ಜಾದೂ ಶಂಕರ್ ಅವರ ಮಾತನಾಡುವ ಗೊಂಬೆ ತುಂಬಾ ಪ್ರಸಿದ್ಧ. ಅನೇಕ ಪ್ರದರ್ಶನಗಳನ್ನು ಕಂಡಿದೆ ಅದು. ಆ ಜಾದೂ ವೀಕ್ಷಿಸಿದವರೆಲ್ಲರನ್ನೂ ಮೂಕವಿಸ್ಮಿತರಾನ್ನಾಗಿ ಮಾಡಿದೆ. ಅಂತಹುದೇ ಒಂದು ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಉಡುಪಿ ಅಜ್ಜರಕಾಡುವಿನಲ್ಲಿರುವ ಶಿಕ್ಷಣ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ (ಬಿ.ಆರ್.ಸಿ.) ಇತ್ತೀಚೆಗೆ ನಡೆಯಿತು. ಆದರೆ ಅದು ಜಾದೂ ಶೋ ಆಗಿರಲಿಲ್ಲ. ಕಲಾವಿದನ ಕೈಗಳಲ್ಲಿ ಮೂಡಿದ ಕೈಚಳಕದ ಅದ್ಭುತ ಕಲಾಕೃತಿಯಾಗಿತ್ತು. ಜಿಲ್ಲೆಯಾದ್ಯಂತದಿಂದ ಆಗಮಿಸಿದ್ದ ಚಿತ್ರಕಲಾ ಶಿಕ್ಷಕರು ಹಾಗೂ ವೃತ್ತಿ ಶಿಕ್ಷಕರು ಜತೆಗೂಡಿ ಪರಸ್ಪರ ಅನುಭವವನ್ನು ಹಂಚಿಕೊಂಡು ಕಾಗದದಿಂದ ಒಂದಷ್ಟು ಮಾತನಾಡುವ ಗೊಂಬೆಗಳನ್ನು ರಚಿಸಿದರು. ಅವುಗಳನ್ನು ಕೈಗೆ ಧರಿಸಿಕೊಂಡು ಬೇರೆ ಬೇರೆ ಸ್ವರಗಳಲ್ಲಿ ಮಾತನಾಡಿ ಇತರರನ್ನು ಸಂತೋಷಗೊಳಿಸಿದರು, ತಾವೂ ಖುಷಿ ಪಟ್ಟರು. ಒಂದು ವಾರ ಕಾಲ ನಡೆದ ಈ ಕರಕುಶಲ ಶಿಬಿರದಲ್ಲಿ ಆಭರಣ ತಯಾರಿ, ಎಂಬ್ರಾಯಡರಿ, ಗ್ಲಾಸ್ ಪೈಂಟಿಂಗ್ ಇನ್ನಿತರ ಅನೇಕ ಕಲಾಚಟುವಟಿಕೆಗಳು ನಡೆದವು.
ಜೀವನವೆಂದರೆ ಅನುಭವ ಗಳಿಸುವುದು. ಗಳಿಸಿದ ಅನುಭವವನ್ನು ಸಾಕ್ಷಾತ್ಕರಿಸಿ ನೋಡು ವುದು. ಈ ಅನುಭವ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಒಬ್ಬನಲ್ಲಿ ಇಲ್ಲದ್ದು ಇನ್ನೊಬ್ಬನಲ್ಲಿ ಇರುತ್ತದೆ. ನಮ್ಮಲ್ಲಿ ಇಲ್ಲದ ವಿದ್ಯೆ-ಬುದ್ಧಿ-ಕೌಶಲಗಳನ್ನು ತರಬೇತಿಯ ಮೂಲಕ ಇನ್ನೊಬ್ಬನಿಂದ ಕಲಿತುಕೊಳ್ಳುವುದೇ ಜೀವನ. ಅದಕ್ಕೆ ಕಲಿಯುವ ಮನಸ್ಸು ಬೇಕು. ಕಲಿಸುವ ಸಂಪನ್ಮೂಲ ವ್ಯಕ್ತಿಗಳು ಬೇಕು. ಕಾರ್ಯಕ್ರಮ ಆಯೋಜಿಸುವವರೂ ಬೇಕು. ಇಂತಹ ಸಾಧ್ಯತೆಯನ್ನು ಉಡುಪಿ ಬಿ.ಆರ್.ಸಿ. ಸಾಕಾರಗೊಳಿಸಿದೆ. ವೃತ್ತಿ ಶಿಕ್ಷಕರನ್ನು ಇನ್ನಷ್ಟು ಪುನಶ್ಚೇತನಗೊಳಿಸಿದೆ. ಬಿ.ಆರ್.ಸಿ.ಯ ನಿರ್ದೇಶಕ ಶಿವರಾಮ ಶೆಟ್ಟಿ ತರಬೇತಿಯ ಸಾರ್ಥಕತೆಗೆ ಕಾರಣಕರ್ತರಾಗಿದ್ದಾರೆ.
