Advertisement

ಸ್ಪೀಕರ್‌ ಕೈಯಲ್ಲಿದೆ “ಅತೃಪ್ತರ’ಭವಿಷ್ಯ

11:08 PM Jul 24, 2019 | Lakshmi GovindaRaj |

ಬೆಂಗಳೂರು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಹದಿನೈದು ಶಾಸಕರು ರಾಜೀನಾಮೆ ಸಲ್ಲಿಸುವ ಮೂಲಕ ಮೈತ್ರಿ ಸರ್ಕಾರವನ್ನು ಪತನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅವರ ರಾಜೀನಾಮೆ ಭವಿಷ್ಯ ಈಗ ಸ್ಪೀಕರ್‌ ಕೈಯಲ್ಲಿದ್ದು, ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರ ನಿರ್ಧಾರದ ಮೇಲೆ ಮೂರೂ ರಾಜಕೀಯ ಪಕ್ಷಗಳ ರಾಜಕೀಯ ಲೆಕ್ಕಾಚಾರಗಳು ಬದಲಾಗುವ ಸಾಧ್ಯತೆ ಇದೆ.

Advertisement

ಪಕ್ಷದ ನಾಯಕತ್ವದ ವಿರುದ್ದ ಬಂಡಾಯ ಸಾರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕಾಂಗ್ರೆಸ್‌ನ ಹನ್ನೆರಡು ಶಾಸಕರು ಹಾಗೂ ಜೆಡಿಎಸ್‌ನ ಮೂವರು ಶಾಸಕರು ಪಕ್ಷದ ವಿಪ್‌ ಉಲ್ಲಂಘನೆ ಮಾಡಿರುವುದರಿಂದ ಅವರನ್ನು ಅನರ್ಹಗೊಳಿಸುವಂತೆ ಎರಡೂ ಪಕ್ಷಗಳು ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೆ ದೂರು ನೀಡಿದ್ದಾರೆ.

ಮಂಗಳವಾರ ನಡೆದ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್‌ ನೀಡಿದ್ದರೂ, ರಾಜೀನಾಮೆ ಸಲ್ಲಿಸಿರುವ ಶಾಸಕರು ಅದಕ್ಕೂ ಸ್ಪಂದಿಸದೇ ಇರುವುದರಿಂದ ಅವರನ್ನು ತಕ್ಷಣ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕಾಂಗ್ರೆಸ್‌ ನಾಯಕರು ಸ್ಪೀಕರ್‌ಗೆ ಮತ್ತೂಂದು ದೂರು ಸಲ್ಲಿಸಿದ್ದಾರೆ. ಅವರ ಜೊತೆಗೆ ಕೆಪಿಜೆಪಿ ಶಾಸಕ ಆರ್‌. ಶಂಕರ್‌ ಕಾಂಗ್ರೆಸ್‌ ಜೊತೆಗೆ ತಮ್ಮ ಪಕ್ಷವನ್ನು ವಿಲೀನ ಮಾಡಿ ಸಚಿವ ಸ್ಥಾನ ಪಡೆದು, ರಾಜೀನಾಮೆ ಸಲ್ಲಿಸಿ ಬಿಜೆಪಿಗೆ ಬೆಂಬಲ ಸೂಚಿಸುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿರುವುದರಿಂದ ಕಾಂಗ್ರೆಸ್‌ ಪಕ್ಷ ಅವರ ಶಾಸಕತ್ವವನ್ನೂ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ದೂರು ನೀಡಿದೆ.

ಇನ್ನು ಕೊನೆಯ ದಿನದವರೆಗೂ ಪಕ್ಷದ ಜೊತೆಗೆ ಇದ್ದು, ಪಕ್ಷ ನೀಡಿದ ವಿಪ್‌ ಪಡೆದು ಸ್ವೀಕೃತಿ ಪತ್ರವನ್ನೂ ನೀಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದೆ ಮುಂಬೈಗೆ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಅವರನ್ನೂ ವಿಪ್‌ ಉಲ್ಲಂಘನೆ ಪ್ರಕರಣದಲ್ಲಿ ಅನರ್ಹಗೊಳಿಸುವಂತೆ ಕಾಂಗ್ರೆಸ್‌ ನಾಯಕರು ಸ್ಪೀಕರ್‌ಗೆ ದೂರು ಸಲ್ಲಿಸಿದ್ದಾರೆ.

