Advertisement
ವಾರಗಳಿಂದ ಆಚರಣೆ:
Related Articles
Advertisement
ಇಂತಹ ನಮ್ಮ ಕುಟುಂಬಗಳಲ್ಲಿ ಹಬ್ಬಕ್ಕೊಮ್ಮೆ ಸಿಗುವ ಹೊಸಬಟ್ಟೆ, ಆ ಹೊಸಬಟ್ಟೆಯ ಪರಿಮಳ, ಧರಿಸಿದಾಗ ಆಗುತ್ತಿದ್ದ ಸಂಭ್ರಮ ಈಗ ದಿನ ನಿತ್ಯ ಹೊಸದನ್ನು ಧರಿಸುವ ಸಾಮರ್ಥ್ಯವಿದ್ದಾಗಲೂ ಅಥವಾ ಹಲವು ಬಾರಿ ಹೊಸ ಉಡುಗೆಗಳನ್ನು ಧರಿಸುವಾಗಲೂ ಸಿಗುವುದಿಲ್ಲ.
ಮಕ್ಕಳದ್ದೇ ಎಲ್ಲ ಕಾರುಬಾರು:
ಕ್ರಿಸ್ಮಸ್ ಹಬ್ಬದ ಆಚರಣೆಗಾಗಿ ನಾವು ಮಕ್ಕಳೇ ಸೇರಿ ಗೋದಲಿ (ದನದ ಕೊಟ್ಟಿಗೆ)ಯನ್ನು ಸಿದ್ಧಪಡಿಸುತ್ತಿದ್ದೆವು. ಹಬ್ಬಕ್ಕೆ ಇನ್ನೂ ಒಂದು ವಾರ ಇರುವಾಗಲೇ ಗದ್ದೆಯ ಮಣ್ಣನ್ನು ತಂದು, ನೀರು ಸೇರಿಸಿ, ಮಣ್ಣಿಗೆ ಹುಳಿಬರಿಸಿ ಬಾಲ ಏಸು, ಮೇರಿ, ಜೋಸೆಫ್, ಆಡು, ಹಸು, ಕುದುರೆ, ಒಂಟೆ, ಕುರುಬರು, ಮೂವರು ಜ್ಞಾನಿಗಳು, ದೇವದೂತರ ಮೂರ್ತಿಗಳನ್ನು ಮಾಡಿ, ಒಣಗಿದ ನಂತರ ಬಣ್ಣ ಹಚ್ಚುವುದು ಇವನ್ನೆಲ್ಲ ಬಹಳ ತಾಳ್ಮೆಯಿಂದ ಮಾಡಬೇಕು. ಗೋದಲಿ ಸಿದ್ಧಪಡಿಸಿದ ನಂತರ ಇವನ್ನೆಲ್ಲ ಗೋದಲಿಯಲ್ಲಿಡುವುದು. ಹೀಗೆ ಒಟ್ಟು ಎರಡು-ಮೂರು ದಿನಗಳ ಕೆಲಸ. ಶಾಲೆಯಲ್ಲಿದ್ದಾಗಲೂ ಮನಸ್ಸು ಗೋದಲಿಯಲ್ಲೇ. ಬಣ್ಣದ ಕಾಗದಗಳನ್ನು ತಂದು ದೊಡ್ಡ ನಕ್ಷತ್ರವನ್ನು ತಯಾರಿಸುವ ಚಾಣಾಕ್ಷತೆ ನಮ್ಮ ಅಣ್ಣನಿಗಿತ್ತು. ಚಿಕ್ಕ ಮಕ್ಕಳು ದೊಡ್ಡ ಹುಡುಗರಿಗೆ ಗೋದಲಿ ನಿರ್ಮಾಣದಲ್ಲಿ ಸಹಾಯಕರಾಗಿ ಕೆಲಸ ಮಾಡಬೇಕು. ಅವರು ಹೇಳಿದಂತೆ ಕೇಳಬೇಕು. ಅಕ್ಕ ಪಕ್ಕದ ಮನೆಯ ಅನ್ಯ ಧರ್ಮದ ಮಕ್ಕಳನ್ನೂ ಸೇರಿಸಿಕೊಂಡು ಗೋದಲಿ ಮಾಡುವುದು ಆಗಿದ್ದ ಸಂಪ್ರದಾಯ. ಅವರಿಗೂ ನಮ್ಮಷ್ಟೇ ಅಥವಾ ಇನ್ನೂ ಸ್ವಲ್ಪ ಹೆಚ್ಚಿನ ಉತ್ಸಾಹ. ನೆರೆಹೊರೆಯವರ ಸಾಮಗ್ರಿಗಳನ್ನೂ ಸಂಗ್ರಹಿಸಿ ಅವರ ಮಕ್ಕಳನ್ನೂ ಸೇರಿಸಿಕೊಂಡು ಸಿದ್ಧಪಡಿಸಿದ ಅಂದಿನ ಗೋದಲಿ ನಮಗರಿವಿಲ್ಲದೆಯೆ ಪರಸ್ಪರ ಸಹಕಾರ, ಭ್ರಾತೃತ್ವ, ಸಹಿಷ್ಣುತೆಯ ಪಾಠಶಾಲೆಯಾಗಿತ್ತು.
ಮನೆಯಲ್ಲೇ ತಯಾರಿಸಿದ ವಿಶೇಷ ತಿಂಡಿ, ತಿನಿಸುಗಳನ್ನು ಡಿಸೆಂಬರ್ 24ರಂದು ನೆರೆಹೊರೆಯವರಿಗೆ ಹಂಚುವ ಸಂಭ್ರಮ. ಕರಾವಳಿ ಮೂಲದ ಕೊಂಕಣಿ ಕ್ರೈಸ್ತರು ಈ ತಿಂಡಿಗಳನ್ನು ಒಟ್ಟಾಗಿ “ಕುಸ್ವಾರ್’ ಎನ್ನುತ್ತಾರೆ. ರೋಸ್ ಕುಕ್ಕೀಸ್, ಕಲ್ಕಲ್ಸ್, ಕೇಕ್, ಕಜ್ಜಾಯ, ಹುರಿದ ಅಕ್ಕಿ ಹಿಟ್ಟಿನ ಉಂಡೆ, ಚಕ್ಕುಲಿ, ಕೋಡುಬಳೆ ಮೊದಲಾದ ತಿಂಡಿಗಳು.
ಮಧ್ಯರಾತ್ರಿಯ ಪೂಜೆಯಲ್ಲಿ ತೂಕಡಿಕೆ:
ಅಂದೇ ಮಧ್ಯರಾತ್ರಿಯ ಪೂಜೆಗಾಗಿ ನಾವೆಲ್ಲ ಗುಂಪು ಗುಂಪಾಗಿ ಇಗರ್ಜಿಗೆ ಹೋಗುತ್ತಿದ್ದೆವು. ಮಧ್ಯರಾತ್ರಿ ಕ್ರಿಸ್ತನ ಜನನ ಸಮಯದವರೆಗೂ ವಿಶೇಷವಾದ ಹಾಡುಗಳ ಗಾಯನ (Christmas carols) ಸುಮಾರು ಎರಡು ಗಂಟೆಗಳ ಪೂಜಾ ವಿಧಿಯ ಸಮಯದಲ್ಲಿ ಮಕ್ಕಳು ನಿದ್ದೆಯಿಂದ ತೂಕಡಿಸುವುದು ಸಾಮಾನ್ಯ ದೃಶ್ಯವಾಗಿತ್ತು. ಪೂಜೆಯ ನಂತರ ಪರಸ್ಪರ ಶುಭಾಶಯ ವಿನಿಮಯ, ಓಡೋಡಿ ಮನೆಗೆ ಬಂದು ಗೋದಲಿಯಲ್ಲಿ ಬಾಲ ಏಸುವಿನ ಮೂರ್ತಿಯನ್ನಿಡುವುದು, ನಕ್ಷತ್ರದ ಬಲ್ಬನ್ನು ಬೆಳಗಿಸುವುದು, ಗೋದಲಿಯ ಚೆಂದವನ್ನು ಗಮನಿಸುವುದು, ಇನ್ನು ಸಾಕು, ಮಲಗಿಕೊಳ್ಳಿ ಎಂದು ದೊಡ್ಡವರಿಂದ ಬೈಸಿಕೊಳ್ಳುವುದು. ಆಹಾ, ಅವು ಎಂತಹ ಚೆಂದದ ದಿನಗಳಾಗಿದ್ದವು.
ಮರೀಚಿಕೆಯಾಗದಿರಲಿ ಸಂಸ್ಕೃತಿ ಸೌಹಾರ್ದ :
ಮಾರನೆಯ ದಿನ ವಿಶೇಷ ಹಬ್ಬದ ಅಡುಗೆ. ಸಾಮಾನ್ಯವಾಗಿ ಮಾಂಸಾಹಾರ. ಮಧ್ಯಾಹ್ನ ಊಟಕ್ಕೆ ಇತರ ಧರ್ಮದ ನೆರೆಹೊರೆಯವರಿಗೆ ಆಹ್ವಾನ. ಪರಸ್ಪರ ಪ್ರೀತಿ, ವಿಶ್ವಾಸ ನಿವೇದನೆಯ ಅಪೂರ್ವ ಅನುಭವದ ಸೀಸನ್. ಊರಿನ ಜಾತ್ರೆ, ಯುಗಾದಿ, ಅಷ್ಟಮಿ, ಚೌತಿ, ದೀಪಾವಳಿ ಮೊದಲಾದ ಹಬ್ಬಗಳ ಸಂಭ್ರಮವನ್ನು ಅವರು ನಮ್ಮೊಂದಿಗೆ, ಕ್ರಿಸ್ಮಸ್, ಸಾಂತ್ ಮಾರಿ, ತೆನೆ ಹಬ್ಬದ ಸವಿಯನ್ನು ನಾವು ಅವರೊಂದಿಗೆ ಹಂಚಿಕೊಳ್ಳುತ್ತಿದ್ದ ಆ ಸಂಸ್ಕೃತಿ ಈಗ ಕ್ರಮೇಣ ಮರೆಯಾಗುತ್ತಿದೆ. ಹಿಂದಿನ ಸೌಹಾರ್ದತೆಯ ಕಾಲ ಮರೀಚಿಕೆಯಾಗದಿರಲಿ ಎಂಬ ಹಾರೈಕೆಯೊಂದಿಗೆ ಎಲ್ಲರೂ ಒಟ್ಟಾಗಿ ಕ್ರಿಸ್ಮಸ್ ಆಚರಿಸೋಣ.
-ಕನ್ಸೆಪ್ಟಾ ಫೆರ್ನಾಂಡಿಸ್