Advertisement

ಹೈಕೋರ್ಟ್‌ ಸೂಚನೆಯಂತೆ ಸ್ಪೀಕರ್‌ ಭೇಟಿ ಮಾಡುವೆ: ರವಿ ಬೆಳಗೆರೆ​​​​​​​

03:45 AM Jul 02, 2017 | Team Udayavani |

ಹುಬ್ಬಳ್ಳಿ: “ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಹಿರಿಯರಾಗಿದ್ದು, ಅವರನ್ನು ಗೌರವಿಸುತ್ತೇನೆ. ಆದರೆ, ಅವರು ನನಗೆ ಮೂರು ನೋಟಿಸ್‌ ಕಳುಹಿಸಿದರೂ ಭೇಟಿಯಾಗಿಲ್ಲವೆಂಬ ಕಾರಣಕ್ಕೆ ಸಿಟ್ಟಾಗಿ ನನ್ನ ಮೇಲೆ ಶಿಕ್ಷೆ ವಿಧಿಸಿದ್ದು ತಪ್ಪು. ನಾನು ಜೈಲಿಗೆ ಹೋಗಲು ಸಿದ್ಧನಿದ್ದು, ಅದಕ್ಕೇನೂ ಅಭ್ಯಂತರವಿಲ್ಲ. ಆದರೆ, ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹಿರಿಯ ಪತ್ರಕರ್ತ ರವಿ ಬೆಳಗೆರೆ ಹೇಳಿದರು.

Advertisement

ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಇಲ್ಲಿನ ಕಿಮ್ಸ್‌ ಆಸ್ಪತ್ರೆಯಿಂದ ಬಿಡುಗಡೆಯಾದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, “ಕೋಳಿವಾಡ ಅವರನ್ನು ಎಂದೂ ಅವಮಾನಿಸಿಲ್ಲ. ಆದರೂ, ಅವರಿಗೆ ನನ್ನ ಮೇಲೇಕೆ ಸಿಟ್ಟು ಬಂತೋ ಗೊತ್ತಿಲ್ಲ. ಅವರು ತಪ್ಪು ಗ್ರಹಿಕೆಯಿಂದಾಗಿ ಶಿಕ್ಷೆ ವಿಧಿಸಿದ್ದಾರೆ. ಅವರ ಮನವರಿಕೆ ಮಾಡುವ ಕಾರ್ಯ ಆಗಿಲ್ಲ. ಅವರ ಆಜ್ಞೆಯನ್ನು ನಾನು ಧಿಕ್ಕರಿಸಿಲ್ಲ. ಹೈಕೋರ್ಟ್‌ ಸೂಚನೆಯಂತೆ ಸ್ಪೀಕರ್‌ ಅವರನ್ನು ಸೋಮವಾರ ಭೇಟಿ ಮಾಡುವೆ’ ಎಂದರು.

“ಎಲ್ಲ ಪತ್ರಕರ್ತರೂ ಒಗ್ಗೂಡಿದರೆ ಸಾಕಷ್ಟು ಬದಲಾವಣೆ ತರಬಹುದು. ಪತ್ರಕರ್ತರನ್ನು ಕೆಣಕಲು ಬರಬೇಡಿ. ಅಂಗೈ ಅಡ್ಡವಿಟ್ಟು ಸೂರ್ಯೋದಯ ತಡೆಯುವ ಪ್ರಯತ್ನ ಮಾಡಬೇಡಿ. ನನ್ನನ್ನು ಬಂಧಿಸುವುದಾದರೆ ಪ್ರತಿಯೊಬ್ಬ ಪತ್ರಕರ್ತರನ್ನೂ ಬಂಧಿಸಬೇಕಾಗುತ್ತದೆ. ಪತ್ರಿಕೋದ್ಯಮದ ಮೇಲೆ ಇಂತಹ ಪ್ರಹಾರ ಬೇಕಾಗಿಲ್ಲ. ನನ್ನನ್ನು ಎನ್‌ಕೌಂಟರ್‌ ಮಾಡಿ ಮುಗಿಸಿದರೆ ಇನ್ನೊಬ್ಬರು ಹುಟ್ಟಲ್ಲವೆಂದು ಅಂದುಕೊಳ್ಳಬೇಡಿ. ನಮ್ಮಂತವರನ್ನು ಮಟ್ಟಹಾಕಲು ಬಂದರೆ ನನ್ನಂಥ ಹತ್ತು ಜನ ಹುಟ್ಟಿ ಬರುತ್ತಾರೆ. ಆದ್ದರಿಂದ ಕೋಳಿವಾಡ ಅವರು ನನ್ನ ಕಾರ್ಯವೈಖರಿ ಅರ್ಥ ಮಾಡಿಕೊಳ್ಳಬೇಕು. ತಮ್ಮ ಆದೇಶ ಹಿಂಪಡೆದುಕೊಳ್ಳಬೇಕು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next