ಲಿಂಗಸುಗೂರು: ಒಂಭತ್ತು ವರ್ಷದಿಂದ ಆಹಾರ ಇಲಾಖೆಯಲ್ಲಿ ಬೇರುಬಿಟ್ಟಿರುವ ಹಾಗೂ ಕಳೆದ ಮೂರು ವರ್ಷಗಳಿಂದ ತಾಲೂಕು ಪಂಚಾಯತಿ ಸಭೆಗೆ ಗೈರಾಗುತ್ತಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡುವಂತೆ ತಾಪಂ ಸದಸ್ಯರು ಒಕ್ಕೂರಲಿನಿಂದ ಆಗ್ರಹಿಸಿದ ಪ್ರಸಂಗ ಬುಧವಾರ ತಾಲೂಕು ಪಂಚಾಯತಿಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.
ತಾಪಂ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಶ್ವೇತಾ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಗವಿಸಿದ್ದಪ್ಪ ಸಾಹುಕಾರ, ಲಿಂಗರಾಜ ಹಟ್ಟಿ, ವಾಹಿದ್ ಖಾದ್ರಿ, ಬಸಮ್ಮ ಯಾದವ, ವೆಂಕೋಬ ಸರ್ಜಾಪುರ, ತಾಲೂಖು ಪಂಚಾಯತಿ ಸಭೆಗೆ ಅಧಿಕಾರಿಗಳಿಗೆ ಎಷ್ಟು ಗೌರವ ನೀಡುತ್ತಿದ್ದಾರೆಂಬುದಕ್ಕೆ ಆಹಾರ ಇಲಾಖೆ ಅಧಿಕಾರಿಗಳೇ ನಿದರ್ಶನ. ಕಳೆದ ಮೂರು ವರ್ಷಗಳಿಂದ ಆಹಾರ ಇಲಾಖೆ ಅಧಿಕಾರಿಗಳು ತಾಪಂ ಸಭೆಗೆ ಹಾಜರಾಗಿಲ್ಲ. ನ್ಯಾಯ ಬೆಲೆ ಅಂಗಡಿಗಳ ಸಮಸ್ಯೆಗಳ ಬಗ್ಗೆ ಯಾರನ್ನು ಕೇಳ್ಳೋದು. ಸಭೆಗೆ ಆಗಮಿಸದ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರಿಗೆ ಆಗ್ರಹಿಸಿದರು.
ತಾಲೂಕಿನಲ್ಲಿ ಸುಮಾರು 50 ನ್ಯಾಯಬೆಲೆ ಅಂಗಡಿಗಳನ್ನು ವಿವಿಧ ಗ್ರಾಮಗಳಿಗೆ ಜೋಡಣೆ ಮಾಡಿ ಪಡಿತರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಆದರೆ 50 ಅಂಗಡಿಗಳ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಪಡಿತರ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲದಾಗಿದೆ. ಯಾವೊಬ್ಬ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ತಪಾಸಣೆ ಮಾಡಿದ ಉದಾಹರಣೆಯೇ ಇಲ್ಲ. ಅನ್ನಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಪ್ರಕರಣಗಳು ಈಗೀಗ ಬಯಲಿಗೆ ಬರುತ್ತಿದೆ. ಇದರ ಹಿಂದೆ ಯಾರ ಕೈವಾಡ ಇದೆ ಎಂದು ತನಿಖೆ ನಡೆಸಬೇಕು. ಕಳೆದ 9 ವರ್ಷದಿಂದ ಆಹಾರ ಶಿರಸ್ತೇದಾರರ ಹುದ್ದೆಯಲ್ಲಿ ಪ್ರಭಾರಿಯಲ್ಲಿರುವ ಕೆ.ಬಿ.ಕುಲಕರ್ಣಿ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಅಧ್ಯಕ್ಷರನ್ನು ಒತ್ತಾಯಿಸಿದರು.
ನ್ಯಾಯಬೆಲೆ ಅಂಗಡಿಗಳ ಜೋಡಣೆಯಲ್ಲಿ ಗ್ರಾಮಗಳಲ್ಲಿ ಎಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ ಎಂದು ನಾಮಫಲಕ ಹಾಕಬೇಕು. ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಫಲಾನುಭವಿಗಳಿಗೆ ಪಡಿತರ ಸಮರ್ಪಕವಾಗಿ ತಲುಪುವಂತೆ ಮಾಡಬೇಕು. ಈ ಬಗ್ಗೆ ಎರಡು ದಿನಗಳಲ್ಲಿ ಎಲ್ಲ ಸದಸ್ಯರಿಗೆ ವರದಿ ನೀಡುವಂತೆ ಅಧ್ಯಕ್ಷೆ ಶ್ವೇತಾ ಪಾಟೀಲ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಜರಗಿಸುವಂತೆ ಅಧ್ಯಕ್ಷೆ ಶ್ವೇತಾ ಪಾಟೀಲ ಆರೋಗ್ಯ ಇಲಾಖೆಗೆ ಸೂಚಿಸಿದರು. ಇದಕ್ಕೆ ಆರೋಗ್ಯ ಇಲಾಖೆಯ ಪ್ರಾಣೇಶ ಮಾಹಿತಿ ನೀಡಿ, ಈಚನಾಳ, ಗೊರೇಬಾಳ ಭಾಗದಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದ್ದರಿಂದ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಪದೇಪದೇ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ. ಜೆಸ್ಕಾಂ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ವಿದ್ಯುತ್ ಪೂರೈಸುತ್ತಿದ್ದಾರೆ. ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಗವಿಸಿದ್ದಪ್ಪ ಆಗ್ರಹಿಸಿದರು.
ಮಟ್ಟೂರು ಗ್ರಾಮದ ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವಂತೆ ಮಲ್ಲೇಶಗೌಡ ಮಟ್ಟೂರು ಆಗ್ರಹಿಸಿದರು. ಇದಕ್ಕೆ ಮಸ್ಕಿ ಜೆಸ್ಕಾಂ ಎಇಇ ಪ್ರಭಾಕರ ಸೂಗೂರು ಪ್ರತಿಕ್ರಿಯಿಸಿ, ರೈತರ ಪಂಪಸೆಟ್‌ಗೆ ನಿರಂತರ 7 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಕೆಲವೊಂದು ಸಂದರ್ಭದಲ್ಲಿ ವ್ಯತ್ಯಾಸ ಆಗಿದ್ದರೆ ಅದನ್ನು ಸರಿಪಡಿಸಲಾಗುವುದು. ಜನಪ್ರತಿನಿಧಿಗಳಿಗೆ ತಿಳಿಸುವ ಸಮಸ್ಯೆಗೆ ಕೂಡಲೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾಗಿ ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಕೊಳ್ಳಿ, ತಾಪಂ ಇಒ ವಿ.ಪ್ರಕಾಶ ಹಾಗೂ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.