ಸ್ಪೀಕರ್‌ ನಡೆ ಕುತೂಹಲ: ಶಾಸಕರ ರಾಜೀನಾಮೆ ವಿಷಯದಲ್ಲಿ ಸ್ಪೀಕರ್‌ ರಮೇಶ್‌ ಕುಮಾರ್‌ ಪ್ರತಿಯೊಂದು ಹಂತದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಎರಡೂ ಪಕ್ಷಗಳ ದೂರಿನ ಆಧಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ಅತೃಪ್ತರಿಗೆ ನೋಟಿಸ್‌ ಕೂಡ ನೀಡಿದ್ದಾರೆ. ಈ ಕುರಿತು ಮಂಗಳವಾರ ಎರಡೂ ಕಡೆಯವರ ವಾದ-ವಿವಾದ ಆಲಿಸಿದ್ದಾರೆ. ಕಾಂಗ್ರೆಸ್‌ನ 12, ಜೆಡಿಎಸ್‌ನ 3 ಹಾಗೂ ಕೆಪಿಜೆಪಿ ಶಾಸಕ (ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿರುವುದರಿಂದ ಅನರ್ಹತೆಯ ದೂರು) ಆರ್‌. ಶಂಕರ್‌, ರಾಜೀನಾಮೆ ಸಲ್ಲಿಸಿದೆ ಗೈರು ಹಾಜರಾಗಿರುವ ಶ್ರೀಮಂತ ಪಾಟೀಲ್‌ ಪ್ರಕರಣಗಳು ಸ್ಪೀಕರ್‌ ಮುಂದೆ ಇವೆ. ಮೂಲಗಳ ಪ್ರಕಾರ ಸ್ಪೀಕರ್‌ ರಮೇಶ್‌ ಕುಮಾರ್‌ ಎಲ್ಲ ಪ್ರಕರಣಗಳ ಕುರಿತಂತೆ ಈಗಾಗಲೇ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿದ್ದಾರೆ.

Advertisement

ಅನರ್ಹಗೊಳಿಸಿದರೆ ಏನಾಗುತ್ತದೆ?: ಮೈತ್ರಿ ಪಕ್ಷಗಳ ನಾಯಕರು ಈಗಾಗಲೇ ಈ ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ದೂರು ಸಲ್ಲಿಸಿದ್ದಾರೆ. ಕಾಂಗ್ರೆಸ್‌ ನಾಯಕರ ದೂರಿನ ಅನ್ವಯ ಸ್ಪೀಕರ್‌ ಅವರು ಹದಿನಾಲ್ಕು ಶಾಸಕರನ್ನು ಅನರ್ಹಗೊಳಿಸಿದರೆ, ಸಂವಿಧಾನದ ಹತ್ತನೇ ಪರಿಚ್ಚೇದದ ಪಕ್ಷಾಂತರ ನಿಷೇಧ ಕಾಯ್ದೆಯ ಕಲಂ 164 (1ಬಿ) ಪ್ರಕಾರ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗುವವರೆಗೂ ಯಾವುದೇ ಮಂತ್ರಿ ಸ್ಥಾನ ಹಾಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವಂತಿಲ್ಲ.

ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದರೆ ಮಾತ್ರ ಸಚಿವರಾಗಲು ಅರ್ಹತೆ ಪಡೆದುಕೊಳ್ಳುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ರಾಜೀನಾಮೆ ಸಲ್ಲಿಸಿರುವ ಹದಿನಾಲ್ಕು ಶಾಸಕರನ್ನು ಅನರ್ಹಗೊಳಿಸಿದರೆ, ಅವರು ಮತ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ. ಅವರು ಅನರ್ಹಗೊಂಡರೆ, ಬಿಜೆಪಿಗೆ ಅತೃಪ್ತರಿಗೆ ತಕ್ಷಣವೇ ಸಚಿವ ಸ್ಥಾನ ನೀಡುವ ತಲೆ ನೋವು ತಪ್ಪಿದಂತಾಗುತ್ತದೆ. ಮೈತ್ರಿ ಪಕ್ಷಗಳ ಹೋರಾಟಕ್ಕೆ ಜಯ ಸಿಕ್ಕಂತಾಗುತ್ತದೆ.

ರಾಜೀನಾಮೆ ಅಂಗೀಕರಿಸಿದರೆ?: ಸ್ಪೀಕರ್‌ ರಮೇಶ್‌ ಕುಮಾರ್‌ ರಾಜೀನಾಮೆ ಸಲ್ಲಿಸಿರುವ ಶಾಸಕರ ರಾಜೀನಾಮೆ ಕ್ರಮ ಬದ್ದವಾಗಿವೆ ಎಂದು ಮನವರಿಕೆಯಾಗಿ ಅವರ ರಾಜೀನಾಮೆಗಳನ್ನು ಅಂಗೀಕರಿಸಿದರೆ, ಅವರು ಚುನಾವಣೆಗೆ ಸ್ಪರ್ಧಿಸದೆಯೂ ತಕ್ಷಣವೇ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಲು ಅವಕಾಶ ಇದೆ. ಆದರೆ, ಮಂತ್ರಿಯಾಗಿ ಆರು ತಿಂಗಳೊಳಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲೇಬೇಕಾಗುತ್ತದೆ. ಒಂದು ವೇಳೆ, ಚುನಾವಣೆಯಲ್ಲಿ ಸೋತರೆ, ಅವರು ಮಂತ್ರಿಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ.

