ಲಕ್ನೋ: ಉತ್ತರಪ್ರದೇಶದ ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ಸಮಾಜವಾದಿ ಪಕ್ಷದ ಮಹಿಳಾ ಕಾರ್ಯಕರ್ತೆಯನ್ನು ವಿರೋಧ ಪಕ್ಷದ ಕಾರ್ಯಕರ್ತರು ರಸ್ತೆಯಲ್ಲಿಯೇ ಅಡ್ಡಗಟ್ಟಿ ಸೀರೆಯನ್ನು ಹಿಡಿದು ಎಳೆದಾಡಿದ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪರಸ್ಪರ ಸೋಲಿಸಲು ಪ್ರಯತ್ನಿಸಿಲ್ಲ ಎಂದು ಸಿದ್ದರಾಮಯ್ಯ, ಪರಮೇಶ್ವರ್ ಆಣೆ ಮಾಡಲಿ: ಈಶ್ವರಪ್ಪ
ಸ್ಥಳೀಯ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ಸಮಾಜವಾದಿ ಪಕ್ಷದ ಮಹಿಳಾ ಅಭ್ಯರ್ಥಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ತಡೆಗಟ್ಟಿ ಹಲ್ಲೆ ನಡೆಸಿದ್ದರು. ನಾಮಪತ್ರ ಸಲ್ಲಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಕೆಯ ಕೈಯಲ್ಲಿದ್ದ ನಾಮಪತ್ರವನ್ನು ಕಸಿದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಮ್ಮ ಪಕ್ಷದ ಅಭ್ಯರ್ಥಿ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ, ಸೀರೆಯನ್ನು ಹಿಡಿದೆಳೆದಿರುವುದಾಗಿ ಆರೋಪಿಸಿರುವ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್, ಈ ಕುರಿತು ವಿಡಿಯೋವನ್ನು ಟ್ವೀಟ್ ಮಾಡಿ, ಇದು ಯೋಗಿ ಆದಿತ್ಯನಾಥ್ ಸರ್ಕಾರದ ಗೂಂಡಾಗಳ ಅಧಿಕಾರದ ಹಸಿವು ಎಂದು ಆರೋಪಿಸಿದ್ದಾರೆ.
ಲಕ್ನೋದಿಂದ 130 ಕಿಲೋ ಮೀಟರ್ ದೂರದಲ್ಲಿರುವ ಲಾಖಿಂಪುರ್ ಖೇರಿ ಎಂಬಲ್ಲಿ ಈ ಘಟನೆ ನಡೆದಿದೆ. ಶನಿವಾರ ಉತ್ತರಪ್ರದೇಶದ 825 ಸ್ಥಳೀಯ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಏತನ್ಮಧ್ಯೆ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದ ಹತ್ತಕ್ಕೂ ಅಧಿಕ ಸ್ಥಳಗಳಲ್ಲಿ ಘರ್ಷಣೆ ನಡೆದ ಬಗ್ಗೆ ವರದಿಯಾಗಿದೆ. ಏತನ್ಮಧ್ಯೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಘರ್ಷಣೆ, ಹಲ್ಲೆ ನಡೆಸಿದ ಘಟನೆಯ ವಿಡಿಯೋವನ್ನು ಟ್ವೀಟ್ ಮಾಡಿ ಪ್ರಧಾನಿ ಮೋದಿ ಮತ್ತು ಯೋಗಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.