“ದೀನ ದುರ್ಬಲರ ಸೇವೆಯೇ ದೇವರ ಸೇವೆ’ ಎಂಬುದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಧ್ಯೇಯ. ಮೈಸೂರಿನಲ್ಲಿರುವ ಈ ಸಂಸ್ಥೆಗೆ 33 ವರ್ಷಗಳ ಹಿನ್ನೆಲೆಯಿದೆ. ಆರಂಭದ ದಿನಗಳಲ್ಲಿ ಆರೋಗ್ಯ, ಶಿಕ್ಷಣ ಹಾಗೂ ಅಭಿವೃದ್ಧಿ ಕುರಿತ ಚಟುವಟಿಕೆಗಳಿಂದ ಹೆಸರು ಮಾಡಿದ ಈ ಸಂಸ್ಥೆ 2009ರಿಂದ ಉಪಶಮನ ಆರೈಕೆ ಎಂಬ ವಿನೂತನ ಸೇವೆಯನ್ನು ಆರಂಭಿಸಿದೆ.
ಕ್ಯಾನ್ಸರ್, ಪಾರ್ಶ್ವವಾಯು, ಬೆನ್ನುಹುರಿಯ ಗಾಯ, ಮೆದುಳಿಗೆ ಸಂಬಂಧಿಸಿದ ತೊಂದರೆ, ಗ್ಯಾಂಗ್ರಿನ್, ಅಧಿಕ ರಕ್ತದೊತ್ತಡ, ಅಂಕೆ ಮೀರಿದ ಮಧುಮೇಹ, ಕಿಡ್ನಿ ವೈಫಲ್ಯ, ಸೆರಬ್ರಲ್ ಪಾಲ್ಸಿ…ಇವೆಲ್ಲಾ ದೀರ್ಘಕಾಲದ ಚಿಕಿತ್ಸೆ ಬಯಸುತ್ತವೆ. ಇಂಥ ಸಮಸ್ಯೆಗಳಿಂದ ಬಳಲುವವರಿಗೆ ಹಾಗೂ ಗುಣಪಡಿಸಲಾಗದ ಕಾಯಿಲೆಗಳಿಗೆ ತುತ್ತಾದವರಿಗೆ ಉಚಿತವಾಗಿ ಮನೆ ಆಧಾರಿತ ಚಿಕಿತ್ಸೆಯನ್ನು ವಿವೇಕಾನಂದ ಯೂತ್ ಮೂವ್‌ಮೆಂಟ್ ಒದಗಿಸುತ್ತಿದೆ. ಈವರೆಗೆ 700ಕ್ಕೂ ಹೆಚ್ಚು ಮಂದಿಯ ಆರೈಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿರುವ 450 ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಹಾಗೂ ಅವರ ಅಗತ್ಯಗಳನ್ನು ಪೂರೈಸುವ ಗುರಿ ಹೊಂದಲಾಗಿದೆ.
ರೋಗ ಪತ್ತೆ ಹಚ್ಚುವುದು, ಸೂಕ್ತ ಚಿಕಿತ್ಸೆ ಕೊಡಿಸುವುದು, ತಾತ್ಕಾಲಿಕ ನೋವುಗಳಿಗೆ ಶಾಶ್ವತ ಪರಿಹಾರ ಒದಗಿಸುವುದು, ಆ ಮೂಲಕ ಜನರನ್ನು ರೋಗಮುಕ್ತರನ್ನಾಗಿ ಮಾಡಬೇಕೆಂಬುದು ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಉದ್ದೇಶ. ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ 20,000ಕ್ಕೂ ಹೆಚ್ಚು ಮಂದಿಗೆ ದೀರ್ಘಾವಧಿ ಚಿಕಿತ್ಸೆಯ ಅಗತ್ಯವಿದೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಂದಿಯ ಕಣ್ಣೀರು ಒರೆಸಬೇಕು. ಅದಕ್ಕೆಂದೇ ಮೈಸೂರಿನ ಪ್ರಿನ್ಸೆಸ್ ಕೃಷ್ಣರಾಜಮ್ಮಣ್ಣಿ ಟ್ಯೂಬರ್‌ಕುಲಾಸಿಸ್ ಅಂಡ್ ಚೆಸ್ಟ್ ಡಿಸೀಸ್ ಕ್ಯಾಂಪಸ್‌ನಲ್ಲಿ 20 ಹಾಸಿಗೆ ಸಾಮರ್ಥ್ಯದ ಶುಶ್ರೂಷ ಕೇಂದ್ರವನ್ನು ತೆರೆಯಲಾಗಿದೆ. ಸಂಸ್ಥೆಗೆ ದಾಖಲಾದ ರೋಗಿಗಳಿಗೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ.
ಕ್ಯಾನ್ಸರ್, ಗ್ಯಾಂಗ್ರಿನ್, ಪಾರ್ಶ್ವವಾಯು…ಇಂಥ ಕಾಯಿಲೆಗಳಿಗೆಲ್ಲಾ ಚಿಕಿತ್ಸೆ ದುಬಾರಿ. ಚಿಕಿತ್ಸೆಗೆ ಹಣ ಸಂಗ್ರಹಿಸುವ ಸದಾಶಯದಿಂದ “ಸ್ವರಾನುಭೂತಿ’ ಹೆಸರಿನ ವಾರ್ಷಿಕ ಸಂಗೀತ ಕಾರ್ಯಕ್ರಮ ನಡೆಸಲಾಗುತ್ತದೆ. ಅಂದು ಸಂಗ್ರಹವಾಗುವ ಹಣವನ್ನು ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಈ ಬಾರಿಯ “ಸ್ವರಾನುಭೂತಿ’ಯಲ್ಲಿ ಡಾ. ಎಸ್.ಪಿ ಬಾಲಸುಬ್ರಮಣ್ಯಂ ಹಾಡಲಿರುವುದು ವಿಶೇಷ. ಎಸ್.ಪಿ. ಅವರೊಂದಿಗೆ ಎಂ.ಡಿ ಪಲ್ಲವಿ ಹಾಗೂ ಇತರರು ದನಿಗೂಡಿಸಲಿದ್ದಾರೆ. ಟಿಕೆಟ್ ಇದ್ದವರಿಗೆ ಮಾತ್ರ ಪ್ರವೇಶ. ಟಿಕೆಟ್‌ಗಳು ಸಭಾಭವನದ ಕೌಂಟರ್‌ನಲ್ಲಿ ಲಭ್ಯ.
ಎಲ್ಲಿ?: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರಂ
ಯಾವಾಗ?: ಮಾ.4, ಭಾನುವಾರ ಸಂಜೆ 5.30-9
ಹೆಚ್ಚಿನ ಮಾಹಿತಿಗೆ: 080- 26586934