Advertisement
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ರ್ಯಾಲಿ ನಡೆಸುತ್ತಿರುವ ಸಿದ್ದರಾಮಯ್ಯ ಅವರು ರ್ಯಾಲಿಗಳಲ್ಲಿ ಮಾತನಾಡುತ್ತಿರುವ ವಿಚಾರ ಹಾಗೂ ಮಾತುಗಳನ್ನು ಗಮನಿಸುತ್ತಿದ್ದೇನೆ. ಯಾವುದೇ ಹೇಳಿಕೆ ನೀಡುವುದು ಸುಲಭ. ಆದರೆ, ಅದನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ಹೀಗಾಗಿ, ಸಿದ್ದರಾಮಯ್ಯ ಮಾತನಾಡುವ ಸಂದರ್ಭದಲ್ಲಿ ಪ್ರಜ್ಞೆ ಇಟ್ಟುಕೊಂಡು ಮಾತಾಡಬೇಕು. ಕೃಷ್ಣ ನದಿಗೆ ಯೋಜನೆಗಳನ್ನು ರೂಪಿಸಿದವರು ಯಾರು? ದೆಹಲಿಗೆ ಹೋಗಿ ನೀರಾವರಿ ಯೋಜನೆಗಳನ್ನು ಜಾರಿ ಮಾಡಿದವರು ಯಾರು? ಸಿದ್ದರಾಮಯ್ಯನಾ, ದೇವೇಗೌಡನಾ ಎಂದು ಪ್ರಶ್ನಿಸಿದರು. ಆ ಮೂಲಕ ನೀರಾವರಿ ಯೋಜನೆಗಳ ಬಗ್ಗೆ ದೇವೇಗೌಡರು ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
“ಸದ್ಯ ಎರಡೂ ರಾಷ್ಟ್ರೀಯ ಪಕ್ಷಗಳು ಅಬ್ಬರದ ಪ್ರಚಾರ ಮಾಡುತ್ತಿವೆ. ಆದರೆ, ನಾವು ಸುಮ್ಮನೇ ಕುಳಿತಿಲ್ಲ. ಕುಮಾರಸ್ವಾಮಿ ರಾಜ್ಯದೆಲ್ಲೆಡೆ ಪ್ರಚಾರ ಕಾರ್ಯ ನಡೆಸುತ್ತಿದ್ದು, ಕಾಂಗ್ರೆಸ್-ಬಿಜೆಪಿ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತಲೇ ಇರುತ್ತದೆ. ಯಾರೇ ಬಂದರು, ಯಾರೇ ಹೋದರು, ನಮ್ಮ ಹೋರಾಟಕ್ಕೆ ಯಾರೇ ಅಡ್ಡಿಪಡಿಸಿದರೂ ಹೋರಾಟ ಮುಂದುವರಿಯುತ್ತದೆ. ಮಾಧ್ಯಮಗಳು ನಮ್ಮ ಬಗ್ಗೆ ಏನೇ ಬರೆದರೂ, ಏನೇ ತೋರಿಸಿದರೂ ನನಗೆ ಅಭ್ಯಂತರವಿಲ್ಲ’ ಎಂದರು. ಸುದೀಪ್ ಜತೆ ಮಾತುಕತೆ ಸತ್ಯ:
ಇದೇ ವೇಳೆ, ಸುದೀಪ್ ಜೊತೆಗಿನ ಭೇಟಿ ಕುರಿತು ಪ್ರತಿಕ್ರಿಯಿಸಿ, ಎಚ್.ಡಿ.ಕುಮಾರಸ್ವಾಮಿ ಅವರು ನಟ ಸುದೀಪ್ ಅವರೊಂದಿಗೆ ಮಾತನಾಡಿರುವುದು ನಿಜ. ಆದರೆ, ಸುದೀಪ್ ಏನು ನಿರ್ಧಾರ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಅಲ್ಲದೆ, ಸುದೀಪ್ ಅವರು ರಾಜಕೀಯ ಸೇರ್ಪಡೆ ಬಗ್ಗೆ ಮಾತಾಡಿಲ್ಲ. ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆಂದು ಸಹ ಹೇಳಿಲ್ಲ. ಹೀಗಿರುವಾಗ ಅವರ ಬಗ್ಗೆ ಹೆಚ್ಚು ಮಾತನಾಡಬಾರದು, ಅವರ ನಿರ್ಧಾರ ಮೊದಲು ಗೊತ್ತಾಗಬೇಕಲ್ಲವೇ? ಅವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದರು.