಾಪಂಗಳಲ್ಲಿ ಮನೆಗಳನ್ನು ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳಿಗೆ ಬಗ್ಗೆ ಪರಿಶೀಲನೆ ಮಾಡಬೇಕು.

Advertisement

ಒಂದು ವೇಳೆ ಮನೆ ಇದ್ದವರಿಗೆ ನೀಡಿದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಾಗ ಈ ಸಂದರ್ಭದಲ್ಲಿ ಕೆಲವು ಪಿಡಿಒಗಳು ಜಿಪಿಎಸ್‌ ಆಗುತ್ತಿಲ್ಲ, ಸ್ಥಳೀಯ  ಸಮಸ್ಯೆಗಳಿವೆ ಎಂದರು. ಯಾವುದು ಕಾರಣ ನೀಡಬೇಡಿ ಸರ್ಕಾರದ ನಿಯಮಗಳಂತೆ ಆಯ್ಕೆ ಮಾಡಿ ಅರ್ಹರು ಮನೆಕಟ್ಟಿಕೊಳ್ಳಲು ನೆರವು ನೀಡಬೇಕು ಎಂದರು.

ತಾಲೂಕಿನ ದುಗ್ಗಾವತಿ ಗ್ರಾಪಂ ಹೊರತುಪಡಿಸಿ ಉಳಿದ 36 ಗ್ರಾಪಂಗಳಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ, ಕ್ರಿಯಾಯೋಜನೆ ಮಾರ್ಚ್‌ 10ರೊಳಗೆ ಪೂರ್ಣಗೊಳಿಸಿರುವುದಿಲ್ಲ. ಹಾಗಾಗಿ ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಕ್ರಮ ಜರುಗಿಸಲಾಗುವುದು. ಕ್ರಿಯಾ ಯೋಜನೆಗಳನ್ನು ಬದಲಾವಣೆ ಮಾಡದೇ 3ದಿನದೊಳಗೆ ಸರ್ಕಾರಕ್ಕೆ ವರದಿ ನೀಡಬೇಕು.

ಒಂದು ವೇಳೆ ನೀಡದಿದ್ದಲ್ಲಿ ಆಯಾ ಪಂಚಾಯಿತಿಗಳ ಅನುದಾನ ಕಡಿತಗೊಳಿಸುವುದಲ್ಲದೇ ಗ್ರಾಪಂನ ತಂತ್ರಾಂಶವನ್ನು ಲಾಕ್‌ ಮಾಡಲಾಗುವುದು ಎಂದು ಎಚ್ಚರಿಸಿದರು. ಮುಖ್ಯ ಲೆಕ್ಕಪರಿಶೋಧಕ ಆಂಜನೇಯ ಮಾತನಾಡಿ, ಸರ್ಕಾರದ ಯೋಜನೆಗಳ ಅನುದಾನ ಆಯಾ ಯೋಜನೆಗೆ ಮಿನಿಯೋಗಿಸಬೇಕು. 

ಬಳಕೆಯಾಗದ ಅನುದಾನವನ್ನು ಸರ್ಕಾರದ ಖಾತೆಗೆ ಡಿಡಿ ಮೂಲಕ ವಾಪಾಸ್ಸು ಮಾಡಬೇಕು. ಒಂದು ವೇಳೆ ಹಣವನ್ನು ಬೇರೆ ಯೋಜನೆಗೆ ಬಳಸಿಕೊಂಡಲ್ಲಿ ಪಿಡಿಒ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದರು. ಜಿಪಂನ ಯೋಜನಾಧಿಕಾರಿ ರಂಗನಾಥ ಮಾತನಾಡಿ, ತಾಲೂಕಿನ ಐದು ಗ್ರಾಮಗಳಿಗೆ ಗ್ರಾಮ ವಿಕಾಸ ಅಡಿ 3.70ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕೂಡಲೇ ಕೆಲಸವನ್ನು ಆರಂಭ ಮಾಡಬೇಕು.

ಕಾಮಗಾರಿಗಳಿಗೆ ಹಣ ಪಾವತಿಸಲಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಪಡೆದ ಅವರು ಯಾವುದೇ ಕಾರಣಕ್ಕೂ ಇದರಲ್ಲಿ ಕಾಮಗಾರಿ ಬದಲಾವಣೆಗೆ ಅವಕಾಶವಿರುವುದಿಲ್ಲ, ಅನುದಾನ ಬಳಕೆ ಮಾಡಿಕೊಂಡು ಗ್ರಾಮ ಅಭಿವೃದ್ಧಿ ಮಾಡಿ ಎಂದು ಸಲಹೆ ನೀಡಿದರು. ಸಭೆಯಲ್ಲಿ ಜಿಪಂ ಅಧಿಕಾರಿ ರುದ್ರಪ್ಪ, ತಾಪಂ ಇಒ ಬಿ.ರೇವಣ್ಣ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next