ಮುಳಬಾಗಿಲು: ನಗರದ ಸರ್ಕಾರಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಖಾಸಗಿ ನರ್ಸಿಂಗ್ ಹೋಂಗೆ ಹೋಗುವಂತೆ ಒತ್ತಡ ಹಾಕುತ್ತಾರೆ. ಹಳ್ಳಿಗಳಲ್ಲಿ ತಲೆ ಎತ್ತಿರುವ ನಕಲಿ ಕ್ಲಿನಿಕ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘ ಪ್ರತಿಭಟನೆ ನಡೆಸಿ, ಆಡಳಿತ ವೈದ್ಯಾಧಿಕಾರಿ ರಾಜೇಶ್‌ಬಾಬುಗೆ ಮನವಿ ಸಲ್ಲಿಸಿತು.
ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಮೂಲ ಸೌಲಭ್ಯಗಳಿಲ್ಲ, ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಉತ್ತಮ ಚಿಕಿತ್ಸೆ ದೊರೆಯುತ್ತಿಲ್ಲ. ವೈದ್ಯರು ಮತ್ತು ಸಿಬ್ಬಂದಿ ಖಾಸಗಿ ನರ್ಸಿಂಗ್ ಹೋಂಗಳಿಗೆ ದಾಖಲಾಗುವಂತೆ ಒತ್ತಾಯಿಸುತ್ತಾರೆ, ಸರ್ಕಾರ ಕೋಟ್ಯಂತರ ರೂ. ಹಣ ಬಿಡುಗಡೆ ಮಾಡಿ, ಯಂತ್ರೋಪಕರಣ ನೀಡಿದ್ದರೂ ಸಮರ್ಪಕವಾಗಿ ಉಪಯೋಗಿಸುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಆರೋಪಿಸಿದರು.
ಆಸ್ಪತ್ರೆ ಮುಂಭಾಗ ವಾಹನ ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಆಸ್ಪತ್ರೆಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲ, ಫೈರಿಂಗ್ ಸಿಲೆಂಡರ್‌ಗಳನ್ನು ರೀಫಿಲ್ ಮಾಡಿಸದೇ ಮೂಲೆಗೆ ಎಸೆಯಲಾಗಿದೆ. ಮಧುಮೇಹ, ಬಿ.ಪಿ ಮಾತ್ರೆಗಳು ಔಷಧಿಗೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಸ್ಕ್ಯಾನಿಂಗ್, ಇಸಿಜಿ ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಬೇಕಾಗಿದೆ. ಆಸ್ಪತ್ರೆಯಲ್ಲಿ ನೀರಿನ ಪಿಲ್ಟರ್ ರಿಪೇರಿ ಮಾಡಿಸಿ, ಹೆರಿಗೆಗೆ ಬರುವವರ ಬಳಿ ಯಾವುದೇ ಕಾರಣಕ್ಕೂ ಹಣಕ್ಕೆ ಒತ್ತಾಯ ಮಾಡಬಾರದು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಫಾರುಕ್‌ಪಾಷ ಮಾತನಾಡಿ, ಆಸ್ಪತ್ರೆಗಳಲ್ಲಿ ಕೆಲವು ವೈದ್ಯರು ಬಡರೋಗಿಗಳಿಗೆ ಚಿಕಿತ್ಸೆ ನೀಡಲು ಮಧ್ಯವರ್ತಿಗಳನ್ನು ನೇಮಕ ಮಾಡಿಕೊಂಡಿರುವುದನ್ನು ಕೂಡಲೇ ನಿಲ್ಲಿಸಬೇಕು. ರೋಗಿಗಳಿಗೆ ಇಂಜೆಕ್ಷನ್ ಹಾಕುವುದರಿಂದ ಹಿಡಿದು ಮಾತ್ರೆಗಳು ನೀಡುವವರೆಗೂ ನಡೆಯುತ್ತಿರುವ ಲಂಚದಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಆಸ್ಪತ್ರೆಗಳಲ್ಲಿ 24 ಗಂಟೆ ವೈದ್ಯರು, ಸಿಬ್ಬಂದಿ ವಾಸವಿರಬೇಕು, ಖಾಸಗಿ ಮಡಿಕಲ್ಗಳಿಗೆ ಚೀಟಿ ಬರೆದುಕೊಡುವುದನ್ನು ನಿಲ್ಲಿಸಬೇಕು. ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಮಾಡುವುದನ್ನು ತಡೆಯಬೇಕು. ಹಾವು, ನಾಯಿ ಕಡಿತದ ಚುಚ್ಚುಮದ್ದನ್ನು ಎಲ್ಲಾ ಆಸ್ಪತ್ರೆಗಳಲ್ಲೂ ಲಭ್ಯವಿರುವಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಹಸಿರು ಸೇನೆ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಮೇಲಗಾಣಿ ವಿಜಯಪಾಲ್, ನಲ್ಲಾಂಡಹಳ್ಳಿ ಶಂಕರ್, ಜುಬೇರ್‌ಪಾಷಾ, ಅಣ್ಣಹಳ್ಳಿ ನಾಗರಾಜ್, ಶ್ರೀನಿವಾಸ್, ವೆಂಕಟರಮಣಪ್ಪ, ಅಹಮದ್‌ಪಾಷಾ, ಲಾಯರ್‌ಮಣಿ, ಹೆಬ್ಬಿಣಿ ಆನಂದರೆಡ್ಡಿ, ಸಾಗರ್, ರಂಜೀತ್, ಅಂಬ್ಲಿಕಲ್ ಮಂಜುನಾಥ್, ಸುಪ್ರಿಂಚಲ ಇದ್ದರು.