ಮೈಸೂರು: “ಸಂವಿಧಾನ ಬದ್ಧ ಕರ್ತವ್ಯವನ್ನು ನಾವು ನಿರ್ವಹಿಸುತ್ತಿದ್ದೇವೆ, ನಾವುಯಾರ ಅಣತಿಯಂತೆಯೂ ಕೆಲಸ ಮಾಡುತ್ತಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ್ದಾರೆ.
ತಮ್ಮ ಬಂಧನ ಹಾಗೂ ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆಗೆ ಅವಕಾಶ ನೀಡದಿರುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು, “ಆಳುವವರ ಅಣತಿ ಮೀರುವಂತಿಲ್ಲಾ ಅಲ್ವಾ ಸರ್? ಕನಿಷ್ಠ ಖಡಕ್ ಅಧಿಕಾರಿಗಳೆಂಬ ಸೋಗು ಬಿಟ್ಟು ಆಳುವ ಪಕ್ಷದ ಆಳುಗಳು ಎಂಬುದನ್ನು ಒಪ್ಪಿಕೊಳ್ಳಿ, ಚಿಕ್ಕಮಗಳೂರು ಎಸ್.ಪಿ ಅಣ್ಣಾಮಲೈ ನೋಡಿಯಾದರೂ ಕಲಿಯಿರಿ’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಸುದ್ದಿಗಾರರ ಜತೆ ಮಾತನಾಡುವಾಗ ತಿರುಗೇಟು ನೀಡಿದ ಎಸ್.ಪಿ. ರವಿ ಚನ್ನಣ್ಣನವರ್, “ಹೌದು. ನಾವು ಪರಿಪೂರ್ಣರಲ್ಲ, ಕಲಿಯುವುದು ಇದ್ದೇ ಇರುತ್ತದೆ. ಹಿರಿಯ ಅಧಿಕಾರಿಗಳಿಂದ, ಅಣ್ಣಾಮಲೈಯಿಂದ, ನಮ್ಮದೇ ಪೇದೆಗಳಿಂದಲೂ ಕಲಿಯುವುದಿರುತ್ತದೆ.
ಗೌರವಾನ್ವಿತ ಸಂಸದರ ಬಗ್ಗೆ ನಮಗೆ ಅಪಾರ ಗೌರವವಿದೆ. ನಾವು ಯಾರ ಅಣತಿಯಂತೆಯೂ ಕೆಲಸ ಮಾಡುತ್ತಿಲ್ಲ. ನಾವು ಯಾರ ಪರ-ವಿರುದ್ಧವೂ ಅಲ್ಲ. ಸತ್ಯದ ಪರ’ ಎಂದು ತಿರುಗೇಟು ನೀಡಿದರು.
ಸಂಸದ ಪ್ರತಾಪ್ ಸಿಂಹ ಅವರು ಎಸ್.ಪಿ. ಅಣ್ಣಾಮಲೈ ಚಿಕ್ಕಮಗಳೂರಿನಲ್ಲಿ ದತ್ತಮಾಲಾಧಾರಿಗಳಿಗೆ ಉತ್ತಮ ರಕ್ಷಣೆ ನೀಡಿದ್ದಾರೆ ಎಂದು ಟ್ವೀಟರ್‌ನಲ್ಲಿ ಅಭಿನಂದಿಸಿದ್ದಾರೆ. ರಾಜಕಾರಣಿಗಳು ಹೇಳಿಕೆ ಕೊಡುವುದು ಸಹಜ. ಪೊಲೀಸರು ಹಿಂದೂಗಳಾಗಲಿ, ಯಾರೆ ಆಗಲಿ ಎಲ್ಲರಿಗೂ ರಕ್ಷಣೆ ಕೊಡುತ್ತಾರೆ. ಅದು ನಮ್ಮ ಕರ್ತವ್ಯ.
●ಅಣ್ಣಾಮಲೈ, ಚಿಕ್ಕಮಗಳೂರು ಎಸ್‌ಪಿ
ಹಿಂದೂ ಧರ್ಮದ ಧಾರ್ಮಿಕ ಹಬ್ಬಗಳ ಮೇಲೆ ಹಲವು ಷರತ್ತುಗಳನ್ನು ವಿಧಿಸಿ ಬಹುಸಂಖ್ಯಾತ ಹಿಂದೂಗಳ ಭಾವನೆಗಳ ಜತೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಚೆಲ್ಲಾಟವಾಡುತ್ತಿದೆ.
● ಗೋಪಾಲ್, ವಿಹಿಂಪ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