Advertisement
ಕೋಳಿನಾ… ಮೊಟ್ಟೆನಾ…ಯೋಚಿಸಿ ನೋಡಿ. ಕೋಳಿಗಿಂತ ಮೊಟ್ಟೆಯೇ ಹೆಚ್ಚು ಫೇಮಸ್ ಎನ್ನಬಹುದು. ಕೋಳಿ ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುವುದು ಕಡಿಮೆ. ಅಲ್ಲಿ ಇಲ್ಲಿ ತಿಪ್ಪೆ ಕೆದಕುತ್ತ, ಹುಳ ಹುಪ್ಪಟೆ ತಿಂದುಕೊಂಡು ಅರಾಮಾಗಿರುತ್ತವೆ. ಕಾವು ಕೊಟ್ಟು ಮರಿ ಮಾಡುತ್ತವೆ. ಆಗೀಗ ವೈರಸ್ ಅಟ್ಯಾಕ್ ಆಗಿ ಕೋಳಿಜ್ವರ ಅಂತ ಕಾಣಿಸಿಕೊಂಡು, ಪಾಪ ಅವುಗಳ ಮಾರಣಹೋಮ ನಡೆದುಹೋಗುತ್ತದೆ. ಇಲ್ಲದಿದ್ದರೆ ಪ್ರತಿದಿನ ಅದು ನೂರಾರು ಬಗೆಯ ತಿನಿಸುಗಳ ರೂಪದಲ್ಲಿ, ಮನುಷ್ಯರ ಹೊಟ್ಟೆಗೆ ಆಹಾರವಾಗುತ್ತಿರುತ್ತದೆ. ಅದನ್ನು ಬಿಟ್ಟರೆ ಮನುಷ್ಯ ಮನರಂಜನೆಗಾಗಿ ಕೋಳಿಗಳನ್ನು ಪರಸ್ಪರ ಜಗಳ ಮಾಡಿಸುವುದುಂಟು.
Related Articles
Advertisement
ಮೊಟ್ಟೆಗೂ ಅಂತಾರಾಷ್ಟ್ರೀಯ ದಿನ!
1996ರಿಂದ ಪ್ರತಿವರ್ಷ ಅಕ್ಟೋಬರ್ ಎರಡನೆಯ ಶುಕ್ರವಾರ “ಅಂತರಾಷ್ಟ್ರೀಯ ಮೊಟ್ಟೆ ದಿನ’ ಆಚರಿಸುತ್ತಾರೆ. ಕೋಳಿಗಿಲ್ಲದ ಭಾಗ್ಯ ಮೊಟ್ಟೆಗೆ ನೋಡಿ. ಅದಕ್ಕೆ ಥೀಮ್ ಕೂಡಾ ಇರುತ್ತದೆ. “ಎಗ್ ಗ್ಯಾಂಗ್’ ಅಂತ ಇನ್ಸ್ಟಾಗ್ರಾಂನಲ್ಲಿ ಪೇಜ್ ಕೂಡ ಇದೆ. ಇತ್ತೀಚೆಗೆ ಇದನ್ನು ತಿನ್ನುವವರು ಹೆಚ್ಚಾಗಿದ್ದಾರಂತೆ. ಇದೂ ಸಹ ಹತ್ತಾರು ವೆರೈಟಿ ತಿನಿಸುಗಳಲ್ಲಿ ಬಳಕೆಯಾಗುತ್ತಲೇ ಇರುತ್ತದೆ. ಕೋಳಿ ಫಾರಂ ಹತ್ತಿರ ಇರುವ ಕಡೆ, ಕೆಲವರು ಕಡಿಮೆ ಬೆಲೆಗೆ ಸ್ವಲ್ಪ ಸಿಳುಕು ಬಿಟ್ಟಿರುವ ಮೊಟ್ಟೆಗಳನ್ನು “ಡ್ಯಾಮೇಜ್ ತತ್ತಿ’ ಎಂದು ತಂದು ಉಪಯೋಗಿಸುವುದಿದೆ. ಮನುಷ್ಯರಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡಿದ ಹಾಗೆ, ಮೊಟ್ಟೆಗಳಲ್ಲಿ ಬರೀ ಹೆಣ್ಣು ಮೊಟ್ಟೆಗಳನ್ನು ಉಳಿಸಿಕೊಂಡು, ಗಂಡು ಮೊಟ್ಟೆಗಳನ್ನು ಹುಡುಕಿ ಹುಡುಕಿ ನಾಶ ಮಾಡುವ ವಿಧಾನ ಕಂಡುಹಿಡಿಯುತ್ತಿದ್ದಾರಂತೆ!
ಕೆಲವು ಶ್ಯಾಂಪೂವಿನಲ್ಲೂ ಇದನ್ನು ಬಳಸುತ್ತಾರೆ. ಕೂದಲಿಗೆ, ಮುಖಕ್ಕೆ ಅಂತ ಮೊಟ್ಟೆಯ ಜೊತೆ ಏನೇನೋ ಸೇರಿಸಿ ಸೌಂದರ್ಯವರ್ಧಕವನ್ನಾಗಿ ಬಳಸುವುದಿದೆ.
ರಾಜಕಾರಣಿಗಳ ಭಾಷಣ ನಿಲ್ಲಿಸಲು ಕೊಳೆತ ಮೊಟ್ಟೆ ಹಾಗೂ ಟೊಮ್ಯಾಟೋ ಒಳ್ಳೆಯ ಕಾಂಬಿನೇಷನ್. ಹೋಳಿಯ ಹಬ್ಬದಲ್ಲಿ ಬಣ್ಣಗಳ ಎರಚಾಟದ ಜೊತೆಗೆ, ತಲೆಗಳ ಮೇಲೆ ಮೊಟ್ಟೆ ಒಡೆಯುವುದುಂಟು. ಕೆಲವೊಮ್ಮೆ ಹೈವೇಗಳಲ್ಲಿ ಕಾರು ನಿಲ್ಲಿಸಲು ಮೊಟ್ಟೆಯನ್ನು ಮುಂದಿನ ಗಾಜಿಗೆ ಒಡೆದು, ಅದು ವೈಪರ್‌ನಿಂದ ಹರಡಿ ಮಸುಕಾದ ನಂತರ ನಿಲ್ಲಿಸಲೇಬೇಕಾಗಿ ಬಂದಾಗ, ಕಳ್ಳರು ತಮ್ಮ ಕೈಚಳಕ ತೋರುವುದಿದೆ. ಗಂಡಸರ ಬೋಳಾಗಿರುವ ತಲೆಯನ್ನು ಮೊಟ್ಟೆಗೆ ಹೋಲಿಸುವುದರ ಜೊತೆಗೆ ಆ ಬಗ್ಗೆಯೇ “ಒಂದು ಮೊಟ್ಟೆಯ ಕಥೆ’ ಎನ್ನುವ ಸಿನೆಮಾ ಕೂಡಾ ಬಂದಿದೆ. ಫ್ರಿಡ್ಜ್ನಲ್ಲಿ ಯಾವ ಸಾಮಾನುಗಳಿಗೆ ಕೇರ್ ಮಾಡದಿದ್ದರೂ ಮೊಟ್ಟೆಗಳಿಗಾಗಿ ಮಾತ್ರ ವಿಶೇಷ ಜಾಗ್ರತೆ ವಹಿಸಿ, ಅವುಗಳನ್ನು ಇಡುವ ಸ್ಟ್ಯಾಂಡ್ ಕೊಟ್ಟೇ ಇರುತ್ತಾರೆ. “ಮೊಟ್ಟೆ ತಿಂದವರಿಗೆ ಹೊಟ್ಟೆ ಬರುವುದಿಲ್ಲ’ ಎನ್ನುವ ಮಾತೂ ಸಹ ಇದರ ಬೇಡಿಕೆ ಹೆಚ್ಚಲು ಕಾರಣವಿರಬಹುದು. ಇನ್ನು ಪಾಶ್ಚಾತ್ಯರ ತಿನಿಸಾದ ಕೇಕ್‌ಗೂ ಮೊಟ್ಟೆಗೂ ಬಿಡಿಸಲಾರದ ಸಂಬಂಧ. ಇತ್ತೀಚೆಗೆ ಮೊಟ್ಟೆ ರಹಿತ ಕೇಕುಗಳ ತಯಾರಿಕೆಯೂ ರೂಢಿಗೆ ಬಂದಿದೆ. ಇನ್ನೂ ಎಷ್ಟೋ ಅಡುಗೆ ಹಾಗೂ ಬೇಕರಿ ತಿನಿಸುಗಳಲ್ಲಿ ಮೆದುವಾಗಲು, ಗರಿಗರಿಯಾಗಲು, ಪದರು ಪದರಾಗಲು ಮೊಟ್ಟೆ ಬಳಕೆಯಾಗುತ್ತದೆ. ಗುರುವನ್ನು ಶಿಷ್ಯ ಮೀರಿಸಿದಂತೆ, ಮೊಟ್ಟೆ ಕೋಳಿಯನ್ನು ಮೀರಿಸಿದೆ ಎಂಬುವ ಮಾತನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು ಬಿಡಿ.
-ನಳಿನಿ ಟಿ. ಭೀಮಪ್ಪ, ಧಾರವಾಡ