Advertisement

ಬಂಗಾರದ ಉಡುಗೊರೆ ಪ್ರಸ್ತಾಪ ಕೈ ಬಿಟ್ಟ ಸ್ಪೀಕರ್‌

09:37 AM Oct 17, 2017 | |

ಬೆಂಗಳೂರು: ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಶಾಸಕರಿಗೆ ಅದ್ದೂರಿತನದ ಪ್ರದರ್ಶನವಾಗಿ ಚಿನ್ನದ ಉಡುಗೊರೆ ಹಾಗೂ ಅಧಿಕಾರಿಗಳಿಗೆ ಬೆಳ್ಳಿ ತಟ್ಟೆ ನೀಡುವುದಕ್ಕೆ ರಾಜಕಿಯ ಮುಖಂಡರು ಹಾಗು ಶಾಸಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಚಿನ್ನ- ಬೆಳ್ಳಿ ಕಾಣಿಕೆ ನೀಡುವುದನ್ನು ಕೈಬಿಡಲಾಗಿದೆ. ಇದರ ಬದಲು ವಿಧಾನಸೌಧದ ಕೆತ್ತನೆಯಿರುವ ಮರದ
ನೆನಪಿನ ಕಾಣಿಕೆ ನೀಡಲು ತೀರ್ಮಾನಿಸಲಾಗಿದೆ.

Advertisement

ಭಾರಿ ವಿವಾದದಿಂದಾಗಿ ಚಿನ್ನ-ಬೆಳ್ಳಿ ಉಡುಗೊರೆಯ ಪ್ರಸ್ತಾಪವನ್ನು ವಿಧಾನಮಂಡಲ ಸಚಿವಾಲಯ ರದ್ದುಪಡಿಸಿದ್ದು ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹಾಗೂ ಸಭಾಪತಿ ಡಿ.ಎಚ್‌. ಶಂಕರ ಮೂರ್ತಿ ಚಿನ್ನ -ಬೆಳ್ಳಿ ಉಡುಗೊರೆ ಕೊಡುವ ಪ್ರಸ್ತಾಪವೇ ತಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್‌ ಕೋಳಿವಾಡ, “ಶಾಸಕರಿಗೆ ಚಿನ್ನ ಹಾಗೂ ಅಧಿಕಾರಿಗಳಿಗೆ ಬೆಳ್ಳಿ ಉಡುಗೊರೆ ನೀಡುವ ಪ್ರಸ್ತಾಪವೇ ಇಲ್ಲ. ಇದು ಸತ್ಯಕ್ಕೆ ದೂರವಾದ ಮಾತು’ ಎಂದು ಹೇಳಿದ್ದಾರೆ. 27 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ನೀಡಿದ್ದೇವೆ. ಪ್ರಸ್ತಾವನೆಯನ್ನು ಒಪ್ಪುವುದು ಬಿಡುವುದು ಹಣಕಾಸು ಇಲಾಖೆಗೆ ಬಿಟ್ಟಿದ್ದು. ಈ ಹಿಂದೆ ಕಾರ್ಯಕ್ರಮವಾದಾಗ ಪ್ರತಿ
ಶಾಸಕರಿಗೆ 50 ಸಾವಿರ ರೂ.ವೆಚ್ಚದಲ್ಲಿ ಲ್ಯಾಪ್‌ಟಾಪ್‌ ನೀಡಿದ್ದರು. ಈಗ ವಜ್ರಮಹೋತ್ಸವ ಸವಿನೆನಪಿಗೆ ಉಡುಗೊರೆ ಕೊಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರ ಮೂರ್ತಿಯವರೂ ಸಹ ಚಿನ್ನದ ಉಡುಗೊರೆಯ ಪ್ರಸ್ತಾಪವನ್ನು ತಳ್ಳಿ ಹಾಕಿದ್ದು, ಆ ರೀತಿಯ ಪ್ರಸ್ತಾಪವನ್ನು ಆರ್ಥಿಕ ಇಲಾಖೆಗೆ ಕಳುಹಿಸಿಕೊಟ್ಟಿಲ್ಲ. ಎಲ್ಲರ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಕಾರ್ಯಕ್ರಮ ಮಾಡಬೇಕೆನ್ನುವುದಷ್ಟೆ ನಮ್ಮ ಉದ್ದೇಶ. ನಾವು ಮರದ ತುಂಡಿನ ಮೇಲೆ ವಿಧಾನಸೌಧದ ಚಿತ್ರವಿರುವ ನೆನಪಿನ ಕಾಣಿಕೆ ನೀಡಬೇಕೆನ್ನುವ ಉದ್ದೇಶ ಹೊಂದಿದ್ದೇವೆ. ಯಾವ ನೆನಪಿನ ಕಾಣಿಕೆ ನೀಡಬೇಕೆಂದು ಇನ್ನೂ ತೀರ್ಮಾನ ಆಗಿಲ್ಲ ಎಂದರು.

