Advertisement
ಈ ಬಾರಿಯ ಐಪಿಎಲ್‌ನಲ್ಲಿ ಅರ್ಧದಷ್ಟು ಪಂದ್ಯಗಳು ಈಗಾಗಲೇ ಮುಕ್ತಾಯವಾಗಿವೆ. ಪ್ರತಿ ಪಂದ್ಯದಲ್ಲೂ ಒಂದಲ್ಲ ಒಂದು ದಾಖಲೆಗಳು ಸೃಷ್ಟಿಯಾಗುತ್ತಲೇ ಇವೆ. ಆದರೆ ಇದರಲ್ಲಿ ಬೌಲರ್‌ಗಳ ದಾಖಲೆಗಳು ಸೇರಿಲ್ಲ ಎಂಬುದು ನೋವಿನ ಸಂಗತಿ. 17 ವರ್ಷಗಳ ಐಪಿಎಲ್‌ನಲ್ಲಿ ಮೊದಲ 6 ಗರಿಷ್ಠ ಮೊತ್ತಗಳು ಈ ಆವೃತ್ತಿಯಲ್ಲೇ ದಾಖಲಾಗಿವೆ.
Related Articles
Advertisement
50 ಓವರ್ ಮ್ಯಾಚ್‌ನಲ್ಲೇಕೆ ತಿಣುಕು?:
ಐಪಿಎಲ್‌ನಲ್ಲಿ ಓವರ್‌ಗೆ 15 ರನ್‌ಗಳ ಸರಾಸರಿಯಲ್ಲಿ ರನ್ ಕಲೆಹಾಕುವ ಬ್ಯಾಟರ್‌ಗಳು 50 ಓವರ್‌ನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಓವರ್‌ಗೆ 8 ರನ್ ಕಲೆ ಹಾಕಲು ತಿಣುಕಾಡುವುದನ್ನು ನೋಡಿದರೆ ಆಶ್ಚರ್ಯವಾಗುವುದು ಸಹಜ. ಅದೇ ಬಾಲ್, ಅದೇ ಬ್ಯಾಟ್, ಅದೇ ಬೌಲರ್, ಅದೇ ಮೈದಾನ… ಆದರೂ ಯಾಕೆ ತಿಣುಕಾಟ ಎಂದು 50 ಓವರ್‌ನ ಪಂದ್ಯ ನೋಡುವ ಹಲವರು ಕೇಳುವುದುಂಟು. ಎಷ್ಟೋ ಆಟಗಾರರನ್ನು ಐಪಿಎಲ್‌ನಲ್ಲಿ ಹೀರೋ, ಬಾಕಿ ಮ್ಯಾಚ್‌ಗಳಲ್ಲಿ ಝೀರೋ ಎಂದು ಕಿಚಾಯಿಸುವುದುಂಟು. ಇಲ್ಲಿ ಒಂದು ಮುಖ್ಯ ಸಂಗತಿಯಿದೆ, ಏನೆಂದರೆ, ಎಲ್ಲಾ ಅಂತಾರಾಷ್ಟ್ರೀಯ ಪಂದ್ಯಗಳನ್ನು, ಅಂದರೆ ಒನ್ ಡೇ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯಂತ್ರಿಸುತ್ತದೆ. ಇದರೊಂದಿಗೆ ಅಂಡರ್-19 ಪಂದ್ಯಾವಳಿಗಳನ್ನು ಆಯೋಜಿಸುತ್ತದೆ. ಹೀಗಾಗಿ ಈ ಪಂದ್ಯಗಳಲ್ಲಿ ಐಸಿಸಿಯ ನಿಯಮದಂತೆ ಪಿಚ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಐಪಿಎಲ್ ಪಂದ್ಯಾವಳಿಯಲ್ಲಿ ನಿರ್ಮಾಣವಾಗುವ ಪಿಚ್‌ಗಳಿಗೆ ಸಂಬಂಧಿಸಿದಂತೆ ಐಸಿಸಿಗೆ ನೇರವಾಗಿ ಸಂಬಂಧವಿಲ್ಲದಿದ್ದರೂ ಕ್ರಿಕೆಟ್‌ನ ಉಳಿವಿಗಾಗಿ ಸಲಹೆ, ಸೂಚನೆಗಳನ್ನು ನೀಡುತ್ತದೆ. ಆದರೂ ಬ್ಯಾಟರ್‌ಗಳಿಗೆ ಅನುಕೂಲವಾಗುವಂತೆ ಇಲ್ಲಿ ಪಿಚ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಐಪಿಎಲ್‌ನಲ್ಲಿ ಬ್ಯಾಟರ್‌ಗಳು ಅಬ್ಬರಿಸುತ್ತಾರೆ.
ವರವೂ ಹೌದು, ಶಾಪವೂ ಹೌದು:
2008ರಲ್ಲಿ ಆರಂಭವಾದ ಐಪಿಎಲ್ ಪಂದ್ಯಾವಳಿ ಒಂದಷ್ಟು ಉತ್ತಮ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದೆ. ಐಪಿಎಲ್‌ನಲ್ಲಿ ಮಿಂಚಿದ ಒಂದಷ್ಟು ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಟಿ20 ಮಾದರಿಯ ಕ್ರಿಕೆಟ್ ಆಡಲು ಹೆಚ್ಚಿನ ಆಟಗಾರಿಗೆ ಐಪಿಎಲ್ ಅವಕಾಶವನ್ನು ಒದಗಿಸಿಕೊಟ್ಟಿದೆ. ಆದರೆ, ಕ್ರಿಕೆಟ್ ಎಂದರೆ ಕೇವಲ ಬ್ಯಾಟರ್‌ಗಳ ಆಟ ಎನ್ನುವ ಭಾವನೆಯನ್ನು ಭವಿಷ್ಯದ ಪೀಳಿಗೆಯಲ್ಲಿ ಮೂಡಿಸಿದೆ. ಈ ಮೊದಲು ಸ್ಪರ್ಧಾತ್ಮಕ ಕ್ರಿಕೆಟ್ ನೀಡುತ್ತಿದ್ದ ಆನಂದವನ್ನು ಐಪಿಎಲ್ ಹಾಳು ಮಾಡಿದೆ. ಹೀಗೇ ಮುಂದುವರಿದರೆ, ಮುಂದೊಂದು ದಿನ ಕ್ರಿಕೆಟ್ ಮೇಲಿನ ಆಕರ್ಷಣೆಯೇ ಕಳೆದುಹೋದರೆ ಅಚ್ಚರಿಯಿಲ್ಲ.
ದಾಖಲೆಗಳು… ದಾಖಲೆಗಳು :
17ನೇ ಆವೃತ್ತಿಯ ಐಪಿಎಲ್ ದಾಖಲೆಗಳಿಂದ ತುಂಬಿಹೋಗಿದೆ. ಬಹುತೇಕ ತಂಡಗಳ ಬ್ಯಾಟರ್‌ಗಳು ಸ್ಫೋಟಕ ಆಟವಾಡಿ ತಂಡಗಳು ಗರಿಷ್ಠ ಮೊತ್ತ ಕಲೆ ಹಾಕುವಂತೆ ಮಾಡಿದ್ದಾರೆ. ಈವರೆಗೂ, 2013ರಲ್ಲಿ ಆರ್‌ಸಿಬಿ ಗಳಿಸಿದ್ದ 263 ರನ್ ಐಪಿಎಲ್‌ನ ಗರಿಷ್ಠ ಸ್ಕೋರ್ ಆಗಿತ್ತು. ಆದರೆ ಈ ವರ್ಷ ಇದು 5ನೇ ಸ್ಥಾನಕ್ಕೆ ಕುಸಿದಿದೆ. ಹೈದ್ರಾಬಾದ್ ತಂಡ 4 ಸಲ 250ಕ್ಕಿಂತ ಹೆಚ್ಚು ರನ್‌ಗಳನ್ನು ಇದೊಂದೇ ಸೀಸನ್‌ನಲ್ಲಿ ಕಲೆ ಹಾಕಿದೆ. ಆರ್‌ಸಿಬಿ ಮತ್ತು ಹೈದ್ರಾಬಾದ್ ನಡುವಿನ ಪಂದ್ಯದಲ್ಲಿ ಬರೋಬ್ಬರಿ 38 ಸಿಕ್ಸರ್ ದಾಖಲಾದವು. ಇದು ಐಪಿಎಲ್ ಪಂದ್ಯವೊಂದರಲ್ಲಿ ದಾಖಲಾದ ಗರಿಷ್ಠ ಸಿಕ್ಸರ್ ಎನ್ನಲಾಗಿತ್ತು. ಆದರೆ ಆ ದಾಖಲೆ ಕೂಡ ಮೊನ್ನೆ ಶನಿವಾರ ಪತನವಾಗಿದೆ. ಪಂದ್ಯದಲ್ಲಿ 42 ಸಿಕ್ಸರ್ ಬಂದಿರುವುದು ಹೊಸ ದಾಖಲೆಯಾಗಿದೆ. ತಂಡವೊಂದು (ಪಂಜಾಬ್ ಕಿಂಗ್ಸ್) ಚೇಸಿಂಗ್ ವೇಳೆ 262 ರನ್ ಗಳಿಸಿ ಗೆದ್ದದ್ದು, ಇನ್ನಿಂಗ್ಸ್ ವೊಂದರಲ್ಲಿ ಮೊದಲ 10 ಓವರ್‌ನಲ್ಲಿ 148 ರನ್ ದಾಖಲಾಗಿದ್ದು… ಇವೆಲ್ಲವೂ ಹೊಸ ದಾಖಲೆಗಳೇ.
ಕೋಟಿ ಕೋಟಿ ಪಡೆದವರೆಲ್ಲ ಏನಾದರು?:
ಈ ಬಾರಿಯ ಐಪಿಎಲ್‌ನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್‌ರನ್ನು ಪ್ರಶಸ್ತಿ ಮೊತ್ತಕ್ಕಿಂತ ಹೆಚ್ಚು ಹಣ ನೀಡಿ ಖರೀದಿಸಲಾಯಿತು. (ಮಿಚೆಲ್ ಸ್ಟಾರ್ಕ್- 24.75 ಕೋಟಿ ರೂ,. ಪ್ಯಾಟ್ ಕಮಿನ್ಸ್‌ಗೆ 20.5 ಕೋಟಿ ರು.) ಈ ವರ್ಷ 7 ಪಂದ್ಯ ಆಡಿರುವ ಸ್ಟಾರ್ಕ್ 25 ಓವರ್ ಬೌಲಿಂಗ್ ಮಾಡಿದ್ದು 287 ರನ್ ನೀಡಿ 6 ವಿಕೆಟ್ ಕಿತ್ತಿದ್ದಾರೆ. ವಿಶ್ವಕಪ್ ವಿಜೇತ ನಾಯಕ ಅನ್ನಿಸಿಕೊಂಡಿರುವ ಕಮಿನ್ಸ್ 8 ಪಂದ್ಯ ಆಡಿ 10 ವಿಕೆಟ್ ಪಡೆದುಕೊಂಡಿದ್ದಾರೆ. ಇವರಲ್ಲದೆ 18.5 ಕೋಟಿ ರೂಗಳಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾದ ಇಂಗ್ಲೆಂಡ್‌ನ ಸ್ಯಾಮ್ ಕರನ್, 9 ಪಂದ್ಯ ಆಡಿ 271 ರನ್ ನೀಡಿ 12 ವಿಕೆಟ್ ಪಡೆದುಕೊಂಡಿದ್ದಾರೆ. ನಾಯಕನಾಗಿಯೂ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ಕೊಟ್ಟ ಹಣಕ್ಕೆ ನ್ಯಾಯ ಸಲ್ಲಿಸುತ್ತಿರುವುದು ಇವರೊಬ್ಬರೇ ಅನ್ನಬಹುದು. ಇನ್ನು 17.5 ಕೋಟಿ ರೂ.ಗಳಿಗೆ ಆರ್‌ಸಿಬಿ ಪಾಲಾಗಿರುವ ಕ್ಯಾಮರೂನ್ ಗ್ರೀನ್, 7 ಪಂದ್ಯಗಳಲ್ಲಿ 6 ವಿಕೆಟ್ ಪಡೆದು, 111ರನ್ ಮಾತ್ರ ಗಳಿಸಿ ದುಬಾರಿಯಾಗಿ ಪರಿಣಮಿಸಿದ್ದಾರೆ.
ಎಲ್ಲೆಡೆಯೂ ಸಲ್ಲುವ ವಿದೇಶಿ ಆಟಗಾರರು:
ಐಪಿಎಲ್ ಪಂದ್ಯಗಳಲ್ಲಿ ದೇಶೀ ಆಟಗಾರರು ವಿಫಲರಾಗಬಹುದು. ಆದರೆ ಹೆಚ್ಚಿನ ಸಂದರ್ಭದಲ್ಲಿ ವಿದೇಶಿ ಆಟಗಾರರು ವಿಫಲರಾಗುವುದಿಲ್ಲ. ಡೇವಿಡ್ ಮಿಲ್ಲರ್, ಮಾರ್ಕಸ್ ಸ್ಟೋಯಿನಸ್, ಜಾನಿ ಬೆಸ್ಟೋ, ಸುನೀಲ್ ನಾರಾಯಣ್, ಆಂಡ್ರೆ ರಸೆಲ್, ನಿಕೋಲಸ್ ಪೂರನ್, ಡೇವಿಡ್ ವಾರ್ನರ್, ಕ್ಲಾಸೆನ್ ಮುಂತಾದವರು ಯಾವುದೇ ಪಿಚ್‌ನಲ್ಲಾದರೂ ಸರಿ, ಅಂಜದೇ ಬ್ಯಾಟ್ ಬೀಸುತ್ತಾರೆ. ಮಹೇಶ್ ಪತಿರಾಣ, ಮುಸ್ತಫಿರ್, ಕಮಿನ್ಸ್, ಸ್ಯಾಮ್ ಕರನ್ ಮುಂತಾದವರು ಆರಾಮವಾಗಿ ವಿಕೆಟ್ ಕೀಳುತ್ತಾರೆ.
-ಗಣೇಶ್ ಪ್ರಸಾದ್