ಕಲಾಶಿಕ್ಷಕರೆಲ್ಲರೂ ಒಂದಲ್ಲ ಒಂದು ರೀತಿಯಿಂದ ಸಂಪನ್ಮೂಲ ವ್ಯಕ್ತಿಗಳೇ ಆಗಿರುತ್ತಾರೆ. ಆದರೂ ಈ ಶಿಬಿರದ ಪ್ರಧಾನ ಭೂಮಿಕೆಯಲ್ಲಿ ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಿತೇಶ್ ಭಂಡಾರಿ ಮತ್ತು ಕಾರ್ಯದರ್ಶಿ ರಮೇಶ್ ಬಂಟಕಲ್ ಇದ್ದು ಶಿಕ್ಷಕರನ್ನು ಹುರಿದುಂಬಿಸಿದರು. ರಮೇಶ್ ಬಂಟಕಲ್ ಬಣ್ಣಕಾಗದದಿಂದ ಮಾತನಾಡುವ ಗೊಂಬೆ, ಆನೆ, ಇಲಿ, ಕುದುರೆ, ಹಕ್ಕಿ ಮುಂತಾದುವುಗಳ ಮುಖವಾಡ ರಚಿಸುವ ವಿಧಾನ ಹಾಗೂ ಪ್ರಾತ್ಯಕ್ಷಿಕೆಯನ್ನು ತೋರಿಸಿದರು. ಹಿತೇಶ್ ಭಂಡಾರಿಯವರು ಮುದ್ರಣ ಕಲೆ, ಬಾಂದನಿ ಕಲೆ, ಗ್ಲಾಸ್ ಪೈಂಟಿಂಗ್ ರಚನೆಯನ್ನು ತಿಳಿಕೊಟ್ಟರು. ಜತೆಗೆ ನಿತ್ಯೋಪಯೋಗಕ್ಕೆ ಬೇಕಾದ ಸಾಬೂನು, ಫಿನಾಯಿಲ್ ತಯಾರಿಯನ್ನೂ ಕಲಿಸಿ ಕೊಟ್ಟರು. ನೆರೆದಿದ್ದ ಕಲಾವಿದರಲ್ಲಿ ಅನೇಕರು ತಮಗೆ ತಿಳಿದಿರುವ ಕಲಾಕೌಶಲಗಳನ್ನು ಇತರರಿಗೆ ಕಲಿಸಿ ಕೊಟ್ಟರು. ಶಿಬಿರ ಕಲಾತ್ಮಕತೆಯೊಂದಿಗೆ ಸಾಗಿ ಸಾಕಷ್ಟು ಕಲಾವಸ್ತುಗಳು ಸಿದ್ಧಗೊಂಡವು. ಬಿ.ಆರ್.ಸಿ. ಕಟ್ಟಡದ ಭಿತ್ತಿಯೆಲ್ಲೆಡೆ ರಾರಾಜಿಸಿದವು.
ಉಪಾಧ್ಯಾಯ ಮೂಡುಬೆಳ್ಳೆ