ವಜ್ರ ಮಹೋತ್ಸವದ ಬಗ್ಗೆ ವಿವಾದ ಬೇಡ: ಡಿಎಚ್‌ಎಸ್‌
ಬೆಂಗಳೂರು: “ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಮಾಡಬೇಕು ಎಂಬುದಷ್ಟೇ ನಮ್ಮ ಉದ್ದೇಶ’ ಎಂದು ವಿಧಾನಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ತಿಳಿಸಿದ್ದಾರೆ.  ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ನಡೆದ ಸಭೆಯಲ್ಲೇ ವಜ್ರಮಹೋತ್ಸವ ಕಾರ್ಯಕ್ರಮದ ಚರ್ಚೆ ಆಗಿದೆ. ಆ ನಂತರದ ಬೆಳವಣಿಗೆ ಸಹ ಅವರ ಗಮನಕ್ಕೆ ತರಲಾಗಿದೆ. ಅನಗತ್ಯ ವಿವಾದ ಮಾಡುವುದು ಬೇಡ. ರಾಷ್ಟ್ರಪತಿಯವರು ಕಾರ್ಯಕ್ರಮಕ್ಕೆ ಬರಲಿದ್ದಾರೆ. ಹೀಗಾಗಿ, ಇದೊಂದು ಮಹತ್ವದ ವಿಚಾರ ಎಂದರು. ಎರಡು ದಿನಗಳ ಕಾರ್ಯಕ್ರಮದ ಒಟ್ಟಾರೆ ವೆಚ್ಚ 26 ಕೋಟಿ ರೂ. ಪ್ರಸ್ತಾಪವನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ. ಶೇ.28 ಜಿಎಸ್‌ಟಿಯೇ 5 ಕೋಟಿ ರೂ. ಆಗುತ್ತದೆ. ಎಷ್ಟಕ್ಕೆ ಒಪ್ಪಿಗೆ ಸಿಗುತ್ತೋ ಅಷ್ಟಕ್ಕೆ ಸೀಮಿತಗೊಳಿಸಲಾಗುವುದು ಎಂದು ಹೇಳಿದರು. 

ನಾಯಿಗಳಿಗೆ ಬಿಸ್ಕೇಟ್‌ ಹಾಕುವ ಸಂಸ್ಕೃತಿ: ಈಶ್ವರಪ್ಪ
ಸಂಡೂರು: “ವಿಧಾನಸೌಧ ವಜ್ರಮಹೋತ್ಸವ ಆಚರಣೆ ಸಂದರ್ಭದಲ್ಲಿ ಸಚಿವಾಲಯದ  ಶಾಸಕರಿಗೆ ಚಿನ್ನದ ನಾಣ್ಯ ಕೊಡಲು ನಿರ್ಧರಿಸಿರುವುದು, ಒಂದು ರೀತಿ ರಾಜ್ಯ ಸರ್ಕಾರ ನಾಯಿಗಳಿಗೆ ಬಿಸ್ಕೇಟ್‌ ಹಾಕುವಂತಹ ಸಂಸ್ಕೃತಿಯನ್ನು ಹುಟ್ಟು ಹಾಕುವಂತಿದೆ’ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ,
“ಸರ್ಕಾರ ಶಾಸಕರಿಗೂ ಅನ್ನಭಾಗ್ಯ ನೀಡುವಂತಹ ಕ್ರಮ ಕೈಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಯಾವುದೇ
ಕಾರಣಕ್ಕೂ ಬಿಜೆಪಿ ಶಾಸಕರು ಬಿಸ್ಕೇಟ್‌ ಆಗಲಿ, ಅನ್ನಭಾಗ್ಯವಾಗಲಿ ಪಡೆಯಲ್ಲ ಎಂದು ಸ್ಪಷ್ಟಪಡಿಸಿದರು.  ರೈತರು ಸಾಯುತ್ತಿದ್ದಾರೆ, ಅವರನ್ನು ರಕ್ಷಿಸುವುದು ಬಿಟ್ಟು ವಜ್ರಮಹೋತ್ಸವ ಹೆಸರಲ್ಲಿ ದುಂದು ವೆಚ್ಚವೇಕೆ ಎಂದು ಪ್ರಶ್ನಿಸಿದರು.

Advertisement

ರಾಜಣ್ಣ ಸಮರ್ಥನೆ 
ಬೆಂಗಳೂರು: “ಉಡುಗೊರೆಯ ಮೌಲ್ಯ ಮುಖ್ಯವಲ್ಲ. ಆ ಉಡುಗೊರೆಯನ್ನು ನೀಡುತ್ತಿರುವ ಸಂದರ್ಭ ಮುಖ್ಯವಾಗಿದೆ’. – ವಿಧಾನಸೌಧ ವಜ್ರಮಹೋತ್ಸವದ ಸಂದರ್ಭದಲ್ಲಿ ಶಾಸಕರಿಗೆ ಚಿನ್ನದ ಬಿಸ್ಕತ್‌ ಉಡುಗೊರೆ ನೀಡುವುದನ್ನು ತುಮಕೂರಿನ ಮಧುಗಿರಿ ಶಾಸಕ ಕೆ.ಎನ್‌. ರಾಜಣ್ಣ ನೀಡಿರುವ ಸಮರ್ಥನೆ ಇದು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ವಜ್ರಮಹೋತ್ಸವದ ಸಂದರ್ಭದಲ್ಲಿ ನೀಡುವ ಉಡುಗೊರೆ ನಮ್ಮ ಮುಂದಿನ ಪೀಳಿಗೆಯೂ ನೆನಪಿಸಿಕೊಳ್ಳುವ ಸ್ಮರಣಿಕೆ ಆಗುತ್ತದೆ. ಹಾಗಾಗಿ, ಇಲ್ಲಿ ಉಡುಗೊರೆಯ ಮೌಲ್ಯ ಮುಖ್ಯವಲ್ಲ; ಅದನ್ನು ನೀಡುತ್ತಿರುವ ಸಂದರ್ಭ ಮುಖ್ಯ’ ಎಂದು ಸಮರ್ಥಿಸಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next