Advertisement

40 ಉಪಗ್ರಹಗಳನ್ನು ಸುಟ್ಟ ಸೌರಮಾರುತ…ಏನಿದು ಸೌರಮಾರುತ?

12:13 PM Feb 11, 2022 | Team Udayavani |

ಸ್ಪೇಸ್‌ ಎಕ್ಸ್‌ ಸಂಸ್ಥೆಯಿಂದ ಕಳೆದ ವಾರ ಉಡಾವಣೆಗೊಂಡಿದ್ದ ಸುಮಾರು 49 ಲಘು ಉಪಗ್ರಹಗಳ ಗುತ್ಛದಲ್ಲಿ (ಸ್ಟಾರ್‌ ಲಿಂಕ್‌ ಉಪಗ್ರಹಗಳು) 40 ಉಪಗ್ರಹಗಳು ಬಾಹ್ಯಾಕಾಶದಲ್ಲಿ ಹಠಾತ್ತಾಗಿ ಸೃಷ್ಟಿಯಾದ ಸೌರಮಾರುತಗಳಿಂದಾಗಿ ನಾಶಗೊಂಡಿವೆ. ಸೌರ ಮಾರುತಗಳೆದ್ದಾಗ, ಈ ಉಪಗ್ರಹಗಳು ಇನ್ನೂ ಪ್ರಾಥಮಿಕ ಕಕ್ಷೆಯಲ್ಲೇ ಸುತ್ತುತ್ತಿದ್ದವು. ಯಾವ ಕಾರ್ಯಕ್ಕಾಗಿ ಈ ಉಪಗ್ರಹಗಳನ್ನು ಕಳುಹಿಸಲಾಗಿತ್ತು, ಉಳಿದ ಉಪಗ್ರಹಗಳ ಪರಿಸ್ಥಿತಿ ಏನಾಗಿದೆ, ಅಷ್ಟಕ್ಕೂ ಸೌರ ಮಾರುತಗಳೆಂದರೇನು ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Advertisement

ಉಪಗ್ರಹಗಳ ಕಾರ್ಯ
ಸ್ಪೇಸ್‌ ಎಕ್ಸ್‌ ಸಂಸ್ಥೆಯ ಮಾಲಕ ಎಲಾನ್‌ ಮಸ್ಕ್, ಹಲವಾರು ಉದ್ಯಮಗಳನ್ನು ನಡೆಸುತ್ತಿದ್ದಾರೆ. ಅವುಗಳಲ್ಲೊಂದು ಸ್ಟಾರ್‌ಲಿಂಕ್‌. ಇದು, ಇಂಟರ್ನೆಟ್‌ ಸೇವೆಗಳನ್ನು ಒದಗಿಸುತ್ತದೆ. ಈ ಸೇವೆಗಳನ್ನು ಉನ್ನತೀಕರಿಸುವ ಉದ್ದೇಶದಿಂದ ಫೆ. 3ರಂದು ಸ್ಪೇಸ್‌ ಎಕ್ಸ್‌ ಕಂಪೆನಿಯ ಫಾಲ್ಕನ್‌ 9 ರಾಕೆಟ್‌ನಲ್ಲಿ 49 ಲಘು ಉಪಗ್ರಹಗಳನ್ನಿಟ್ಟು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಸ್ಪೇಸ್‌ ಎಕ್ಸ್‌ ಸಂಸ್ಥೆ, ಇಂಥ ನೂರಾರು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಕಳೆದ ವಾರ 49 ಉಪಗ್ರಹಗಳನ್ನು ಕಳುಹಿಸಿತ್ತು.

