Advertisement

ಶಾಸಕರಿಗೆ ಶಿಸ್ತಿನ ಪಾಠ ಹೇಳಿದ ಸ್ಪೀಕರ್‌

06:00 AM Jul 03, 2018 | Team Udayavani |

ಬೆಂಗಳೂರು: ಕಲಾಪ ನಡೆಯುವ ವೇಳೆ ತಮ್ಮಷ್ಟಕ್ಕೆ ತಾವೇ ಓಡಾಡುವ, ಅಕ್ಕಪಕ್ಕ ಕುಳಿತು ಮಾತನಾಡುವ ಶಾಸಕರಿಗೆ ಮೊದಲ ದಿನವೇ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಶಿಸ್ತಿನ ಪಾಠ ಮಾಡಿದ್ದಾರೆ. ಆ ಮೂಲಕ ತಾವು ಸ್ಪೀಕರ್‌ ಆಗಿರುವಷ್ಟು ದಿನ ಸದನದಲ್ಲಿ ಶಾಸಕರು ಘನತೆಯಿಂದ ಇರಬೇಕೆಂಬ ಸಂದೇಶ ರವಾನಿಸಿದ್ದಾರೆ.

Advertisement

ಸಮ್ಮಿಶ್ರ ಸರ್ಕಾರದ ಚೊಚ್ಚಲ ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣದ ನಂತರ ವರದಿಗಳ ಮಂಡನೆ
ಮತ್ತು ಸಂತಾಪ ಸೂಚನೆ ನಿರ್ಣಯ ಅಂಗೀಕಾರವಿತ್ತು. ರಾಜ್ಯಪಾಲರ ಭಾಷಣ ಮುಗಿದು ಮತ್ತೆ ಕಲಾಪ
ಆರಂಭವಾದಾಗ ವಿಧಾನಸಭೆ ಕಾರ್ಯದರ್ಶಿಯವರು ವರದಿಗಳನ್ನು ಮಂಡಿಸಿದರು. ನಂತರ ಸ್ಪೀಕರ್‌ ಅವರು
ಸಂತಾಪ ನಿರ್ಣಯ ಪ್ರಸ್ತಾಪ ಮಂಡಿಸಲು ಮುಂದಾದರು.

ಈ ವೇಳೆ ಕೆಲವು ಶಾಸಕರು ಸದನದಲ್ಲಿ ಓಡಾಡುತ್ತಿರುವುದನ್ನು ಗಮನಿಸಿದ ಸ್ಪೀಕರ್‌, ಎಲ್ಲ ಶಾಸಕರು ತಮ್ಮ
ಸ್ಥಾನಗಳಿಗೆ ತೆರಳುವಂತೆ ಸೂಚಿಸುತ್ತೇನೆಂದು ಹೇಳಿದರು.

ತಕ್ಷಣ ಶಾಸಕರು ತಮ್ಮ ಕುರ್ಚಿಗಳತ್ತ ತೆರಳಿದರಾದರೂ ಕೆಲವರು ಓಡಾಡುತ್ತಲೇ ಇದ್ದರು. ಇದರಿಂದ ಸ್ವಲ್ಪ
ಅಸಮಾಧಾನಗೊಂಡಂತೆ ಕಂಡುಬಂದ ಸ್ಪೀಕರ್‌, ಸದಸ್ಯರ ಹೆಸರು ಹಿಡಿದು ರಹೀಂ ಖಾನ್‌ ಮತ್ತು ಹ್ಯಾರಿಸ್‌ ಅವರು
ತಮ್ಮ ಸ್ಥಾನಕ್ಕೆ ತೆರಳಿ ಕುಳಿತುಕೊಳ್ಳಿ ಎಂದು ತಾಕೀತು ಮಾಡಿದರು. ಅಲ್ಲದೆ, ಎದ್ದುನಿಂತಿದ್ದ ರಾಜೇಗೌಡರ ಹೆಸರು
ಕರೆದು ನಿಮ್ಮ ಜಾಗದಲ್ಲಿ ಕುಳಿತುಕೊಳ್ಳಿ ಎಂದರು. ನಂತರ ಸಂತಾಪ ಸೂಚನೆ ನಿರ್ಣಯ ಮಂಡಿಸಿದರು.

ಸ್ವರ್ಗ ಸೇರಿದ ಮೇಲೆ ಮಾತನಾಡಿ: ಸಂತಾಪ ಸೂಚನೆ ನಿರ್ಣಯದ ಮೇಲೆ ಸದಸ್ಯರು ಮಾತನಾಡುತ್ತಿದ್ದಾಗ
ಕಾಂಗ್ರೆಸ್‌ನ ಶಿವರಾಮ ಹೆಬ್ಟಾರ್‌ ಅವರು ಪಕ್ಕದಲ್ಲಿ ಕುಳಿತಿದ್ದ ಇನ್ನೊಬ್ಬ ಸದಸ್ಯರೊಂದಿಗೆ ಹರಟೆಯಲ್ಲಿ ತಲ್ಲೀನರಾಗಿದ್ದರು. ಇದನ್ನು ನೋಡಿದ ಸ್ಪೀಕರ್‌ ರಮೇಶ್‌ಕುಮಾರ್‌, “ಹೆಬ್ಟಾರ್ರೆà… ಮೃತರೆಲ್ಲರೂ ಸ್ವರ್ಗ ತಲುಪಲಿ. ಆಮೇಲೆ ನೀವು ಮಾತನಾಡುವಿರಂತೆ’ ಎಂದು ಹೇಳಿದರು.

