ನವದೆಹಲಿ/ಲಕ್ನೋ: ಸಮಾಜವಾದಿ ಪಕ್ಷದ ಎಂಎಲ್‌ಸಿ ಪುಷ್ಪರಾಜ್ ಜೈನ್ ಸೇರಿದಂತೆ ಹಲವು ವ್ಯಕ್ತಿಗಳಿಗೆ ಸೇರಿದ 30-40 ಸ್ಥಳಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದ ಸುಗಂಧದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ನಿವಾಸದ ಮೇಲೆ ನಡೆಸಲಾಗಿರುವ ದಾಳಿಯ ಬಗ್ಗೆ ರಾಜಕೀಯ ವಾಗ್ವಾದ ನಡೆದಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಉತ್ತರ ಪ್ರದೇಶದ ಕನೌ°ಜ್, ಕಾನ್ಪುರ್, ಸೂರತ್, ಮುಂಬೈ, ನವದೆಹಲಿ ಮತ್ತು ಇತರ ಸ್ಥಳಗಳಲ್ಲಿ ದಾಳಿ-ಶೋಧ ಕಾರ್ಯ ನಡೆಸಲಾಗಿದೆ. ದಾಳಿಯನ್ನು ಕಟುವಾಗಿ ಟೀಕಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗ ಮತ್ತು ರಾಷ್ಟ್ರಪತಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
ಕಾಯಬೇಕಾಗಿತ್ತೇ?
ಐ.ಟಿ.ದಾಳಿಯ ಬಗ್ಗೆ ಮಾಜಿ ಸಿಎಂ ಅಖಿಲೇಶ್ ಯಾದವ್ ಮಾಡಿದ ಟೀಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಕ್ಷೇಪ ಮಾಡಿದ್ದಾರೆ.
ಪಿಯೂಷ್ ಜೈನ್ ಮನೆಯಿಂದ ವಶಪಡಿಸಿಕೊಂಡಿರುವ 200 ಕೋಟಿ ರೂ. ಮೊತ್ತ ಬಿಜೆಪಿಗೆ ಸೇರಿದ್ದಲ್ಲ. ಖಚಿತ ಮಾಹಿತಿ ಮತ್ತು ಅದನ್ನು ವಿಶ್ಲೇಷಿಸಿಯೇ ದಾಳಿ ನಡೆಸಲಾಗುತ್ತದೆ. ದಾಳಿಯಿಂದಾಗಿ ಅಖಿಲೇಶ್ ಬೆದರಿದ್ದಾರೆ. ಸಾಮಾನ್ಯ ವ್ಯಕ್ತಿಯಲ್ಲಿ ಮನೆಯಲ್ಲಿ 24 ಕೆಜಿ ಚಿನ್ನ ಇರಿಸಲು ಸಾಧ್ಯವಿಲ್ಲ. ಕಳ್ಳನನ್ನು ಬಂಧಿಸಲು ಚುನಾವಣೆಯ ನಂತರದ ಮುಹೂರ್ತಕ್ಕೆ ಕಾಯಬೇಕಾಗಿತ್ತೇ ಎಂದು ಪ್ರಶ್ನಿಸಿದ್ದಾರೆ. ದಾಳಿ ರಾಜಕೀಯ ಪ್ರೇರಿತ ಎಂಬ ಆರೋಪವನ್ನು ಅವರು ತಿರಸ್ಕರಿಸಿದ್ದಾರೆ.