Advertisement
ಎಂದಿನಂತೆ ತಮ್ಮ ಮಾಧುರ್ಯಯುತ ಸ್ವರದಿಂದ, ಅತ್ಯುತ್ಕೃಷ್ಟ ಪದ್ಯಗಳಿಂದ ಕೇಳುಗರ ಕಿವಿಗೆ, ಮನಸಿಗೆ ಹಿತವನ್ನುಂಟು ಮಾಡಲು ಇನ್ನೊಮ್ಮೆ ರಂಗದಲ್ಲಿ ಕಾಣಿಸಿಕೊಳ್ಳುವಿರಿ ಎಂದೇ ನಂಬಿದ್ದೆವು. ಮೃದು ಮಧುರ ಕಂಠದ ಸ್ವರಾಲಾಪದಿಂದ ಶ್ರೋತೃಗಳ ಕಿವಿ ನಿಮಿರುವಂತೆ ಮಾಡಿ, ಮತ್ತದೇ ಹಾಡು ಗುನುಗುವಂತೆ ಮಾಡಿ ಮಧ್ಯರಾತ್ರಿಯ ಟೆಂಟಿನೊಳಗಣ ಚಳಿ ತಿಳಿಯದಂತೆ ರೋಮಾಂಚನ ಮಾಡುತ್ತಿದ್ದ ಆ ನಿಮ್ಮ ವಿಸ್ಮಯದ ರಂಗ ನಿರ್ದೇಶನ ಇನ್ನೆಲ್ಲಿ ಲಭ್ಯ?
Related Articles
Advertisement
ನಿಮ್ಮ ಶೈಲಿಗೆ ಪರ್ಯಾಯ ಎಲ್ಲಿದೆ?:
ಭಾಗವತರೇ, ಸುಂದರ, ಸ್ಪಷ್ಟ, ಸರಳ ಸಾಹಿತ್ಯದ ಮೂಲಕ ಕಥೆಯನ್ನು ಪ್ರಸಂಗ ಮುಗಿದ ಬಳಿಕವೂ ಪದ್ಯದ ಮೂಲಕವೇ ನೆನಪಿಟ್ಟುಕೊಳ್ಳುವಂತೆ ಮಾಡಿ ಭೂಪ್, ಪಹಾಡಿ, ದೇಸ್, ಮಾಲಕೌಂಸ್(ಹಿಂದೋಳ), ಚಾಂದ್ ಮೊದಲಾದ ರಾಗಗಳನ್ನು ಅದ್ಭುತವಾಗಿ ಯಕ್ಷಗಾನೀಯವಾಗಿ ನೀವು ಪ್ರಸ್ತುತಪಡಿಸುತ್ತಿದ್ದುದು ಇನ್ನು ನೆನಪು ಮಾತ್ರ. ನೆಬ್ಬೂರರ ಕಾಲಘಟ್ಟದಲ್ಲಿ ತ್ರಿವುಡೆ ತಾಳಕ್ಕೆ ಬಳಸುತ್ತಿದ್ದ ಭೂಪ್ ರಾಗವನ್ನು ಕಾಳಿಂಗ ನಾವಡರು ಅಮೃತಮತಿ ಪ್ರಸಂಗದಲ್ಲಿ ರೂಪಕ ತಾಳಕ್ಕೆ ಬಳಸಿದ್ದನ್ನು ನೀವು ಪದ್ಮಪಲ್ಲವಿ ಪ್ರಸಂಗದಲ್ಲಿ ಮುಂದುವರಿಸಿದ್ದನ್ನು ಮರೆಯುವುದುಂಟೆ? ಭೂಪ್ ಜತೆಗೆ ಪಹಾಡಿಯನ್ನು ಮಿಶ್ರಣ ಮಾಡಿ ವಿಶಿಷ್ಟ ಸ್ವರ ಸಂಯೋಜನೆಯಲ್ಲಿ ಗಾನಸುಧೆ ಉಣಬಡಿಸುತ್ತಿದ್ದ ನಿಮ್ಮ ಗಾಯನದ ಅನನ್ಯ ಶೈಲಿಗೆ ಪರ್ಯಾಯವೇ ಇಲ್ಲ. ಪ್ರಸಂಗ ಎಲ್ಲೂ ಓಘ ಕಳೆದುಕೊಳ್ಳದಂತೆ, ಎಲ್ಲ ವರ್ಗದ ಪ್ರೇಕ್ಷಕರನ್ನು ಪೌರಾಣಿಕ, ಸಾಮಾಜಿಕ, ಐತಿಹಾಸಿಕ ಕಥೆಯಲ್ಲಿ ಹಿಡಿದಿಟ್ಟುಕೊಳ್ಳಲು ಅನುವಾಗುವಂತೆ ಹೊಸತನ್ನು ಬೆರೆಸಿ ಮಂತ್ರಮುಗ್ಧವಾಗಿಸುವ ಕಲೆ ನಿಮ್ಮ ಜತೆಗೇ ತೆರೆಗೆ ಸರಿಯಿತೇ?
ಪ್ರತ್ಯೇಕ ಹಾದಿ ತಂದ ಯಶಸ್ಸು…
ಭಾಗವತರೇ, ಕಾಳಿಂಗ ನಾವಡ ಎಂಬ ಯಕ್ಷಗಾನದ ಪರಮಾದ್ಭುತ ಶಕ್ತಿಯ ಎದುರು ಪ್ರತಿಷ್ಠಿತನಾಗಲು ಸಂಗೀತ, ನಾಟಕ, ಜನಪದದ ಸತ್ವವನ್ನು ಹೀರಿ ಪ್ರೇಕ್ಷಕರಿಗೆ ಹೊಸದಾಗಿ ಬೊಗಸೆಯಲ್ಲಿ ಒಸಗೆಯಾಗಿ ಕೊಟ್ಟವರು ನೀವಲ್ಲವೇ? ಗೋಕರ್ಣದಲ್ಲಿ ನಡೆದ ಯಕ್ಷಗಾನದಲ್ಲಿ ಕಾಳಿಂಗ ನಾವಡರ ಭಾಗವತಿಕೆಯ ವಿಜಯಶ್ರೀ ಪ್ರಸಂಗದ ಚಾಂದ್ ರಾಗದ ಬಳಕೆಗೆ ಕಿವಿಯಾನಿಸಿ ಚೌಕಿಗೆ ತೆರಳಿ ಅವರ ಪರಿಚಯ ಮಾಡಿಕೊಂಡದ್ದೇ ನಿಮ್ಮ ಯಕ್ಷಗಾನದ ಆಸಕ್ತಿಗೆ ನೀರೆರೆದಂತಾದುದು ಅಲ್ಲವೇ. ಪ್ರವಾಹದೋಪಾದಿಯಲ್ಲಿ ಜನಮಾನಸ ಸೆಳೆಯುತ್ತಿದ್ದ ಎಳೆಯ ಪ್ರಾಯದಲ್ಲೇ ತನ್ನದೇ ಆದ ಮಾರ್ಗ ಸೃಷ್ಟಿಸಿದ್ದ ಕಾಳಿಂಗ ನಾವಡರ ಎದುರು ಮೇಳವೊಂದು ಗಳಿಕೆಯಲ್ಲಿ ಯಶಸ್ಸು ಪಡೆಯಬೇಕಾದರೆ ಪ್ರತ್ಯೇಕ ಹಾದಿ ನಿರ್ಮಾಣದ ಅಗತ್ಯ ಇದೆ ಎಂದು ಮನಗಂಡದ್ದೇ ನಿಮ್ಮ ಯಶಸ್ಸಿನ ಗುಟ್ಟಲ್ಲವೇ?
ಆ ಅಚಲ ಗುರುಭಕ್ತಿ…
ಭಾಗವತರೇ, ಎಲೆಕ್ಟ್ರಿಕಲ್ ಅಂಗಡಿ ಹಾಕಿ ಜೀವನ ಸಾಗಿಸುವ ಭರವಸೆ ಇದ್ದರೂ ಸೋದರ ಮಾವ ನಾರಾಯಣ ಮಧ್ಯಸ್ಥರ ಮೂಲಕ ಅಮೃತೇಶ್ವರಿ ಮೇಳಕ್ಕೆ ಧ್ವನಿ ಬೆಳಕಿನ ನಿರ್ವಹಣೆಗೆ ಸೇರಿದ ನಿಮ್ಮ ಧ್ವನಿ ರಂಗಸ್ಥಳದಲ್ಲಿ ಯಕ್ಷಗಾನದ ಹೊಸ ಬೆಳಕಾಗಿ ಉದಯಿಸಿದ ಆ ಕ್ಷಣವನ್ನು ಸಾಕಾರ ಮಾಡಿದ್ದು ಪ್ರಾಚಾರ್ಯ ನಾರಣಪ್ಪ ಉಪ್ಪೂರರು. “ನನ್ನ ಅನ್ನದ ಪ್ರತಿ ಅಗುಳಿನಲ್ಲೂ ಉಪ್ಪೂರರ ಋಣ ಇದೆ’ ಎಂದು ತಿರುಗಾಟದ ನಿವೃತ್ತಿಯ ಬಳಿಕವೂ ನೀವು ಹೇಳುತ್ತಿದ್ದಿರಿ ಎಂದರೆ, ನಿಮ್ಮ ಅಚಲ ಗುರು ಭಕ್ತಿ ಕಡೆಗೆ ನಮ್ಮ ಮೆಚ್ಚುಗೆ ಇದ್ದೇ ಇದೆ.
ಭಾಗವತರೇ, ಕ್ಯಾಸೆಟ್ ರಂಗದಲ್ಲಿ ಕಲೆಕ್ಷನ್ ಕ್ರಾಂತಿಯ ಧೂಳೆಬ್ಬಿಸಿದ್ದ ನೀವು 600ಕ್ಕೂ ಅಧಿಕ ಕ್ಯಾಸೆಟ್‌ಗಳಲ್ಲಿ ಭಾಗವತಿಕೆ ಮಾಡಿಲ್ಲವೇ? ಯಕ್ಷಗಾನಕ್ಕೆ ಬರುವ ಮುನ್ನವೇ 100ಕ್ಕೂ ಅಧಿಕ ಶಾಸ್ತ್ರೀಯ ಸಂಗೀತದ ಧ್ವನಿ ಸುರುಳಿಗೆ ಕೊರಳಾಗಲಿಲ್ಲವೇ? 400ಕ್ಕೂ ಅಧಿಕ ಪ್ರಸಂಗಗಳಿಗೆ ನಿರ್ದೇಶನ ಮಾಡಿದ ನೀವು ನಿವೃತ್ತಿಯ ಬಳಿಕವೂ, ಧಾರೇಶ್ವರ ಯಕ್ಷಬಳಗ ಚಾರಿಟೆಬಲ್ ಟ್ರÓr… ಮೂಲಕ ಯಕ್ಷಗಾನ ಸಪ್ತಾಹಗಳ ಆಯೋಜನೆ ಮಾಡುತ್ತಾ ಹೊಸ ಹೊಸ ಕಥೆಗಳನ್ನು ಪುರಾಣದ ಪುಟಗಳಿಂದ ಹುಡುಕುತ್ತಾ ಪ್ರಸಂಗ ಬರೆಯಿಸಿ ನಿರ್ದೇಶನ ಮಾಡುತ್ತಿದ್ದಿರಿ. ನಿಮ್ಮ ಉತ್ಸಾಹವನ್ನು ನಾವು ಇನ್ಯಾರಲ್ಲಿ ಕಾಣಬೇಕು?ಬೇಗ ಮರಳಿ ಬನ್ನಿ ಭಾಗವತರೇ. ಕಾಯು ತ್ತಿದ್ದೇವೆ. ರಂಗಮಂಚ ಬರಿದಾಗಿದೆ.
ಮೂಲತಃ ಎಲೆಕ್ಟ್ರಿಷಿಯನ್ ಆಗಿದ್ದ ಸುಬ್ರಹ್ಮಣ್ಯ ಧಾರೇಶ್ವರರು ಆಟಕ್ಕೆ ಟ್ಯೂಬ್‌ಲೈಟ್ ಕಟ್ಟುವ ಕೆಲಸ ಮಾಡಿಕೊಂಡಿದ್ದರು. ಬಿಡುವಿನಲ್ಲಿ ಕಲಿತು ಭಾಗವತರಾದರು. ಆನಂತರದಲ್ಲಿ ಅವರು ಏರಿದ ಎತ್ತರ, ಬಡಗುತಿಟ್ಟಿನ ಯಕ್ಷಗಾನ ಭಾಗವತಿಕೆಯಲ್ಲಿ ತಂದ ಬದಲಾವಣೆ ದೊಡ್ಡದು. ಗಾನಕೋಗಿಲೆ ಎಂದೇ ಹೆಸರಾಗಿದ್ದ ಅವರು ಟೀಕೆಗಳಿಗೆ ಅಂಜದೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಹೋದವರು…
-ಲಕ್ಷ್ಮೀ ಮಚ್ಚಿನ