Advertisement

ಇದರಿಂದಾಗಿ ಪರಸ್ಪರ ಹರಟೆಯಲ್ಲಿ ತೊಡಗಿದ್ದ ಇತರೆ ಸದಸ್ಯರೂ ಮೌನಕ್ಕೆ ಶರಣಾಗಿ ಕಲಾಪದಲ್ಲಿ ತೊಡಗಿಸಿಕೊಂಡರು.

ಎಲ್ಲರೂ ಮಾತನಾಡುವಂತಿಲ್ಲ: ಸಂತಾಪ ಸೂಚನೆ ನಿರ್ಣಯದ ಮೇಲೆ ಹೆಚ್ಚು ಮಂದಿ ಸದಸ್ಯರು ಸುದೀರ್ಘ‌
ಮಾತನಾಡಿ ಅನಗತ್ಯ ಕಾಲಹರಣ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪೀಕರ್‌ ರಮೇಶ್‌ಕುಮಾರ್‌
ಹೇಳಿದ್ದಾರೆ.

ಸಂತಾಪ ನಿರ್ಣಯ ಸೂಚನೆ ಮಂಡಿಸುವ ವೇಳೆ ಮಾತನಾಡಿದ ಅವರು, ಈ ನಿರ್ಣಯಕ್ಕೆ ಘನತೆ ಇದೆ. ಹೀಗಾಗಿ ಎಲ್ಲರೂ ಮಾತನಾಡಿ ಕಾಲಹರಣ ಮಾಡುವ ಬದಲು ಕೆಲವರು ಮಾತ್ರ ಮಾತನಾಡುವುದೇ ನಿಧನರಾದ ಗಣ್ಯರಿಗೆ ಸಲ್ಲಿಸುವ ಗೌರವ ಎಂದರು.

ಮುಂದಿನ ದಿನಗಳಲ್ಲಿ ಸಂತಾಪ ಸೂಚನೆ ನಿರ್ಣಯದ ಮೇಲೆ ಸಿಎಂ, ಪ್ರತಿಪಕ್ಷ ನಾಯಕರು, ಡಿಸಿಎಂ, ಕಾಂಗ್ರೆಸ್‌
ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಪ್ರತಿಪಕ್ಷದ ಉಪನಾಯಕರು
ಮಾತ್ರ ಮಾತನಾಡಬೇಕು. ಉಳಿದಂತೆ ನಿಧನರಾದ ಮಾಜಿ ಶಾಸಕರ ಕ್ಷೇತ್ರದವರು ಅಥವಾ ಹೆಚ್ಚು ಆತ್ಮೀಯರಿಗೆ ಮಾತ್ರ ಅವಕಾಶ ಕೊಡುತ್ತೇನೆ ಎಂದು ಹೇಳಿದರು.

ಕಲಾಪದ ವೇಳೆ ಸಿಎಂ ಸುತ್ತ ಸೇರಬೇಡಿ
ಬೆಂಗಳೂರು
: ಕಲಾಪ ನಡೆಯುವಾಗ ಮುಖ್ಯಮಂತ್ರಿಗಳ ಸುತ್ತ ಯಾರೂ ಇರಬೇಡಿ ಎಂದು ಸ್ಪೀಕರ್‌ ರಮೇಶ್‌
ಕುಮಾರ್‌ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಸೋಮವಾರದ ಕಲಾಪ ಮುಂದೂಡುವ ಮುನ್ನ 
ಮಾತನಾಡಿದ ಅವರು, ಕಲಾಪ ನಡೆಯುವಾಗ ಮುಖ್ಯಮಂತ್ರಿಗಳ ಸುತ್ತ ಸದಸ್ಯರು ಸೇರಿ ಅವರಿಗೆ ಮುಜುಗರ ಉಂಟುಮಾಡುವುದು ಸರಿಯಲ್ಲ.ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ಸುತ್ತ ಸದಸ್ಯರೆಲ್ಲಾ ನಿಂತು ಅವರು ಎಷ್ಟು ಮುಜುಗರ ಅನುಭವಿಸಿದ್ದಾರೆ ಎಂಬುದನ್ನು ಹಿಂದೆ ಕುಳಿತು ನಾನು ನೋಡಿದ್ದೇನೆ. ಮೇಲಾಗಿ ಕಲಾಪ ನಡೆಯುವಾಗ ಸದಸ್ಯರು ಈ ರೀತಿ ವರ್ತಿಸುವುದೂ ಸರಿಯಲ್ಲ ಎಂದರು.

ಅಲ್ಲದೆ, ಸದನದ ನಡಾವಳಿಗಳಲ್ಲಿ ಕೆಲವೊಂದು ಮಾರ್ಪಾಟು ಮಾಡಲಾಗಿದೆ. ಇದುವರೆಗೆ ಪ್ರತಿನಿತ್ಯ ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿತ್ತು. ಇನ್ನು ಮುಂದೆ ಬೆಳಗ್ಗೆ 10.30ರಿಂದ ಕಲಾಪ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಕೋರಂಗಾಗಿ ಕಾಯುವಂತಿಲ್ಲ. ಸದಸ್ಯರು ಸಹಕರಿಸಬೇಕು ಎಂದು ಸಮ್ಮಿಶ್ರ ಸರ್ಕಾರದ ಚೊಚ್ಚಲ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ವಜೂಬಾಯಿ ವಾಲಾ.ಮನವಿ ಮಾಡಿದರು.

ರಾಜ್ಯಪಾಲರ ಭಾಷಣ ನೋಡಿದಾಗ ಹಿಂದುಳಿದ ವರ್ಗವನ್ನು ಕಡೆಗಣಿಸಲಾಗಿದೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಗೊಂದಲಗಳ ನಡುವೆ ಹಿಂದುಳಿದ ವರ್ಗಗಳನ್ನು ಕಡೆಗಣಿಸುತ್ತಾರೆಂಬ ಆತಂಕ ಶುರುವಾಗಿದೆ. ಸಿದ್ದರಾಮಯ್ಯ ಮೇಲಿನ ತಾತ್ಸಾರಕ್ಕೆ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ.
– ಕೆ.ಎಸ್‌. ಈಶ್ವರಪ್ಪ,ಬಿಜೆಪಿ ಶಾಸಕ

ಪ್ರತಿಪಕ್ಷದ ನಾಯಕರೇ ಇನ್ನೂ ಟೇಕಾಫ್ ಆಗಿಲ್ಲ. ಸರ್ಕಾರ ಬಂದು ಸಚಿವರು ಅವರವರ ಇಲಾಖೆಗಳಲ್ಲಿ ಕೆಲಸ
ಮಾಡುತ್ತಿದ್ದಾರೆ. ರಾಜ್ಯಪಾಲರ ಭಾಷಣ ಅಂದರೆ ಬಜೆಟ್‌ ಅಲ್ಲ. ಬಜೆಟ್‌ನಲ್ಲಿ ಏನೇನು ಘೋಷಣೆ ಮಾಡಬೇಕೋ ಅದನ್ನು ಮಾಡುತ್ತೇವೆ.

– ಡಿ.ಕೆ. ಶಿವಕುಮಾರ್‌, ಜಲ ಸಂಪನ್ಮೂಲ ಸಚಿವ

ದಿನ ದೂಡುವ ಸರ್ಕಾರ ಎಂಬಂತೆ ರಾಜ್ಯಪಾಲರ ಭಾಷಣವೂ ದಿನ ದೂಡುವಂತಿತ್ತು. ರಾಜ್ಯಪಾಲರ ಭಾಷಣ ಅಂದರೆ ಸರ್ಕಾರದ ಮುನ್ನೋಟ ಇರಬೇಕು.ಅವರ ಭಾಷಣದಲ್ಲಿಯೂ ಸಮನ್ವಯದ ಕೊರತೆ ಇತ್ತು. ಉಪ್ಪು, ಖಾರ, ಹುಳಿ ಏನೂ ಇಲ್ಲದ, ಆ ಕಡೆ ನಾನ್‌ವೆಜ್‌ ಅಲ್ಲದ, ಈ ಕಡೆ ವೆಜೂj ಅಲ್ಲ ಎನ್ನುವ ಥರಾ ಇತ್ತು.
– ಸಿ.ಟಿ. ರವಿ, ಬಿಜೆಪಿ ಶಾಸಕ

ರಾಜ್ಯಪಾಲರ ಭಾಷಣದಲ್ಲಿ ಒಂದು ವರ್ಷದಲ್ಲಿ ಸರ್ಕಾರದ ಮುನ್ನೋಟ ಏನಿರಬೇಕೋ ಅದನ್ನು ಹೇಳಿದ್ದಾರೆ. ರಾಜ್ಯ
ಸರ್ಕಾರ ಟೇಕಾಫ್ ಆಗಿ ಹಾರಾಡುತ್ತಿದೆ.ಮುಂದೆ ಬಜೆಟ್‌ ಅಧಿವೇಶನ ಇದೆ.ಬಜೆಟ್‌ನಲ್ಲಿ ವಿಸ್ತಾರವಾಗಿ ಯೋಜನೆಗಳ
ಬಗ್ಗೆ ಹೇಳುತ್ತಾರೆ.

– ಎಚ್‌.ವಿಶ್ವನಾಥ್‌, ಜೆಡಿಎಸ್‌ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next