Advertisement

ಬಿಡಾಡಿ ಹಸು- ಕುದುರೆ ಹಾವಳಿಗೆ ಕಡಿವಾಣ ಹಾಕಲು ಒತ್ತಾಯ

12:56 PM May 26, 2018 | |

ಶಿವಮೊಗ್ಗ: ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಆಯಕಟ್ಟಿನ ಜಾಗಗಳಲ್ಲಿ ಬಿಡಾಡಿ ಹಸು, ಕುದುರೆಗಳ ಹಾವಳಿ ವಿಪರೀತವಾಗಿದ್ದು, ಶುಕ್ರವಾರ ಬೆಳಗ್ಗೆ ವಿದ್ಯಾನಗರ ಮುಖ್ಯರಸ್ತೆಯಲ್ಲಿ ಕುದುರೆಗಳು ರಸ್ತೆಗೆ ಅಡ್ಡ ಬಂದ ಪರಿಣಾಮ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ.

Advertisement

ಶಿವಮೊಗ್ಗ- ಭದ್ರಾವತಿ ಮುಖ್ಯ ರಸ್ತೆಯಲ್ಲಿನ ವಿದ್ಯಾನಗರ ಸಂಚಾರಿ ಪೊಲೀಸ್‌ ಠಾಣೆ ಸಮೀಪದಲ್ಲಿ ಬಿಡಾಡಿ ಕುದುರೆಗಳು ರಸ್ತೆಗೆ ಏಕಾಏಕಿ ನುಗ್ಗಿವೆ. ಪರಿಣಾಮ ಭದ್ರಾವತಿ ಕಡೆಗೆ ಸಂಚರಿಸುತ್ತಿದ್ದ ಐದಕ್ಕೂ ಹೆಚ್ಚು ವಾಹನಗಳ ನಡುವೆ ಸರಣಿ ಅಪಘಾತ ನಡೆದಿದೆ. ಕುದುರೆಗಳು ರಸ್ತೆಗೆ ಅಡ್ಡ ಬಂದ ಪರಿಣಾಮ ಅಪಘಾತವಾಗುವುದನ್ನು ತಪ್ಪಿಸಲು ಗೂಡ್ಸ್‌ ಆಟೋ ಚಾಲಕ ಬ್ರೇಕ್‌ ಹಾಕಿದ್ದಾನೆ. 

ಆಟೋ ಹಿಂಭಾಗದಲ್ಲಿ ಬರುತ್ತಿದ್ದ ಟ್ರಾಕ್ಸ್‌, ಮಾರುತಿ ಸ್ವಿಫ್ಟ್‌, ಮಾರುತಿ 800 ಹಾಗೂ ಟೊಯೋಟೋ ಇಟಿಯೋಸ್‌ ಕಾರುಗಳು ಪರಸ್ಪರ ಹಿಂದಿನಿಂದ ಡಿಕ್ಕಿ ಹೊಡೆದಿವೆ. ಅದೃಷ್ಟವಶಾತ್‌ ವಾಹನದಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಅಪಘಾತದಿಂದಾಗಿ ಕೆಲ ಕಾಲ ರಸ್ತೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು.

ಬೀಡಾಡಿ ಪ್ರಾಣಿಗಳ ಹಾವಳಿ: ನಗರದ ಎಲ್ಲೆಡೆ ಬೀಡಾಡಿ ಜಾನುವಾರು, ಕುದುರೆ ಹಾಗೂ ಹಂದಿ ಹಾವಳಿ ಹೆಚ್ಚಳವಾಗಿದೆ. ಏಕಾಏಕಿ ರಸ್ತೆಗೆ ಅಡ್ಡಲಾಗಿ ನುಗ್ಗುವುದರಿಂದ ಹಲವು ಅಪಘಾತಗಳು ಸಂಭವಿಸಿ ಅನೇಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿವೆ.

ಮಾಲೀಕರು ತಾವು ಸಾಕಿರುವ ಪ್ರಾಣಿಗಳನ್ನು ಬೀಡಾಡಿಯಾಗಿ ಎಲ್ಲೆಂದರಲ್ಲಿ ರಸ್ತೆಗೆ ಬಿಡದಂತೆ ಜಿಲ್ಲಾಡಳಿತ ಹಾಗೂ ನಗರಪಾಲಿಕೆ ಹಲವು ಬಾರಿ ಸೂಚನೆ ನೀಡಿದ್ದರೂ ಸಹ ಪ್ರಾಣಿಗಳ ಮಾಲೀಕರು ಮಾತ್ರ ಸೂಚನೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

Advertisement

ಈ ಹಿಂದೆ ಇಂತಹ ಬೀಡಾಡಿ ಜಾನುವಾರುಗಳು ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಂಡಬಂದರೆ ಮಹಾನಗರಪಾಲಿಕೆ ಸಿಬ್ಬಂದಿಗಳು ಅವುಗಳನ್ನು ಆಗಾಗ್ಗೆ ಹಿಡಿದು ಗೋಶಾಲೆ ಮತ್ತು ನಗರದ ಹೊರವಲಯಕ್ಕೆ ಸಾಗಿಸುತ್ತಿದ್ದರು. ಇದಕ್ಕಾಗಿ ವಾಹನವೊಂದನ್ನು ಮೀಸಲಿಡಲಾಗಿತ್ತು. ಆದರೆ ಕೆಲವಾರು ತಿಂಗಳುಗಳಿಂದ ಪಾಲಿಕೆ ಇಂತಹ ಕ್ರಮಗಳನ್ನು ಕೈಗೊಳ್ಳದೇ ಇರುವುದು ಬಿಡಾಡಿ ಪ್ರಾಣಿಗಳ ಹಾವಳಿ ಹೆಚ್ಚಳವಾಗಲು ಕಾರಣವಾಗಿದೆ.

ಕೂಡಲೇ ಪಾಲಿಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next