220 ಕಿ.ಮೀ. ಎತ್ತರದಲ್ಲಿ ಆದ ಅವಘಡ
ಕಳೆದ ವಾರ ಕಳುಹಿಸಲಾಗಿದ್ದ 49 ಉಪಗ್ರಹಗಳು ತಮ್ಮ ಪ್ರಾಥಮಿಕ ಕಕ್ಷೆಗೆ ಸೇರ್ಪಡೆಗೊಂಡಿದ್ದವು. ಈ ಕಕ್ಷೆ ಭೂಮಿಯ ಮೇಲ್ಮೆ„ಯಿಂದ ಸುಮಾರು 240 ಕಿ.ಮೀ. ಎತ್ತರದಲ್ಲಿದೆ. ಇವು ಮುಂದಕ್ಕೆ ಭೂಮಿಯಿಂದ 550 ಕಿ.ಮೀ. ಎತ್ತರದಲ್ಲಿರುವ ಕಕ್ಷೆಯನ್ನು ತಲುಪಬೇಕಿತ್ತು. ಆದರೆ ಅಷ್ಟರಲ್ಲಿ ಸೂರ್ಯನಿಂದ ಉಂಟಾದ ಸೌರ ಮಾರುತಗಳು ಅಪ್ಪಳಿಸಿದ ಪರಿಣಾಮ ಅವು ಉರಿದು ಹೋಗಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸೌರ ಮಾರುತಗಳಲ್ಲಿ ನಾಲ್ಕು ವಿಧ
ಸೌರ ಮಾರುತಗಳಲ್ಲಿ ಸೋಲಾರ್‌ ಫ್ಲೇರ್‌, ಕೊರೊನಲ್‌ ಮಾಸ್‌ ಎಜೆಕ್ಷನ್‌, ಜಿಯೋಮೆಟ್ರಿಕ್‌ ಸ್ಟಾರ್ಮ್ ಹಾಗೂ ಸೋಲಾರ್‌ ಪಾರ್ಟಿ ಕಲ್‌ ಇವೆಂಟ್‌ ಎಂದು ನಾಲ್ಕು ವಿಧಗಳಿವೆ. ಸೂರ್ಯನ ಮೇಲ್ಮೆ„ಯಲ್ಲಿ ಆಗುವ ಭಾರೀ ದೊಡ್ಡ ಸ್ಫೋಟದಿಂದ ಏಳು ಮಾರುತಗಳನ್ನು “ಸೋಲಾರ್‌ ಫ್ಲೇರ್‌’ ಎಂದು ಕರೆಯಲಾಗುತ್ತದೆ. ಸೂರ್ಯನ ಮೇಲ್ಮೈಯಲ್ಲಿರುವ ಪ್ಲಾಸ್ಮಾ ಸ್ಫೋಟದಿಂದ ಏಳುವ ಅಲೆಗಳನ್ನು “ಸೋಲಾರ್‌ ಮಾಸ್‌ ಎಜೆಕ್ಷನ್‌’ ಎಂದು ಕರೆಯುತ್ತಾರೆ. ಇವು ಕೆಲವೊಮ್ಮೆ “ಸೋಲಾರ್‌ ಫ್ಲೇರ್‌’ ಅಲೆಗಳನ್ನೂ ಹೊಂದಿರುತ್ತವೆ. ಒಮ್ಮೊಮ್ಮೆ ಸೂರ್ಯನ ಹಾಗೂ ಭೂಮಿಯ ಗುರುತ್ವಾಕರ್ಷಣ ರೇಖೆಗಳ ಸಮಾಗಮದಿಂದ ಏಳುವ ಅಲೆಗಳಿಗೆ “ಜಿಯೋಮೆಟ್ರಿಕ್‌ ಸ್ಟಾರ್ಮ್’ ಎಂದು ಹೆಸರು. ಇನ್ನು, ಸೂರ್ಯನ ಮೇಲ್ಮೈಯಲ್ಲಿರುವ ಶಕ್ತಿಯ ಕಣಗಳು ಬಿರುಗಾಳಿಯಂತೆ ಚದುರುವುದಕ್ಕೆ “ಸೋಲಾರ್‌ ಪಾರ್ಟಿಕಲ್‌ ಇವೆಂಟ್‌’ ಎಂದು ಕರೆಯುತ್ತಾರೆ.

40 ಉಪಗ್ರಹ ಸುಟ್ಟಿದ್ದು ಇದೇ ಅಲೆ!
ಸ್ಪೇಸ್‌ ಎಕ್ಸ್‌ನ 40 ಉಪಗ್ರಹಗಳನ್ನು ಸುಟ್ಟಿರುವುದು “ಕೊರೊನಲ್‌ ಮಾಸ್‌ ಎಜೆಕ್ಷನ್‌’ (ಸಿಎಂಇ) ಮಾದರಿಯ ಮಾರುತ. ಇವು, ಸೂರ್ಯನ ಹೊರವಲಯವಾದ ಕೊರೊನಾದಲ್ಲಿರುವ ಪ್ಲಾಸ್ಮಾ ಹಾಗೂ ಸೂರ್ಯನನ್ನು ಸುತ್ತುವರಿದಿರುವ ಗುರುತ್ವಾಕರ್ಷಣ ಶಕ್ತಿವಲಯಗಳಿಂದ ಹೊರಹೊಮ್ಮುವ ದೈತ್ಯ ಅಲೆಗಳು.

Advertisement

ಭೂಮಿಯ ಮೇಲೆ ಹಾದು ಹೋಯಿತೇ?
40 ಉಪಗ್ರಹಗಳನ್ನು ನಾಶಪಡಿಸಿದ ಸೌರ ಮಾರುತ, ಭೂಮಿಯನ್ನು ಫೆ. 9-10ರಂದು ಅಪ್ಪಳಿಸುವ ಸಾಧ್ಯತೆಗಳಿದ್ದವು. ಭಾರತೀಯ ಕಾಲ ಮಾನದ ಪ್ರಕಾರ, ಫೆ. 9ರ ಬೆಳಗ್ಗೆ 11:18ರಿಂದ ಫೆ. 10ರ ಮಧ್ಯಾಹ್ನ 3:23ರೊಳಗೆ ಭೂಮಿಯ ಅಂತರಿಕ್ಷವನ್ನು ಹಾದುಹೋಗುವ ಸಾಧ್ಯತೆಯನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದವು. ಈ ಮಾರುತ ಹಾದುಹೋಗಿರುವ ಬಗ್ಗೆ ವಿಜ್ಞಾನಿಗಳು ಸ್ಪಷ್ಟಪಡಿಸಬೇಕಿದೆ.

ಏನಿದು ಸೌರಮಾರುತ?
ಇವನ್ನು ಇಂಗ್ಲಿಷ್‌ನಲ್ಲಿ ಸೋಲಾರ್‌ ಸ್ಟಾರ್ಮ್ ಎಂದು ಕರೆಯುತ್ತಾರೆ. ಇದನ್ನು ಅತ್ಯುಷ್ಣ ಹವೆಯ ದೈತ್ಯ ಅಲೆಯೆಂದರೂ ತಪ್ಪಾಗಲಾರದು. ಭೂಮಿಯ ಮೇಲೆ ಅಗ್ನಿಪರ್ವತಗಳು ಸ್ಫೋಟ ಗೊಳ್ಳುವಂತೆ ಸೂರ್ಯನ ಮೇಲ್ಮೆ„ಯಲ್ಲಿ ಆಗುವ ರಾಸಾಯನಿಕ ಕ್ರಿಯೆಗಳಲ್ಲಿ ಆಗುವ ಸ್ಫೋಟದ ಮೂಲಕ ಈ ದೈತ್ಯ ಅಲೆಗಳು ಉತ್ಪತ್ತಿಯಾಗುತ್ತವೆ. ಈ ಅಲೆಗಳು ಇಡೀ ಸೌರಮಂಡಲದ ಮೇಲೆ ತನ್ನ ದುಷ್ಪರಿಣಾಮವನ್ನು ಬೀರಬಲ್ಲವು.

ಭಾರತೀಯ ತಜ್ಞರು ಎಚ್ಚರಿಸಿದ್ದರು!
ಭಾರತೀಯ ವೈಜ್ಞಾನಿಕ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್‌) ಸಂಸ್ಥೆಯಡಿ ಕಾರ್ಯನಿರ್ವಹಿಸುವ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಇನ್‌ ಸ್ಪೇಸ್‌ ಸೈನ್ಸಸ್‌ನ(ಸಿಇಎಸ್‌ಎಸ್‌) ತಜ್ಞರು, ಫೆ. 6ರಂದು ಒಂದು ಟ್ವೀಟ್‌ ಮಾಡಿ, ಸೂರ್ಯನ ದಕ್ಷಿಣ ಧ್ರುವದ ಮೇಲ್ಮೆ„ನಿಂದ ಒಂದು ಉಂಗುರಾಕಾರದ ಅಲೆಯೊಂದು ಎದ್ದಿದೆ ಎಂದು ಜಾಗತಿಕ ವಿಜ್ಞಾನಿಗಳ ಸಮುದಾಯಕ್ಕೆ ತಿಳಿಸಿದ್ದರು. ಈ ಅಲೆಯನ್ನು ಸೋಲಾರ್‌ ಆ್ಯಂಡ್‌ ಹೀಲಿಯೋಸ್ಪೆರಿಕ್‌ ಅಬ್ಸರ್ವೇಟರಿ (ಎಸ್‌ಒಎಚ್‌ಒ) ಮಿಷನ್‌ನ ಲಾರ್ಜ್‌ ಆ್ಯಂಗಲ್‌ ಆ್ಯಂಡ್‌ ಸ್ಪೆಕ್ಟೋಮೆಟ್ರಿಕ್‌ ಕೊರೊನಾಗ್ರಾಫ್ (ಎಲ್‌ಎಎಸ್‌ಸಿಒ) ಸಂಸ್ಥೆಗಳು ದಾಖಲಿಸಿವೆ ಎಂದೂ ಸಿಐಎಸ್‌ಎಸ್‌ ತಜ್ಞರು ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next