ಸ್ಪೀಕರ್‌ ಅವರ ರಾಜೀನಾಮೆಯನ್ನು ಅಂಗೀಕರಿಸಿದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ತಮ್ಮ ಶಾಸಕರಿಗೆ ನೀಡಿದ ವಿಪ್‌ಗೆ ಮಾನ್ಯತೆ ದೊರೆತಿಲ್ಲ ಎಂದಾಗುತ್ತದೆ. ಆಗ ಮೈತ್ರಿ ಪಕ್ಷಗಳು ಸಂವಿಧಾನದ ಹತ್ತನೇ ಪರಿಚ್ಚೇದದಲ್ಲಿ ರಾಜಕೀಯ ಪಕ್ಷಗಳಿಗೆ ವಿಪ್‌ ನೀಡುವ ಅಧಿಕಾರದ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ.

ಸ್ಪೀಕರ್‌ ವಿಳಂಬ ಧೋರಣೆ ಅನುಸರಿಸಿದರೆ?: ಈಗಾಗಲೇ ರಾಜೀನಾಮೆ ಸಲ್ಲಿಸಿರುವ ಶಾಸಕರು ತಮ್ಮ ರಾಜೀನಾಮೆಯನ್ನು ಅಂಗೀಕರಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಸ್ಪೀಕರ್‌ ಅಧಿಕಾರ ವ್ಯಾಪ್ತಿಯಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿರುವುದರಿಂದ ಸ್ಪೀಕರ್‌ ಈ ಬಗ್ಗೆ ಇನ್ನಷ್ಟು ವಿಳಂಬ ಮಾಡಿದರೆ, ಬಿಜೆಪಿ ಸರ್ಕಾರ ರಚನೆಯಾದ ಕೂಡಲೇ ಸ್ಪೀಕರ್‌ ವಿರುದ್ದ ಅವಿಶ್ವಾಸ ಮಂಡನೆ ಮಾಡಿ ಅವರನ್ನು ಕೆಳಗಿಳಿಸುವ ಪ್ರಯತ್ನ ಮಾಡಬಹುದು ಅಥವಾ ಸ್ಪೀಕರ್‌ ರಮೇಶ್‌ ಕುಮಾರ್‌ ಅವರೇ ಪ್ರಕರಣ ಇತ್ಯರ್ಥಗೊಳಿಸದೆ ಸ್ವಯಂ ಪ್ರೇರಿತರಾಗಿ ಸಭಾಧ್ಯಕ್ಷರ ಹುದ್ದೆಗೆ ರಾಜೀನಾಮೆ ಸಲ್ಲಿಸಬಹುದು.

ನಂತರ ಬಿಜೆಪಿಯಿಂದ ನೂತನ ಸಭಾಧ್ಯಕ್ಷರನ್ನು ಆಯ್ಕೆ ಮಾಡಿದ ನಂತರ ಅವರು ರಾಜೀನಾಮೆ ಪ್ರಕರಣವನ್ನು ಇತ್ಯರ್ಥಗೊಳಿಸಬಹುದು. ಅವರು ರಾಜೀನಾಮೆ ಅಂಗೀಕರಿಸಿ ಅತೃಪ್ತರಿಗೆ ತಕ್ಷಣವೇ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ದೊರೆಯುವಂತೆ ನೋಡಿಕೊಳ್ಳಬಹುದು. ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಶಾಸಕರ ರಾಜೀನಾಮೆ ವಿಷಯದಲ್ಲಿ ವಿಳಂಬ ಮಾಡಿದಷ್ಟೂ ಬಿಜೆಪಿಗೆ ಆತಂಕ ಹೆಚ್ಚುತ್ತದೆ. ರಾಜೀನಾಮೆ ಅಂಗೀಕಾರದ ಮುಂಚೆಯೇ ಅತೃಪ್ತರು ಮನಸ್ಸು ಬದಲಿಸಿದರೆ, ಬಿಜೆಪಿಗೆ ಮತ್ತೆ ಸಂಖ್ಯಾ ಬಲದ ಕೊರತೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಬಿಜೆಪಿಗೆ ಆತಂಕ ತಪ್ಪಿದ್ದಲ್ಲ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next