Advertisement

ಪಠ್ಯದ ಜತೆಗೆ ಮಾನವೀಯ ಮೌಲ್ಯಗಳನ್ನು ಕಲಿಸುವುದು ನಿಜವಾದ ಶಿಕ್ಷಣ: ಡಾ. ಸುಧಾಮೂರ್ತಿ

07:30 PM Nov 02, 2022 | Team Udayavani |

ಬೆಂಗಳೂರು: ಶಿಕ್ಷಣ ಎಂದರೆ ಪುಸ್ತಕದಲ್ಲಿರುವುದನ್ನು ಓದಿ ಹೇಳುವುದಷ್ಟೇ ಅಲ್ಲ. ಶಿಕ್ಷಣ ಎಂದರೆ ಹೆಚ್ಚಿನ ಅಂಕಗಳಿಸುವುದಷ್ಟೇ ಅಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳಾದ ಆತ್ಮವಿಶ್ವಾಸ, ಮನೋಬಲ, ಸಮಸ್ಯೆಗಳನ್ನು ನಿಭಾಯಿಸುವುದಕ್ಕಿಂತ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ, ವಿನಯವನ್ನು ಕಲಿಸುವುದಾಗಿದೆ. ಈ ನಿಟ್ಟಿನಲ್ಲಿ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿ ಆರಂಭಿಸಲಾಗಿರುವ ವಿನೂತನ ಪ್ರಯೋಗಾಲಯ ಶಿಕ್ಷಣದ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ರಾಜ್ಯದ ಎಲ್ಲ ಶಾಲೆಗಳಲ್ಲಿ ಇಂತಹ ಪ್ರಯೋಗಾಲಯಗಳು ಆರಂಭವಾಗಬೇಕು’ ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರು ತಿಳಿಸಿದ್ದಾರೆ.

Advertisement

ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಲ್ಲಿನ ನೂತನ ಮೌಲ್ಯಾಧಾರಿತ ಶಿಕ್ಷಣ ಪ್ರಯೋಗಾಲಯ ಉದ್ಘಾಟಿಸಿ ಬುಧವಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸುಧಾಮೂರ್ತಿ,“ನನಗೆ ವಿವಿಧ ಕಾರ್ಯಕ್ರಮಕ್ಕೆ ಆಗಮಿಸುವಂತೆ ವರ್ಷಕ್ಕೆ ಸಾವಿರಾರು ಆಹ್ವಾನಗಳು ಬರುತ್ತವೆ. ಆದರೆ ನಾನು ನನಗೆ ವಿಭಿನ್ನ ಎನಿಸುವ ಕಾರ್ಯಕ್ರಮಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ. ಐಶ್ವರ್ಯ ನನ್ನ ಬಳಿ ಬಂದು ಈ ಪ್ರಯೋಗಾಲಯದ ಬಗ್ಗೆ ತಿಳಿಸಿದಾಗ ನನಗೆ ಬಹಳ ಇಷ್ಟವಾಯಿತು. ಮೂಲತಃ ನಾನು ಶಿಕ್ಷಕಿಯಾಗಿದ್ದು, ಶಿಕ್ಷಕರ ಕುಟುಂಬದ ಹಿನ್ನೆಲೆಯಿಂದ ಬಂದಿದ್ದೇನೆ. ನನ್ನ ತಂದೆ ಪ್ರೋಫೆಸರ್ ಆಗಿದ್ದರು. ನನ್ನ ತಾತ ಶಾಲಾ ಶಿಕ್ಷಕರಾಗಿದ್ದರು, ತಾಯಿ ಕೂಡ ಶಾಲಾ ಶಿಕ್ಷಕಿ ಆಗಿದ್ದರು. ನನ್ನ ಸಹೋದರಿಯರು ಮೆಡಿಕಲ್ ಕಾಲೇಜಿನಲ್ಲಿ ಪ್ರೋಫೆಸರ್ ಗಳು. ಹೀಗಾಗಿ ನನ್ನನ್ನು ಹೊಸ ಆಲೋಚನೆಗಳು ಆಕರ್ಷಿಸುತ್ತವೆ” ಎಂದರು.

ಇದನ್ನೂ ಓದಿ: ಮುದ್ದೇಬಿಹಾಳ : ಹುಣಸೆ ಹಣ್ಣಿನ ಆಸೆಗೆ ವಿವಾಹಿತೆ ಬಲಿ… ಮುಗಿಲು ಮುಟ್ಟಿದ ಆಕ್ರಂದನ

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಪೋಷಕರಿಂದ ಒತ್ತಡ ಹೆಚ್ಚುತ್ತಿದೆ. ಪಕ್ಕದ ಮನೆ ಹುಡುಗೆ ಶೇ. 99 ಅಂಕ ಪಡೆದಿದ್ದು, ನೀನು ಅಷ್ಟೇ ಗಳಿಸಬೇಕು ಎನ್ನುತ್ತಾರೆ. ಇದು ಮಕ್ಕಳಿಗೆ ಹೇಳಬಹುದಾದ ಅತ್ಯಂತ ಕೆಟ್ಟ ವಿಧಾನದ ಬೋಧನೆ. ಪಠ್ಯಕ್ರಮ ಜೀವನದ ಭಾಗವೇ ಹೊರತು, ಅದೇ ಇಡೀ ಜೀವನವಲ್ಲ. ನೀವು ಉತ್ತಮ ಹಾಗೂ ಸಂತೋಷದ ಜೀವನ ಸಾಗಿಸಬೇಕಾದರೆ ಪಠ್ಯಕ್ರಮದ ಜತೆಗೆ ಬೇರೆ ವಿಷಯಗಳ ಬಗ್ಗೆಯೂ ಗಮನ ಹರಿಸಬೇಕು. ಅಂಕಗಳೇ ಸರ್ವಸ್ವ ಎಂದು ಭಾವಿಸಬಾರದು. ಮಾಡುವ ಕೆಲಸದಲ್ಲಿ  ನಿಪುಣತೆ ಸಾಧಿಸುವುದು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಧೈರ್ಯ, ಆತ್ಮವಿಶ್ವಾಸ, ಪರಿಸ್ಥಿತಿ ಹೇಗೆ ಎದುರಾಗುತ್ತದೆಯೋ ಅವುಗಳನ್ನು ಹಾಗೆಯೇ ಸ್ವೀಕರಿಸುವ ಮನೋಭಾವ ಹೊಂದುವುದು ಬಹಳ ಮುಖ್ಯ ಎಂದರು.

ನನ್ನ ಹಲವು ವಿದ್ಯಾರ್ಥಿಗಳು ಶಾಲೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದರೂ ಅವರು ಜೀವನದಲ್ಲಿ ಯಶಸ್ಸು ಸಾಧಿಸದಿರುವ ಸಾಕಷ್ಟು ಉದಾಹರಣೆಗಳಿವೆ. ಮಕ್ಕಳ ತಪ್ಪುಗಳನ್ನು ಮೊದಲು ಮನೆಯಲ್ಲಿ ಅದರಲ್ಲೂ ತಾಯಿ ಸರಿಪಡಿಸಬೇಕು. ನಂತರ ಶಾಲೆಯಲ್ಲಿ ಅವರನ್ನು ಸರಿದಾರಿಯಲ್ಲಿ ಮುನ್ನಡೆಸಬೇಕು. ಹೀಗಾಗಿ ಮಕ್ಕಳು ಎಳೆಯವರಾಗಿದ್ದಾಗಲೇ ಸರಿಯಾದ ದಾರಿಯಲ್ಲಿ ಮುನ್ನಡೆಸಬೇಕು. ಇಂದಿನ ಶಿಕ್ಷಣ ಎಂದರೆ ಪುಸ್ತಕದಲ್ಲಿರುವುದನ್ನು ಓದಿ ಹೇಳುವುದಲ್ಲ. ಏಕೆಂದರೆ ಇಂದಿನ ದಿನಗಳಲ್ಲಿ ಮಕ್ಕಳು ಗೂಗಲ್ ನಲ್ಲೇ ಆ ವಿಚಾರಗಳನ್ನು ಕಲಿಯುತ್ತಾರೆ. ಈಗಿನ ಮಕ್ಕಳು ಬಹಳ ಬುದ್ಧಿವಂತರಿದ್ದು, ಪಾಠ ಮಾಡುವ ಮುನ್ನ ಬೋಧಕರು ಉತ್ತಮ ತಯಾರಿ ಮಾಡಿಕೊಳ್ಳಬೇಕು ಎಂದರು.

Advertisement

ಮಕ್ಕಳಿಗೆ ತಂದೆ ತಾಯಿ, ಶಿಕ್ಷಕರು, ಸಹಪಾಠಿ, ಸಹೋದ್ಯೋಗಿಗಳ ಜತೆಗೆ ಉತ್ತಮ ಸಂಬಂಧ ಹೊಂದುವುದನ್ನು ಕಲಿಸುವುದು ಬಹಳ ಮುಖ್ಯ. ಆಗ ಅವರು ತಮ್ಮ ಸಮಸ್ಯೆಗಳ ಬಗ್ಗೆ ಮನೆಯವರು, ಸ್ನೇಹಿತರು, ಆಪ್ತರ ಜತೆ ಚರ್ಚೆ ಮಾಡಬಹುದು. ಹೀಗಾಗಿ ಉತ್ತಮ ಸಂಬಂಧ ಹೊಂದುವುದು ಬಹಳ ಮುಖ್ಯ. ಯಾವುದೋ ಲಾಭದ ಉದ್ದೇಶದಿಂದ ಬೇರೆಯವರೊಡನೆ ಸಂಬಂಧ ಹೊಂದಬಾರದು. ನೆಮ್ಮದಿಯ ಬದುಕಿಗೆ ಮನೆ, ವಾಹನ, ಆರೋಗ್ಯ ವಿಮೆ, ಮಕ್ಕಳಿಗೆ ಶಿಕ್ಷಣ ನೀಡುವಷ್ಟು ಹಣ ಇದ್ದರೆ ಸಾಕು. ಉಳಿದ ಹಣವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ. ಪ್ರತಿ ಮಗುವು ವಿಭಿನ್ನ ವಿಚಾರದಲ್ಲಿ ಆಸಕ್ತಿ ಹಾಗೂ ಕೌಶಲ್ಯ ಹೊಂದಿರುತ್ತದೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಕಲೆ, ಕೌಶಲ್ಯವನ್ನು ಗುರುತಿಸಿ ಗೌರವಿಸಬೇಕು. ಕೇವಲ ಅವರ ಅಂಕಗಳ ಬಗ್ಗೆ ಮಾತ್ರ ಗಮನ ಹರಿಸಬಾರದು. ಆ ಮೂಲಕ ಮಕ್ಕಳನ್ನು ಅವರ ಆಸಕ್ತಿ ವಿಚಾರದಲ್ಲಿ ಮೇಲೆತ್ತಬೇಕು. ನಾನು ಹಳ್ಳಿಯ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದೆ. ಹಳ್ಳಿ ಮಕ್ಕಳಿಗೆ ಧೈರ್ಯ ಜಾಸ್ತಿ ಎಂದರು.

ಇದನ್ನೂ ಓದಿ: ಮಹಿಳಾ ಹಕ್ಕುಗಳ ಕಾರ್ಯಕರ್ತೆ ಪದ್ಮಭೂಷಣ ಇಳಾ ಭಟ್ ವಿಧಿ ವಶ

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಭಯ ಹೋಗಲಾಡಿಸಬೇಕು. ಅವರು ಕಲಿಯಲು ಆಸಕ್ತಿ ತೋರುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದಿದ್ದರೆ, ಮುಂದಿನ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವಂತೆ ಉತ್ತೇಜನ ನೀಡಬೇಕು.  ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಆಗ ಮಕ್ಕಳು ತಮ್ಮ ಸಾಮರ್ಥ್ಯದ ಮೇಲೆ ಅನುಮಾನ ಬೆಳೆಸಿಕೊಂಡು ಇನ್ನಷ್ಟು ಕುಗ್ಗುತ್ತವೆ. ಹೀಗಾಗಿ ಇಂತಹ ಪ್ರಯೋಗಾಲಯಗಳು ಬಹಳ ಮುಖ್ಯ. ಇಂತಹ ಪ್ರಯೋಗಾಲಯಗಳು ರಾಜ್ಯದ ಎಲ್ಲ ಶಾಲೆಗಳಲ್ಲೂ ಇರಬೇಕು ಎಂಬುದು ನನ್ನ ಬಯಕೆ ಎಂದರು.

ಡಿ.ಕೆ. ಶಿವಕುಮಾರ್ ಅವರ ಮಾತಾನಾಡಿ, ಇಂದು ನನ್ನ ಜೀವನದಲ್ಲಿ ಅತ್ಯಂತ ಮುಖ್ಯವಾದ ದಿನ. ನಿನ್ನೆ ಎಂಬುದು ಇತಿಹಾಸ, ನಾಳೆ ಎಂಬುದು ಭವಿಷ್ಯ. ಆದರೆ ಇಂದು ಎಂಬುದು ಬಹಳ ಮುಖ್ಯ. 23 ವರ್ಷಗಳ ನನ್ನ ಶಿಕ್ಷಣ ಕ್ಷೇತ್ರದ ಅನುಭವದಲ್ಲಿ ಸುಧಾಮೂರ್ತಿ ಅವರ ಮಾತುಗಳು ನಾನು ಕೇಳಿದ ಅತ್ತ್ಯುತ್ತಮ ಭಾಷಣವಾಗಿತ್ತು. ಸೌಂದರ್ಯಕ್ಕಿಂತ ನಮ್ರತೆ ಹೆಚ್ಚು ಮೋಡಿ ಮಾಡುತ್ತದೆ. ಅದೇ ರೀತಿ ಇಂದು ಸುಧಾ ಮೂರ್ತಿ ಅವರ ನಮ್ರತೆ, ಅವರ ಮಾತುಗಳು ಇಂದು ಎಲ್ಲರನ್ನು ಮೋಡಿ ಮಾಡಿದೆ ಎಂದರು.

ನಮ್ಮ ಪ್ರಾಂಶುಪಾಲರು ಹಾಗೂ ಅವರ ತಂಡ ಮಾನವೀಯ ನಾಯಕರನ್ನು ಪರಿಚಯಿಸುವ ಪರಿಕಲ್ಪನೆಗೆ ಮುಂದಾಗಿದ್ದಾರೆ. ಇದಕ್ಕೆ ಸುಧಾಮೂರ್ತಿ ಅವರು ಅತ್ಯಂತ ಸೂಕ್ತ ವ್ಯಕ್ತಿ ಆಗಿದ್ದಾರೆ. ನನ್ನ ಪ್ರೀತಿಯ ವಿದ್ಯಾರ್ಥಿಗಳೇ ನಿಮ್ಮಲ್ಲಿ ಪ್ರತಿಭೆಗಳ ಭಂಡಾರವೇ ಇದೆ. ಅವುಗಳನ್ನು ಬಳಸಿಕೊಳ್ಳಬೇಕು. ಈ ಬಗ್ಗೆ ಸುಧಾಮೂರ್ತಿ ಅವರು ಹಾಗೂ ಬಿಂದು ಅವರು ನಿಮಗೆ ಉತ್ತಮವಾಗಿ ವಿವರಿಸಿದ್ದಾರೆ. ನಿಮಗೆ ನೀವೇ ನಾಯಕರು. ನೀವು ನಿಮ್ಮಲ್ಲಿರುವ ಪ್ರತಿಭೆ, ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕು, ಬೇರೆಯವರ ಬಗ್ಗೆ ಕಾಳಜಿ ಹೊಂದಿರಬೇಕು ಎಂದರು.

ಐಶ್ವರ್ಯ ಡಿಕೆಎಸ್ ಹೆಗ್ಡೆ ಮಾತಾನಾಡಿ,ಮೂರು ವರ್ಷಗಳ ಹಿಂದೆ ಮೌಲ್ಯಾಧಾರಿತ ಶಿಕ್ಷಣದ ಆಲೋಚನೆ ಆರಂಭವಾಯಿತು. ನಮ್ಮ ಪ್ರಾಂಶುಪಾಲರು ಹಾಗೂ ಶಿಕ್ಷಕರ ತಂಡದ ಪರಿಶ್ರಮದೊಂದಿಗೆ ಈ ಪ್ರಯೋಗಾಲಯ ಜೀವ ತಾಳಿದೆ. ಇಂದು ಈ ಪ್ರಯೋಗಾಲಯದ ಅನುಭವವನ್ನು ನೀವೆಲ್ಲ ನೋಡಿದ್ದೀರಿ.

ಈ ಮಧ್ಯೆ ನಾವು ಆನ್ ಲೈನ್ ಶಿಕ್ಷಣ, ಶಾಲೆಗೆ ಬಾರದೆ ವಿದ್ಯಾರ್ಥಿಗಳ ಕಲಿಕೆ ವ್ಯವಸ್ಥೆಯಿಂದ ಸಹಜ ಸ್ಥಿತಿಗೆ ಮರಳುವುದು ನಮ್ಮ ಈ ಪಯಣಕ್ಕೆ ದೊಡ್ಡ ಸವಾಲಾಗಿತ್ತು. ಈ ಪ್ರಕ್ರಿಯೆ ನಮಗೆ ಕಲಿತಿರುವುದನ್ನು ಮರೆತು, ಕಲಿತು ಹಾಗೂ ಮತ್ತೆ ಕಲಿಯುವುದನ್ನು ಕಲಿಸಿತು. ಇದು ನಮ್ಮನ್ನು ಮತ್ತಷ್ಟು ಬಲಿಷ್ಠ ಮಾಡಿತು. ಆವಿಷ್ಕಾರಿ ಆಲೋಚನೆ ಮೂಲಕ ಈ ಮೌಲ್ಯಾಧಾರಿತ ಶಿಕ್ಷಣದ ಪ್ರಯೋಗಾಲಯಕ್ಕೆ ದಾರಿ ಮಾಡಿಕೊಟ್ಟಿತು. 5 ವರ್ಷಗಳ ಈ ಶಿಕ್ಷಣದ ಪಯಣದಲ್ಲಿ ಮನಸ್ಥಿತಿ ವಿಕಸನ , ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ, ಆತ್ಮವಿಶ್ವಾಸ, ಉಪಕಾರ ಸ್ಮರಣೆ, ಕ್ಷಮಾಶೀಲತೆ ಕಲಿಸಲಾಗುವುದು. ಇವುಗಳನ್ನು ಕಲಿಯುವ ಮೂಲಕವೇ ನಾನು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ ಎಂದರು.

ನಮ್ಮನ್ನು ನಾವು ವ್ಯಕ್ತಪಡಿಸುವುದು ಕೂಡ ಕಲಿಕೆ ಎಂದು ನನ್ನ ತಂದೆ ಹೇಳಿದ್ದರು. ಇದನ್ನು ನಾನು ಬಲವಾಗಿ ನಂಬುತ್ತೇನೆ. ಈ ಪ್ರಯೋಗಾಲಯದ ಶಿಕ್ಷಣವನ್ನು ಪ್ರತಿ ತರಗತಿಗೂ ಪರಿಚಯಿಸಲು ಮುಂದಾಗಿದ್ದೇವೆ. ಈ ಪ್ರಯೋಗಾಲಯದಲ್ಲಿ ಕಲಿಸಲಾಗುವ ಗುಣಗಳು ಸಮಾಜದಲ್ಲಿ ಎಲ್ಲ ಸವಾಲು ಎದುರಿಸಿ ಮುಂದೆ ಸಾಗಲು ನೆರವಾಗಲಿವೆ. ಕೇವಲ ಉತ್ತಮ ಕೆಲಸ ಸಂಪಾದಿಸಲು ನಾವು ಮಕ್ಕಳಿಗೆ ಶಿಕ್ಷಣ ನೀಡುತ್ತಿಲ್ಲ. ಆದರೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ಅವರಲ್ಲಿ ಬೆಳೆಸಿ, ಪ್ರಪಂಚಕ್ಕೆ ಪರಿಚಯಿಸಲಾಗುತ್ತದೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next