Advertisement

ಮಧ್ಯವರ್ತಿಗಳ ಹಾವಳಿಗೆ ಕಿಡಿ

09:36 AM Feb 12, 2019 | Team Udayavani |

ಕಡೂರು: ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ತಾಪಂ ಸದಸ್ಯರು ಗಂಭೀರ ಆರೋಪ ಮಾಡಿದರು. ಪಟ್ಟಣದ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಭಾರತೀ ಪ್ರಹ್ಲಾದ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲೂಕು ಕಚೇರಿಯ ಹಲವು ಸಮಸ್ಯೆಯನ್ನು ಸದಸ್ಯರು ಸಭೆಯ ಗಮನಕ್ಕೆ ತಂದರು.

Advertisement

ಸದಸ್ಯೆ ರೇಣುಕಾ ಉಮೇಶ್‌ ಮಾತನಾಡಿ, ಮುಗಳಿಕಟ್ಟೆ ಗ್ರಾಮದಲ್ಲಿ ರಸ್ತೆ ಬದಿಯಲ್ಲಿಯೇ ನಿರ್ಮಿಸಿಕೊಂಡಿರುವ ಕಟ್ಟಡ ತೆರವಿನ ಬಗ್ಗೆ ಕಳೆದ ಸಭೆಯಲ್ಲಿಯೇ ವಿಷಯ ಪ್ರಸ್ತಾಪಿಸಿದ್ದರೂ ತಹಶೀಲ್ದಾರ್‌ ಈ ಬಗ್ಗೆ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ. ಎರಡೆರಡು ತಿಂಗಳಿಗೊಮ್ಮೆ ತಹಶೀಲ್ದಾರ್‌ ಬದಲಾವಣೆ ಆಗುತ್ತಿರುವುದು ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು.

ಸದಸ್ಯ ಆನಂದನಾಯ್ಕ ಮಾತನಾಡಿ, ತಹಶೀಲ್ದಾರ್‌ ಕಚೇರಿಯಲ್ಲಿ ಪ್ರತಿಯೊಂದು ಕೆಲಸಕ್ಕೂ ಮಧ್ಯವರ್ತಿಗಳ ಆವಳಿ ಹೆಚ್ಚಾಗಿದೆ. ಜನಸಾಮಾನ್ಯರು ಮತ್ತು ಬಡವರು ಕಚೇರಿಯಿಂದ ಯಾವುದೇ ಕೆಲಸ ಮಾಡಿಸಿಕೊಳ್ಳಲು ಅಲೆಯಬೇಕಾಗಿದೆ. ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಿಗೆ ಮಾಸಾಶನ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂದು ಆರೋಪಿಸಿದರು.

ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು ತಮ್ಮ ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದು, ತಾಲೂಕು ಕಚೇರಿಗೆ ಒಬ್ಬರು ಅಧಿಕಾರಿ ಇದ್ದಾರೆಯೇ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ಅಕ್ಷಯ್‌ಕುಮಾರ್‌ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಸ್ಮಶಾನಕ್ಕೆ ಭೂಮಿ ನೀಡಬೇಕು. ಭೈರಪ್ಪನಹಳ್ಳಿಯಲ್ಲಿ ವಿದ್ಯುತ್‌ ಪರಿವರ್ತಕ ಅಳವಡಿಸಿರುವ ವಿದ್ಯುತ್‌ ಕಂಬ ಬೀಳುವ ಸ್ಥಿತಿಯಲ್ಲಿದೆ. ಯಾರಿಗಾದರೂ ಪ್ರಾಣಾಪಾಯ ಆಗುವ ಮುನ್ನಾ ಇಲಾಖೆ ಕಂಬ ಬದಲಾಯಿಸಿ ಪುಣ್ಯ ಕಟ್ಟಿಕೊಳ್ಳಲಿ ಎಂದರು.

Advertisement

ಸದಸ್ಯ ರುದ್ರಮೂರ್ತಿ ಮಾತನಾಡಿ, ನಿರಂತರ ಜ್ಯೋತಿ ಯೋಜನೆಯಲ್ಲಿ ತಾಲೂಕಿನಾದ್ಯಂತ ವಿದ್ಯುತ್‌ ಕಾಮಗಾರಿ ನಡೆಯುತ್ತಿದ್ದು, ಇದರಿಂದ ರೈತರಿಗೆ ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ ಸಾಮಾನ್ಯವಾಗಿ ಲಭ್ಯವಾಗುತ್ತಿದ್ದ ವಿದ್ಯುತ್‌ ಸಮಯದಲ್ಲೂ ಖೋತವಾಗುತ್ತಿದೆ. ನಿರಂತರ ಜ್ಯೋತಿ ಗುತ್ತಿಗೆದಾರರು ಜನರ ಅಹವಾಲನ್ನು ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ ಎಂದು ದೂರಿದರು. ಕೃಷಿ ಇಲಾಖೆ ವತಿಯಿಂದ ರೈತರಿಗೆ ನೀಡಲಾಗುವ ತಾಡಪಾಲು ಉತ್ತಮ ಗುಣಮಟ್ಟದಿಂದ ಕೂಡಿಲ್ಲ. ಅಧಿಕಾರಿಯನ್ನು ಕೇಳಿದರೆ ಸರಕಾರದಿಂದ ಬಂದಿರುವುದೇ ಅದು ಎಂದು ಆರಿಕೆಯ ಉತ್ತರ ನೀಡುತ್ತಾರೆ ಎಂದು ಸದಸ್ಯ ಪುಟ್ಟಸ್ವಾಮಿ ಆರೋಪಿಸಿದರು.

ಸದಸ್ಯೆ ರೇಣುಕಾ ಉಮೇಶ್‌ ಮಾತನಾಡಿ, ಕಳೆದ ಬಾರಿ ಉತ್ತಮ ತಾಡಪಾಲುಗಳು ಸರಬರಾಜಾಗಿದ್ದವು ಈ ಬಾರಿ ಕಳಪೆಯಾಗಿದೆ. ಕೃಷಿ ಅಭಿಯಾನ ಕಾರ್ಯಕ್ರಮಗಳನ್ನೂ ಕೂಡ ಜನಪರವಾಗಿ ನಡೆಸಿಲ್ಲ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ನೀಡುವ ಉಚಿತ ಗ್ಯಾಸ್‌ ಸಂಪರ್ಕಕ್ಕೆ ಫಲಾನುಭವಿಗಳ ಆಯ್ಕೆಯಲ್ಲಿ ವಿಳಂಬವಾಗಿ ಮಾರ್ಚ್‌ 31ರೊಳಗೆ ಆಯ್ಕೆಯಾಗದಿದ್ದರೆ ಅನುದಾನ ವಾಪಸ್‌ ಹೋಗಲಿದೆ ಎಂಬ ಆತಂಕವಿದೆ. ಅಜ್ಜಂಪುರ ತಾಲೂಕು ಕೇಂದ್ರ ಘೋಷಣೆಯಾಗಿದ್ದರೂ ಗಡಿ ಭಾಗದ ಗ್ರಾಮಗಳ ತಕರಾರು ಇರುವುದರಿಂದ ಆ ಭಾಗದ ಫಲಾನುಭವಿಗಳಿಗೆ ಸಂಪರ್ಕವೇ ಸಿಗುತ್ತಿಲ್ಲ ಎಂದು ಹೇಳಿದರು.

ಇದೇ ಸಂದರ್ಭ ಸದಸ್ಯೆ ಗೌರಮ್ಮ ಬಸವರಾಜ್‌ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ, ತಾಪಂ ಇಒ ದೇವರಾಜನಾಯ್ಕ, ತಾಪಂ ಸದಸ್ಯರು, ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next