ಬೆಂಗಳೂರು: ಶ್ರೀಲಂಕಾ ಪ್ರವಾಸದ ವೇಳೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಮನೆಗಳಲ್ಲಿ ಸೋಮವಾರ ಸೂತಕದ ಛಾಯೆ ಆವರಿಸಿತ್ತು. ಮೃತರೆಲ್ಲರೂ ಭಾನುವಾರ ಬೆಳಗ್ಗೆ ಮೊಬೈಲ್ ಮೂಲಕ ಕುಟುಂಬ ಸದಸ್ಯರ ಜತೆ ಮಾತನಾಡಿದ್ದರು. ಆದರೆ, ಸೋಮವಾರ ಬೆಳಗ್ಗೆ ವೇಳೆಗೆ ದುರಂತದಲ್ಲಿ ಮೃತಪಟ್ಟ ವಿಚಾರ ಕುಟುಂಬ ಸದಸ್ಯರಲ್ಲಿ ಆಘಾತ ಮೂಡಿಸಿತ್ತು.
ಕುಟುಂಬ ಸದಸ್ಯರು ನೋವಿನಲ್ಲೂ ಶ್ರೀಲಂಕಾ ರಾಯಭಾರ ಕಚೇರಿ ಸಂಪರ್ಕಿಸಿ ತಮ್ಮವರ ಬಗ್ಗೆ ಮಾಹಿತಿ ಪಡೆಯಲು ಯತ್ನಿಸಿ ಸಿಗದಿದ್ದಾಗ ಸ್ಥಳೀಯ ರಾಜಕೀಯ ಮುಖಂಡರ ಮೊರೆ ಹೋಗಿ ಮಾಹಿತಿಗಾಗಿ ಪರದಾಡುತ್ತಿದ್ದರು. ಜತೆಗೆ ಸಂಪರ್ಕಕ್ಕೆ ಸಿಗದವರ ಕುಟುಂಬ ಸದಸ್ಯರಲ್ಲಿ ಎಲ್ಲೋ ಒಂದು ಕಡೆ ತಮ್ಮವರು ಸುರಕ್ಷಿತವಾಗಿರಬಹುದೆಂಬ ಭರವಸೆಯೂ ಮೂಡಿತ್ತು.
ದುರಂತದಲ್ಲಿ ಜೆಡಿಎಸ್ ನಾಯಕರು ಮೃತಪಟ್ಟಿದ್ದು, ವಿಚಾರ ತಿಳಿಯುತ್ತಿದ್ದಂತೆ ಬೆಳಗ್ಗೆಯಿಂದಲೇ ನೂರಾರು ಮಂದಿ ಕಾರ್ಯಕರ್ತರು, ಬೆಂಬಲಿಗರು ಮೃತರ ಮನೆಗಳತ್ತ ಧಾವಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಮನೆಗಳ ಕೂಗಳತೆ ದೂರದಲ್ಲಿ ಬ್ಯಾರಿಕೆಡ್‌ಗಳನ್ನು ಹಾಕಿ ಭದ್ರತೆ ವಹಿಸಿದ್ದರು. ಸಂಸದರು, ಶಾಸಕರು, ಸ್ಥಳೀಯ ಮುಖಂಡರು, ಸಂಬಂಧಿಕರು, ಸ್ನೇಹಿತರು ಆಗಮಿಸಿ ಸಾಂತ್ವನ ಹೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮುಗಿಲು ಮುಟ್ಟಿದ ಆಕ್ರಂದನ: ವಿದ್ಯುನ್ಮಾನ ಮಾಧ್ಯಮಗಳಲ್ಲಿ ವಿಷಯ ತಿಳಿಯುತ್ತಿದ್ದಂತೆ ಪೀಣ್ಯ 8 ನೇ ಮೈಲಿಯಲ್ಲಿರುವ ದಾಸರಹಳ್ಳಿ ಒಕ್ಕಲಿಗರ ಸಂಘದ ಅಧ್ಯಕ್ಷರೂ ಆಗಿದ್ದ ಹನುಮಂತರಾಯಪ್ಪ ಅವರ ಮನೆಯಲ್ಲಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾಂತ್ವನ ಹೇಳಲು ಬಂದ ರಾಜಕೀಯ ನಾಯಕರ ಬಳಿ ತಮ್ಮವರ ಪಾರ್ಥಿವ ಶರೀರವನ್ನು ಆದಷ್ಟು ಬೇಗ ಹಸ್ತಾಂತರಿಸುವಂತೆ ಮನವಿ ಮಾಡಿದರು.
ಹನುಮಂತರಾಯಪ್ಪ ಅವರ ಮನೆ ಮುಂದೆ ಜಮಾಯಿಸಿದ ಮಹಿಳಾ ಬೆಂಬಲಿಗರು, ಹನುಮಂತರಾಯಪ್ಪ ಅವರು ತಮ್ಮನ್ನು ತಾಯಿ, ಸಹೋದರಿಯಂತೆ ನೋಡುತ್ತಿದ್ದರು. ಕಷ್ಟ ಎಂದು ಕೈ ಚಾಚಿದಾಗ ಎಂದಿಗೂ ಬರಿಗೈಯಲ್ಲಿ ಕಳುಹಿಸಿಲ್ಲ. ಅಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ಅಪಾರ ನೋವು ತಂದಿದೆ ಎಂದರು. ನೆಲಮಂಗಲದ ಶಿವಕುಮಾರ್, ಲಕ್ಷ್ಮಿನಾರಾಯಣ, ವಿದ್ಯಾರಣ್ಯಪುರದ ರಂಗಪ್ಪ ಅವರ ನಿವಾಸದಲ್ಲೂ ದುಃಖ ಮನೆಮಾಡಿತ್ತು.
ಸೋಮವಾರ ಕೂಡ ಪ್ರವಾಸಕ್ಕೆ ಹೋಗಬೇಕಿತ್ತು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿರುವ ಒಕ್ಕಲಿಗರ ಸಂಘದ ಸದಸ್ಯರು ಪ್ರತಿ ವರ್ಷವೂ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದರು. ಅದರಂತೆ ಮೊದಲ ತಂಡದಲ್ಲಿ ಏಳು ಮಂದಿ ಹೋಗಿದ್ದರು. ಎರಡನೇ ತಂಡದಲ್ಲಿ ಸೋಮವಾರ 30ಕ್ಕೂ ಹೆಚ್ಚು ಮಂದಿ ಹೋಗಬೇಕಿತ್ತು. ಆದರೆ, ದುರ್ಘಟನೆಯಿಂದ ಪ್ರವಾಸ ರದ್ದುಗೊಳಿಸಲಾಗಿದೆ ಎಂದು ಸಂಘದ ಸದಸ್ಯರೊಬ್ಬರು ಹೇಳಿದರು.