ಶಿರಸಿ: ಸಹಕಾರಿ ಇಲಾಖೆಯ ಅಧಿಕಾರಿಯೋರ್ವರಿಗೆ ಇತರ ಅಧಿಕಾರಿಗಳೆಲ್ಲರ ಎದುರೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗಂಭೀರವಾಗಿ ಕ್ಲಾಸ್ ತೆಗೆದುಕೊಂಡ ಪ್ರಸಂಗ ಗುರುವಾರ ನಡೆಯಿತು.
ನಗರದ ಮಿನಿ ವಿಧಾನ ಸೌಧದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ವೇಳೆ ಸಹಕಾರಿ ಇಲಾಖೆಯ ಅಧಿಕಾರಿ ಲಿಂಗರಾಜು ಅವರ ಬಗ್ಗೆ ದೂರುಗಳಿವೆ ಎಂದು ಪ್ರಸ್ತಾಪಿಸಿ ಖಡಕ್ ಎಚ್ಚರಿಕೆ ಕೂಡ ನೀಡಿದರು.
ಶಿರಸಿ ಸಿದ್ದಾಪುರ ನನ್ನ ಕ್ಷೇತ್ರ. ನಿಮ್ಮ ವರ್ತನೆ, ನಡುವಳಿಕೆ ಚೆನ್ನಾಗಿದ್ದರೆ ನನಗೂ ಖುಷಿ. ಆದರೆ, ತಪ್ಪಾಗಿ ನಡೆದರೆ ಶಾಸನ ಸಭೆಯಲ್ಲೇ ನೇರವಾಗಿ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತರುವದಾಗಿ ಹೇಳಿದರು. ಮಾರ್ಚ್ ಕೊನೆಯೊಳಗೆ ಎಲ್ಲ ಇಲಾಖೆ ಕಾರ್ಯ ಮುಗಿಸಬೇಕು. ಲೊಕೋಪಯೋಗಿ ಇಲಾಖೆ, ಪಂಚಾಯತ ರಾಜ್, ಪಿಎಂಜಿಎಸ್ ವೈ ಸೇರಿದಂತೆ ಎಲ್ಲರೂ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹಣ ವಾಪಸ್ ಹೋಗಬಾರದು ಎಂದರು.
ಅತಿವೃಷ್ಟಿ, ಕೋವಿಡ್ ಗೆ ಜನರಿಗೆ ಪರಿಹಾರ ನೀಡಿದ್ದೇವೆ. 12.5 ಕೋಟಿ ರೂ. ಲೊಕೋಪಯೋಗಿ, 15 ಕೋಟಿ ಜಿಲ್ಲಾ ಪಂಚಾಯತಿಗೆ ಅನುದಾನ ಬಂದಿದೆ. ಬೇರೆ ಬೇರೆ ಅನುದಾನ ಕೂಡ ಬಂದಿದೆ. ಕಾಲ ಮಿತಿಯಲ್ಲಿ ಕಾಮಗಾರಿ ಪೂರ್ಣ ಆಗಬೇಕು ಎಂದರು.
ಶಿರಸಿ ಜಾತ್ರೆಗೆ ಸಿದ್ದತೆ ಮಾಡಿಕೊಳ್ಳಬೇಕು. ಮಾರಿಕಾಂಬಾ ದೇವಸ್ಥಾನ, ಬಾಬುದಾರರ ಜೊತೆಗೂ ಜಾತ್ರೆ ಸಿದ್ದತೆ ಕೂಡ ಮಾಡಿಕೊಳ್ಳಬೇಕು ಎಂದು ಶೀಘ್ರವಾಗಿ ಸಭೆ ನಡೆಸುತ್ತೇವೆ. ಕೋವಿಡ್ ಆತಂಕ ಕೂಡ ಇದೆ ಎಂದ ಕಾಗೇರಿ, ಕರೋನಾ ಮೂರನೆ ಅಲೆಗೆ ತಡೆ ನೀಡಲು ಹಾಗೂ ಆಸ್ಪತ್ರೆ ಸಿದ್ದತೆ ಕುರಿತೂ ಸಮಾಲೋಚನೆ ಮಾಡಿದ್ದೇವೆ. ಎರಡನೇ ಹಂತದ ಲಸಿಕೆ ಶೇ.೭ ಪ್ರಮಾಣ ಬಾಕಿ ಇದೆ. ಜನರಲ್ಲಿ ಜಾಗೃತಿ ಕೂಡ ಮೂಡಿಸಿಕೊಳ್ಳಬೇಕು. ಕೊರೋನಾ ಮೂರನೇ ಅಲೆ ತಡೆಯಲು ಎಚ್ಚರಿಕೆ ಬೇಕಾಗಿದೆ ಎಂದೂ ಹೇಳಿದರು.
ರಾಷ್ಟ್ರೀಯ ಸಾಗಾರ ಮಾಲಾ ಯೋಜನೆಯಲ್ಲಿ ಕುಮಟಾ ರಸ್ತೆ ಅಭಿವೃದ್ದಿಗಾಗಿ 300 ೦ ಜನ ಕೆಲಸ ಮಾಡುತ್ತಿದ್ದಾರೆ. ಇನ್ನೂ ವೇಗ ಆಗಬೇಕು. ಬೆಳಗಾವಿಯಲ್ಲಿ ನಿತಿನ್ ಗಡ್ಕರಿ ಅವರು ಶಿರಸಿ ಹಾವೇರಿ ರಸ್ತೆಯ ಭೂಮಿ ಪೂಜೆ ಕೂಡ ಮಾಡಲಿದ್ದಾರೆ. ಶಿರಸಿ ಬಿಸಲಕೊಪ್ಪ ಹಾವೇರಿ ತನಕ ಒಟ್ಟೂ
75 ಕಿಮಿಗೆ
287 ಕೋಟಿ ರೂ. ಹಣ ಮಂಜೂರಿ ಆಗಿದೆ.
174 ಕೋಟಿಗೆ ಟೆಂಡರ್ ಆಗಿದೆ. ಶಿರಸಿ ಬೈಪಾಸ್ ಪ್ರಸ್ತಾವ ಕೂಡ ಇದೆ ಎಂದರು. ಲವ್ ಜಿಹಾದ್, ಹೆಣ್ಮಕ್ಕಳ ನಾಪತ್ತೆ ಪ್ರಕರಣವನ್ನು ಪೊಲೀಸ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಲು ಸೂಚಿಸಿದ್ದೇವೆ. ಪೊಲೀಸ ಇಲಾಖೆ ಸಡಿಲವಾಗಿದೆ ಎಂಬ ಸಂದೇಶ ಹೋಗಬಾರದು ಎಂದೂ ಹೇಳಿದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಆಯುಕ್ತೆ ಆಕೃತಿ ಬನ್ಸಾಲ, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ತೋಟಗಾರಿಕಾ ಅಧಿಕಾರಿ ಬಿ.ಪಿ.ಸತೀಶ ಸೇರಿದಂತೆ ಇತರರು ಇದ್ದರು.