ಉಡುಪಿ: ಇಲ್ಲಿನ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಒಂದು ವಾರಗಳ ಕಾಲ ಕೆಲಸ ನಿರ್ವಹಿಸಿದ್ದ ಜಿಲ್ಲಾ ಶಸ್ತ್ರಾಸ್ತ್ರ ಮೀಸಲು ಪಡೆಯ ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಜಿಲ್ಲಾ ಶಸ್ತ್ರಾಸ್ತ್ರ ಮೀಸಲು ಪಡೆಯ ಸಿಬ್ಬಂದಿಗೆ ಇಂದು ಕೋವಿಡ್-19 ಸೋಂಕು ದೃಢವಾಗಿದೆ. ಶಿರೂರು ಚೆಕ್ ಪೋಸ್ಟ್ ನಲ್ಲಿ ಕೆಲಸ ಮಾಡಿದ್ದ ಅವರು ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಕಚೇರಿಯಲ್ಲಿ ಒಂದು ವಾರ ಕೆಲಸ ನಿರ್ವಹಿಸಿದ್ದರು. ಅಲ್ಲಿ ಹಲವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.
ಹೆಬ್ರಿ ಠಾಣೆಯೂ ಸೀಲ್ ಡೌನ್: ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆಯನ್ನೂ ಸೀಲ್ ಡೌನ್ ಮಾಡಲಾಗಿದೆ. ಸದ್ಯ ಠಾಣೆಯನ್ನು ಹತ್ತಿರದ ರಾಮ ಮಂದಿರಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ವರದಿಯಾಗಿದೆ.
ಅಜೆಕಾರು ಠಾಣೆಯ ಸಿಬ್ಬಂದಿಯೋರ್ವರಿಗೆ ರವಿವಾರ ಕೋವಿಡ್-19 ಸೋಂಕು ದೃಢವಾಗಿತ್ತು. ಇವರು ಸೇರಿದಂತೆ ಅಜೆಕಾರು ಠಾಣೆಯ ಇತರ ಪೊಲೀಸರು ಹೆಬ್ರಿ ಠಾಣೆಗೆ ಭೇಟಿ ನೀಡಿದ್ದರು. ಈ ಕಾರಣಕ್ಕೆ ಹೆಬ್ರಿ ಠಾಣಾಧಿಕಾರಿ ಸೇರಿದಂತೆ ಎಲ್ಲರಿಗೂ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.
ರವಿವಾರ ಜಿಲ್ಲೆಯ ಮೂವರು ಪೊಲೀಸರಿಗೆ ಕೋವಿಡ್-19 ಸೋಂಕು ದೃಢವಾಗಿತ್ತು. ಕಾರ್ಕಳ, ಅಜೆಕಾರು ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಸೋಂಕು ತಾಗಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿತ್ತು.
ಜಿಲ್ಲೆಯಲ್ಲಿ ಇಂದು 16 ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ.