ವಿಜಯಪುರ : ರಾಜಕೀಯ ವಿರೋಧಿಗಳಾದ ಸಿದ್ಧರಾಮಯ್ಯ ಜೊತೆ ಮಾತನಾಡಲು ಏನಿದೆ. ಸಿದ್ಧರಾಮಯ್ಯ ಮುಖಾಮುಖಿ ಬಗ್ಗೆ ರಾಜಕೀಯವಾಗಿ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಜಾಯಿಷಿ ನೀಡಿದ್ದಾರೆ.
ನಗರದಲ್ಲಿ ವಾಯವ್ಯ ಶಿಕ್ಷಕರ – ಪದವೀಧರ ಮೇಲ್ಮನೆ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಾಗೂ ಸಿದ್ಧರಾಮಯ್ಯ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತವಾಗಿ ಮುಖಾಮುಖಿ ಆಗಿದ್ದೆವು. ನಾನೊಂದು ಕಡೆ ಅವರೊಂದು ಕಡೆ ಹೊರಡಲು ವಿಮಾನ ನಿಲ್ದಾಣಕ್ಕೆ ತೆರಳಿದಾಗ ಗಣ್ಯರ ವಿಶ್ರಾಂತಿ ತಾಣದಲ್ಲಿ ಭೇಟಿ ಆಗಿದ್ದೆವು. ಆದರೆ ರಾಜಕೀಯ ಚರ್ಚೆ ಏನೂ ನಡೆದಿಲ್ಲ ಎಂದರು.
ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆ ಬಗ್ಗೆ ನನಗೇನೂ ತಿಳಿದಿಲ್ಲ ಎಂದ ಯಡಿಯೂರಪ್ಪ, ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಆಕ್ಷೇಪ ವಿಚಾರದ ಬಗ್ಗೆ ಚರ್ಚಿಸಲಾರೆ. ಸಂಬಂಧಿಸಿದವರು ಅದರ ಬಗ್ಗೆ ನೋಡಿಕೊಳ್ಳುತ್ತಾರೆ. ಹೀಗಾಗಿ ಈ ವಿಷಯದಲ್ಲಿ ನಾನು ಪ್ರತಿಕ್ರಿಯಿಸಲಾರೆ ಎಂದರು.
ಇದನ್ನೂ ಓದಿ: ಚಡ್ಡಿ ಹಾಕುವ ಎಲ್ಲರನ್ನೂ ಅಪಮಾನಿಸಿದ ಸಿದ್ದರಾಮಯ್ಯ : ಛಲವಾದಿ ನಾರಾಯಣಸ್ವಾಮಿ
ವಾಯವ್ಯ ಶಿಕ್ಷಕರ – ಪದವೀಧರ ಮೇಲ್ಮನೆ ಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪುರ, ಹಣಮಂತ ನಿರಾಣಿ ಪರ ಪ್ರಚಾರದಲ್ಲಿ ತೊಡಗಿದ್ದೇನೆ. ಎಲ್ಲೆಡೆ ಬಿಜೆಪಿ ಅಭ್ಯರ್ಥಿಗಳ ಪರ ಮತದಾರರ ಸ್ಪಂದನೆ ಇದ್ದು, ನಮ್ಮ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಭಾರಿ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.